सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಭರವಸೆಗಳ ಸೃಷ್ಟಿ

ದಕ್ಷಿಣ

parivartan-img

 ಭಿಕ್ಷೆ ಬೇಡುವ ಮಹಿಳೆಯರು, ತಮ್ಮ ಕಠಿಣ ಪರಿಶ್ರಮದಿಂದ ಗಣಪತಿಯ ವಿಗ್ರಹಗಳಗೆ ಬಣ್ಣ ತುಂಬುತ್ತಿರುವುದು. ದೆಹಲಿಯ ಸೇವಾಭಾರತಿ ವತಿಯಿಂದ ಯಮುನಾ ಖಾದರ್ ದ್ವೀಪಕ್ಕೆ ದೋಣಿಗಳ ಮೂಲಕ ಆಹಾರ ಸಾಮಗ್ರಿ, ಔಷಧಗಳು ಮತ್ತು ಹೊಲಿಗೆಯಂತ್ರಗಳನ್ನು ತಲುಪಿಸಲಾಯಿತು. ಪಾಕಿಸ್ಥಾನದಿಂದ ನಿರಾಶ್ರಿತರಾಗಿ ಬಂದವರಲ್ಲಿ ಗರ್ಭಿಣಿ ಸ್ತ್ರೀಯರಿಗೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿರುವುದು ಮತ್ತು ಸೇವಾ ಭಾರತಿಯ ವ್ಯಾನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು. ಹಸಿದಿದ್ದ 5 ವರ್ಷದ ರಾಜುವಿಗೆ ಆತನ ತಾಯಿ ಒಂದು ಚಮಚ ಹಿಟ್ಟನ್ನು ನೀರಿನಲ್ಲಿ ಕದಡಿ ಕುಡಿಸಿದಳು. ಅಲ್ಲೇ ಪಕ್ಕದಲ್ಲಿದ್ದ ರಾಮುವಿನ ಪರಿವಾರ ಎರಡು ದಿನದಿಂದ ಒಂದು ರೊಟ್ಟಿಯನ್ನು 5 ಚೂರುಗಳನ್ನಾಗಿಸಿ ಹಂಚಿ ತಿನ್ನುತ್ತಾ ಹೇಗೊ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿತ್ತು. ಆರು ತಿಂಗಳ ಮಗುವಿನ ತಾಯಿ ಕಳೆದ ಎರಡು ದಿನದಿಂದ ಏನನ್ನೂ ತಿಂದಿರಲಿಲ್ಲ, ಈಗಂತೂ ಅವಳು ತನ್ನ ಮಗುವಿಗೆ ಹಾಲುಣಿಸಲೂ ಶಕ್ತಳಾಗಿರಲಿಲ್ಲ. ಇದು ಯಾವುದೋ ಕಾಲ್ಪನಿಕ ಕಥೆಯಲ್ಲ, ರಾಜಧಾನಿ ದೆಹಲಿಯ ಯಮುನಾ ಖಾದರ್'ನ ವಾಸ್ತವತೆ, ಇಂದಿಗೂ ಇಲ್ಲಿಯ ಜನರು ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ನಗರದಿಂದ ದೂರ ಪ್ರತ್ಯೇಕವಾಗಿ ಒಂದು ದ್ವೀಪದಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲಿ ಕುಡಿಯುವ ನೀರನ್ನು 5ಕಿ.ಮೀ. ದೂರದಲ್ಲಿರುವ ಓಖ್ಲಾದಿಂದ ಕಂಟೈನರ್ ಗಳಲ್ಲಿ ತರಲಾಗುತ್ತದೆ, ಮಕ್ಕಳು ಶಾಲೆಗಳಿಗೆ ದೋಣಿಗಳಲ್ಲಿ ಕುಳಿತು ತೆರಳುತ್ತಾರೆ. ಮೀನು ಮತ್ತು ತರಕಾರಿಗಳನ್ನು ಮಾರುವ ಈ ಕಾರ್ಮಿಕರಿಗೆ, ದೆಹಲಿಯ ಪೂರ್ಣ ಲಾಕ್ಡೌನ್ ಹಸಿವನ್ನು ತಂದೊಡ್ಡಿತು.



ಸೇವಾಭಾರತಿಯ ಪ್ರಾಂತ ಸಂಘಟನಾ ಮಂತ್ರಿಯಾದ ಸಹದೇವ್'ಜೀಯವರು, ಸ್ವಯಂಸೇವಕರ ತಂಡ ಮತ್ತು ಹಲವು ಸಹೋದರಿಯರೊಂದಿಗೆ ಆಹಾರ ಪದಾರ್ಥಗಳು, ಬಟ್ಟೆ, ಸ್ಯಾನಿಟರಿ, ನ್ಯಾಪ್ಕಿನ್, ಔಷಧಿ ಹಾಗು ಕುಡಿಯುವ ನೀರಿನೊಂದಿಗೆ ದೋಣಿಯಲ್ಲಿ ಯಮುನಾ ಖಾದರ್ ತಲುಪಿದಾಗ ಅಲ್ಲಿಯ ನೋಟ ಹೀಗಿತ್ತು. ದೋಣಿ ಇನ್ನೂ ದಡವನ್ನು ತಲುಪಿತ್ತಷ್ಟೇ, ಅಲ್ಲಿದ್ದ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಸುಮಾರು 60-65 ಜನರು ತಮಗಾಗಿ ಏನನ್ನಾದರು ಪಡೆಯುವ ಭರವಸೆಯ ಕಂಗಳಿಂದ ನೋಡುತ್ತಾ ನಿಂತಿದ್ದರು. ಸೇವಾಬಸ್ತಿಯ ಗುಡಿಸಲುಗಳಲ್ಲಿ ದೈನಂದಿನ ಗಳಿಕೆಯಿಂದ ಉರಿಯುತ್ತಿದ್ದ ಒಲೆಗಳು ಆರಿದ್ದವು, ಕಾಲಿ ಪಾತ್ರೆಗಳು ಹಸಿವಿನ ಕಥೆಯನ್ನು ಸಾರುತ್ತಿದ್ದವು. ಅಲ್ಲಿದ್ದ ಒಂದು ಪುಟ್ಟ ಮಗುವು ಒಂದು ತುತ್ತನ್ನಾದರೂ ನೀಡಿ, ತಾಳ್ಮೆಯಿಂದ ಕಾದು ಕಣ್ಣೀರು ಬತ್ತಿಹೋಗಿವೆ, ಇಂದು ಯಾರಾದರೂ ಊಟವನ್ನು ನೀಡಿ ಎಂದು ಬೇಡಿಕೊಳ್ಳುತ್ತಿತ್ತು. ಪ್ರತಿಯೊಬ್ಬರ ಕಣ್ಣುಗಳು ತೇವವಾಗಿದ್ದವು, ಅಲ್ಲಿ ಬಂದಿದ್ದ ಸ್ವಯಂಸೇವಕ ಸಹೋದರ ಸಹೋದರಿಯರಲ್ಲಿ ತಡವಾಗಿ ಬಂದೆವಲ್ಲ ಎನ್ನುವ ಪಶ್ಚಾತ್ತಾಪದ ಭಾವನೆಯಿತ್ತು, ಮೂರು ದಿನದಿಂದ ಉಪವಾಸವಿದ್ದ ಸೇವಾಬಸ್ತಿಯ ಜನರಿಗೆ ದೇವರ ಮನೆ ದೂರವಿತ್ತೇ ಹೊರತು ದೇವರ ದೃಷ್ಟಿ ಕುರುಡಾಗಿರಲಿಲ್ಲ.



ಯಾವಾಗ 5-6 ಹೊಲಿಗೆ ಯಂತ್ರಗಳು ದೋಣಿಯನ್ನೇರಿ ಬಂದವೋ ಹಾಗು ದೆಹಲಿ ಸೇವಾಭಾರತಿ ಪ್ರಾಂತ ಕಾರ್ಯಾಲಯದ ಮಂತ್ರಿ ಅಂಜು ದೀದಿ ಹಾಗು ಉಪಾಸನಾ ದೀದಿಯವರು ತಮ್ಮ ಕೈಯ್ಯಾರೆ ಅಲ್ಲಿಯ ಮಹಿಳೆಯರಿಗೆ ಮಾಸ್ಕ್ ಹೊಲಿಯುವುದನ್ನು ಕಲಿಸಿದರೋ ಆಗ ಅಲ್ಲಿ ಅದ್ಭುತವೇ ನಡೆದಿತ್ತು. ನೋಡುತ್ತ ನೋಡುತ್ತ ಆ ಸೇವಾಬಸ್ತಿಗಳ ಅಡುಗೆ ಮನೆಯ ಒಲೆಗಳಲ್ಲಿ ತಯಾರಾದ ಅಡುಗೆಗಳಲ್ಲಿ ಸ್ವಾಭಿಮಾನದ ಸುವಾಸನೆ ಬರತೊಡಗಿತು. ಸಮಸ್ಯೆಗಳು ಇನ್ನೂ ಇದ್ದವು ಆದರೆ ಸೇವೆಯನ್ನೇ ಸೌಭಾಗ್ಯವೆಂದು ನಂಬಿದ್ದ ಈ ಸೇವಾದೂತರ ಸಹಾಯದಿಂದ ಈ ಸೇವಾಬಸ್ತಿಯ ಜನರು ಮಾತ್ರವಲ್ಲದೆ ದೆಹಲಿಯ ಖಂಡೇವಾಲಾ ದೇವಸ್ಥಾನದ ಸುತ್ತಲೂ ಭಿಕ್ಷಾಟನೆ ಮಾಡುತ್ತಿದ್ದ ಜನರೂ ಕೂಡ ತಮ್ಮ ಆತ್ಮನಿರ್ಭರತೆಯ ಕಲೆಯನ್ನು ಮೈಗೂಡಿಸಿಕೊಂಡು ಮಣ್ಣು ಮತ್ತು ಸೆಗಣಿಯಿಂದ ಮಾಡಲ್ಪಟ್ಟ ಪರಿಸರಸ್ನೇಹಿ ಗಣಪತಿಯ ಮೂರ್ತಿಗಳಿಗೆ ಬಣ್ಣಗಳಿಂದ ಸಿಂಗರಿಸಿದರು. ಭಿಕ್ಷೆ ಬೇಡುತ್ತಿದ್ದ ಕೈಗಳು ಈಗ ಪ್ರತೀದಿನ ತಾವು ಕಷ್ಟಪಟ್ಟು ಸಂಪಾದಿಸಿದ 200 ರಿಂದ 300 ರೂಪಾಯಿ ಹಣವನ್ನು ತೆಗೆದುಕೊಳ್ಳಲು ಚಾಚುತ್ತಿವೆ. ಅಂದು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ 57 ಮಹಿಳೆಯರು ಈಗ ವೋಕಲ್'ಟು ಲೋಕಲ್ ಕ್ಯಾಂಪ್ ನಲ್ಲಿ ಕರ್ವಾಚೌತ್ ನ ತಟ್ಟೆಗಳನ್ನು ಅಲಂಕರಿಸುವುದರಲ್ಲಿ ಕಂಡುಬರುತ್ತಿದ್ದಾರೆ.



ಕೇವಲ ದೆಹಲಿಯೊಂದರಲ್ಲೆ 12500ಕ್ಕಿಂತಲೂ ಹೆಚ್ಚು ಸ್ವಯಂಸೇವಕರು ಮತ್ತು ಸೇವಾಭಾರತಿಯ ಕಾರ್ಯಕರ್ತರು ಸೇರಿ 1,91000 ದಿನಸಿ ಕಿಟ್ ಗಳನ್ನು ಮತ್ತು 91 ಲಕ್ಷ ಜನರಿಗೆ ಊಟದ ಪೊಟ್ಟಣಗಳನ್ನು ವಿತರಿಸಿದರು ಎಂದು ದೆಹಲಿ ಸೇವಾಭಾರತಿಯ ಪ್ರಾಂತ ಪ್ರಚಾರ ಮಂತ್ರಿಗಳಾದ ಭೂಪೇಂದ್ರಜೀ ಹೇಳುತ್ತಾರೆ.

ಸಭ್ಯ ಸಮಾಜ ಇಂತವರ ನೋವನ್ನು ಅರ್ಥಮಾಡಿಕೊಳ್ಳಲು ಎಂದೂ ಬಯಸುವುದಿಲ್ಲ ಅಂತಹ ವೇಶ್ಯಾವೃತ್ತಿಯ ಜಾಲದಲ್ಲಿ ಸಿಲುಕಿರುವ ದೆಹೆಲಿಯ ಜಿಬಿ ರಸ್ತೆಯ ರೆಡ್ ಲೈಟ್ ಪ್ರದೇಶದ 986 ಮಹಿಳೆಯರು; ಕೊರೋನ ಸಾಂಕ್ರಾಮಿಕ ಕಾಲದಲ್ಲಿ ಆಹಾರಕ್ಕಾಗಿ ಪರಿತಪಿಸುತ್ತಿದ್ದ ಮಹಿಳೆಯರನ್ನು ಸ್ವಯಂಸೇವಕರು ಮಾತಾಜಿ’, ಬೆಹೆನ್'ಜೀ ಎಂದು ಸಂಬೋಧಿಸುತ್ತಿದ್ದುದನ್ನು ಕೇಳಿ ಭಾವುಕರಾಗಿ ಅತ್ತಿದ್ದರು ಹಾಗು ದಿನಸಿ ಕಿಟ್'ಗಳನ್ನು ಸ್ವೀಕರಿಸಿ ನಮ್ಮನ್ನು ಇಷ್ಟು ಸನ್ಮಾನಿಸಬೇಡಿ ಎಂದು ಕೇಳಿಕೊಂಡರು. ಹಾಗೆಯೇ ಮಯೂರ್ ವಿಹಾರ್ ಕಾಲೋನಿಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಮಂಗಳಮುಖಿ ಸಮಾಜವು ಸ್ವಯಂಸೇವಕ ಕಾರ್ಯಕರ್ತರೊಂದಿಗೆ ಗೌರವಯುತವಾಗಿ ನಡೆದುಕೊಂಡಿದ್ದಲ್ಲದೇ ಅವರನ್ನು ಹರಸಿ ಹಾರೈಸಿ ದಿನಸಿ ಕಿಟ್'ಗಳ ವಿತರಣೆ ಮಾಡಿದ್ದಕ್ಕಾಗಿ ಧನ್ಯವಾದಗಳನ್ನೂ ವ್ಯಕ್ತಪಡಿಸಿತು.



ಇವರು ಹಿಂದೂಗಳು ಆದರೆ ಭಾರತೀಯರೆಂದು ಗುರುತಿಸಿ ಕೊಳ್ಳಲಾಗುತ್ತಿರಲಿಲ್ಲ. ಯಮುನಾ ನದಿಯ ತೀರದ ಕಾಡುಗಳಲ್ಲಿ ಪಾಕಿಸ್ತಾನದಿಂದ ಬಂದಿದ್ದ ನಿರಾಶ್ರಿತರ  ಶಿಬಿರಗಳಿಗೆ ಹೋಗಿ ನೋಡಿದರೆ ಸಾಕು ಅವರ ಕಷ್ಟಗಳನ್ನು ಗುರುತಿಸಬಹುದಾಗಿತ್ತು. ಸೇವಾ ಭಾರತಿಯ ಮಾತೃ ಮಂಡಳಿಯ ಗುಂಪು ದಿನಸಿಯ ಕಿಟ್'ಗಳನ್ನು ತೆಗೆದುಕೊಂಡು ಅಲ್ಲಿಗೆ ಹೋದಾಗ ಆ ಶಿಬಿರಗಳಲ್ಲಿ ಸುಮಾರು 20-25 ಜನ ಗರ್ಭಿಣಿ ಸ್ತ್ರೀಯರಿದ್ದದ್ದು ತಿಳಿಯಿತು. ಆಸ್ಪತ್ರೆಯ ಓ.ಪಿ.ಡಿ.ಗಳು ಮುಚ್ಚಿದ್ದವು, ತುರ್ತು ಸೇವೆಗಳು ಅಲ್ಪಸ್ವಲ್ಪ ಕಾರ್ಯ ನಿರ್ವಹಿಸುತ್ತಿದ್ದವು, ಸಾಧಾರಣವಾದ ಊಟಕ್ಕೂ ತೊಂದರೆಯಿತ್ತು, ಇನ್ನು ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಅಹಾರ ದೊರೆಯುವುದಂತೂ ದೂರದ ಮಾತಾಗಿತ್ತು. ಭೂತಕಾಲದಲ್ಲಿ ಆದ ಕಹಿ ಗುರುತುಗಳು ಭವಿಷ್ಯದಲ್ಲೂ ಕಂಡುಬರುತ್ತಿತ್ತು. ಮಾತೃಮಂಡಳಿಯ ಸೋದರಿಯರ ಹೃದಯ ತುಂಬಿಬಂದಿತ್ತು. ಇಂತಹ ಮಹಿಳೆಯರಿಗಾಗಿ ವಿಶೇಷವಾಗಿ ಅಂಟಿನ ಉಂಡೆ, ಡ್ರೈ ಫ಼್ರೂಟ್ಸ್, ಬೇಳೆ ಕಾಳುಗಳು, ದೇಸಿ ತುಪ್ಪ, ಹಾಲಿನ ಪುಡಿ ಹಾಗು ಇನ್ನಿತರ ಅವಶ್ಯ ವಸ್ತುಗಳನ್ನು ಸೇರಿಸಿ ಒಂದು ಪೌಷ್ಟಿಕ ಅಹಾರಗಳ ಕಿಟ್ ಗಳನ್ನು ತಯಾರಿಸಿದರು. ಈಗ ಸೇವಾಭಾರತಿಯ ವ್ಯಾನ್ ಪ್ರತೀ 15 ದಿನಕ್ಕೊಮ್ಮೆ ಡಾಕ್ಟರೊಂದಿಗೆ ಅಲ್ಲಿಗೆ ಹೋಗುತ್ತಿದ್ದು ಅಲ್ಲಿಯ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಉಪಚರಿಸಿ, ಸಮಾಲೋಚನೆ ನಡೆಸಿ, ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತಿದೆ.

ಒಂದು ಬಲವಾದ ಸಂಘಟನೆ ಯಾವುದೆ ಕಠಿಣ ಪರಿಸ್ಥಿತಿಯಲ್ಲೂ ಸೊಲನ್ನೊಪ್ಪುವುದಿಲ್ಲ. ಎಷ್ಟೇ ಸವಾಲುಗಳು ಬಂದರೂ ಅದಕ್ಕೆ ಪರಿಹಾರವು ಇದ್ದೇ ಇರುತ್ತದೆ. ಹೃದಯದಲ್ಲಿ ಸೇವೆ ಎಂಬ ಜ್ಯೋತಿ ಬೆಳಗಿಸುತ್ತಾ ನಿರಂತರವಾಗಿ ಮುಂದಡಿಯಿಡುತ್ತಾ, ಎಲ್ಲಾ ಅಡೆತಡೆಗಳನ್ನು ದಾಟುತ್ತಾ ಸಾಗುತ್ತಿರಬೇಕು. 

ಕಷ್ಟಗಳ ವಿರುದ್ಧ ಹೋರಾಡುವ ಸ್ವಯಂಸೇವಕರ ಕಥೆಗಳು ಮುಂದಿನ ಸಂಚಿಕೆಯಲ್ಲಿ.


572 Views
अगली कहानी