सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಕೆರೆಯ ನೀರನ್ನು ಕೆರೆಗೆ ಚೆಲ್ಲಿ

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

ನಿವೃತ್ತಿಯ ನಂತರದ ನಿಮ್ಮ ಯೋಜನೆ ಏನು? ಇನ್ನೂ ಯೋಚಿಸಿಲ್ಲವೇ? ಹಾಗಾದರೆ ಈಗಲೇ ಯೋಚಿಸಿ. ನಿಮ್ಮನ್ನು ಇಷ್ಟು ವರ್ಷ ಸಲಹಿದ ಈ ಸಮಾಜ ಹಾಗೂ ದೇಶಕ್ಕೆ ನಿಮ್ಮ ಅವಶ್ಯಕತೆ ತುಂಬಾನೇ ಇದೆ. ಇದೇ ವಿಚಾರದಲ್ಲಿ ನಂಬಿಕೆಯಿಟ್ಟಿರುವ, ಸಂಘದ ಸ್ವಯಂಸೇವಕರಾದ ಶ್ರೀಯುತ ರವಿ ಕರ್ವೇಯವರು ಮಹಾರಾಷ್ಟ್ರದ ಥಾಣೆಯವರು. ಥಾಣೆಯ ಟಿ. ಜೆ. ಎಸ್. ಬಿ. ಸಹಕಾರಿ ಬ್ಯಾಂಕಿನಿಂದ ಗೌರವಪೂರ್ವಕವಾಗಿ ನಿವೃತ್ತಿ ಹೊಂದಿದ ಬಳಿಕ ಅವರು, ತಮ್ಮ ನಾಲ್ವರು ಸಂಗಡಿಗರೊಂದಿಗೆ ಕಳೆದ ಹತ್ತು ವರ್ಷಗಳಲ್ಲಿ ಮಹಾರಾಷ್ಟ್ರದ ಚಿಕ್ಕ ಹಳ್ಳಿಗಳಿಂದ ಹಿಡಿದು ಪಟ್ಟಣಗಳಲ್ಲಿರುವ ಸೇವಾಬಸತಿಗಳ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉನ್ನತಿಗೆ ಕಾರಣರಾಗಿದ್ದು ಮಾತ್ರವಲ್ಲ, ಆ ವಿದ್ಯಾರ್ಥಿಗಳಿಗೆ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿಸುವ ಸಂಸ್ಕಾರವನ್ನೂ ಕಲಿಸಿದ್ದಾರೆ.2010 ರಿಂದ 2022 ರ ವರೆಗೆ ವಿದ್ಯಾರ್ಥಿ ವಿಕಾಸ ಯೋಜನೆಯ ಅಡಿಯಲ್ಲಿ  ಕೊಡುಗೈ ದಾನಿಗಳಿಂದ ಸಂಗ್ರಹಿಸಿದ 10 ಕೋಟಿ 95 ಲಕ್ಷ ರೂಪಾಯಿಗಳಿಂದ ಈಗಾಗಲೇ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳ ವೈದ್ಯಕೀಯ, ತಾಂತ್ರಿಕ ಹಾಗೂ ಇನ್ನಿತರ ಪ್ರೊಫೆಷನಲ್ ಕೋರ್ಸುಗಳ ಶುಲ್ಕ ಕಟ್ಟಲಾಗಿದೆ. ಅಷ್ಟೇ ಅಲ್ಲ, ರಾಯಗಡ ಹಾಗೂ ಥಾಣೆ ಜಿಲ್ಲೆಗಳಲ್ಲಿ ಶಿಥಿಲವಾಗಿದ್ದ 6 ಶಾಲಾ ಕಟ್ಟಡಗಳ ಜೀರ್ಣೋದ್ಧಾರವನ್ನೂ ಮಾಡಲಾದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣದ ಕೊರತೆ ಬಾರದಂತೆ ಸಂಘದ ಸ್ವಯಂಸೇವಕರಾದ ಕರ್ವೇ ಜೀ ಮತ್ತು ಅವರ ತಂಡವು ಪ್ರತಿಭಾವಂತ ಬಡ ಮಕ್ಕಳು ಹಾಗೂ ಸೇವಾ ಮನೋಭಾವ ಇರುವ  ಶ್ರೀಮಂತ ಕುಟುಂಬಗಳ ನಡುವೆ ಸೇತುವೆಯಾಗಿ ಕೆಲಸ ಮಾಡಿದೆ.


ಮೋಡಗಳು ಸೂರ್ಯನನ್ನು ಬಹುಕಾಲ ಮರೆಮಾಚಲು ಸಾಧ್ಯವಿಲ್ಲ ಎಂಬುದಕ್ಕೆ ನಿದರ್ಶನವೆಂಬಂತೆ ಮುನ್ನಡೆಯುತ್ತಿದ್ದಾಳೆ ಸ್ವಾತಿ ಸಿಂಹ. ಘಾಟ್ಕೋಪರಿನ ಕೊಳಚೆ ಪ್ರದೇಶದಲ್ಲಿ, ಮಳೆಗಾಲದ ಮೂರು ತಿಂಗಳ ಕಾಲ ಜಲಾಶಯವೇ ಆಗಿರುತ್ತಿದ್ದ ಜೋಪಡಿಯಲ್ಲಿ ನೆಲೆಸಿದ್ದ ಸ್ವಾತಿ ಓದಿನಲ್ಲಿ ಯಾವಾಗಲೂ ಮುಂದಿರುತ್ತಿದ್ದಳು. ವಿದ್ಯಾರ್ಥಿ ವಿಕಾಸ ಯೋಜನೆಯ ಮುಖಾಂತರ ಬಿ.ಎಸ್.ಸಿ, ಎಂ.ಎಸ್.ಸಿ. ಪದವಿಗಳನ್ನು ಮುಗಿಸಿದ ಆಕೆ, ಇದೀಗ ಬ್ಯಾಂಕ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಾ ವಾರ್ಷಿಕ 19 ಲಕ್ಷಗಳ ವೇತನ ಪಡೆಯುತ್ತಿದ್ದಾಳೆ. ತನ್ನ ತಾಯಿಯ ಕಠಿಣ ಪರಿಶ್ರಮ ಹಾಗೂ ದೃಢಸಂಕಲ್ಪಗಳೇ ಮೈವೆತ್ತಂತೆ ಜೀವಿಸುತ್ತಿರುವ ಸೋಲಾಪುರದ ಅಂಜಲಿ ಲೋಖಂಡೆ ಕೂಡ ಇಂಥದ್ದೇ ಯಶೋಗಾಥೆ ರಚಿಸಿದಳು. ಒಂದೊಮ್ಮೆ ತಗಡಿನ ಹೊದಿಕೆಯ ಮನೆಯಲ್ಲಿದ್ದ, ಬಿದಿರು ಬುಟ್ಟಿಯೊಂದರಲ್ಲಿ ತನ್ನೆಲ್ಲ ಮೆಡಲು ಇತ್ಯಾದಿ ಪಾರಿತೋಷಕಗಳನ್ನು ತುಂಬಿಡುತ್ತಿದ್ದ ಅಂಜಲಿ, ಇಂದು ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಅತ್ಯುನ್ನತ ಶ್ರೇಣಿ ಗಳಿಸಿದ್ದಷ್ಟೇ ಅಲ್ಲ, ಒಂದು ಪ್ರತಿಷ್ಟಿತ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುತ್ತಾ ತನ್ನ ತಾಯಿಯೊಂದಿಗೆ ನಾಗಪುರದಲ್ಲಿ ನೆಲೆಸಿದ್ದಾಳೆ. ವಿದ್ಯಾರ್ಥಿ ವಿಕಾಸ ಯೋಜನೆಯ ದಾನಿಯೊಬ್ಬರು ಅಂದು ಆಕೆಯ ಫೀಸು ಕಟ್ಟಿದ್ದು, ಅಂಜಲಿಗೆ ತನ್ನ ಪರಿವಾರವನ್ನು ಬಡತನದಿಂದ ಮೇಲೆತ್ತಲು ಮಾತ್ರವಲ್ಲ, ತನ್ನ ತಾಯಿ ತನಗಾಗಿ ಕಂಡಿದ್ದ ಕನಸನ್ನು ಸಾಕಾರಗೊಳಿಸಲೂ ಸಹಕಾರಿಯಾಯಿತು.

ಸಣ್ಣ ಹಳ್ಳಿಗಳ ಜೋಪಡಿಗಳಿಂದ ಹೊರಟು ವೈದ್ಯಕೀಯ, ಇಂಜಿನಿಯರಿಂಗ್ ಅಥವಾ ಐಟಿ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಈ ಮಕ್ಕಳ ಅದ್ಭುತ ಪಯಣ ಹೇಗೆ ರೂಪುಗೊಳ್ಳುತ್ತಿದೆ? ಇಂಥ ಮಕ್ಕಳ ಆಯ್ಕೆ ಪ್ರಕ್ರಿಯೆ ಹೇಗೆ? ಏನಿದು, ವಿದ್ಯಾರ್ಥಿ ವಿಕಾಸ ಯೋಜನೆ?

ಬನ್ನಿ, ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅರುಣ್ ಕುಮಾರ್ ಅವರಿಂದ ಒಂದಿಷ್ಟು ಮಾಹಿತಿ ತಿಳಿಯೋಣ.

2010ರಲ್ಲಿ, ತಮ್ಮ ಕನಸುಗಳೊಂದಿಗೆ ರಾಜಿ ಮಾಡಿಕೊಂಡಿದ್ದ ಐವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆರಿಸಲಾಯಿತು. ಅವರಲ್ಲಿ ವೈದ್ಯಕೀಯ ಅಥವಾ ಇಂಜಿನಿಯರ್ ಕಾಲೇಜುಗಳ ಶುಲ್ಕ ಭರಿಸುವ ಶಕ್ತಿಯಿರಲಿಲ್ಲ. ಇಂಥ ಸ್ಥಿತಿ ಬಡವರಿಗೆ ಮಾತ್ರವಲ್ಲ, ಕೆಳಮಧ್ಯಮ ವರ್ಗದ ಕುಟುಂಬಗಳಿಗೂ ಒದಗುತ್ತದೆ. ರವಿ ಅವರಿಗೆ ಬ್ಯಾಂಕಿನಲ್ಲಿ ಸಂಪರ್ಕಕ್ಕೆ ಬಂದಿದ್ದ ಗ್ರಾಹಕರು ಮೊದಲು ಆಯ್ಕೆಯಾದ ಆ 5 ಮಕ್ಕಳ ಶುಲ್ಕವನ್ನು ದಾನದ ರೂಪದಲ್ಲಿ ನೀಡಿದರು. ಹೀಗೆ ಶುರುವಾದ ಯಾತ್ರೆಯಲ್ಲಿ ಸಹಪಯಣಿಗರ ಸಂಖ್ಯೆ ಹೆಚ್ಚುತ್ತಾ ಹೋಯಿತು. ನಂತರ ಆರ್.ಎಸ್.ಎಸ್.ನ ””” ””” ’ಸೇವಾ ಸಹಯೋಗ ಸಂಸ್ಥಾ’ 2017ರಲ್ಲಿ ಈ ವಿದ್ಯಾರ್ಥಿ ವಿಕಾಸ ಯೋಜನೆಗೆ ಸಾಂಸ್ಥಿಕ ರೂಪ ಕೊಡಲು ಮುಂದಾಯಿತು.

10ನೇ ತರಗತಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದರೂ, ಹಣಕಾಸಿನ ಮುಗ್ಗಟ್ಟಿನಿಂದಾಗಿ ಓದು ಮುಂದುವರೆಸಲು ಸಾಧ್ಯವಾಗದ ಪ್ರತಿಭಾವಂತರನ್ನು ಹುಡುಕಲೆಂದೇ 80 ಜನ ಸ್ವಯಂಸೇವಕರ ತಂಡ ಇಂದು ಶ್ರಮಿಸುತ್ತಿದೆ. ಮೊದಲು ಅವರ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ತಿಳಿಯಲಾಗುತ್ತದೆ. ನಂತರ, 10 ಅಥವಾ 12ನೇ ತರಗತಿಯ ಬಳಿಕದ ಶಿಕ್ಷಣಕ್ಕಾಗಿ ಕಾಲೇಜು, ಹಾಸ್ಟೆಲ್, ಕೋಚಿಂಗ್ ಇತ್ಯಾದಿ ಶುಲ್ಕಗಳನ್ನು ನಾಲ್ಕು ವರ್ಷಗಳ ಅವಧಿಗೆ ಕಾಲಕಾಲಕ್ಕೆ ಪಾವತಿಸಲಾಗುತ್ತದೆ. ಪೋಷಕರು ತಮ್ಮ ಮಗುವಿನ ಶಿಕ್ಷಣಕ್ಕಾಗಿ ಹೊಂದಿಸಬಹುದಾದ ಮೊತ್ತ ಹಾಗೂ ಉತ್ತಮ ಕಾಲೇಜಿನ ಶಿಕ್ಷಣದ ಒಟ್ಟು ವೆಚ್ಚಗಳ ನಡುವಿನ ಕೊರತೆಯನ್ನು ವಿದ್ಯಾರ್ಥಿ ವಿಕಾಸ ಯೋಜನೆಯು ವಹಿಸಿಕೊಳ್ಳುತ್ತದೆ.


ಮುಂಬೈನ ಸೇವಾ ಸಹಯೋಗ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರುಗಳ ಪೈಕಿ ಒಬ್ಬರಾದ ಕಿಶೋರ್ ಮೋಘೇಜಿ ಹೇಳುವಂತೆ, ವಿದ್ಯಾರ್ಥಿ ವಿಕಾಸ ಯೋಜನೆಯು ದಾನಿಗಳ ನೆರವಿನಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಮಾತ್ರ ರೂಪಿಸುತ್ತಿಲ್ಲ, ನಾಳಿನ ಸುಂದರ ಸಮಾಜವನ್ನೂ ರೂಪಿಸುತ್ತಿದೆ. ಸಮಾಜದ ಸಹಾಯದಿಂದ ಮುಂದೆ ಬಂದ ವಿದ್ಯಾರ್ಥಿಗಳೂ ಸಹ ಕ್ರಮೇಣ ದಾನಿಗಳ ಪಟ್ಟಿಯನ್ನು ಸೇರಿಕೊಳ್ಳುತ್ತಿದ್ದಾರೆ. ಇಂದು ಔಷಧ ವಿಜ್ಞಾನದಲ್ಲಿ (ಫಾರ್ಮಸಿ) ಹೆಸರುವಾಸಿಯಾಗಿರುವ ಸಚಿನ್ ಸೂರ್ಯವಂಶಿ ದಾನಿಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದ್ದಾರೆ. ವಿದ್ಯಾರ್ಥಿ ವಿಕಾಸ ಯೋಜನೆಯ ಫಲಾನುಭವಿಯಾಗಿದ್ದ ಸಚಿನ್, ನಂತರ ಬ್ಯಾಂಕಿನಿಂದ 1,40,000 ರೂಪಾಯಿಗಳ ಸಾಲ ಪಡೆದು ಇಬ್ಬರು ವಿದ್ಯಾರ್ಥಿಗಳ ಪೂರ್ತಿ ಶಿಕ್ಷಣದ ಹೊಣೆ ಹೊತ್ತರು. ಬಳಿಕ ತಮ್ಮ ಸಂಬಳದಿಂದ ಬ್ಯಾಂಕಿನ ಸಾಲ ಚುಕ್ತಾ ಮಾಡಿದರು.

ಸಚಿನ್ ರಂತೆಯೇ, ಉಳಿದೆಲ್ಲರಲ್ಲಿಯೂ ಕೊಡುವ ಮನೋಭಾವವನ್ನು ವಿದ್ಯಾರ್ಥಿ ವಿಕಾಸ್ ಯೋಜನೆ ಬಿತ್ತುತ್ತಿದೆ. ಅಂತೆಯೇ ತಮ್ಮ ಶಿಕ್ಷಣದ ವೆಚ್ಚ ಭರಿಸಿದ ದಾನಿಗಳಾರು ಎಂಬುದನ್ನು ಗೌಪ್ಯವಾಗಿ ಇಡಲಾಗುತ್ತದೆ. ಯಾವ ಸಮಾಜ ಇಂದು ನಮಗೆ ಸಹಾಯ ಹಸ್ತ ಚಾಚಿದೆಯೋ ಮುಂದೊಮ್ಮೆ ನಾವೆಲ್ಲರೂ ಅದೇ ರೀತಿ ಇತರರಿಗೆ ಸಹಾಯ ಮಾಡಬೇಕು ಎಂಬ ಮನೋಭಾವ ಬೆಳೆಸಲಾಗುತ್ತದೆ.

ಸಂಪಾದನೆಯ ಮೊದಲ ಇನ್ನಿಂಗ್ಸಿನಲ್ಲಿ ನಮ್ಮ ಮನೆ, ಕುಟುಂಬ, ಮಕ್ಕಳು ಎಲ್ಲವನ್ನೂ ನಿಭಾಯಿಸುವ ನಮಗೆ, ಎರಡನೇ ಇನ್ನಿಂಗ್ಸಿನಲ್ಲಿ ಸಮಾಜದ ಋಣ ತೀರಿಸಲು (ಇಳಿ) ವಯಸ್ಸೇಕೆ ಅಡ್ಡಿಯಾಗಬೇಕು? 10 ಕೋಟಿ ರೂಪಾಯಿಗಳಿಂದ ಇಂದು 2500 ಬಡ ವಿದ್ಯಾರ್ಥಿಗಳ ಬದುಕು ಹಸನಾಗಿದೆ. ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ ಸಮಾಜಕ್ಕೆ ಹಿಂತಿರುಗಿ ನೀಡಬೇಕು ಎಂದು ಹೊರಟವರ ಅನುಭವ ಹಾಗೂ ದಕ್ಷತೆಗಳು ಇದಕ್ಕೆ ಕಾರಣವಾಗಿವೆ. ರವೀಂದ್ರ ಕರ್ವೇ, ಅರುಣ್ ಕರ್ಮಾಕರ, ಶರತ್ ಗಂಗಲ್, ರಾಜು ಹೇಮಬರ್ಡೇ ಜೀ ಹಾಗೂ ಅಭಿಜೀತ್ ಫಣನೀಸ್ ಮುಂತಾದವರು ಭಾರತದ ಭವಿಷ್ಯವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಿದ್ದಾರೆ ಎಂಬುದು ನಿಸ್ಸಂಶಯ.

ಸಂಪರ್ಕ : ರವೀಂದ್ರ ಕರ್ವೇ

ಮೊಬೈಲ್ ನಂ : 93232 34585

851 Views
अगली कहानी