सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನೀರು ಬಂದಿತು ಜೀವ ಅರಳಿತು.

ಶ್ರೀಮತಿ ಮೇಘ ಪ್ರಮೋದ್ | ಮಹಾರಾಷ್ಟ್ರ | ದಕ್ಷಿಣ

parivartan-img


ಇಂದು ಡೋಂಗ್ರಿಪಾಡ ಹಳ್ಳಿಯಲ್ಲಿ ಏಳು ದಶಕಗಳ ಕಾಯುವಿಕೆ ಕೊನೆಗೊಂಡು ಹಳ್ಳಿಯ ಜನರು ಸಂತೋಷದಿಂದ ನಲಿದಾಡಿದರು.. ಮನೆ ಮನೆಗೂ ನೀರನ್ನು ತಲುಪಿಸುವ ಸೋಲಾರ್ ಪಂಪ್ ನ್ನು ತದೇಕ ಚಿತ್ತರಾಗಿ ದೃಷ್ಟಿಸಿ ನೋಡುತ್ತಿದ್ದ ಶಾಂತಾಬಾಯಿ ಖಂಜೋಡೆ ಅವರ ಕಣ್ಣೀರು ನಿಲ್ಲಲೇ ಇಲ್ಲ. ಮುಂಬೈಯಿಂದ ಕೇವಲ 80 ಕಿ. ಮೀ. ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ಈ ಹಳ್ಳಿಯ ಜನರು ಕಳೆದ 72 ವರ್ಷಗಳಿಂದ ಕುಡಿಯುವ ನೀರಿನ ನಿರೀಕ್ಷೆಯಲ್ಲಿದ್ದರು. ಗರ್ಭಿಣಿ ಮಹಿಳೆ ಅಥವ 12 ವರ್ಷದ ಬಾಲಕಿಯೇ ಇರಬಹುದು, ಬೆಟ್ಟದ ಮೇಲೆ ಇರುವ ಡೊಂಗ್ರಿಪಾಡ ಹಳ್ಳಿಯಿಂದ ಉಬ್ಬು ತಗ್ಗಾದ ರಸ್ತೆಯಲ್ಲಿ ಒಂದೂವರೆ ಕಿಲೋಮೀಟರಿನಷ್ಟು ದೂರದಲ್ಲಿ ಕೆಳಗೆ ಇದ್ದ ಬಾವಿಯಿಂದ ನೀರು ತರುವುದು ಅನಿವಾರ್ಯವಾಗಿತ್ತು. ಹಾಗೆಯೇ ಮಳೆಗಾಲದಲ್ಲಂತೂ ಓಡಾಡುವ ರಸ್ತೆಯೂ ಮುಚ್ಚಿಹೋಗುತ್ತಿತ್ತು. ನೀರು ಇಲ್ಲದೇ, ವಿದ್ಯುತ್ ಇಲ್ಲದೇ, ಸರ್ಕಾರಿ ಶಾಲೆಯೂ ಇಲ್ಲದ 33 ಪರಿವಾರಗಳ ಈ ಸೇವಾಬಸ್ತಿಯಲ್ಲಿ ಕೇವಲ 7 ರೈತರು ತಮ್ಮ ಗದ್ದೆಗಳಲ್ಲಿ ಬೇಸಾಯ ಮಾಡಬಹುದಾಗಿತ್ತು. ಆದರೆ ಇಂದು ಈ ಕಥೆಯನ್ನು ಓದುತ್ತಿರುವ ಓದುಗರಿಗೆ ಆಶ್ಚರ್ಯವಾಗಬಹುದು...! ಇಂದು ಈ ಹಳ್ಳಿಯಲ್ಲಿ ಆಸ್ಟ್ರೋಟರ್ಫ್ ಆಟದ ಮೈದಾನವಿದೆ, ಮಹಿಳೆಯರಿಗೆ ಹೊಲಿಗೆ ಕಲಿಯಲು ತರಬೇತಿ ಕೇಂದ್ರವಿದೆ, ಪುಟ್ಟ ಮಕ್ಕಳಿಗೆ ಮಾಧವ ಬಾಲ ಸಂಸ್ಕಾರ ಕೇಂದ್ರವಿದೆ ಹಾಗೂ ಕಂಪ್ಯೂಟರ್ ತರಬೇತಿಯನ್ನೂ ನೀಡಲಾಗುತ್ತಿದೆ, ಅಧ್ಯಯನಕ್ಕಾಗಿ ಒಂದು ಚಿಕ್ಕ ಪುಸ್ತಕಾಲಯವೂ ಇದೆ. ಹಾಗೆಯೇ, ಎಲ್ಲಕ್ಕಿಂತ ಮುಖ್ಯವಾದ ಅಂಶವೆಂದರೆ ಅದು ನೀರು. ಈಗ ಪ್ರತೀ ಎಂಟು ಮನೆಗಳ ಮಧ್ಯದಲ್ಲಿ ಒಂದು ನಲ್ಲಿ ಇದೆ ಅಷ್ಟೇ ಅಲ್ಲ ಪ್ರತೀ ಮನೆಗೂ ವಿದ್ಯುತ್ ಪೂರೈಕೆ ಆಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ್ ಹೆಡ್ಗೇವಾರ್ ಅವರ ಸ್ಮರಣಾರ್ಥವಾಗಿ ಭಯಂದರ್ ನಲ್ಲಿ ನಡೆಯುತ್ತಿರುವ "ಕೇಶವ ಸೃಷ್ಟಿ" ಎಂಬ ಬಹುಮುಖಿ ಪ್ರಕಲ್ಪದ ಮೂಲಕ ನಡೆಯುತ್ತಿರುವ ಗ್ರಾಮ ವಿಕಾಸ ಯೋಜನೆಯಿಂದ ಇವೆಲ್ಲ ಸಾಧ್ಯವಾಗಿದೆ. ಈ ವಿಕಾಸ ಯಾತ್ರೆಯಲ್ಲಿ ಹೆಜ್ಜೆ ಹೆಜ್ಜೆಗೂ ಗ್ರಾಮವಾಸಿಗರ ಸಹಾಯ ದೊರಕಿತು, ನೀರಿನ ಟ್ಯಾಂಕ್ ನಿಂದ ಮನೆಗಳಿಗೆ ಪೈಪ್ ಲೈನ್ ಎಳೆಯುವುದರಿಂದ ಹಿಡಿದು ಸಮಾಜ ಮಂದಿರದ ನಿರ್ಮಾಣದ ತನಕ ರಾತ್ರಿ-ಹಗಲು ಎನ್ನದೇ ಶ್ರಮಸೇವೆ ಮಾಡುವ ಮೂಲಕ ಕಾರ್ಯಗಳನ್ನು ಪೂರ್ಣಗೊಳಿಸಿದರು. ಇಷ್ಟೇ ಅಲ್ಲದೆ ಅಭಿವೃದ್ಧಿಯು ಗ್ರಾಮವನ್ನು ಪ್ರವೇಶಿಸಿದಂತೆಲ್ಲ ಗ್ರಾಮಸ್ಥರ ಸಹಕಾರವೂ ಕೂಡ ಹೆಚ್ಚುತ್ತಾ ಹೋಯಿತು ಎಂದು ಡೊಂಗ್ರಿಪಾಡ ಗ್ರಾಮದ ವಿಕಾಸ ಯಾತ್ರೆಯ ಶಿಲ್ಪಿಯಾದ ಮುಂಬೈ ಮಹಾನಗರದ ಹಿಂದಿನ ಕಾರ್ಯವಾಹರಾದ ವಿಮಲ್ ಕೇಡಿಯಾ ಅವರು ಹೇಳುತ್ತಾರೆ. ಹಳ್ಳಿಯ ಜನ ಒಂದು ಸಮಿತಿಯನ್ನು ರಚಿಸಿ ಒಂದು ನಿಶ್ಚಿತ ಮೊತ್ತವನ್ನು ಈ ಎಲ್ಲಾ ಕೆಲಸಗಳಿಗಾಗಿ ಠೇವಣಿ ಮಾಡಲು ನಿರ್ಧರಿಸಿದರು. ಒಂದೂವರೆ ಕಿ.ಮೀ. ಕೆಳಗೆ ಇದ್ದ ಬಾವಿಯಿಂದ ನೀರಿನ ಟ್ಯಾಂಕ್ ತನಕ ಪೈಪ್ ಲೈನ್ ಹಾಗೂ ಮನೆ ಮನೆಗೂ ನೀರನ್ನು ತಲುಪಿಸುವ ಹಾಗೂ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸುವ ಕೆಲಸವನ್ನು ಪುಣೆಯ ಗ್ರಾಮ್ ಉರ್ಜಾ ಎಂಬ ಖಾಸಗಿ ಕಂಪೆನಿಯು ಮಾಡಿತು.


ಈ ಪ್ರಮುಖ ವೆಚ್ಚದ ನಂತರ ಗ್ರಾಮವಾಸಿಗಳು ಕೇಶವ ಸೃಷ್ಟಿಯಿಂದ ಏನನ್ನೂ ತೆಗೆದುಕೊಳ್ಳಲಿಲ್ಲ, ನದಿಯಿಂದ ಹೊಲಗಳಿಗೆ ನೀರನ್ನು ಹಾಯಿಸವ ವ್ಯವಸ್ಥೆ ಹಾಗು ಮುಂದಿನ ಎಲ್ಲಾ ನಿರ್ವಹಣೆಯ ವೆಚ್ಚವನ್ನು ಹಳ್ಳಿಗರೇ ಬರಿಸಲು ನಿರ್ಧರಿಸಿದರು. ಪ್ರಕೃತಿಯು ಡೊಂಗ್ರಿಪಾಡ ಗ್ರಾಮಕ್ಕೆ ಅಗಾಧವಾದ ಸೌಂದರ್ಯವನ್ನು ನೀಡಿತ್ತು, ಆದರೆ ವಿಪರ್ಯಾಸವೆಂದರೆ ಯಥೇಚ್ಛವಾಗಿ ಇಲ್ಲಿ ಮಳೆ ಸುರಿದ ಮೇಲೂ ಪಾಲ್ಘರ್ ಜಿಲ್ಲೆಯ ಈ ಹಳ್ಳಿಯಲ್ಲಿ ಒಂದು ಹನಿ ನೀರಿಗೂ ಪರದಾಡಬೇಕಿತ್ತು. ರೈತರ ಆದಾಯ ಹೆಚ್ಚೆಂದರೆ ತಿಂಗಳಿಗೆ 2,000 ರೂಪಾಯಿ ಇರುತ್ತಿತ್ತು. ಅಸಹಾಯಕರಾದ ಈ ಹಳ್ಳಿಯ ಪುರುಷರು ಕೆಳಗೆ ಇದ್ದ ಸಾಂಸಣೆ ಎಂಬ ಹಳ್ಳಿಯಲ್ಲಿ ಬೇರೆಯವರ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕ ಮಕ್ಕಳು ಶಿಕ್ಷಣಕ್ಕಾಗಿ 9ಕಿ.ಮೀ. ದೂರದ ವಾಡದಲ್ಲಿ ಇದ್ದ ಪ್ರಾಥಮಿಕ ಶಾಲೆಗೆ ಹೋಗಬೇಕಿತ್ತು. ಶಾಲೆಯಿಂದ ಮರಳಿದ ನಂತರ ಓದಲು-ಓದಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಡೊಂಗ್ರಿಪಾಡದಲ್ಲಿ ವಿಕಾಸದ ಧಾರೆ ಹರಿಯುತ್ತಿದೆ. ಹಳ್ಳಿಯ ಮಧ್ಯದಲ್ಲಿರುವ ಸಮಾಜ ಮಂದಿರ ಎನ್ನುವ ಸಮುದಾಯ ಭವನದಲ್ಲಿ ಹೊಲಿಯುವ ಯಂತ್ರದಿಂದ 8 ಮಹಿಳೆಯರಿಗೆ ಹೊಲಿಯುವ ತರಬೇತಿಯನ್ನು ನೀಡಲಾಗುತ್ತಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನ ಸಹಯೋಗದಿಂದ ದೊರೆತಿರುವ 2ಕಂಪ್ಯೂಟರ್ ನಿಂದ ಮಕ್ಕಳಿಗೆ ಸದ್ಯಕ್ಕೆ ಆರಂಭಿಕ ಕಂಪ್ಯೂಟರ್ ತರಬೇತಿಯನ್ನು ನೀಡಲು ಸಾಧ್ಯವಾಗುತ್ತಿದೆ. ಗ್ರಾಮವಾಸಿಗರಿಗೆ ಈ ಸಮಾಜ ಮಂದಿರವು ಪೂಜಾ ಸ್ಥಳವಿದ್ದಂತೆ ಎಂದು ಡೊಂಗ್ರಿಪಾಡ ಹಾಗು ಇನ್ನೂ ಹತ್ತು ಹಳ್ಳಿಗಳ ಅಭಿವೃದ್ಧಿಗಾಗಿ ವಿಸ್ತಾರಕರಾಗಿ ಹೊರಟ ಸಚಿನ್ ಜೀ ಹೇಳುತ್ತಾರೆ. ಗಣೇಶೋತ್ಸವದಿಂದ ಹಿಡಿದು ಮದುವೆಯ ತನಕ ಎಲ್ಲಾ ಕಾರ್ಯಕ್ರಮಗಳಿಗೂ ಈ ಪ್ರಾಂಗಣವನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ. ಪ್ರತೀ ವಾರ ಇಲ್ಲಿ ನಡೆಯುವ ಸತ್ಸಂಗದಿಂದ ನಿಧಾನವಾಗಿ ಇಡೀ ಹಳ್ಳಿ ವ್ಯಸನ ಮುಕ್ತವಾಗುತ್ತಿದೆ. ನಿಯಮಿತವಾಗಿ ಮದ್ಯ ಸೇವಿಸುತ್ತಿದ್ದ ವರಲಿ ಪಂಗಡದ ವನವಾಸಿ ಪರಿವಾರಗಳು ಹೆಚ್ಚು ಕಡಿಮೆ ಮದ್ಯ ಸೇವನೆಯನ್ನು ತ್ಯಜಿಸಿದ್ದಾರೆ ಹಾಗೂ ತಮ್ಮ ಗದ್ದೆಗಳಲ್ಲಿ ಅಕ್ಕಿ, ತರಕಾರಿಗಳನ್ನು ಬೆಳೆದು ಈಗ ವರ್ಷಕ್ಕೆ ಒಂದರಿಂದ ಒಂದೂವರೆ ಲಕ್ಷದಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ. ಹಳ್ಳಿಯ ಮಧ್ಯದಲ್ಲಿ ಎತ್ತರದಲ್ಲಿ ಇರುವ ಟ್ಯಾಂಕ್ ನಿಂದಾಗಿ ಈಗ ವರ್ಷಪೂರ್ತಿ ನೀರಿನ ಸಮಸ್ಯೆ ಇಲ್ಲವಾಗಿದೆ. ಪ್ರತಿಷ್ಠಿತ ಲೇಖಕರಾದ ರತನ್ ಶಾರದಾ ಜೀಯವರು ಡೊಂಗ್ರಿಪಾಡದ ಈ ವಿಕಾಸಯಾತ್ರೆಗೆ ಅಕ್ಷರ ರೂಪ ನೀಡಲು ಅಲ್ಲಿಗೆ ಬಂದಾಗ ಅವರ ಪತ್ನಿ ಶ್ಯಾಮಾಜಿ ಕುತೂಹಲದಿಂದ ಅಲ್ಲಿನ ಮಹಿಳೆಯರಲ್ಲಿ ನಿಮಗೆ ಮುಂದೆ ಇನ್ನೇನು ಬೇಕು? ಎಂದು ಕೇಳಿದಾಗ ಅಲ್ಲಿನ ವನವಾಸಿ ಪರಿವಾರಗಳು "ನಮಗೆ ಏನು ಬೇಕಿತ್ತೋ ಅದೆಲ್ಲವೂ ಸಿಕ್ಕಿದೆ, ಇನ್ನು ನಮ್ಮ ಮುಂದಿನ ದಾರಿಯನ್ನು ನಾವೇ ನಿರ್ಧರಿಸುತ್ತೇವೆ" ಎಂದು ಹೇಳಿದ ಈ ಒಂದು ಘಟನೆ ಸಾಕು ಡೊಂಗ್ರಿಪಾಡ ಗ್ರಾಮದ ಪರಿವರ್ತನೆಯನ್ನು ಅರ್ಥ ಮಾಡಿಕೊಳ್ಳಲು.

1225 Views
अगली कहानी