नियमित अपडेट के लिए सब्सक्राईब करें।
5 mins read
ಶ್ರೀಮತಿ ಮೇಘ ಪ್ರಮೋದ್ | ದಕ್ಷಿಣ
ತ್ರಿಪುರಾದ ಮುಕ್ತಿ ಎಂಬ ಬಾಲಕನ ಕೊಳಲಿನ ನಿನಾದ ಅಥವ ನೇಪಾಳದ ಆಶಾಳ ಡೋಲಿನ ತಾಳಕ್ಕೆ ಕೃಷ್ಣನ ಭಜನೆ ಕೇಳಿ ಮನಸ್ಸು ಭಾವುಕವಾಯಿತು. ಈಶಾನ್ಯ ರಾಜ್ಯಗಳ ಈ ಮಕ್ಕಳು ಹಿಂದಿ ಭಾಷೆಯಲ್ಲಿ ಗೀತೆಗಳನ್ನು ಹಾಡುತ್ತ ಭಜನೆ ಮಾಡುವುದನ್ನು ನೋಡಿ ನಾವು ಮಾತ್ರವಲ್ಲ ನಮ್ಮ ಜೊತೆ ಗೋಶಾಲೆಯ ಹಸುಗಳು ಕೂಡ ಸಂತೋಷದಿಂದ ಸಂಭ್ರಮಿಸುತ್ತಿರುವಂತಿತ್ತು. ಲೌಕಿಕತೆಯ ಧಾವಂತದ ಇಂದಿನ ಈ ಆಧುನಿಕ ಸಮಾಜದಲ್ಲಿ ಕಣ್ಮರೆಯಾಗುತ್ತಿರುವ ನಮ್ಮ ಶಿಕ್ಷಣ ಪದ್ಧತಿ, ಕೃಷಿ ಪದ್ಧತಿಗಳು ಹಾಗು ವೈದಿಕ ಪರಂಪರೆಗಳನ್ನು ವಾರಾಣಸಿಯ “ಸುರಭಿ ಶೋಧ ಸಂಸ್ಥಾನ” ಪುನರ್ ಜಾಗೃತಿಗೊಳಿಸುತ್ತಿದೆ
ಸರಳ ಜೀವನ ಉನ್ನತ ವಿಚಾರಗಳಿಂದ ಕೂಡಿದ ಸಂಘದ ಸ್ವಯಂಸೇವಕರಾದ ಶ್ರೀ ಸೂರ್ಯಕಾಂತ್ ಜಾಲಾನ್ ಜೀಯವರ ಪ್ರೇರಣೆಯಿಂದ ಶಿಥಿಲಾವಸ್ಥೆಯಲ್ಲಿದ್ದ ಗೋಶಾಲೆಯಲ್ಲಿ ಕೆಲವು ಹಸುಗಳನ್ನು ಹಾಗು ಕಸಾಯಿ ಖಾನೆಗಳಿಂದ ಬಿಡಿಸಿ ತಂದ ನಿರುಪಯೋಗಿ ಹಸುಗಳಿಗೆ ಆಶ್ರಯ ನೀಡಿ ಸೇವೆಮಾಡುವ ಮೂಲಕ ಈ ಪ್ರಕಲ್ಪವು 1992ರಲ್ಲಿ ಪ್ರಾರಂಭವಾಯಿತು. ಕಾಲ ಕ್ರಮೇಣ ಈ ಪ್ರಕಲ್ಪವು ಶಿಕ್ಷಣ ನೀಡುವುದನ್ನೂ ಪ್ರಾರಂಭಿಸಿತು.
2000ದ ಇಸವಿಯಲ್ಲಿ ಸ್ವಾವಲಂಬಿ ಗೋಶಾಲೆಯಲ್ಲಿ ವಿದ್ಯಾರ್ಥಿ ನಿಲಯವನ್ನು ಈಶಾನ್ಯ ರಾಜ್ಯದ ನಕ್ಸಲ್ ಪೀಡಿತ ಕ್ಷೇತ್ರದ ವನವಾಸಿಯ ಬುಡಕಟ್ಟು ಜನಾಂಗದ 22 ಬಾಲಕರಿಂದ ಪ್ರಾರಂಭಿಸಲಾಯಿತು. ಇಂದು ಈ ವಿದ್ಯಾರ್ಥಿ ನಿಲಯದಲ್ಲಿ 600 ವಿದ್ಯಾರ್ಥಿಗಳು ಉಚಿತವಾಗಿ ಆಧುನಿಕ ಶಿಕ್ಷಣ ಪಡೆಯುವುದರೊಂದಿಗೆ ಸಂಗೀತ, ಪಾಕಶಾಸ್ತ್ರ, ಜೈವಿಕ ಕೃಷಿ, ಪಶುಪಾಲನೆ, ಕೃಷಿ ವಿಜ್ಞಾನ, ಪರಿಸರ ಸಂರಕ್ಷಣೆಯಂತಹ ಮೂಲಭೂತ ವಿಷಯಗಳ ಬಗ್ಗೆ ಉಪಯುಕ್ತ ಶಿಕ್ಷಣವನ್ನು ಪಡೆದು, ಭಯೋತ್ಪಾದನೆ, ಹಾಗೂ ನಕ್ಸಲ್ ವಾದಗಳಿಂದ ತುಂಬ ದೂರ ಸರಿದು ವಿಭಿನ್ನ ಸಂಸ್ಕೃತಿ ಸಂಸ್ಕಾರಗಳ ನಡುವೆ ಸಾಮರಸ್ಯವನ್ನು ಸ್ಥಾಪಿಸಿಕೊಂಡಿದ್ದಾರೆ
ಇಲ್ಲಿ ಅಧ್ಯಯನ ಮಾಡಿದ ಸೋನಮ್ ಭೂಟಿಯಾ ಸಿಕ್ಕಿಂ ಯೂನಿವರ್ಸಿಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಹಾಗು ಪ್ರಸ್ತುತ ಎಂ ಫಿಲ್ ಮಾಡುತ್ತಿದ್ದಾರೆ. ಹಾಗೆಯೇ ಇಲ್ಲಿಯ ಕೆಲವು ಮಕ್ಕಳು ಸಿಕ್ಕಿಂ ಹಾಗು ನಾಗಾಲ್ಯಾಂಡ್ ನಲ್ಲಿ ಹಿಂದಿ ಭಾಷೆಯನ್ನು ಕಲಿಸುತ್ತಿದ್ದಾರೆ. ಇಲ್ಲಿ ಕಲಿತ ನಾರಬು ಲೆಪ್ಚಾ ಸಿಕ್ಕಿಂನ ಅರಣ್ಯ ಸಚಿವರ ಕಾರ್ಯದರ್ಶಿಯಾಗಿದ್ದಾರೆ ಎಂದು ಈ ಎಲ್ಲರ ಬಗ್ಗೆ ಜಾಲಾನ್ ಜೀ ಹೆಮ್ಮೆಯಿಂದ ಹೇಳುತ್ತಾರೆ. ನಿಯಮಿತವಾಗಿ ನಡೆಯುವ ಸಂಗೀತ ತರಗತಿಗಳಲ್ಲಿ ಕಲಿತು ಸಿಕ್ಕಿಂನ ಸಚ್ಕುಮ್ ಅಲ್ ಲೆಪ್ಚಾ ತಮ್ಮ ಯುಟ್ಯೂಬ್ ಚಾನಲ್ ನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಈಶಾನ್ಯ ರಾಜ್ಯಗಳ ಸಾಮಾಜಿಕ ಪರಿಸ್ಥಿತಿಗಳ ಕಾರಣದಿಂದ ಅನೇಕ ಮಕ್ಕಳು ಬಡ ಕೃಷಿಕ ಪರಿವಾರದಿಂದ, ಕೆಲವರು ಅನಾಥರಾಗಿ, ಇನ್ನು ಕೆಲವರು ತಂದೆಯನ್ನೋ ತಾಯಿಯನ್ನೋ ಕಳೆದುಕೊಂಡು ನೋವನ್ನು ಅನುಭವಿಸಿ 3-4ನೇ ತರಗತಿಗೆ ಇಲ್ಲಿಗೆ ಬಂದಿದ್ದ ಈ ಮಕ್ಕಳಿಗೆ ಸಂಸ್ಥೆಯೇ ಅವರ ಪರಿವಾರವಾಗಿತ್ತು ಹಾಗು ಉನ್ನತ ಶಿಕ್ಷಣದ ತನಕ ಅವರಿಗೆ ಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ವಿದ್ಯಾರ್ಥಿನಿಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಂಘದ ಪೂರ್ವ ಪ್ರಚಾರಕರಾಗಿದ್ದ ಶ್ರೀ ಹರೀಶ್ ಬಾಯಿಯವರು ತಿಳಿಸುತ್ತಾರೆ.
ಸಂಸ್ಥಾನದ ಪರಿಸರದಲ್ಲಿ ಇರುವ ನಾಲ್ಕು ವಿದ್ಯಾರ್ಥಿ ನಿಲಯದಲ್ಲಿ ಸುಮಾರು 424 ಬಾಲಕರು ಹಾಗು ಇನ್ನೊಂದರಲ್ಲಿ 178 ಬಾಲಕಿಯರು ವಾಸಿಸುತ್ತಿದ್ದಾರೆ. ಆತ್ಮನಿರ್ಭರತೆಯ ಬೀಜವನ್ನು ಬಿತ್ತಿ ಮಕ್ಕಳಲ್ಲಿ ಹಿಂದಿ ಭಾಷಿಗರೆನ್ನುವ ಹೆಮ್ಮೆಯನ್ನು ಹಾಗು ಉಜ್ವಲ ಭವಿಷ್ಯದ ಕನಸನ್ನು ಈ ಕೇಂದ್ರವು ಮೂಡಿಸುತ್ತಿದೆ.
ಪ್ರತೀ ಮನೆಯೂ ಆತ್ಮನಿರ್ಭರವಾಗಬೇಕು ಹಾಗು ಪ್ರತಿಯೊಬ್ಬ ವ್ಯಕ್ತಿಯು ಪರಿಶ್ರಮ ಮತ್ತು ಪ್ರಯತ್ನದಿಂದ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಶೋಧಸಂಸ್ಥಾನದ ವತಿಯಿಂದ ವಿಭಿನ್ನ ಯೋಜನೆಗಳನ್ನು ನಡೆಸಲಾಗುತ್ತಿದೆ. ಹಳ್ಳಿಯವರನ್ನು ಕಾಡುತ್ತಿದ್ದ ನೀರಿನ ಅಭಾವ, ಬಂಜರು ಭೂಮಿ, ಕೃಷಿಸಮಸ್ಯೆ, ಉದ್ಯೋಗ, ಶಿಕ್ಷಣ, ಆರೋಗ್ಯ ಇತ್ಯಾದಿ ಸಮಸ್ಯೆಗಳು ಗೋಶಾಲೆಯ ಸಂಪರ್ಕದಿಂದಾಗಿ ಬೆಳಕಿಗೆ ಬಂದವು. ಹಲವು ತಿಂಗಳುಗಳ ಕಾಲ ಪುರಾತನ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಬರಡು ಭೂಮಿಯನ್ನು ಗೋಮೂತ್ರ ಹಾಗು ಗೊಬ್ಬರದ ಬಳಕೆಯಿಂದ ಪೋಷಿಸಲಾಯಿತು, ಬೆಟ್ಟಗಳಿಂದ ಬರುವ ಮಳೆಯ ನೀರನ್ನು ಸಂರಕ್ಷಿಸಲು ಅಲ್ಲಲ್ಲಿ ಸಣ್ಣ ಸಣ್ಣ ಕೊಳಗಳನ್ನು, ಅಣೆಕಟ್ಟುಗಳನ್ನು, ನಾಲೆಗಳನ್ನು ನಿರ್ಮಿಸಿ ಜಲಸಂರಕ್ಷಣೆಗೆ ಉತ್ತೇಜನ ನೀಡಲಾಯಿತು. ಇದರ ಪರಿಣಾಮ ಬರಡು ಭೂಮಿ ಹಸಿರಿನಿಂದ ಕಂಗೊಳಿಸಿತು ಹಾಗು ಹಳ್ಳಿಗಳಲ್ಲಿ ಸಾವಯವ ಕೃಷಿ, ನರ್ಸರಿ, ಮರಗಳನ್ನು ಬೆಳೆಸಲು ಪ್ರೋತ್ಸಾಹಿಸಲಾಯಿತು. ಪಶುಪಾಲನೆಯಿಂದ ಹಿಡಿದು ಕೃಷಿಯ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿತು, ಶಿಕ್ಷಣಕ್ಕಾಗಿ ವಿವಿಧ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲೆಗಳನ್ನು ತೆರೆಯಲಾಯಿತು.
ಕಡಿಮೆ ಇಳುವರಿಯಿಂದಾಗಿ ಬೇಸತ್ತ ರೈತರಿಗೆ ಉತ್ತಮ ಬೆಳೆ ಬೆಳೆಯಲು ಶಿಕ್ಷಣ ನೀಡಿ ಇಳಿಮುಖಗೊಂಡಿದ್ದ ತರಕಾರಿ, ಹಣ್ಣುಗಳು ಹಾಗು ವನಸ್ಪತಿ ಬೆಳೆಗಳನ್ನು ಸಂರಕ್ಷಿಸಲಾಯಿತು. ಇಂದು ಕೇವಲ ತಪೋವನ ಶಾಖೆಯೊಂದರಲ್ಲೇ ಸುಮಾರು 60000 ಮರ ಗಿಡಗಳು ಇವೆ, ಇಲ್ಲಿ 25 ಪ್ರಕಾರದ ಹಣ್ಣು ಮತ್ತು ತರಕಾರಿಗಳು ಹಾಗೆಯೇ 20ಪ್ರಕಾರದ ಗಿಡಮೂಲಿಕೆಗಳು, ಹಸುಗಳ ಮೇವು, ಮಸಾಲಾ ಪದಾರ್ಥಗಳು ಇತ್ಯಾದಿಗಳನ್ನು ಬೆಳೆಯಲಾಗುತ್ತಿದೆ. ಸ್ವತಃ ತಾವೆ ಕೆಲಸ ಮಾಡುವುದರಿಂದ, ಮರ ಗಿಡಗಳನ್ನು ಬೆಳೆಸುವುದರಿಂದ, ಗೋಸೇವೆ ಮಾಡುವುದರಿಂದ ವಿದ್ಯಾರ್ಥಿ ನಿಲಯದ ಮಕ್ಕಳು ಸ್ವಾಭಾವಿಕವಾಗಿ ಪ್ರಕೃತಿ ಪ್ರೇಮಿಗಳಾಗುತ್ತಿದ್ದಾರೆ ಎಂದು ಸಂಸ್ಥಾನದ ಪ್ರಧಾನ ಕಾರ್ಯಕರ್ತರಾದ ಶ್ರೀ ಜಟಾಶಂಕರ್ ಜೀ ತಿಳಿಸುತ್ತಾರೆ.
ನಗರ ಪ್ರದೇಶವಾಗಲಿ ಅಥವ ಗ್ರಾಮೀಣ ಪ್ರದೇಶವಾಗಲಿ ಪ್ರಸ್ತುತ ಆಹಾರದ ಕೊರತೆ ಇಲ್ಲವಾಗಿದೆ. ಆದರೆ ಸ್ತ್ರೀಯರ ಗೌರವ ಹಾಗು ಮುಗ್ಧ ಮಕ್ಕಳ ಸಣ್ಣ ಸಣ್ಣ ಆಸೆಗಳನ್ನು ಪೂರೈಸಲಾಗದ ಪರಿಸ್ಥಿತಿ ಗೃಹಿಣಿಯರನ್ನು ಕಾಡುತ್ತಿತ್ತು. ಹಾಗೆಯೇ ಕೌಟುಂಬಿಕ ದೌರ್ಜನ್ಯ, ಪತಿಯ ದುರ್ವ್ಯಸನಗಳು ಮನೆಯಲ್ಲಿ ವಿವಾದವನ್ನು ಸೃಷ್ಟಿಸುತ್ತಿತ್ತು. 6ವರ್ಷಗಳಿಂದ ಶೋಧ ಸಂಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಸವಿತಾ ಮೌರ್ಯ ಅವರು ಲಾಕ್ ಡೌನ್ ನಲ್ಲಿಯೂ ಹೊಲಿಯುವ ಮೆಶಿನ್ ನಿಂದ ಕೈ ತೆಗೆಯಲಿಲ್ಲ ಹಾಗು ಮನೆಯಲ್ಲಿ ಈಗ ಗೌರವವು ಸಿಗುತ್ತಿದೆ ಮತ್ತು ಮಕ್ಕಳ ಸಂತೋಷ ಕೂಡ ಈಗ ನಮ್ಮ ಕೈಯಲ್ಲೆ ಇದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ. ರಾಜಲಕ್ಷ್ಮಿ, ದುರ್ಗಾ, ಆಶಾರಂತಹ ಸುಮಾರು 500 ಮಹಿಳೆಯರು ಇಂದು ಉಚಿತವಾಗಿ ಹೊಲಿಗೆ ತರಬೇತಿಯನ್ನು ಪಡೆದು ಇಲ್ಲಿಂದಲೇ ಹಣವನ್ನೂ ಸಂಪಾದಿಸುತ್ತಿದ್ದಾರೆ. ಸಂಸ್ಥಾನದಲ್ಲಿ ಹಪ್ಪಳ, ಉಪ್ಪಿನಕಾಯಿ, ಮಸಾಲಪುಡಿಗಳು, ಮುರಬ್ಬ, ಗುಲ್ಕಂದ್ ತಯಾರಿಸುವಂತಹ ಗುಡಿ ಕೈಗಾರಿಕೆಗಳಿಂದ ಆತ್ಮನಿರ್ಭರರಾಗುತ್ತಿರುವ ಗ್ರಾಮೀಣ ಮಹಿಳೆಯರ ಜೀವನ ಮಟ್ಟವೂ ಸುಧಾರಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಪ್ರತೀ 28 ದಿನಗಳಿಗೆ ಒಮ್ಮೆ ಸಂಸ್ಥಾನದ ಮೂಲಕ ಡಗಮ್ ಪುರ್ ಹಾಗು ಮಿರ್ಜಾಪುರದ ಯೋಜನೆಯಲ್ಲಿ ಉಚಿತ ಆರೋಗ್ಯ ಸೇವಾ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅಲ್ಲಿ ಡಾ.ಎಸ್.ಕೆ.ಪೋದ್ದಾರ್ ರಂತಹ ಅನೇಕ ವೈದ್ಯರು ತಮ್ಮ ಸಮಯವನ್ನು ನೀಡುವ ಮೂಲಕ ಆರೋಗ್ಯ ಮತ್ತು ಮೂರ್ಚೆರೋಗದಂತಹ ಕಾಯಿಲೆಗಳ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತಂದಿದ್ದಾರೆ. ಉಚಿತ ಚಿಕಿತ್ಸೆಯಿಂದ ಇಲ್ಲಿಯ ತನಕ ಸುಮಾರು 5000 ಜನರಿಗೆ ಪ್ರಯೋಜನವಾಗಿದೆ ಹಾಗು ಪ್ರತ್ಯೇಕ ಶಿಬಿರದಿಂದ ಸುಮಾರು 1100 ಜನರು ಸೇವೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಭಾರತೀಯ ಸಂಸ್ಕೃತಿಯ ಪ್ರಕಾರ ಗೋವಿನಲ್ಲಿ ಸಮಸ್ತ ದೇವತೆಗಳು ನೆಲೆಸಿರುತ್ತಾರೆ ಎನ್ನುವುದರ ಪ್ರತ್ಯಕ್ಷ ಉದಾಹರಣೆಯೇ ಈ ಗೋಶಾಲೆ. ಈ ಪ್ರಕಲ್ಪವು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ತಂದು ಸಮಾಜದ ಮುಂದೆ ಉತ್ತಮ ಮಾದರಿಯಾಗಿ ನಿಂತಿದೆ.
नियमित अपडेट के लिए सब्सक्राईब करें।