सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನಿಷ್ಕಾಮ ಕರ್ಮಯೋಗಿ- ನಾನಾಜೀ ದೇಶಮುಖ್

ದಕ್ಷಿಣ

parivartan-img

ಈಗ್ಗೆ 77 ವರ್ಷಗಳ ಹಿಂದೆ ಖ್ಯಾತ ಉದ್ಯಮಿ ಘನಶ್ಯಾಮದಾಸ ಬಿರ್ಲಾರು ಯುವಕನನ್ನು ತಮ್ಮ ಪರ್ಸನಲ್ ಸೆಕ್ರೆಟರಿಯಾಗಲು ಆಹ್ವಾನವಿತ್ತಿದ್ದರು. ದೊಡ್ಡ ವೇತನದ ಜತೆ ಉಚಿತ ಊಟ ಮತ್ತು ವಸತಿ ಬೇರೆ! ಯಾರಿಗುಂಟು, ಯಾರಿಗಿಲ್ಲ? ರಾಜಸ್ಥಾನದ ಪಿಲಾನಿಯ ಸುಪ್ರಸಿದ್ಧ ಬಿರ್ಲಾ ಕಾಲೇಜಿನಲ್ಲಿ ಪುಟ್ ಬಾಲ್ ನಿಂದ ಹಿಡಿದು ಚರ್ಚಾಸ್ಪರ್ಧೆ, ಓದು ಹೀಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೆಲ್ಲ ಗಟ್ಟಿಗನಾಗಿದ್ದ ತರುಣ, ಬಿರ್ಲಾರನ್ನು ಆಕರ್ಷಿಸಿದ್ದರಲ್ಲಿ ಅಚ್ಚರಿಯೇನಿರಲಿಲ್ಲ. ಬಿರ್ಲಾರವರ ಅಂಥ ಪ್ರಸ್ತಾಪವನ್ನು ತಳ್ಳಿಹಾಕಿ ಡಾ|| ಹೆಡಗೇವಾರರ ಬಳಿ ದೀಕ್ಷೆ ಪಡೆದು RSS ಪ್ರಚಾರಕನಾಗಿಬಿಟ್ಟ ಯುವಕ ಚಂಡಿಕಾದಾಸ್ ದೇಶಮುಖ್.




ಮಹಾರಾಷ್ಟ್ರದ ಇಂದಿನ ಹಿಂಗೋಲಿ ಜಿಲ್ಲೆಯ ಸೇನಗಾಂವ್ ತಾಲೂಕಿನ ಕಡೋಲಿ ಎಂಬ ಪುಟ್ಟ ಹಳ್ಳಿಯ ರಾಜಾಬಾಯಿ ಹಾಗೂ ಅಮೃತರಾವ್ ದೇಶಮುಖರ ಐದನೇ (ಕಿರಿಯ) ಮಗುವಾದ ಚಂಡಿಕಾದಾಸ, ಬಡತನ ಹಾಗೂ ಅನಕ್ಷರತೆಗಳ ನಡುವೆಯೇ ಬೆಳೆದವರು. ಹಾಗಾಗಿಯೇ, ತಮ್ಮ ದೃಢವಾದ ಇಚ್ಛಾಶಕ್ತಿ, ಕಠಿಣ ಪರಿಶ್ರಮ ಹಾಗೂ ಉತ್ಕಟ ದೇಶಪ್ರೇಮಗಳ ಬಲದಿಂದ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಅವರು ಗೆಲುವು ಸಾಧಿಸಿದರು. ಚಿತ್ರಕೂಟದಂಥ ಹಿಂದುಳಿದ ಪ್ರದೇಶದ 500 ಹಳ್ಳಿಗಳಲ್ಲಿ ಗ್ರಾಮವಿಕಾಸದ ಗಂಗೆಯನ್ನು ಹರಿಸಿದ ಆಧುನಿಕ ಭಗೀರಥ, ಅಲ್ಲಿನ ಜನಸಾಮಾನ್ಯರ ಪಾಲಿಗೆ ನಾನಾಜೀ ಆಗಿಬಿಟ್ಟರು. ದೇಶದಲ್ಲಿ ಗ್ರಾಮೀಣ ವಿದ್ಯಾಲಯ ಸ್ಥಾಪಕರಲ್ಲಿ ಮೊದಲಿಗರಾದ ನಾನಾಜೀ ದೇಶಮುಖರ ಬದುಕು ಸಾಮಾಜಿಕ ಸೇವಾ ಕಾರ್ಯಕರ್ತರಿಗೆ ಮೇಲ್ಪಂಕ್ತಿಯಾಗಿದೆ. ಅನಕ್ಷರಸ್ಥ ಹಾಗೂ ಬಡ ಕುಟುಂಬದಲ್ಲಿ ಬೆಳೆದ ಚಂಡಿಕಾದಾಸರಿಗೆ ಹನ್ನೊಂದು ವರ್ಷದವರೆಗೆ ಶಾಲೆಗೆ ಹೋಗುವ ಅವಕಾಶವೇ ದೊರಕಲಿಲ್ಲ. ನಂತರವೂ ತರಕಾರಿ ಮಾರುವುದರಿಂದ ಹಿಡಿದು ಪತ್ರಿಕೆ ಹಂಚುವ ತನಕ ಅನೇಕ ಸಣ್ಣಪುಟ್ಟ ಕೆಲಸ ಮಾಡಿಯೇ ಅವರು ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಅವರ ಎಷ್ಟೋ ರಾತ್ರಿಗಳ ನಿದ್ರೆಯನ್ನು ಕದ್ದ ಹಸಿವೆಯೇ, ಅವರನ್ನು ಇತರರ ದುಃಖಕ್ಕೆ ಮಿಡಿಯುವಂತೆ ಮಾಡಿತು. ಅದಕ್ಕಾಗಿಯೇ, 1934 ರಲ್ಲಿ ಡಾಕ್ಟರಜೀಯವರಿಂದ ದೀಕ್ಷೆ ಪಡೆದ ಮೊದಲ 17 ಜನರ ತಂಡದಲ್ಲಿ 18 ಹರೆಯದ ಚಂಡಿಕಾದಾಸನೂ ಇದ್ದ. ಪ್ರಚಾರಕರಾದ ಬಳಿಕ ದೊರೆತ ಮೊದಲ ಅವಕಾಶದಲ್ಲೇ ನಾನಾಜೀ ಸೇವಾಕಾರ್ಯಕ್ಕೆ ಧುಮುಕಿದರು. 1944 ಸಮಯದಲ್ಲಿ ನಾರಾಯಣೀ ನದಿಯ ಹುಚ್ಚು ಪ್ರವಾಹ ಛಿತೌಲೀ ಎಂಬ ಹಳ್ಳಿಗೆ ನುಗ್ಗಿದಾಗ ನಾನಾಜೀಯವರು, ಜೊತೆಗಾರ ಸ್ವಯಂಸೇವಕರೊಂದಿಗೆ ಹಲವಾರು ದಿನಗಳ ಕಾಲ ಪ್ರವಾಹಪೀಡಿತರ ಸೇವೆಯಲ್ಲಿ ತೊಡಗಿದ್ದರು.




ಗಾಂಧೀಜಿಯ ಹತ್ಯೆಯ ನಂತರ RSS ನಿಷೇಧಕ್ಕೆ ಒಳಗಾದ ಸಂದರ್ಭದಲ್ಲಿ 6 ತಿಂಗಳ ಸೆರೆವಾಸಕ್ಕೂ ನಾನಾಜೀ ಒಳಗಾದರು. ಬಿಡುಗಡೆಯ ಬಳಿಕ ಸಂಘದ ಆದೇಶದಂತೆ ಜನಸಂಘವನ್ನು ಹುಟ್ಟು ಹಾಕಿದ ನಾನಾಜೀ, ಪಂಡಿತ ದೀನದಯಾಳ್ ಉಪಾಧ್ಯಾಯರೊಂದಿಗೆ ಜೊತೆಗೂಡಿ ಭಾರತೀಯ ಜನಸಂಘವನ್ನು ಮುನ್ನಡೆಸುವ ಹೊಣೆ ಹೊತ್ತರು. ಜನಸಂಘದ ಹುಟ್ಟಿನಿಂದ ಹಿಡಿದು ಇಂದಿರಾಗಾಂಧಿಯ ಪತನದವರೆಗಿನ ಅವರ ರಾಜಕೀಯ ಹೋರಾಟವು ಹಲವು ವಿಚಾರಧಾರೆಗಳ ನಾಯಕರನ್ನು ಒಗ್ಗೂಡಿಸುವಲ್ಲಿ ಯಶ ಕಂಡಿತು. ಅಷ್ಟೇ ಅಲ್ಲ, ಜಯಪ್ರಕಾಶ ನಾರಾಯಣ್ ನೇತೃತ್ವದ ಆಂದೋಲನದಲ್ಲಿ ರಾಷ್ಟ್ರವಾದೀ ಪಕ್ಷಗಳಿಗೆ ಗೆಲುವು ದೊರಕಿಸುವಲ್ಲಿಯೂ ನಾನಾಜೀ ನಿರ್ಣಾಯಕ ಪಾತ್ರ ವಹಿಸಿದರು.

1975 ರಲ್ಲಿ RSS ಮತ್ತೊಮ್ಮೆ ನಿಷೇಧಕ್ಕೆ ಒಳಗಾದಾಗ ನಾನಾಜೀ 17 ತಿಂಗಳ ಸೆರೆವಾಸ ಅನುಭವಿಸಿದರು. ಸೆರೆಯಲ್ಲಿ ಕೈಗೊಂಡ ಅಧ್ಯಯನ ಹಾಗೂ ಚಿಂತನಗಳಿಂದಾಗಿ ನಾನಾಜೀ, ಅಂದಿನ ವಿಕೃತ ರಾಜಕೀಯದಿಂದ ರಾಷ್ಟ್ರದ ಒಳಿತನ್ನು ಸಾಧಿಸಲಾಗದೆಂದು ಅರಿತು, ಗ್ರಾಮವಿಕಾಸದ ಮೂಲಕ ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಬೇಕೆಂದು ತೀರ್ಮಾನಿಸಿದರು. ಸೆರೆಮನೆಯಿಂದ ಹೊರಬಂದೊಡನೆ ರಾಜಕೀಯ ಸಂನ್ಯಾಸ ಸ್ವೀಕರಿಸಿ ಸೇವಾಕ್ಷೇತ್ರವನ್ನು ಆರಿಸಿಕೊಂಡರು. ಅಧಿಕಾರ ಇಲ್ಲದೆಯೂ ಜನಶಕ್ತಿಯಿಂದಲೇ ದೇಶದ ಮರುನಿರ್ಮಾಣ ಸಾಧ್ಯವೆಂಬ ದೃಢ ವಿಶ್ವಾಸದಿಂದಾಗಿ, ಕ್ಯಾಬಿನೆಟ್ ಮಂತ್ರಿ ಪದವಿಯನ್ನು ಧಿಕ್ಕರಿಸಿ ರಾಜಕೀಯ ನಿವೃತ್ತಿ ಘೋಷಿಸಿದರು.




ತಮ್ಮ ಮೊದಲ ಕ್ಷೇತ್ರವಾಗಿ ನಾನಾಜೀ ಆಯ್ದುಕೊಂಡಿದ್ದು, ಉತ್ತರ ಪ್ರದೇಶದ ಅತ್ಯಂತ ಹಿಂದುಳಿದ ಗೋಂಡಾ ಜಿಲ್ಲೆಯನ್ನು! ದುಡಿವ ಕೈಗಳಿಗೆ ಉದ್ಯೋಗ ಹಾಗೂ ಬೆಳೆವ ಭೂಮಿಗೆ ನೀರು ಒದಗಿಸುವ ಯೋಜನೆಯೊಂದಿಗೆ ಕೆಲಸ ಆರಂಭಿಸಿದ ನಾನಾಜೀ, ಪಾರಂಪರಿಕ ಸಾಧನಗಳ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸಿದರು. ನಮ್ಮ ಸಮಾಜದ ಅತಿ ಬಡವನನ್ನೂ ಆರ್ಥಿಕ ಸ್ವಾವಲಂಬಿಯಾಗಿಸುವ ಮೂಲಕ ಮಾತ್ರವೇ ದೇಶ ಪ್ರಗತಿ ಹೊಂದಲು ಸಾಧ್ಯವೆಂಬ ನಾನಾಜೀ ಸಿದ್ದಾಂತದಿಂದಾಗಿ ದೀನದಯಾಳ್ ಸಂಶೋಧನಾ ಸಂಸ್ಥೆ ಜನ್ಮತಾಳಿತು. ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಮತ್ತು ಸಂಸ್ಕಾರ ಎಂಬ ನಾಲ್ಕು ಸಂಗತಿಗಳಿಗೆ ಒತ್ತು ಕೊಟ್ಟ ಸಂಸ್ಥೆಯು ಚಿತ್ರಕೂಟದ ಆಸುಪಾಸಿನ 500 ಹಳ್ಳಿಗಳಲ್ಲಿ ಅಭಿವೃದ್ಧಿಯ ಬೀಜ ಬಿತ್ತಿತು. ಗುಡಿ ಕೈಗಾರಿಕೆಗಳ ವಿಕಾಸ, ಸಾವಯವ ಕೃಷಿ ಹಾಗೂ ನೀರಿನ ಸಮರ್ಪಕ ನಿರ್ವಹಣೆಗಳಿಂದ ಅಲ್ಲಿನ ಹಳ್ಳಿಗಳ ಸ್ಥಿತಿ ಕ್ರಮೇಣ ಚೇತರಿಕೆ ಕಾಣತೊಡಗಿತು. ನಾನಾಜೀಯವರ ಕರೆಗೆ ಓಗೊಟ್ಟು ಅನೇಕ ಶಿಕ್ಷಿತ ದಂಪತಿಗಳು ತಮ್ಮ ಜೀವನದ ಕೆಲವರ್ಷಗಳನ್ನು ಹಳ್ಳಿಗಳ ಪ್ರಗತಿಗಾಗಿ ಮಿಸಲಿಟ್ಟರು. ಹಳ್ಳಿಗರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದು ಮಾತ್ರವಲ್ಲ, ಸರಕಾರೀ ಯೋಜನೆಗಳ ಲಾಭ ಹಳ್ಳಿಗರಿಗೆ ತಲುಪುವಂತೆಯೂ ವ್ಯವಸ್ಥೆ ಮಾಡಿದರು. ನಾನಾಜೀಯವರ ಇಡೀ ಬದುಕು ತ್ಯಾಗ ಹಾಗೂ ನಿಷ್ಕಾಮ ಕರ್ಮಯೋಗದ ಮಾದರಿಯಾಗಿದೆ. ರಾಜ್ಯಸಭಾ ಸದಸ್ಯರಾಗಿದ್ದ ನಾನಾಜೀ ತಮ್ಮ ಸಂಸದ ನಿಧಿಯ ಪ್ರತೀ ಪೈಸೆಯನ್ನೂ ಚಿತ್ರಕೂಟದ ಹಳ್ಳಿಗಳ ಉದ್ಧಾರಕ್ಕಾಗಿಯೇ ಮುಡಿಪಿಟ್ಟರು. ಕೊನೆಗೆ, ತಮ್ಮ ಪಾರ್ಥಿವ ಶರೀರವನ್ನೂ ವೈದ್ಯಕೀಯ ಸಂಶೋಧನೆಗೆಂದು ದಾನ ನೀಡಿದರು.


ಸಂಪರ್ಕ ವ್ಯಕ್ತಿ- ಅಭಯ ಮಹಾಜನ್

ಸಂಪರ್ಕ ಸಂಖ್ಯೆ 94254366524


2015 Views
अगली कहानी