सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಹೊಸ ಚಿಗುರು

ದಕ್ಷಿಣ

parivartan-img

 ಯಾರ ಬೆವರ ಹನಿಗಳಿಂದ ಮಣ್ಣಿನಲ್ಲಿ ಹೊನ್ನಿನ ಬೆಳೆಗಳು ಅರಳುತ್ತಿದ್ದವೋ, ಯಾರು ತಮ್ಮ ಪ್ರೀತಿಧಾರೆಯಿಂದ ವಸುಧೆಯ ಮೈತೊಳೆಯುವರೋ ಅಂಥ ರೈತರ ವ್ಯಥೆಯನ್ನು ಈ ಕೊರೋನಾ ಕಾಲದಲ್ಲಿ ನಾವೆಲ್ಲ ಮರೆತುಬಿಟ್ಟಿದ್ದೇವೆ. ವಿಪರ್ಯಾಸವೆಂದರೆ, ಲೋಕಕ್ಕೆ ಅನ್ನ ನೀಡುವ ಅನ್ನದಾತನ ಜೋಳಿಗೆಯೇ ಬರಿದಾಗಿದೆ. ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಲಿಲ್ಲ.ರಾಂಚಿ ಮತ್ತು ಅದರ ಸುತ್ತಮುತ್ತಲ ಹಳ್ಳಿಗಳಲ್ಲಿ ಸಾವಯವ ಗೊಬ್ಬರದಿಂದ ಭೂಮಿಯನ್ನು ಸುಮಾರು 3 ವರ್ಷಗಳ ಸತತ ಪರಿಶ್ರಮದಿಂದ ಪೋಷಿಸಿ, ಬಹಳ ತಾಳ್ಮೆ ಮತ್ತು ಪ್ರೀತಿಯಿಂದ, ಸಾವಯವ ಧಾನ್ಯ, ಹಣ್ಣು ಮತ್ತು ತರಕಾರಿಗಳನ್ನು ಬೆಳೆದ ರೈತರಿಗೆ ಅವರ ಮೊದಲ ಫಸಲು ದೊರಕಿತ್ತು. ಅನಿರೀಕ್ಷಿತವಾಗಿ ಬಂದೆರಗಿದ ಕೊರೋನಾ ಲಾಕ್-ಡೌನ್ ಎಂಬ ವಿಪತ್ತು ಗ್ರಾಹಕರು ಮತ್ತು ರೈತರ ನಡುವೆ ಅಡ್ಡ ಗೋಡೆಯನ್ನು ಸೃಷ್ಟಿಸಿದಾಗ ಕೃಷಿಕರ ಸಹನೆಯ ಕಟ್ಟೆಯೊಡೆದಿತ್ತು. ಇತ್ತ ಕನಸುಗಳೆಲ್ಲಾ ಚಿಗುರಿನಲ್ಲೇ ಸಾಯುತ್ತಿದ್ದರೆ, ಅತ್ತ ಬೆಳೆದ ತರಕಾರಿಗಳು ಅನಿವಾರ್ಯವಾಗಿ ಜಾನುವಾರುಗಳ ಹೊಟ್ಟೆ ಸೇರುತ್ತಿದ್ದವು.

ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವ ಮತ್ತು ಗ್ರಾಹಕರಿಗೆ ವಿಷಮುಕ್ತ ಆಹಾರದವನ್ನು ನೀಡುವ ಧ್ಯೇಯವನ್ನಿಟ್ಟುಕೊಂಡು ರಾಂಚಿಯಲ್ಲಿ ಸಂಘ ಪ್ರೇರಿತ "ಫ್ಯಾಮಿಲಿ ಫಾರ್ಮರ್ ಪ್ರಾಜೆಕ್ಟ್" ಜನ್ಮತಾಳಿತು.ರಾಷ್ಟ್ರೀಯ ಸೇವಾಭಾರತಿಯ ಟ್ರಸ್ಟಿ ರಮಾ ಪೋಪ್ಲಿ ದೀದೀ ಮತ್ತು ಸ್ವಯಂಸೇವಕ ಸೌರಭ್ ಭೈಯಾ, ಈ ರೈತರ ಸಮಸ್ಯೆಗಳನ್ನು ಆಲಿಸಿದರು. ಅವರು ಸತತ ಮೂರು ತಿಂಗಳ ಕಾಲ ಪ್ರತಿ ಸಂಜೆ 4 ಗಂಟೆಯಿಂದ ಮರುದಿನ ಬೆಳಿಗ್ಗೆ 9 ರವರೆಗೆ ತಮ್ಮ ಕಾರಿನ ಮೂಲಕ, ಈ ಗುಡ್ಡಗಾಡು ಬುಡಕಟ್ಟು ಪ್ರದೇಶಗಳ ರೈತರಿಂದ ಸೂಕ್ತ ಬೆಲೆಗೆ ತಾಜಾ ತರಕಾರಿಗಳನ್ನು ಖರೀದಿಸಿ ಬಡಾವಣೆಗಳ ಮನೆಮನೆಗೆ ತಲುಪಿಸುತ್ತಿದ್ದರು. 12 ಹಳ್ಳಿಗಳ ರೈತರು ಮತ್ತು ನಗರಗಳ 500 ಕುಟುಂಬಗಳು ಈ ಯೋಜನೆಯ ಫಲಾನುಭವಿಗಳು.


ತಮ್ಮ ಆನ್‌ಲೈನ್ ತರಗತಿಗಳನ್ನು ಪೂರೈಸಿದ ತರುವಾಯ ಪ್ರಿನ್ಸಿಪಾಲ್ ರಮಾದೀದೀ ಮತ್ತು ಸಹಾಯಕ ಶಿಕ್ಷಕರ ತಂಡವು ರಾಸಾಯನಿಕ ರಹಿತ ಹಾಗಲಕಾಯಿ ಚಿಪ್ಸ್, ಹಲಸಿನ ಕಾಯಿಯ ಚಿಪ್ಸ್, ಟೊಮೆಟೊ ಪುಡಿ, ಹಾಗಲಕಾಯಿ, Star Fruit, ನಾರುಬೇರಿನ ಚಟ್ನಿಗಳು, ಹಣ್ಣುಗಳ ಜಾಮ್‌ ಮತ್ತು ಜೆಲ್ಲಿಯಂತಹ ಹಲವು ಸಫಲ ಉತ್ಪನ್ನಗಳನ್ನು ತಯಾರಿಸಿ, ಗ್ರಾಹಕರ ಮೆಚ್ಚುಗೆ ಗಳಿಸಿದರು. ಇಂದು ರೈತರ ಉತ್ಪನ್ನಗಳು ಪಕ್ಕಾ ಬ್ರ್ಯಾಂಡ್ ನೊಂದಿಗೆ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧವಾಗಿದ್ದು, ಈ ಕೊರೋನಾ ಸಂಕಷ್ಟದ ಕಾಲದಲ್ಲೂ ಸುವರ್ಣ ಭವಿಷ್ಯದ ಆಶಾಕಿರಣ ಮೂಡಿಸುತ್ತಿದೆ.




ರೈತರ ಬಳಿಕ ಈಗ ನೇಕಾರರತ್ತ ಬರೋಣ. ಕಾಲಚಕ್ರದ ಅಡಿಯಲ್ಲಿ ಮಗ್ಗದ ಸೀರೆಗಳು ನುಗ್ಗಾಗುತ್ತಿದ್ದವು. ಇಂಥ ಸಮಯಯಲ್ಲಿ ಇವರ ಸಹಾಯಕ್ಕೆ ಧಾವಿಸಿದ್ದು ಸೇವಾಭಾರತಿಗೆ ಸಂಬಂಧಿಸಿದ ಜಾಗೃತಿ ಮಹಿಳಾ ಸ್ವಸಹಾಯ ಸಂಘದ ಸಹೋದರಿಯರು. ರಾಷ್ಟ್ರೀಯ ಸೇವಾಭಾರತಿಯ ದಕ್ಷಿಣ ಕ್ಷೇತ್ರದ ಮುಖ್ಯಸ್ಥೆ ಭಾನುಮತಿ ದೀದಿ ಹೇಳುವಂತೆ ಜಾಗೃತಿ ಮಹಿಳಾ ಸ್ವಸಹಾಯ ಸಂಘದ ಕವಿತಾ ಕಲಿಮನೆ, ವಿನೀತಾ ಹಟ್ಟಿಕಾಟಾಗ್, ಪ್ರಶಾಂತ್ ಪೋಟೆ, ರೇಣುಕಾ ಢೇಜ್ ಮತ್ತಿತರರು ಲಾಕ್‌ಡೌನ್‌ನಿಂದ ಸಂತ್ರಸ್ತರಾದ ಸುಮಾರು 1000 ನೇಕಾರ ಕುಟುಂಬಗಳೊಡನೆ ಸಮಾಲೋಚನೆ ನಡೆಸಿ ಸಲಹೆ ನೀಡುವ ಮೂಲಕ ಅವರ ಸ್ಥೈರ್ಯ ಹೆಚ್ಚಿಸಿದ್ದಲ್ಲದೆ, ತಮ್ಮ ಕಾರ್ಯಕುಶಲತೆ ಮತ್ತು ಚಿಂತನೆಗಳಿಂದ ಲಾಕ್ಡೌನ್ ಸಮಯದಲ್ಲಿ ನೇಕಾರರ ಮತ್ತು ಮಾರುಕಟ್ಟೆಯ ನಡುವಿನ ಅಂತರವನ್ನು ಇಲ್ಲವಾಗಿಸಿದರು. ಸೀರೆ ವ್ಯಾಪಾರಕ್ಕಾಗಿ "ಆನ್‌ಲೈನ್ ಸೇವಾಕರ್ತಾ ವೆಬ್‌ಸೈಟ್" ನ್ನು ಪ್ರಾರಂಭಿಸಿ ಮನೆಗೂ ಮಾರುಕಟ್ಟೆಗೂ ಸಂಪರ್ಕ ಕಲ್ಪಿಸಿದರು. ಈ ಉದ್ಯಮದಲ್ಲಿ ಅರ್ಧದಷ್ಟು ಮಹಿಳಾ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಇದೇ ಅವರ ಜೀವನಾಧಾರವಾಗಿದೆ.

ಇಷ್ಟೇ ಅಲ್ಲದೇ, ಈ ಕೇಂದ್ರದ ಸೋದರಿಯರು ತಾವೇ ಖುದ್ದಾಗಿ 1 ಲಕ್ಷ ಮಾಸ್ಕ್ ಮತ್ತು 15 ಸಾವಿರ ರಾಖಿಗಳನ್ನೂ ತಯಾರಿಸಿದರು.




ಮತ್ತೊಂದೆಡೆ, ಕೇರಳದ ಸೋದರಿಯರು ಕೊರೋನಾ ಕಾಲದಲ್ಲಿ ಹದಗೆಡುತ್ತಿರುವ ಮಾನಸಿಕ ಆರೋಗ್ಯದ ವಿರುದ್ದ ಹೋರಾಡಲು ಟೊಂಕಕಟ್ಟಿ ನಿಂತರು. ಅದಕ್ಕಾಗಿ ಸೇವಾಭಾರತಿ ಪುಂಜರಾಣಿ ಆಪ್ತ ಸಲಹಾ ಕೇಂದ್ರದ ಅಡಿಯಲ್ಲಿ 14 ಮಹಿಳಾ ಮನೋವಿಜ್ಞಾನ ಸಲಹೆಗಾರರ ​​ನೇತೃತ್ವದಲ್ಲಿ 14 ಸಲಹಾ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಅವರುಮನೆಗಳಲ್ಲಿನ ಖಿನ್ನತೆ, ಒತ್ತಡ, ಕೌಟುಂಬಿಕ ಹಿಂಸೆ ಮತ್ತು ಮಾದಕ ವ್ಯಸನದಂತಹ ಮನೋರೋಗಗಳಿಂದ ಪಾರಾಗಲು ಆಬಾಲವೃದ್ಧರಿಗೆಲ್ಲ ಉಚಿತವಾಗಿ ಸೂಕ್ತ ಸಮಾಲೋಚನೆ ನಡೆಸಿ ತಿಳಿಹೇಳುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಉತ್ತೇಜನ ನೀಡುತ್ತಿದ್ದಾರೆ.




ಸೇವಾ ಮನೋಭಾವ ಉಳ್ಳವರ ಹೃದಯವು ಹಗಲು, ರಾತ್ರಿಗಳ ಭೇದವಿಲ್ಲದೆ ಮಿಡಿಯುತ್ತಿರುತ್ತದೆ. ಡೆಹ್ರಾಡೂನ್‌, ಮಾರ್ಚ್ 24, 2020, ರಾತ್ರಿ 9 ಗಂಟೆ. ತಮ್ಮ ಮನೆಯಿಂದ 3 ಕಿಲೋಮೀಟರ್ ದೂರದ ಅರೆ ನಿರ್ಮಿತ ಕಟ್ಟಡದಲ್ಲಿ ಬಿಹಾರಿ ಕಾರ್ಮಿಕರ ಏಳು ಕುಟುಂಬಗಳವರು ಉಪವಾಸವಿದ್ದಾರೆ ಎಂದು ತಿಳಿದೊಡನೆ ಮಾತೃಮಂಡಳಿಯ

ಕ್ಷೇತ್ರೀಯ ಸಂಘಟನಾ ಸಚಿವರಾದ ರೀತಾ ಗೋಯೆಲ್, ತಮ್ಮ ಮನೆಯಲ್ಲಿದ್ದ ಅಡುಗೆ ಮತ್ತು ದಿನಸಿ ಸಾಮಗ್ರಿಗಳನ್ನು ಎರಡು ಚೀಲಗಳಲ್ಲಿ ಕಟ್ಟಿಕೊಂಡು ಮಗನೊಂದಿಗೆ ಸ್ಕೂಟಿಯಲ್ಲಿ ಹೊರಟರು. ಯಾರೂ ಹಸಿದಿರಬಾರದು ಎಂಬ ಯೋಚನೆಯ ಬೆಳಕಿಗೆ ಕತ್ತಲೆಯೂ ತಡೆಯಾಗಲಿಲ್ಲ.


ಸೇವಾಭಾರತಿ ಮಾತೃಮಂಡಳಿಯ ಸಹೋದರಿಯರಾದ ಸುನೀತಾ ಮಾಲಿನಿ ಮತ್ತು ಸಪ್ನಾರೊಂದಿಗೆ, ರೀತಾರವರು ಪೊಲೀಸ್ ಸಿಬ್ಬಂದಿಗೆ ಮತ್ತು ತಮ್ಮ ಸುತ್ತಲಿನ ಬಡವರಿಗೆ ಸ್ವತಃ ತಾವೇ ಹೊಲಿದ ಮಾಸ್ಕುಗಳನ್ನು ಹಂಚಿದರು. ಮಣಿಪುರದ ವಿದ್ಯಾರ್ಥಿಗಳೂ ಸುಮಾರು 5000 ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದರು. ಹರಿದ್ವಾರ ಮಾತೃಮಂಡಳಿಯ ರಾಖಿಯವರು ಕುಷ್ಠರೋಗಿಗಳಿಗೆ ಮತ್ತು ಹಿಂದುಳಿದ ಪ್ರದೇಶಗಳಿಗೆ ಆಹಾರದ ಪ್ಯಾಕೆಟ್‌ಗಳನ್ನು ವಿತರಿಸಿದರೆ, ಹೃಷಿಕೇಶದ ಸೋದರಿ ಯಜ್ಞಿಕಾ ಉಚಿತವಾಗಿ ಗಿಡಮೂಲಿಕೆಗಳ ಸ್ಯಾನಿಟೈಜರ್ ವಿತರಿಸಿದರು. ಅಂಶುಲಜೀ ವಾತಾವರಣವನ್ನು ಶುದ್ಧೀಕರಿಸಲು ಸಗಣಿಯ ಧೂಪ ಮತ್ತು ಅಗರಬತ್ತಿಯನ್ನು ಹಂಚಿದರು. ಸೇವಾಯಾನದ ಈ ದಾರಿಯಲ್ಲಿ, ಮನ ಕಲಕುವ ಪ್ರಸಂಗಗಳು ಹಲವಾರು.




ಕಾನ್ಪುರದ ಪನಕೀ ಹನುಮಾನ್ ದೇಗುಲದ ಎದುರು ಹಸಿವಿನಿಂದ ನರಳುತ್ತಿದ್ದ 13 ವರ್ಷದ ಮುಗ್ದೆ, ಆಹಾರದ ಪೊಟ್ಟಣಗಳನ್ನು ಕಂಡೊಡನೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನೂ ಲೆಕ್ಕಿಸದೇ ರಸ್ತೆ ದಾಟಿ ಬಂದರೆ, ಕಲ್ಯಾಣಪುರಿ ಬಸ್ತಿಯಲ್ಲಿ 60 ವರ್ಷದ ವೃದ್ಧೆ ಗಲ್ಲಿಗಲ್ಲಿಗಳಲ್ಲಿ ಇಣುಕುತ್ತಾ ಆಹಾರ ಪ್ಯಾಕೆಟ್‌ ಹುಡುಕಿಕೊಂಡು ಓಡೋಡಿ ಬಂದಳು. ದಾದಾನಗರದಲ್ಲಿ ಹಸಿವಿನಿಂದ ಕಂಗೆಟ್ಟ ಕಂಗಳು, ವಾಹನದ ಗೇಟ್‌ ತೆರೆಯುವುದನ್ನೇ ಕಾಯುತ್ತಿದ್ದವು. ಹಸಿವಿನ ಹಾಹಾಕಾರ, ತುತ್ತಿನ ಮೇಲೆ ನೆಟ್ಟ ನೋಟಗಳಿಗೆ ವಯಸ್ಸಿನ ಭೇದವೆಲ್ಲಿ?????


ಲಾಕ್ ಡೌನ್ ಸಮಯದಲ್ಲಿ, ಕಾನ್ಪುರದ ಕಿಶೋರಿ ಕೇಂದ್ರದ ಮುಖ್ಯಸ್ಥೆ ಪೂಜಾ ದೀದಿ ಹಾಗೂ ಮಾತೃಮಂಡಳಿಯ ಮಹಾನಗರದ ಅಧ್ಯಕ್ಷೆ ಕ್ಷಮಾ ಮಿಶ್ರಾ, ತಮ್ಮ ಜೊತೆಗಾರರ ತಂಡದೊಂದಿಗೆ ವ್ಯಾನಿನಲ್ಲಿ ಊಟದ ಪ್ಯಾಕೇಟುಗಳನ್ನು ತುಂಬಿಕೊಂಡು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಸೇವಾಬಸ್ತಿಗಳಿಗೆ ಆಹಾರವನ್ನು ಹಂಚಲು ಹೋದಾಗ ಇಂಥವೇ ಹಲವಾರು ದೃಶ್ಯಗಳು ಅವರ ಕಣ್ಣಿಗೆ ಬೀಳುತ್ತಿದ್ದವು. ದಿನನಿತ್ಯ 300 ಪ್ಯಾಕೇಟುಗಳಂತೆ 21 ದಿನಗಳ ಕಾಲ ಊಟ ಹಂಚಿದ ಅವರೆಲ್ಲರೂ ದೇವರಲ್ಲಿ ಮನಃಪೂರ್ವಕವಾಗಿ ಬೇಡಿದ್ದೊಂದೇ, ಇಂತಹ ಪರಿಸ್ಥಿತಿ ನಮ್ಮ ದೇಶಕ್ಕೆ ಇನ್ನೆಂದೂ ಕೊಡಬೇಡಪ್ಪ, ಎಂದು.


ಹೃದಯದಲ್ಲಿ ಸೇವೆಯ ಸೂರ್ಯೋದಯವಾದಾಗ ಸಮಯ-ಸಂದರ್ಭಗಳು ಗೌಣವಾಗುತ್ತವೆ. ಈ ಕೊರೋನಾ ಮಾರಿಯ ವಿರುದ್ಧದ ಹೋರಾಟದಲ್ಲಿ ಕೆಲ ಸ್ವಯಂಸೇವಕರು ನವೀನ ವಿಧಾನಗಳನ್ನು ಹುಟ್ಟು ಹಾಕಿದರು. ಉಳಿದವರು ಅವುಗಳ ಅನುಷ್ಠಾನಕ್ಕಾಗಿ ಶ್ರಮಿಸಿದರು. ಅಂತಹ ಸೋದರ ಸೋದರಿಯರ ಮತ್ತೊಂದು ಕತೆಯೊಂದಿಗೆ ಮತ್ತೆ ಭೇಟಿಯಾಗೋಣ.

679 Views
अगली कहानी