नियमित अपडेट के लिए सब्सक्राईब करें।
5 mins read
ದಕ್ಷಿಣ
ಕಾಲಿಟ್ಟೊಡನೆ ವಿಶೇಷತೆ ಕಣ್ಣಿಗೆ ಕಟ್ಟುವಂಥ ಹಳ್ಳಿ. ಮನೆಮನೆಗಳ ಬಾಗಿಲಿನ ಮೇಲೆ ಓಂಕಾರ ಅಥವಾ ಸ್ವಸ್ತಿಕ್ ಚಿಹ್ನೆಗಳು. ಕೆಲವೆಡೆ ಗೋಡೆಗಳ ಮೇಲೆ ದುಂಡಗಿನ ಅಕ್ಷರಗಳಲ್ಲಿ ಬರೆದ ನೀತಿವಾಕ್ಯಗಳು. ಇನ್ನು ಕೆಲವೆಡೆ ಬ್ರಹ್ಮಾಂಡದ ರಹಸ್ಯಗಳನ್ನು ಎಳೆಯೆಳೆಯಾಗಿ ಬಿಡಿಸಿಡುವ ಮಾಹಿತಿಗಳು. ವೇದಕಾಲೀನ ಜೀವನವನ್ನು ನೆನಪಿಸುವಂತೆ ಕೂಡುರಸ್ತೆಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ಕುಶಲೋಪರಿಯ ಮಾತುಗಳನ್ನಾಡುವ ಜನರು. ಮೋಹದವೆಂಬ ಗ್ರಾಮದಲ್ಲಿ ಬದಲಿ ಶಕ್ತಿ ಸಂಪನ್ಮೂಲದ ಮೂಲಕ ವಿದ್ಯುತ್ ಉತ್ಪಾದನೆಯಿಂದ ತೊಡಗಿ ಗೋಬರ್ ಅನಿಲ ಘಟಕಗಳವರೆಗಿನ 50 ವಿಧದ ವಿವಿಧ ಉದ್ಯೋಗ ವ್ಯಾಪಾರಗಳು ನಮಗೆ ಕಂಡುಬರುತ್ತವೆ. ಇದನ್ನು ನೋಡಿದಾಗ ಸಂಸ್ಕೃತಿ ಮತ್ತು ಪ್ರಗತಿಯ ಸುಂದರ ಸಮನ್ವಯ ಗೋಚರಿಸುತ್ತದೆ. ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯ ಕರೇಲಿ ತಾಲೂಕು ಕೇಂದ್ರದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಗ್ರಾಮವಿಕಾಸ ಪ್ರಮುಖರಾಗಿದ್ದ ದಿವಂಗತ ಸುರೇಂದ್ರಸಿಂಹ ಚೌಹಾನರ ಕನಸಿನ ಆದರ್ಶ ಗ್ರಾಮ ದ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಇದು ಸ್ವಾತಂತ್ರ್ಯ ಬಂದಂದಿನಿಂದಲೂ ಇಲ್ಲಿ ನಡೆಯುತ್ತಿರುವ ಸಂಘದ ಶಾಖೆ ಹಾಗೂ ಇಲ್ಲಿನ ಸ್ವಯಂಸೇವಕರ ಹಲವಾರು ವರ್ಷಗಳ ಪರಿಶ್ರಮದ ಫಲವಾಗಿದೆ . ಹಳ್ಳಿಯ ಸ್ವಚ್ಛ ಮತ್ತು ಸುಧಾರಿತ ರಸ್ತೆಗಳು, ಹಸಿರಿನಿಂದ ಕಂಗೊಳಿಸುತ್ತಿರುವ ಮರಗಳ ಸಾಲು ಸಾಲು, ಆಟದ ಮೈದಾನ, ಪೈರುಗಳಿಂದ ನಳನಳಿಸುತ್ತಿರುವ ಹೊಲಗದ್ದೆಗಳು ತಮ್ಮಕಥೆಯನ್ನು ಆಗಂತುಕರಿಗೆ ತಾವೇ ಹೇಳತೊಡಗುತ್ತವೆ. ಮೋದಿಜಿ ಇಂದು ತಂದಿರುವ ಸ್ವಚ್ಛ ಭಾರತ ಆಂದೋಲನ ಶೌಚ ಮುಕ್ತ ಭಾರತ ಮೋಹದ ಗ್ರಾಮದಲ್ಲಿ ಮೊದಲಿಂದಲೇ ಅಸ್ತಿತ್ವದಲ್ಲಿತ್ತು. ರಸ್ತೆಗಳ ಶುಚಿತ್ವವನ್ನು ಕಾಪಾಡಲೆಂದು ಮನೆಮನೆಯ ಅಂಗಳದಲ್ಲೂ ಇಂಗು ಗುಂಡಿಗಳ ನಿರ್ಮಾಣ ಮಾಡಲಾಗಿದೆ.
ಒಳಚರಂಡಿ ವ್ಯವಸ್ಥೆ ಎಷ್ಟೊಂದು ಉತ್ತಮವಾಗಿದೆ ಎಂದರೆ ಎಲ್ಲಿಯೂ ಕೊಳಚೆ ನೀರಿನ ಸುಳಿವೇ ಇಲ್ಲ. ಮನೆಮನೆಯಲ್ಲೂ ಶೌಚಾಲಯವಿದೆ. 230 ಕುಟುಂಬಗಳಿಗೆ ಶೌಚಾಲಯವನ್ನು ಸ್ವತಃ ಸೇವಾಭಾರತಿ ಸಂಸ್ಥೆ ನಿರ್ಮಿಸಿಕೊಟ್ಟಿದ್ದರೆ, ಉಳಿದ ಮನೆಗಳಿಗೆ ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹಳ್ಳಿಯ ಪ್ರತಿ ಮನೆಯೂ ಬಯೋಗ್ಯಾಸ್ ಮುಖಾಂತರ ಬದಲಿ ಶಕ್ತಿ ಸಂಪನ್ಮೂಲ ಪಡೆಯುತ್ತಿದೆ. ವಿದ್ಯುಚ್ಛಕ್ತಿಯಿನ್ನೂ ಬಂದಿರದಿದ್ದ ಕಾಲದಲ್ಲಿ ಈ ಬಯೋಗ್ಯಾಸೇ ಮನೆಮನೆಗೂ ವಿದ್ಯುತ್ ಪೂರೈಸುತ್ತಿತ್ತು. ಇದೀಗ ವಿದ್ಯುತ್ ಸರಬರಾಜು ಲಭ್ಯವಿರುವ ಕಾರಣ ಬಯೋಗ್ಯಾಸ್ ಎಂಬುದು ಕೇವಲ ಅಡುಗೆ ಮನೆಗೆ ಸೀಮಿತವಾಗಿದೆ. ಈ ಹಳ್ಳಿಯ ಲಘು ಉದ್ಯಮಗಳ ಸಂಖ್ಯೆ ದೊಡ್ಡದು. ಬಟ್ಟೆ ತಯಾರಿಕೆ, ಆಟಿಕೆಗಳ ತಯಾರಿಕೆ, ಫೋಟೋಗಳಿಗೆ ಕಟ್ಟು ಹಾಕುವುದು, ಮಣ್ಣಿನ ಮಡಿಕೆಗಳ ತಯಾರಿ, ಎಲೆಗಳಿಂದ ದೊನ್ನೆಗಳನ್ನು ತಯಾರಿಸುವ ಯಂತ್ರ, ಹತ್ತಿಯ ಸಂಸ್ಕರಣ, ಹತ್ತಿಗೆ ಬಣ್ಣ ಹಾಕುವುದು, ಮೋಟರ್ ವೈಂಡಿಂಗ್, ಕುರ್ಚಿ ತಯಾರಿಕೆ, ಅಗರಬತ್ತಿ ಉತ್ಪಾದನೆ, ಟಿ.ವಿ/ರೇಡಿಯೋ ರಿಪೇರಿ, ಹೂದಾನಿ ಮತ್ತು ಹೂಕುಂಡಗಳ ಹಾಗೂ ಮೂರ್ತಿ ನಿರ್ಮಾಣ ಮಾಡುವ ಶಿಲ್ಪಕಲೆಯ ಅಭಿವೃದ್ಧಿ ಮೊದಲಾದ ನಾನಾವಿಧದ ಕುಶಲಕರ್ಮಗಳಿಂದ ನಿರುದ್ಯೋಗವೆಂಬುದು ಇಲ್ಲಿ ಹೇಳಹೆಸರಿಲ್ಲದಂತಾಗಿದೆ.
ನೊಡೇಮ್ ಕಾಂಪೋಸ್ಟ್ ತಂತ್ರಜ್ಞಾನದಿಂದಾಗಿ ತಯಾರಿಸಲಾದ ಜೈವಿಕ ಗೊಬ್ಬರಗಳ ಮುಖಾಂತರ ಇಲ್ಲಿನ ರೈತರ ಆದಾಯ ಕೂಡ ಹೆಚ್ಚಿದೆ. ಅಂತೆಯೇ ಮೋಹದ್ ಗ್ರಾಮಪಂಚಾಯಿತಿಯ ಹಿಂದಿನ ಪ್ರಮುಖರಾದ (civil engineering ನಲ್ಲಿ ಸ್ವರ್ಣಪದಕ ಸಂಪಾದಿಸಿದ್ದ) RSS ನ ಜವಾಹರಸಿಂಹರು ಹೇಳುವಂತೆ, ಇಲ್ಲಿನ 850 ಪರಿವಾರಗಳಲ್ಲಿ ಸ್ವಉದ್ಯೋಗದ ವ್ಯವಸ್ಥೆ ಮಾಡಲಾಗಿದ್ದು, 90 ಶೇಕಡಾ ಜನ ವಿದ್ಯಾವಂತರಾಗಿದ್ದಾರೆ. 17 ಕಿಲೋಮೀಟರುಗಳಷ್ಟು ಉತ್ತಮ ರಸ್ತೆ ನಿರ್ಮಾಣ ಮಾಡಲಾಗಿದೆ. ಜೊತೆಯಲ್ಲಿ ಇಲ್ಲಿ ಜಾತಿ ಭೇದಭಾವ ಮತ್ತು ಮೇಲುಕೀಳೆಂಬುದು ಇಲ್ಲವೆಂದು ಹೇಳುವಾಗ ಜವಾಹರರ ಮುಖ ಹೆಮ್ಮೆಯಿಂದ ಅರಳುತ್ತದೆ. ಅಂತೆಯೇ ಪ್ರತಿವರ್ಷ ನಡೆಯುವ "ಆದರ್ಶ ಹಿಂದೂ ಮನೆ" ಎಂಬ ಸ್ಪರ್ಧೆಯಲ್ಲೂ ಕೂಡ ತಥಾಕಥಿತ ದಲಿತ ಪರಿವಾರದವರೇ ಸತತವಾಗಿ ಪ್ರಶಸ್ತಿಯನ್ನು ಗೆದ್ದುಕೊಂಡು ಬರುತ್ತಿದ್ದಾರೆ.
ಸಂಪರ್ಕ : ಶಾಮ್ ಬನವಾಲೆ.
9406539449
नियमित अपडेट के लिए सब्सक्राईब करें।