नियमित अपडेट के लिए सब्सक्राईब करें।
ಮಣಿನಗರ್ | ಗುಜರಾತ್
ಚಹಾದಂಗಡಿಯಲ್ಲಿ ತಾಯಿಯ ಜೊತೆ ಗ್ರಾಹಕರಿಗೆ ಚಹಾ ನೀಡುತ್ತಿದ್ದ ಮನೀಶಾ, ತಾನು ಎಂದಾದರೂ ಹತ್ತನೆಯ ತರಗತಿ ಪಾಸಾಗುವೆನೆ ಎಂದು ಆಗಾಗ್ಗೆ ಯೋಚಿಸುತ್ತಿದ್ದಳು. ಮೊದಲೇ ಗಣಿತ, ವಿಜ್ಞಾನಗಳು ಕಬ್ಬಿಣದ ಕಡಲೆ! ಅಪ್ಪನಿಂದಂತೂ ಯಾವ ನಿರೀಕ್ಷೆಯೂ ಸಾಧ್ಯವಿರಲಿಲ್ಲ. ಆಟೋ ಓಡಿಸುತ್ತಿದ್ದ ಅಪ್ಪ ಅಶಿಕ್ಷಿತ ಹಾಗು ಮದ್ಯವ್ಯಸನಿಯಾಗಿದ್ದರು. ಗುಜರಾತಿನ ಮಣಿನಗರದ ಕಾಂಕರಿಯಾ ರಾಮಾನಂದ ಕೋಟ್ ನಲ್ಲಿರುವ ಸೇವಾಬಸ್ತಿಯಲ್ಲಿದ್ದೂ ಉತ್ತಮ ಅಂಕಗಳೊಂದಿಗೆ ಪಿಯುಸಿ ಪಾಸಾದ ಮನೀಶಾ, ಮದುವೆಯಾಗಿ ಇಂದು ಫ್ಯಾಷನ್ ಡಿಸೈನರ್ ಆಗಿದ್ದಾಳೆ. ಅದೇ ಚಹಾದಂಗಡಿಯ ಉಸ್ತುವಾರಿ ಈಗ ಅಪ್ಪನದು! ಏಕೆಂದರೆ ಆತ ಕುಡಿತವನ್ನು ಬಿಟ್ಟಿದ್ದಾನೆ.
ಇಂತದ್ದೇ ಒಂದು ಕಥೆ ಚೇತನ್ ರಾವಲ್ ಅವರದ್ದು. ಮದುವೆ ಮನೆಗಳಲ್ಲಿ ಡೋಲು ಬಾರಿಸಿ ಜೀವನ ಸಾಗಿಸುತ್ತಿದ್ದ ಮನಸುಖ್ ರಾವಲರ ಏಕಮಾತ್ರ ಪುತ್ರ ಚೇತನ್, ಓದಬೇಕೆಂಬ ಮಹದಾಸೆ
ಹೊತ್ತವನು. ಆದರೆ, ಅಪ್ಪನ ಅರ್ಧ ದುಡಿಮೆ ಕುಡಿತಕ್ಕೇ ಮೀಸಲಾಗಿರುವಾಗ ಟ್ಯೂಷನ್ ಗಾಗಿ ಹಣ ಎಲ್ಲಿಂದ ಬರಬೇಕು? ಆದರೆ ಇಂದು, ಮಣಿನಗರದಲ್ಲಿ ಪ್ರಸಿದ್ಧ ಫಿಸಿಯೋಥೆರಪಿಸ್ಟ್ ಆಗಿರುವ ಡಾ.ಚೇತನ್ ರಾವಲ್ ಹಿಂದಿನ ಕರಾಳ ದಿನಗಳನ್ನು ಸ್ಮರಿಸಲು ಬಯಸುವುದಿಲ್ಲ.
ಮಿಲ್ಲತ್ ನಗರದ ಬಸ್ತಿಯಲ್ಲಿ ವಾಸಿಸುವ ಸಲೀಂ ಸತತ ಮೂರು ದಿನ ತರಗತಿಗೆ ಗೈರುಹಾಜರಾದಾಗ ಸ್ವತಃ ಶಿಕ್ಷಕರೇ ಮನೆಯ ಬಾಗಿಲಿಗೆ ಬಂದಿದ್ದರು! ಮಾತ್ರವಲ್ಲ, ಟೈಫಾಯಡ್ ನಿಂದ
ಬಳಲುತ್ತಿದ್ದ ಹುಡುಗನಿಗೆ ಪೂರ್ತಿ ಚಿಕಿತ್ಸೆ ಕೊಡಿಸಿದರು. ಇಂದು, ಮಣಿನಗರದ ಮಿಲ್ ಒಂದರಲ್ಲಿ ನೌಕರಿ ಮಾಡುತ್ತಾ ತನ್ನ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿರುವ ಈ ಮುಸ್ಲಿಂ ಯುವಕ, ಇಂದು ಅವನು ತಲೆಬಾಗುವುದು ತನ್ನ ದೇವರಿಗೆ ಹಾಗೂ ಸಂಘದ ಸ್ವಯಂಸೇವಕರೂ ಹಾಗೂ ತನ್ನ ಶಿಕ್ಷಕರೂ ಆಗಿರುವ ಕನೂಭಾಯೀ ಅವರಿಗೆ ಮಾತ್ರ!. ಸುಖಾಂತ್ಯ ಕಂಡ ಈ ಮೂರು
ಬೇರೆ ಬೇರೆ ಪ್ರಸಂಗಗಳ ಮೂಲವೇ ಶ್ರೀ ಗುರೂಜಿ ಜ್ಞಾನ ಮಂದಿರ. ಮಣಿನಗರದ ಮುನ್ಸಿಪಲ್ ಶಾಲೆಯಲ್ಲಿ ಸಂಜೆ ಐದರಿಂದ ಎಂಟು ಗಂಟೆಯವರೆಗೆ ನಡೆಯುವ ಈ ಟ್ಯೂಷನ್ ಸೆಂಟರ್ ಯಾವುದೋ ಸಾಧಾರಣ ತರಬೇತಿ ಕೇಂದ್ರವಲ್ಲ, ಬದಲಾಗಿ ಇದು ಬಡ ಮಕ್ಕಳ ಬದುಕಿನಲ್ಲಿ ಶಿಕ್ಷಣ, ಸಂಸ್ಕಾರ ಮತ್ತು ಸ್ವಾವಲಂಬನೆಗಳ ಬೆಳಕು ಚೆಲ್ಲುವ ಕೇಂದ್ರವಾಗಿದೆ.
ಸಂಘದ ನಿಕಟಪೂರ್ವ ಶಾಖಾ ಸೇವಾ ಕಾರ್ಯಕರ್ತರಾಗಿದ್ದ ಕನೂಭಾಯಿ ರಾಥೋಡ್ ರವರು ಹಾಗೂ ಪ್ರಸ್ತುತ ಭಾಗ ಸೇವಾಪ್ರಮುಖರಾಗಿರುವ ಮಧುಭಾಯಿ ಬಾರೋಟ್ ಇವರೀರ್ವರ ಪ್ರಯತ್ನದಿಂದ 14 ವರ್ಷಗಳ ಹಿಂದೆ ಜನ್ಮ ತಾಳಿರುವ ಈ ಟ್ಯೂಷನ್ ಸೆಂಟರ್ನಲ್ಲಿ ವಿದ್ಯಾರ್ಥಿಗಳು ಯಾವುದೇ
ಶುಲ್ಕವನ್ನು ಪಾವತಿಸಬೇಕಿಲ್ಲ ಹಾಗು ಇಲ್ಲಿನ ಶಿಕ್ಷಕರು ಯಾವುದೇ ಸಂಬಳವನ್ನೂ ಪಡೆಯುವುದಿಲ್ಲ. ಸೇವೆಯೆಂಬ ಧ್ಯೇಯವೊಂದೇ ಎಲ್ಲ ಸಹವರ್ತಿಗಳನ್ನು ಒಗ್ಗೂಡಿಸಿದೆ. ಕೆಲವೊಮ್ಮೆ ಸಂಸ್ಥೆಯ ಆರ್ಥಿಕ ಅಗತ್ಯಗಳನ್ನೂ ಇವರೇ ಸ್ವ-ಇಚ್ಚೆಯಿಂದ ಭರಿಸುತ್ತಾರೆ.
14 ವರ್ಷಗಳ ಹಿಂದಿನ ಮಾತು. ಸ್ವಯಂಸೇವಕರಾದ ಕನೂಭಾಯಿಯವರು ಗಣಿತ ಮತ್ತು ವಿಜ್ಞಾನ ವಿಷಯಗಳ 'ಮಾಡರ್ನ್ ಮ್ಯಾಗಜಿನ್' ಎಂಬ ಪುಸ್ತಕಗಳನ್ನು ಸೇವಾಬಸ್ತಿಗಳಲ್ಲಿ ಉಚಿತವಾಗಿ ಹಂಚುತ್ತಿದ್ದರು. ಆದರೆ, ಅಲ್ಲಿನ ವಿದ್ಯಾರ್ಥಿಗಳಿಗೆ ಅವುಗಳಿಂದ ಏನನ್ನೂ ಕಲಿಯಲು ಆಗುತ್ತಿರಲಿಲ್ಲ. ನಿಯಮಿತವಾಗಿ ನಡೆಯದ ಸರ್ಕಾರೀ ಶಾಲೆಯ ಬೋಧನೆಯಿಂದಾಗಿ ಮಕ್ಕಳು ಹತ್ತನೇ ತರಗತಿ ಪಾಸಾಗುವುದೂ ದುಸ್ತರವಾಗಿತ್ತು. ಹಾಗಾಗಿ, ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ 2009ರಲ್ಲಿ ಶ್ರೀ ಗುರೂಜಿ ಜ್ಞಾನ ಮಂದಿರ ಎಂಬ ಟ್ಯೂಷನ್ ಸೆಂಟರ್ ಕೇವಲ ಏಳು ಮಕ್ಕಳಿಂದ ಶುರುವಾಗಿದ್ದು ಸ್ವಯಂಸೇವಕರೊಬ್ಬರ ಮನೆಯ ಸಣ್ಣ ಕೊಠಡಿಯಲ್ಲಿ! ಕ್ರಮೇಣ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತರಗತಿಗಳ ಸಂಖ್ಯೆಯೂ
ಏರತೊಡಗಿತ್ತು. ಆಗ, ಆರಾಧನಾ ಪಬ್ಲಿಕ್ ಸ್ಕೂಲ್ ಎಂಬ ಖಾಸಗಿ ಶಾಲೆಯೂ, ಈ ಟ್ಯೂಷನ್ ಗಾಗಿ ಸಂಜೆ 5ರಿಂದ 8ರವರೆಗೆ, ತನ್ನ ಕೊಠಡಿಗಳನ್ನು ಉಚಿತವಾಗಿ ತೆರೆದಿಟ್ಟಿತು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುತ್ತಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಅನೇಕ ವರ್ಷಗಳಿಂದ ಇಲ್ಲಿ ಬೋಧಿಸುತ್ತಿರುವ, ರಾಷ್ಟ್ರಪತಿ ಪುರಸ್ಕಾರದಿಂದ ಗೌರವಿಸಲ್ಪಟ್ಟಿರುವ ಶಿಕ್ಷಕರಾದ ಜಯೇಶ್ ಟಕ್ಕರ್ ಹೇಳುತ್ತಾರೆ- ಇಲ್ಲಿ ಮಕ್ಕಳನ್ನು
ಅನ್ಯಾನ್ಯ ಚಟುವಟಿಕೆಗಳಲ್ಲೂ ತೊಡಗಿಸಲಾಗುತ್ತದೆ. ಗುರುಪೂರ್ಣಿಮೆ, ರಕ್ಷಾಬಂಧನ್, ಶ್ರೀಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಮುಂತಾದ ಎಲ್ಲಾ ಹಬ್ಬಗಳನ್ನು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಇಲ್ಲಿ ಮಕ್ಕಳೊಂದಿಗೆ ಆಚರಿಸಲಾಗುತ್ತದೆ. ಅಷ್ಟೇ ಅಲ್ಲ, ಆಗಾಗ್ಗೆ ಧಾರ್ಮಿಕ ಪ್ರಬಂಧ ಬರಹ, ಚರ್ಚೆ, ದೇಶಭಕ್ತಿ ಗೀತೆ, ಕಥೆ ಹೇಳುವುದು ಮೊದಲಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳಿಗೆ ಬೇರೆ ಬೇರೆ ಐತಿಹಾಸಿಕ ಸ್ಥಳಗಳ ಜೊತೆಗೆ ವಿಧಾನಸಭಾ ದರ್ಶನವನ್ನೂ ಮಾಡಿಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಮಕ್ಕಳಿಂದ ಹಣ್ಣು-ಹಂಪಲು ವಿತರಣೆ ಹಾಗೂ ರಕ್ಷಾಬಂಧನ್ ಕಾರ್ಯಕ್ರಮಗಳಿಂದ ಸೋದರತ್ವ ಮತ್ತು ವ್ಯಕ್ತಿತ್ವ ವಿಕಸನಗಳನ್ನು ರೂಪಿಸಲಾಗುತ್ತದೆ. ಹತ್ತನೇ ತರಗತಿ ಹಾಗೂ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗಾಗಿ ಉದ್ಯೋಗ-ಮಾಹಿತಿ ಮೇಳಗಳನ್ನೂ ಆಯೋಜಿಸಲಾಗುತ್ತದೆ. ಮಕ್ಕಳ ತಾಯಿ ತಂದೆಯರನ್ನು ಭೇಟಿಯಾಗಲು ಪೋಷಕರ ಸಭೆ ಕರೆಯುವುದಷ್ಟೇ ಅಲ್ಲ, ನಿಯಮಿತವಾಗಿ ವಸತಿ ಪ್ರದೇಶಗಳಿಗೆ ಕೆಲ ಶಿಕ್ಷಕರೇ ತೆರಳಿ ತಾಯ್ತಂದೆಯರನ್ನು ಭೇಟಿಯಾಗುತ್ತಾರೆ.
ಮೊದಲು ಕೇವಲ ಹತ್ತನೇ ತರಗತಿಯವರಿಗೆ ಇಲ್ಲಿ ಪಾಠ ನಡೆಯುತ್ತಿತ್ತು. ಅಗತ್ಯ ತಲೆದೋರಿದಂತೆ, ಇದೀಗ ಒಂಭತ್ತರಿಂದ ಹನ್ನೆರಡನೆಯ ತರಗತಿಯವರೆಗೆ ಆರಂಭಿಸಲಾಗಿದೆ. ಮಣಿನಗರದ ಮುನ್ಸಿಪಲ್ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಶ್ರೀ ಗುರೂಜೀ ಜ್ಞಾನಮಂದಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಖೋಖರಾ, ಘೋಡಾಸರ್ ವಟ್ವಾ, ಬೆಹರಾಮಪುರಾಗಳಂತಹ ದೂರದೂರದ ಪ್ರದೇಶಗಳಿಂದಲೂ
ವಿದ್ಯಾರ್ಥಿಗಳು ಓದಲೆಂದು ಇಲ್ಲಿಗೆ ಬರುತ್ತಾರೆ. ಕೆಲ ಮಕ್ಕಳಂತೂ ಕಲಿಯುವ ಆಸಕ್ತಿಯಿಂದ ಹತ್ತು ಕಿಲೋಮೀಟರ್ ಸೈಕಲ್ ತುಳಿದುಕೊಂಡೇ ಬರುತ್ತಾರೆ. ವಾಸ್ತವದಲ್ಲಿ ಶ್ರೀ ಗುರೂಜಿ ಜ್ಞಾನಮಂದಿರವನ್ನು ಶಿಕ್ಷಣ, ಸಂಸ್ಕಾರ ಹಾಗೂ ಮಾಹಿತಿಗಳ ತ್ರಿವೇಣೀ ಸಂಗಮ ಎಂದರೆ ಅದು ಅತಿಶಯೋಕ್ತಿಯಲ್ಲ.
नियमित अपडेट के लिए सब्सक्राईब करें।