सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಸುವರ್ಣ ಭವಿಷ್ಯದ ಹೊಸ ರೂಪ-ನಿರ್ಮಲಾ ಸಗದೇವ್ ವಿದ್ಯಾರ್ಥಿನಿಲಯ, ಭೋಪಾಲ್

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

ಬಾಲಕ ಕೃಷ್ಣನಿಗೆ ಓದುವುದು ಸ್ವಲ್ಪವೂ ರುಚಿಸುತ್ತಿರಲಿಲ್ಲ. ಇಂಗ್ಲೀಷ್ ಹಾಗೂ ಗಣಿತ ಬಿಟ್ಟು ಬೇರೆ ವಿಷಯಗಳಂತೂ ಅರ್ಥವೇ ಆಗುತ್ತಿರಲಿಲ್ಲ. ಒಮ್ಮೊಮ್ಮೆ ಎರಡು ವರ್ಷ ಒಂದೇ ತರಗತಿಯಲ್ಲಿ ಉಳಿದುಬಿಡುತ್ತಿದ್ದ. ಅದೇ ಕೃಷ್ಣಕುಮಾರ್ ಬಮನ್ಕೆ ಇಂದು ಮಧ್ಯಪ್ರದೇಶದ ಬಾಲಾಘಾಟ್ ನಗರದ ಎಂ.ಪಿ.ಇ.ಬಿ. ಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾನೆ. ಬನ್ನಿ, ಈಗ ಭೋಪಾಲ್ ಜಿಲ್ಲಾ ರೆಜಿಸ್ಟಾರ್ ಗೋವರ್ಧನ್ ಪ್ರಸಾದ್ ಬಗ್ಗೆ ತಿಳಿಯೋಣ. ಜಾರ್ಖಂಡಿನ ಹಿಂದುಳಿದ ಹಳ್ಳಿ ಬಿಶುನ್ ಪುರದ ಬಡ ಕುಟುಂಬದ ಐವರು ಒಡಹುಟ್ಟಿದವರ ಪೈಕಿ ಗೋವರ್ಧನ್ ಕಿರಿಯರು.


ಇವರಿಬ್ಬರ ಕಥೆಯ ಸುವರ್ಣ ಅಧ್ಯಾಯವು ಭೋಪಾಲದ ಶ್ರೀಮತಿ ನಿರ್ಮಲಾ ಸಗದೇವ್ ವನವಾಸಿ ವಿದ್ಯಾರ್ಥಿನಿಲಯದಲ್ಲಿ ಆರಂಭವಾಯಿತು. ಸಂಘದ ಪ್ರಚಾರಕರು ಹಾಗೂ ಸೇವಾಭಾರತಿಯ ಸಂಸ್ಥಾಪಕರೂ ಆದ ದಿವಂಗತ ವಿಷ್ಣುಕುಮಾರರ ಪ್ರೇರಣೆಯಿಂದ 1996ರಲ್ಲಿ ಪ್ರಾರಂಭವಾದ ಈ ವಿದ್ಯಾರ್ಥಿನಿಲಯವು, ಅಳಿವಿನಂಚಿನಲ್ಲಿರುವ ಕೊರ್ಕೂ, ಭೀಲ್, ಗೋಂಡ್ ಮುಂತಾದ ಬುಡಕಟ್ಟು ಕುಟುಂಬಗಳ ನೂರಾರು ಬಡಮಕ್ಕಳಿಗೆ ಸಫಲ ಹಾಗೂ ಸ್ವಾವಲಂಬೀ ಜೀವನ ನೀಡಿದೆ. ಇಲ್ಲಿಂದ ಹೊರಹೊಮ್ಮಿದ ವಿದ್ಯಾರ್ಥಿಗಳಲ್ಲಿ 5 ಶಿಕ್ಷಕರು, ಓರ್ವ ವೈದ್ಯರು 19 ಎಂಜಿನಿಯರುಗಳೂ ಸೇರಿದಂತೆ ಹಲವರು ಯಶಸ್ಸಿನ ಹಾದಿ ಹಿಡಿದಿದ್ದಾರೆ.


ಕೃಷ್ಣಕುಮಾರ್ ಇಲ್ಲಿಗೆ ಬಂದಾಗ 8ನೇ ತರಗತಿ ಹಾಗೂ ಗೋವರ್ಧನ್ 7ನೇ ತರಗತಿಯಲ್ಲಿದ್ದರು. ಇಲ್ಲಿನ ಆತ್ಮೀಯ ವಾತಾವರಣ, ಶಿಸ್ತಿನ ದಿನಚರಿ ಹಾಗೂ ನಿಯಮಿತ ಅಧ್ಯಯನದ ಪರಿಣಾಮವಾಗಿ ಇಬ್ಬರೂ ಪದವಿಪೂರ್ವ ಶಿಕ್ಷಣದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು. ಇಲ್ಲಿ ನಸುಕಿನಲ್ಲೆದ್ದು ಪ್ರಾತಃಸ್ಮರಣೆಯೋಗ, ನಿಗದಿತ ಸಮಯಕ್ಕೆ ಭೋಜನ, ತರಬೇತಿ ಹಾಗೂ ಆಟೋಟದ ಜೊತೆಗೆ ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಅಲ್ಲದೇ, ತಿಂಗಳಿಗೆರಡು ಸಲ ಮೊಹಲ್ಲಾದ ಸ್ವಚ್ಛತಾ ಅಭಿಯಾನದಲ್ಲೂ ಕೈ ಜೋಡಿಸುತ್ತಾರೆ. ಜನ್ಮಾಷ್ಟಮಿ, ದೀಪಾವಳಿ, ಗುರುಪೂರ್ಣಿಮಾ ಮುಂತಾದ ಹಬ್ಬಗಳನ್ನು ಸೇವಾಭಾರತಿ ಪರಿವಾರದೊಂದಿಗೆ ಇವರೆಲ್ಲ ಆಚರಿಸುತ್ತಾರೆ. ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವದ ದಿನದಂದು ಈ ಮಕ್ಕಳ ಪ್ರತಿಭೆ ಭೋಪಾಲದ ಎಲ್ಲರ ಮನಸೂರೆಗೊಳ್ಳುತ್ತದೆ.

ಕೆಲವೊಮ್ಮೆ ಹಿರಿಯಣ್ಣನ ಹಾಗೆ, ಒಮ್ಮೊಮ್ಮೆ ಶಿಸ್ತಿನ ಆಡಳಿತಾಧಿಕಾರಿಯಾಗಿ 52 ಮಕ್ಕಳ ಜವಾಬ್ದಾರಿ ಹೊತ್ತು, ಕಳೆದ 10 ವರ್ಷಗಳಿಂದ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅನುಜಕಾಂತ್ ಉದೈನಿಯಾ ಹೇಳುವಂತೆ ಹಲವು ಮಹಿಳೆಯರನ್ನೊಳಗೊಂಡ ಸೇವಾಭಾರತಿಯ ಸಮಿತಿಯು ವಿದ್ಯಾರ್ಥಿನಿಲಯದ ಆಗುಹೋಗುಗಳನ್ನು ಆಯೋಜಿಸುತ್ತದೆ. ಸೇವಾಭಾರತಿಯ ಪ್ರಮುಖರಾದ ವರ್ಷಾ, ಅನಿತಾ, ಪ್ರತಿಭಾ, ಆಶಾ ಇವರೆಲ್ಲರೂ ವಿದ್ಯಾರ್ಥಿಗಳನ್ನು ತಮ್ಮದೇ ಮಕ್ಕಳೆಂಬಂತೆ ತಿಳಿದು ಅವರ ಅಗತ್ಯಗಳನ್ನು ಪೂರೈಸುತ್ತಾರೆ. ಪ್ರಸ್ತುತ ವಿದ್ಯಾರ್ಥಿನಿಲಯದ ಅಧ್ಯಕ್ಷರಾದ ಶ್ರೀ ಬಿ. ಎಸ್. ಖಂಡೇಲವಾಲ್ ಹಾಗೂ ಶ್ರೀ ವಿವೇಕ್ ಮೂಂಜೇಯವರ ಮಾರ್ಗದರ್ಶನವೂ ಈ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಕಳೆದ 8 ವರ್ಷಗಳಿಂದ ಇಲ್ಲಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಅರುಣ್ ಹಾಗೂ ಸ್ವಪ್ನಾ ಶೆಟ್ಟಿ ದಂಪತಿಗಳಂತೆಯೇ ಪೂರ್ಣಾವಧಿ ಸೇವೆ ಸಲ್ಲಿಸುತ್ತಿರುವ ಇನ್ನಷ್ಟು ಮಂದಿ ಇಲ್ಲಿದ್ದಾರೆ. ವಿದ್ಯಾರ್ಥಿನಿಲಯದ ಸ್ವಚ್ಛತೆ, ಆಹಾರದ ಗುಣಮಟ್ಟ ಹೆಚ್ಚಳ ಹಾಗೂ ಕಂಪ್ಯೂಟರ್ ಶಿಕ್ಷಣದಿಂದ ಹಿಡಿದು ಮಕ್ಕಳ ಕಲಿಕೆಗೆ ಬೇಕಾದ ಎಲ್ಲಾ ಸೌಲಭ್ಯಗಳ ಕುರಿತೂ ಸಮಿತಿ ಯೋಜನೆ ರೂಪಿಸುತ್ತದೆ.


ಸೆಕ್ರೆಟರಿಯೇಟಿನಲ್ಲಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಜೆ. ಜಿ. ಸಗದೇವರು ಸೇವಾಭಾರತಿಯ ಕಾರ್ಯಗಳಿಂದ ಪ್ರಭಾವಿತರಾಗಿ, ತಮ್ಮ ಪತ್ನಿ ನಿರ್ಮಲಾ ಸಗದೇವರ ನೆನಪಿನಲ್ಲಿ ತಮ್ಮ ಎರಡು ಅಂತಸ್ತಿನ ಮನೆಯನ್ನೇ ವಿದ್ಯಾರ್ಥಿನಿಲಯಕ್ಕಾಗಿ ದಾನ ಮಾಡಿದ್ದರು.

ಅಭಿವೃದ್ಧಿಯ ಬೆಳಕನ್ನೇ ಕಾಣದೆ ಕಡು ಬಡತನ, ಅನಕ್ಷರತೆ ಹಾಗೂ ಮಾದಕ ವ್ಯಸನಗಳಿಂದಾಗಿ ದಿನದಿನಕ್ಕೆ ಕುಸಿಯುತ್ತಲಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಕ್ಕಳು ಇಂದು ತಂತಮ್ಮ ಗ್ರಾಮಗಳಲ್ಲಿ ಬದಲಾವಣೆಯ ಹರಿಕಾರರಾಗಿದ್ದಾರೆ. ಇಲ್ಲಿ ಕಲಿತ ಮಕ್ಕಳು ತಮ್ಮ ಪರಿವಾರದೊಂದಿಗೆ ಇಡೀ ಹಳ್ಳಿಯನ್ನು ವ್ಯಸನಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದು ಪ್ರಾಂತೀಯ ಸಮಿತಿಯಲ್ಲಿ 15 ವರ್ಷ ಕಾರ್ಯದರ್ಶಿಯಾಗಿದ್ದ, ಪ್ರಸ್ತುತ RSS ನ ಪ್ರಾಂತ ವ್ಯವಸ್ಥಾ ಪ್ರಮುಖರಾಗಿರುವ ಸೋಮಕಾಂತ್ ಉಮಾಲಕರ್ ಹೇಳುತ್ತಾರೆ.



ಸಂಪರ್ಕ:-

ಅನುಜಕಾಂತ್ ಉದೈನಿಯಾ

ದೂರವಾಣಿ:- 9713085865

579 Views
अगली कहानी