सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಪರೋಪಕಾರಾರ್ಥಮಿದಂ ಶರೀರಮ್

ಶ್ರೀ ಗಿರಿಧರ್ ಉದ್ಯಾವರ | ದೆಹಲಿ

parivartan-img

ಮನೆಯ ಹೊರಗೆ ಶವವಾಹನ ಮತ್ತು ಅಂಗಳದಲ್ಲಿ ಮೃತ ಪತಿಯ ದೇಹ! ಒಂದೆಡೆ, ವರ್ಷಗಳ ಹಿಂದೆ ಪತಿ ಕೈಗೊಂಡ ನಿರ್ಣಯವನ್ನು ಈಡೇರಿಸಲು ಕಾಯುತ್ತಿದ್ದ ಪತ್ನಿ. ಮತ್ತೊಂದೆಡೆ, ಅಮ್ಮನ ವಿರುದ್ಧ ಕೂಗಾಡುತ್ತಿರುವ ಮಕ್ಕಳು! "ನಾವು ಅಪ್ಪನ ದೇಹವನ್ನು ಹಿಂಸಿಸಲು ಬಿಡುವುದಿಲ್ಲ, ಈ ಪದ್ಧತಿ ಸರಿಯಿಲ್ಲ. ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ಮುಗಿಸುತ್ತೇವೆ." ಆಗ ಮೌನ ಮುರಿದ ಮೃತನ ಹೆಂಡತಿ ಉಮ್ಮಳಿಸುತ್ತಿದ್ದ ದುಃಖದಿಂದ ಆಡಿದ ಒಂದೇ ಮಾತಿನಿಂದ ಎಲ್ಲರೂ ತೆಪ್ಪಗಾದರು. "ನನ್ನ ಪತಿ ದೇಹದಾನದ ಸಂಕಲ್ಪ ಮಾಡಿದ್ದಾರೆ, ಅಷ್ಟೇ! ಯಾರನ್ನೂ ಇದಕ್ಕೆ ಅಡ್ಡಿಯಾಗಲು ನಾನು ಬಿಡುವುದಿಲ್ಲ". ದಧೀಚಿ ದೇಹದಾನ ಸಮಿತಿಯ ಪರವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ತೆರಳಿದ್ದ ಸಮಿತಿಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ವಿಶಾಲ್ ಚಡ್ಢಾ ಹೇಳುವಂತೆ- ಅಂತಹ ಭಾವುಕ ಕ್ಷಣದಲ್ಲಿ, ಅಗಲಿರುವ ಗಂಡನ ನಿರ್ಧಾರವನ್ನು ಪೂರೈಸಲು ಹೊರಟ ಪತ್ನಿ ತನ್ನ ಸ್ವಂತ ಮಕ್ಕಳ ವಿರುದ್ಧ ನಿಂತಿದ್ದಳು. ಈ ಭಾವನೆ ಸಾಮಾನ್ಯವಲ್ಲ, ಆಧ್ಯಾತ್ಮಿಕವಾದದ್ದು ಮತ್ತು ಈ ರೀತಿಯ ಅನೇಕ ನೆನಪುಗಳು ದಧೀಚಿ ಪರಿವಾರದಲ್ಲಿವೆ. ಈ ಸತ್ಯ ಘಟನೆ ಶ್ರೀಮತಿ ಸಂಪೂರ್ಣ ಜೀತ್ ಕೌರ್ ಮತ್ತು ಡಾಕ್ಟರರಾಗಿದ್ದ ಅವರ ದಿವಂಗತ ಪತಿಗೆ ಸಂಬಂಧಿಸಿದ್ದು.


ದೇಹದಾನದ ಸಂಕಲ್ಪ ಎನ್ನುವುದು  ಜೀವನದ ನಂತರವೂ ಬದುಕುವ ಒಂದು ವಿಶಿಷ್ಟ ಪ್ರಯಾಣ. ಈ ಸಂಕಲ್ಪವನ್ನು ಮಾಡಿಸುವವರೂ ಈ ಯಾತ್ರೆಯ ಭಾಗಿಗಳೇ. ಇಂಥ ಪುಣ್ಯಕಾರ್ಯಕ್ಕೆ ಒಂದು ವ್ಯವಸ್ಥಿತ ರೂಪ ನೀಡಲು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಖ್ಯಾತ ಪ್ರಚಾರಕರಾದ ದಿವಂಗತ ನಾನಾಜಿ ದೇಶಮುಖರು, ಮಹರ್ಷಿ ದಧೀಚಿ ಅವರಿಂದ ಪ್ರೇರಿತರಾಗಿ, ಅಕ್ಟೋಬರ್ 11, 1997ರಂದು ದಧೀಚಿ ದೇಹದಾನ/ಅಂಗದಾನ ಸಮಿತಿಯನ್ನು ರಚಿಸಿದ್ದಲ್ಲದೆ, ಮೊದಲ ದೇಹದಾನ ನಿರ್ಣಯಪತ್ರವನ್ನು ತಾವೇ ತುಂಬಿದ್ದರು. ಈ ಸಮಿತಿಯು ದೆಹಲಿಯ ಎನ್. ಸಿ. ಆರ್, ಬುಲಂದ್ಶಹರ್ ಸೇರಿದಂತೆ ಸುಮಾರು 9 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಮಾರು 300 ಕಾರ್ಯಕರ್ತರ ಕಠಿಣ ಪರಿಶ್ರಮದ ಫಲವಾಗಿ, ಕಳೆದ 13 ವರ್ಷಗಳಲ್ಲಿ ಸುಮಾರು 1300 ಮೃತ ವ್ಯಕ್ತಿಗಳ ವಿವಿಧ ಅಂಗಗಳು ಇತರರ ದೇಹಗಳಲ್ಲಿ ಇನ್ನೂ ಜೀವಂತವಾಗಿವೆ. ಇದರಲ್ಲಿ 375 ಮಂದಿಯ ಸಂಪೂರ್ಣ ದೇಹ ಹಾಗೂ 925ಕ್ಕೂ ಹೆಚ್ಚು ಜನರ ಕಣ್ಣುಗಳನ್ನು ದಾನ ಮಾಡಲಾಗಿದೆ. ಸಮಿತಿಯ ಸ್ವಯಂಸೇವಕರು ಈವರೆಗೆ 18000ಕ್ಕೂ ಹೆಚ್ಚು ಸಂಕಲ್ಪಪತ್ರಗಳನ್ನು ಭರ್ತಿ ಮಾಡಿದ್ದಾರೆ.

ಇಷ್ಟೇ ಅಲ್ಲ, ದಧೀಚಿ ದೇಹದಾನ ಸಮಿತಿಯಿಂದ ಸ್ಫೂರ್ತಿ ಪಡೆದ ಇತರ 46 ಸಮಿತಿಗಳು ಈಗ  ಸ್ವತಂತ್ರವಾಗಿ ದೇಶಾದ್ಯಂತ ಇದೇ ಕೆಲಸ ನಿರ್ವಹಿಸುತ್ತಿವೆ. ಅವೆಲ್ಲವುಗಳ ಮಾರ್ಗದರ್ಶನ ಮತ್ತು ನಾಯಕತ್ವವನ್ನು ದಧೀಚಿ ದೇಹದಾನ ಸಮಿತಿಯ ಸಂಸ್ಥಾಪಕ, ಪೋಷಕ ಮತ್ತು ವಿಶ್ವ ಹಿಂದೂ ಪರಿಷತ್ತಿನ ಪ್ರಸ್ತುತ ಕಾರ್ಯಾಧ್ಯಕ್ಷರಾದ ಶ್ರೀಮಾನ್ ಅಲೋಕ್ ಜೀಯವರೇ ವಹಿಸಿದ್ದಾರೆ.

ಅಷ್ಟಕ್ಕೂ ಈ ದೇಹದಾನದ ಕಲ್ಪನೆ ಬಂದದ್ದಾದರೂ ಎಲ್ಲಿಂದ??? ಈ ಪ್ರಶ್ನೆಗೆ ಉತ್ತರಿಸುತ್ತಾ, ಶ್ರೀ ಅಲೋಕ್ ಜೀ ಹೇಳುತ್ತಾರೆ- ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕ ಡಾ. ಹುಕುಮ್ ಸಿಂಗ್ ವಿರ್ಕ್ ರವರ (ಅಂಗರಚನಾಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರು) ಅಸ್ಥಿಪಂಜರವನ್ನು ಕಂಡಾಗ, ಅವರು ಮರಣೋತ್ತರವಾಗಿ ತಮ್ಮ ದೇಹದಾನ ಮಾಡಿದ್ದರೆಂಬುದು ನನಗೆ ತಿಳಿದು ಬಂತು. "ನನ್ನ ಜೀವನವಿಡೀ, ಇತರರ ದೇಹದ ಸಹಾಯದಿಂದ ನನ್ನ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ ಮತ್ತು ನನ್ನ ಸಾವಿನ ನಂತರ ನನ್ನ ಕಾಲೇಜಿನ ವಿದ್ಯಾರ್ಥಿಗಳು ನನ್ನದೇ ದೇಹವನ್ನು ಬಳಸಿಕೊಂಡು ತಮ್ಮ ಅಧ್ಯಯನವನ್ನು ಮುಂದುವರಿಸಬೇಕು ಎಂಬುದು ಅವರ ಆಶಯವಾಗಿತ್ತು. ಆಯುರ್ವೇದ, ಹೋಮಿಯೋಪತಿ, ಅಲೋಪತಿ ಮುಂತಾದ ಎಲ್ಲ ವೈದ್ಯಕೀಯ ಕ್ಷೇತ್ರಗಳಲ್ಲಿ ಒಂದು ದೇಹದ ಮೇಲೆ 4-5 ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಆದರೆ, ಮೃತ ದೇಹಗಳ ಕೊರತೆಯಿಂದಾಗಿ ಒಂದೇ ಶರೀರದ ಅಧ್ಯಯನವನ್ನು 40-50 ವಿದ್ಯಾರ್ಥಿಗಳು ಮಾಡಬೇಕಾದ ಅನಿವಾರ್ಯತೆ ಇದೆ. ಆಗ ಅಲೋಕ್ ಜೀ ಯವರಲ್ಲಿ ಹುಟ್ಟಿದ ಯೋಚನೆ ಬೆಳೆದು, 1995ರಲ್ಲಿ ತಮ್ಮ 7 ಜನ ಜೊತೆಗಾರರೊಂದಿಗೆ ದೇಹದಾನದ ಇಚ್ಛೆಯ ಪತ್ರವನ್ನು ನೋಂದಾಯಿಸಿಕೊಂಡರು. ನಂತರ 1997ರಲ್ಲಿ ದಧೀಚಿ ದೇಹದಾನ ಸಮಿತಿಯನ್ನು ರಚಿಸಲಾಯಿತೆಂದು ಅಲೋಕ್ ಜೀ ಹೇಳುತ್ತಾರೆ.


ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಮಂಜು ಪ್ರಭಾ ಮಾತನಾಡಿ, ದೇಹದಾನ ಮಾಡಲು ಆರಂಭದಲ್ಲಿ ಹಲವು ತೊಂದರೆಗಳು ಎದುರಾದವು. ಕೆಲವೊಮ್ಮೆ ಮೃತದೇಹ ಸಾಗಿಸಲು ವಾಹನಗಳು ಇರುತ್ತಿರಲಿಲ್ಲ, ಕೆಲವೊಮ್ಮೆ ಡ್ರೈವರ್ ಇರುತ್ತಿರಲಿಲ್ಲ, ಕೆಲವೊಮ್ಮೆ ಕುಟುಂಬದವರು  ನಿರ್ಣಯ ತೆಗೆದುಕೊಳ್ಳುವಷ್ಟರಲ್ಲಿ ಕಾಲ ಮಿಂಚಿರುತ್ತಿತ್ತು. ಕೆಲವೊಮ್ಮೆ ಮೃತದೇಹ ಸ್ವೀಕರಿಸಬೇಕಾದ ವೈದ್ಯಕೀಯ ಕಾಲೇಜುಗಳಿಗೆ ಕರೆ ಮಾಡಿದರೂ ಉತ್ತರವಿಲ್ಲ, ಅಥವಾ ಉತ್ತರಿಸಿದರೂ ಮೃತದೇಹವನ್ನಿಡುವ ಟಬ್ ಇರುತ್ತಿರಲಿಲ್ಲ. ಸುಮಾರು 3-4 ವರ್ಷಗಳ ಅವಿರತ ಪ್ರಯತ್ನದ ಬಳಿಕ ದೆಹಲಿಯ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ದೇಹದಾನದ ಪ್ರಕ್ರಿಯೆ 24×7 ಸುಗಮವಾಗುವ ಪರಿಸ್ಥಿತಿ ನಿರ್ಮಾಣವಾಯಿತು. NCRನಲ್ಲಿ ತೆರೆಯಲಾಗುತ್ತಿರುವ ಕಾಲೇಜುಗಳ ಮೃತದೇಹದ ಬೇಡಿಕೆಯೂ ಈಗ ಪೂರೈಕೆಯಾಗುತ್ತಿದೆ.

ದೇಹದಾನದ ನಿರ್ಣಯವು ಒಂದೆಡೆ ನಮ್ಮ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ನಾನು ಈ ದೇಹವಲ್ಲ, ಆತ್ಮ ಮತ್ತು ಈ ದೇಹವು ಇಹಲೋಕದ ಪ್ರಯಾಣಕ್ಕೆ ಕೇವಲ ಸಾಧನವಷ್ಟೇ ಎಂಬ ಭಾವನೆಯನ್ನು ಉದ್ದೀಪಿಸುತ್ತದೆ. ಇನ್ನೊಂದೆಡೆ, ಈ ದೇಹದ ಆರೋಗ್ಯ ಕಾಪಾಡಲು ಮತ್ತು ಇದನ್ನು ಗಟ್ಟಿಮುಟ್ಟಾಗಿರಿಸಲು ಪ್ರೇರಣೆ ನೀಡುತ್ತದೆ. ಏಕೆಂದರೆ ಉತ್ತಮ ದೇಹದ ಅಂಗಗಳು ಮಾತ್ರ ಇತರರ ಒಳಿತಿಗೆ ಬಳಕೆಯಾಗುತ್ತವೆ. ಕೊನೆಗಾಲದಲ್ಲಿರುವ ವ್ಯಕ್ತಿಗೆ, ತನ್ನ ಪಾರ್ಥಿವ ಶರೀರವೂ ಮತ್ತೊಬ್ಬರ ನೀರಸ, ದಣಿದ, ಹತಾಶ ಜೀವನಕ್ಕೆ  ಹೊಸ ಭರವಸೆ, ಹೊಸ ಬೆಳಕು ಮತ್ತು ಹೊಸ ಜೀವವನ್ನು ತುಂಬಬಲ್ಲದೆಂಬ ಯೋಚನೆಯೇ, ಅದೆಷ್ಟು ತೃಪ್ತಿ ನೀಡಬಹುದಲ್ಲವೇ?? ಈ ಕುರಿತಾಗಿ ಬರೆಯುವುದು ಮತ್ತು ಹೇಳುವುದು ಎಷ್ಟು ಸರಳವೋ, ಈ ಕೆಲಸವನ್ನು ಸಕಾಲದಲ್ಲಿ ಮಾಡಿ ಮುಗಿಸುವುದು ಅಷ್ಟೇ ಕಷ್ಟಕರ.

ವೈದ್ಯರು ಎಷ್ಟೇ ಪ್ರಯತ್ನ ಮಾಡಿದರೂ, ನೋಯ್ಡಾದ ಸ್ವಯಂಸೇವಕ ಕುಟುಂಬವೊಂದರ 7 ದಿನಗಳ ಹಸುಳೆಯನ್ನು ಉಳಿಸಲು ಸಾಧ್ಯವಾಗದಿದ್ದಾಗ, ಆ ಕುಟುಂಬದವರು ಆ ಮಗುವಿನ ಅಲ್ಪಕಾಲಿಕ ಬದುಕನ್ನು ಸಾರ್ಥಕಗೊಳಿಸುವಂತೆ, ಅದರ ದೇಹದಾನ ಮಾಡಿ ಮಾದರಿಯಾದರು. ಹೀಗೆ, ಆ ಕಂದ, ದಧೀಚಿ ದೇಹದಾನ ಸಮಿತಿಯ ಅತಿ ಕಿರಿಯ ದಾನಿಯಾಯಿತು.

ನವೆಂಬರ್ 10, 2017ರಂದು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ದಧೀಚಿ ದೇಹದಾನ ಸಮಿತಿಯ ಕಾರ್ಯಕ್ರಮದ ಮುಖ್ಯ ಅತಿಥಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ರವರು ಆ ನವಜಾತ ಶಿಶುವಿನ ತಂದೆ ಶ್ರೀ ಸೂರಜ್ ಗುಪ್ತಾರವರ ಬಳಿ ಕುಳಿತು ಮಾತನಾಡಿದರು. ಅವರನ್ನೂ ಹಾಗೂ ದೇಹದಾನದ ನಿರ್ಣಯ ಕೈಗೊಂಡ ಎಲ್ಲಾ ಕುಟುಂಬಗಳನ್ನೂ ರಾಷ್ಟ್ರಪತಿಗಳು ಅಭಿನಂದಿಸಿದರೆಂದು ಸಮಿತಿಯ ಅಧ್ಯಕ್ಷರಾದ ಶ್ರೀ ಹರ್ಷದೀಪ್ ಮಲ್ಹೋತ್ರಾ ತಿಳಿಸಿದರು.

ಸಂಕಲ್ಪ ಪತ್ರಗಳನ್ನು ತುಂಬಿದ ದಧೀಚಿ ಕುಟುಂಬದ ಎಲ್ಲ ಸದಸ್ಯರನ್ನು ಗೌರವಿಸುವ, ಸಂಕಲ್ಪಗಳನ್ನು ಪೂರೈಸಿ, ಆ ಅಂಗಾಂಗಗಳಿಂದ ಇತರರಿಗೆ ಹೊಸ ಜೀವನ ನೀಡಿದ ಎಲ್ಲಾ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸುವ ಇಂತಹ ಅನೇಕ ಕಾರ್ಯಕ್ರಮಗಳು ವರ್ಷವಿಡೀ ನಡೆಯುತ್ತವೆ. ಅಂಗದಾನದಿಂದ ಹೊಸ ಜೀವನ ಪಡೆದವರು ಕೃತಜ್ಞತೆ ಸಲ್ಲಿಸುತ್ತಾ ಹಂಚಿಕೊಳ್ಳುವ ಅವರ ಅನುಭವಗಳು, ಇತರ ಅನೇಕರಿಗೆ ದೇಹದಾನದ ಪ್ರೇರಣೆ ನೀಡುತ್ತವೆ.


ಹೃದಯ ಮರುಜೋಡಣೆಯ ಬಳಿಕ ಎಲ್ಲರಂತೆ ಜೀವನ ನಡೆಸುತ್ತಿರುವ ಶ್ರೀಮತಿ ಪ್ರೀತಿ ಉನ್ಹಾಳೆ ಅವರ ಅನುಭವವನ್ನು ಕೇಳಿದ ಪಂಜಾಬ್ ಕೇಸರಿಯ ನಿರ್ದೇಶಕಿ ಶ್ರೀಮತಿ ಕಿರಣ್ ಚೋಪ್ರಾರವರು ಸ್ಥಳದಲ್ಲಿಯೇ ತಮ್ಮ ದೇಹದಾನದ ಪ್ರತಿಜ್ಞೆ ಕೈಗೊಂಡು, ನಿರ್ಣಯಪತ್ರವನ್ನೂ ತುಂಬಿದರು.

ಎಲ್ಲ ದಾನಗಳೂ ಮರಣಾನಂತರವೇ ಆಗಬೇಕೆನ್ನುವ ಅಗತ್ಯವಿಲ್ಲ, ರಕ್ತದಾನ, ಕೇಶದಾನ ಮುಂತಾದ ಕೆಲವು ದಾನಗಳನ್ನು ನಾವು ಇದ್ದಾಗಲೇ ಸುಲಭವಾಗಿ ಮಾಡಬಹುದು. ಕುಟುಂಬಗಳಲ್ಲಿನ ಈ ರೀತಿಯ ದೇಹದಾನದ ಸಂಕಲ್ಪಗಳಿಂದ ನಮ್ಮ ಹೊಸ ಪೀಳಿಗೆಯೂ ದೇಹದಾನಕ್ಕೆ ಪ್ರೇರಣೆ ಪಡೆಯುತ್ತಿದೆ. ಶಾಲಾ ಬಾಲಕಿಯರಾದ ಮೀರಾ, ಶ್ರೇಯಾ ಮತ್ತು ಎಂಜಿಲ್ ಅವರು ಕಿಮೋಥೆರಪಿಗೆ ಒಳಗಾಗಿದ್ದ ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ತಮ್ಮ ಕೂದಲನ್ನು ದಾನ ಮಾಡುವ ಮೂಲಕ ಯುವಕರಲ್ಲಿ ಸೇವಾಮನೋಭಾವ ಬೆಳೆಸಲು ಪ್ರಯತ್ನಿಸಿದ್ದಾರೆ.

ದಾನ ಬಯಸುವ ಕುಟುಂಬದವರು ಸಮಿತಿಗೆ ಒಂದು ಕರೆ ಮಾಡಿದರೆ ಸಾಕು, ಬಳಿಕ ಅಂತಿಮ ಘಟ್ಟದವರೆಗೆ ನಮ್ಮ 300 ಸ್ವಯಂಸೇವಕರು ನಿಸ್ವಾರ್ಥವಾಗಿ  ಹಗಲಿರುಳೂ ಖುದ್ದಾಗಿ ಸಹಾಯ ಮಾಡುತ್ತಾರೆ ಎಂದು ಸಮಿತಿಯ ಅಧ್ಯಕ್ಷ ಶ್ರೀ ಹರ್ಷದೀಪ್ ಜೀ ಹೇಳುತ್ತಾರೆ. ದಾನಿಗಳು ಮತ್ತು ಫಲಾನುಭವಿಗಳೆಲ್ಲರೂ ದಧೀಚಿ ಕುಟುಂಬದ ಸದಸ್ಯರಾಗುವ ಮೂಲಕ ಸಮಾಜದಲ್ಲಿ ದೇಹದಾನ ಮತ್ತು ಅಂಗದಾನದ ಜಾಗೃತಿಯನ್ನು ಪ್ರೇರೇಪಿಸುತ್ತಾರೆ. ಸಮಿತಿಯಿಂದ ನಡೆಯುವ ನೈಮಿಷಾರಣ್ಯ ತೀರ್ಥಯಾತ್ರೆ ಹಾಗೂ ಮಹರ್ಷಿ ದಧೀಚಿಯ ದೇಹದಾನದ ಕಥಾನಕವು ಇಂದು ಸಮಾಜದಲ್ಲಿ ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ಸಂಪರ್ಕ :ಡಾ. ವಿಶಾಲ್ ಚಡ್ಢಾ

ಮೊ.ಸಂ +91- 98183 45704

1485 Views
अगली कहानी