नियमित अपडेट के लिए सब्सक्राईब करें।
5 mins read
ಶ್ರೀ ಸುಬ್ರಾಯ ನಂದೋಡಿ | ದಕ್ಷಿಣ
ಅವರು ಸ್ವತಃ ಕುಷ್ಠರೋಗಿಯಾಗಿರಲಿಲ್ಲ, ಹಾಗೆಯೇ ತಮ್ಮವರ್ಯಾರು ಈ ಕ್ರೂರ ರೋಗಕ್ಕೆ ತುತ್ತಾಗಿ ಬಳಲುತ್ತಿದ್ದುದನ್ನು ಅವರು ನೋಡಿಯೂ ಇರಲಿಲ್ಲ. ಆದರೆ ಎಲ್ಲಿ ಈ ರೋಗಿಗಳನ್ನು ಜನರು ತಿರಸ್ಕಾರದಿಂದ ನೋಡುತ್ತಿದ್ದರೊ ಅಲ್ಲಿ ಆರೋಗ್ಯವಂತ ವ್ಯಕ್ತಿಯೊಬ್ಬರು ತನ್ನ ಜೀವನದ 46 ವರ್ಷಗಳನ್ನು ಕುಷ್ಠರೋಗಿಗಳ ಸೇವೆಯಲ್ಲಿ ಕಳೆದರು. ತಾಯಿ, ಮಗಳು ಅಥವಾ ಹೆಂಡತಿಯಂತಹ ಹತ್ತಿರದ ಸಂಬಂಧಿಗಳು ಕೈ ಕೊಡವಿಕೊಳ್ಳುತ್ತಿದ್ದಂತಹ ಶಾಪಗ್ರಸ್ತ ರೋಗಿಗಳ ಶುಶ್ರೂಷೆಯಿಂದ ಹಿಡಿದು ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಪುನಃ ಹೊಂದುವ ತನಕ ದೀರ್ಘಾವಧಿ ಹೋರಾಟವನ್ನು ನಡೆಸಿದವರು ಶ್ರೀ ಗಣೇಶ ದಾಮೋದರ ಬಾಪಟ್ ಅವರು.
ಛತ್ತೀಸ್ಗಢದ ಚಾಂಪಾ ಜಿಲ್ಲೆಯ ಸೋಂಠಿಯಲ್ಲಿರುವ 125 ಎಕರೆ ಪ್ರದೇಶದಲ್ಲಿರುವ ಭಾರತೀಯ ಕುಷ್ಠನಿವಾರಕ ಸಂಘದಲ್ಲಿ, ಬಾಪಟ್ ಜಿಯವರು ಕುಷ್ಠ ರೋಗಿಗಳು ಸ್ವಾಭಿಮಾನಿ ಮತ್ತು ಸ್ವಾವಲಂಬಿ ಜೀವನವನ್ನು ನಡೆಸಲು ಮಾರ್ಗವನ್ನು ತೋರಿಸಿದರು. ಜೀವನಪೂರ್ತಿ ಸೇವೆಯ ಹಾದಿಯಲ್ಲಿ ಸಾಗಿ 2018 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಈ ಆಧುನಿಕ ಸಂತ, ಅಂತಿಮವಾಗಿ ತನ್ನ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದರು.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸಣ್ಣ ಹಳ್ಳಿಯಾದ ಪಥರೋಟ್‌ನಲ್ಲಿ 1935 ರ ಏಪ್ರಿಲ್ 29 ರಂದು ಜನಿಸಿದ ಬಾಪಟ್ ಜಿಯವರು ಬಾಲ್ಯದಿಂದಲೂ ಸಂಘದ ಸ್ವಯಂಸೇವಕರಾಗಿದ್ದರು. ತಂದೆ ಗಣೇಶ ವಿನಾಯಕ ಬಾಪಟ್ ಮತ್ತು ತಾಯಿ ಲಕ್ಷ್ಮೀದೇವಿಯವರು ಸಂಘದ ಸಂಸ್ಥಾಪಕರಾದ ಡಾ. ಹೆಡಗೇವಾರ್ ಜಿ ಅವರನ್ನು ದೇವರ ಅವತಾರವೆಂದು ತಿಳಿಯುತ್ತಿದ್ದರು. ಏಕೆಂದರೆ ಬಾಲ್ಯದಲ್ಲಿ ತೀವ್ರ ಬಡತನದೊಂದಿಗೆ ಹೋರಾಡುತ್ತಿದ್ದ ಗಣೇಶ ವಿನಾಯಕಜೀಯವರಿಗೆ ಪೂಜನೀಯ ಡಾಕ್ಟರ್ ಜೀಯವರು ನಿವಾಸ, ಆಹಾರ ಮತ್ತು ಅಧ್ಯಯನಕ್ಕಾಗಿ ಉಚಿತ ವ್ಯವಸ್ಥೆಗಳನ್ನು ಮಾಡಿದ್ದರು.
ಈ ದಂಪತಿಯ ಮೂರನೆಯ ಮಗು ಗಣೇಶನಲ್ಲೂ ಇದೇ ಭಾವನೆ ಇತ್ತು. ಬಿ.ಕಾಂ. ಮಾಡಿದ ನಂತರ ಗಣೇಶರಿಗೆ ಉದ್ಯೋಗ ಮಾಡಲು ಮನಸ್ಸು ಇಲ್ಲದಿದ್ದಾಗ, ತಮ್ಮ 32 ನೇ ವಯಸ್ಸಿನಲ್ಲಿ ವನವಾಸಿ ಕಲ್ಯಾಣ್ ಆಶ್ರಮಕ್ಕೆ ಸೇರಿಕೊಂಡು ದಟ್ಟವಾದ ಕಾಡುಗಳ ಮಧ್ಯೆ ವಾಸಿಸುವ ಜಶ್ಪುರ ಹಳ್ಳಿಯಲ್ಲಿ ಮಕ್ಕಳಿಗೆ ಕಲಿಸಲಾರಂಭಿಸಿದರು. ಸ್ವಾಮಿ ರಾಮಕೃಷ್ಣ ಪರಮಹಂಸರು ಕೋಲ್ಕತ್ತಾದಲ್ಲಿ ನರೇಂದ್ರನನ್ನು ಹುಡುಕುತ್ತಿದ್ದನಂತೆ ಕಾತ್ರೇಜಿ ಮತ್ತು ಬಾಪಟ್ ಜೀಯವರ ಭೇಟಿ ಅದೃಷ್ಟಯೋಜಿತವಾಗಿತ್ತು. ಕುಷ್ಠರೋಗದ ಪ್ರಭಾವದಿಂದ ಕುಗ್ಗಿದ ಕೈ ಕಾಲುಗಳ ಸಹಾಯದಿಂದ ಆಶ್ರಮದ ವ್ಯವಸ್ಥೆಯನ್ನು ಹತ್ತು ವರ್ಷಗಳ ಕಾಲ ನಿರ್ವಹಿಸುತ್ತಿದ್ದ ಭಾರತೀಯ ಕುಷ್ಠರೋಗ ನಿವಾರಕ ಸಂಘ,ಚಾಂಪಾದ ಸಂಸ್ಥಾಪಕರ ಪರಿಸ್ಥಿತಿಯೂ ಇದೇ ಆಗಿತ್ತು.
1972 ರಲ್ಲಿ ಬಾಪಟ್ ಜಿ ಮೊದಲ ಬಾರಿಗೆ ಆಶ್ರಮವನ್ನು ನೋಡಲು ಚಾಂಪಾಗೆ ಹೋದಾಗ ಅವರು ಅಲ್ಲಿಯವರೇ ಆಗಿ ಉಳಿದುಬಿಟ್ಟರು. ಕಾಲ ಕಳೆದಂತೆ ಕಾತ್ರೇಜಿ ಹೆಚ್ಚು ದುರ್ಬಲರಾಗುತ್ತಾ ಹೋದರು, ನಂತರ ಬಾಪಟ್ ಜೀಯವರು ಈ ಸೇವಾಶ್ರಮದ ನಿರ್ವಹಣೆಯನ್ನು ತನ್ನ ಕೈಗೆ ತೆಗೆದುಕೊಂಡು ಕಾತ್ರೇಜಿ ಕನಸನ್ನು ಈಡೇರಿಸಲು ಪ್ರಾರಂಭಿಸಿದರು. ಈ ಯುವ ವ್ಯವಸ್ಥಾಪಕರಿಗೆ ಅನೇಕ ಸವಾಲುಗಳು ಎದುರಾಗಿದ್ದವು. ಆ ದಿನಗಳಲ್ಲಿ ಗುಣಮುಖರಾಗಿದ್ದ ಕುಷ್ಠರೋಗಿಗಳು ಸಹ ಖಿನ್ನತೆಗೆ ಬಲಿಯಾಗುತ್ತಿದ್ದರು. ಏಕೆಂದರೆ ಅವರೆಲ್ಲರೂ ತಮ್ಮನ್ನು ತಾವು ತಿರಸ್ಕೃತರು ಮತ್ತು ಸಮಾಜಕ್ಕೆ ಶಾಪ ಎಂದು ಪರಿಗಣಿಸಿದ್ದರು.
ಆದರೆ ರೋಗಿಗಳಿಗೆ ತಾವೇ ಶುಶ್ರುಷೆ ಮಾಡುವ ಮೂಲಕ ಸ್ಪರ್ಶಿಸುವುದರಿಂದ ಕುಷ್ಠರೋಗ ಹರಡುವುದಿಲ್ಲ ಎಂಬ ಸಂದೇಶವನ್ನು ಬಾಪಟ್ ಜೀಯವರು ಸಮಾಜಕ್ಕೆ ನೀಡಿದರು. ಅವರು ದೇಶಾದ್ಯಂತ ಸಂಚರಿಸಿ ಮತ್ತು ಆಶ್ರಮಕ್ಕಾಗಿ ಹಣವನ್ನು ಸಂಗ್ರಹಿಸಿದರಲ್ಲದೆ ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ಹರಡಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ನಿರಂತರವಾಗಿ ಪ್ರಯತ್ನಿಸಿದರು. ರೋಗಿಗಳ ಮನಸ್ಸು ಆರೋಗ್ಯವಂತವಾಗಬೇಕು ಎಂಬ ದೃಷ್ಟಿಯಿಂದ ಆಶ್ರಮದಲ್ಲಿ ತರಕಾರಿಗಳನ್ನು ಬೆಳೆಸಲಾರಂಭಿಸಿದರು. ಸೀಮೆಸುಣ್ಣ, ಕಂಬಳಿಗಳು ಮತ್ತು ಹಗ್ಗಗಳನ್ನು ತಯಾರಿಸುವ ಕೆಲಸವನ್ನು ಆರಂಭಿಸಿದರು. ಆಶ್ರಮದಲ್ಲಿ ತಮ್ಮನ್ನು ತಾವು ಭಾರವೆಂದು ಪರಿಗಣಿಸುವ ರೋಗಿಗಳು ಸಂಪಾದಿಸಲು ಪ್ರಾರಂಭಿಸಿದಾಗ ತೃಪ್ತಿಯಿಂದ ಅವರ ಮುಖಗಳು ಅರಳಿದವು.
4 ಎಕರೆ ಭೂಮಿಯಲ್ಲಿ ಕುಷ್ಠರೋಗಿಗಳು ಮಾಧವ ಸಾಗರ್ ಕೆರೆಯನ್ನು ಬಹಳ ಸಮಯ ಶ್ರಮಸೇವೆ ಮಾಡಿ ನಿರ್ಮಸಿಕೊಂಡಿದ್ದಾರೆ ಎಂದು ಬಾಪಟ್ ಜಿ ಅವರೊಂದಿಗೆ ಹಲವಾರು ವರ್ಷಗಳಿಂದ ಆಶ್ರಮವನ್ನು ನಿರ್ವಹಿಸುತ್ತಿರುವ ಆರ್‌ಎಸ್‌ಎಸ್ ಪ್ರಚಾರಕರಾದ ಸುಧೀರ್ ದೇವ್ ಜಿ ಹೇಳುತ್ತಾರೆ. ಇಂದು ಆಶ್ರಮ ವಾಸಿಗಳ ಸಹಯೋಗದೊಂದಿಗೆ 65 ಎಕರೆ ಭೂಮಿಯನ್ನು ಕೃಷಿ ಮಾಡಲಾಗಿದ್ದು, 5 ಎಕರೆ ಭೂಮಿಯಲ್ಲಿ ತೋಟಗಾರಿಕೆ ಮಾಡಲಾಗುತ್ತಿದೆ. ಕೃಷಿಯು ಆಶ್ರಮದ ಜನರ ಅಗತ್ಯಗಳನ್ನು ಪೂರೈಸುವುದಲ್ಲದೆ ವಾರ್ಷಿಕ 13 ಲಕ್ಷ ರೂಪಾಯಿ ಸಂಪಾದನೆಯೂ ಆಗುತ್ತದೆ.
ಬಾಪಟ್ ಜಿ ಒಬ್ಬ ನುರಿತ ಆಡಳಿತಗಾರ ಮತ್ತು ತೀಕ್ಷ್ಣ ಚಿಂತಕರಾಗಿದ್ದರು. ಆದ್ದರಿಂದಲೇ ಕುಷ್ಠರೋಗ ಆಶ್ರಮದ ಸಾಮರ್ಥ್ಯ ಹೆಚ್ಚಾದಾಗ, ಕುಷ್ಠರೋಗಿಗಳ ಜೊತೆಗೆ ಟಿಬಿ ರೋಗಿಗಳ ಚಿಕಿತ್ಸೆಗಾಗಿ ಅವರು 20 ಹಾಸಿಗೆಗಳ ಸಂತ ಘಾಸಿದಾಸ್ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಈ ಆಸ್ಪತ್ರೆಯಲ್ಲಿ ನಿರಂತರವಾಗಿ ಶಿಬಿರವನ್ನು ಸಂಘಟಿಸುವ ಮೂಲಕ ಕಣ್ಣಿನ ಪೊರೆ ಆಪರೇಶನ್ ನ್ನು ಉಚಿತವಾಗಿ ಮಾಡಲಾಗುತ್ತದೆ. ಇಲ್ಲಿಯವರೆಗೆ 10,000 ಕ್ಕೂ ಹೆಚ್ಚು ಯಶಸ್ವಿ ಆಪರೇಶನ್ ಗಳನ್ನು ಮಾಡಲಾಗಿದೆ. ಬಡ ವನವಾಸಿಗಳಿಗಾಗಿ ಸುಶೀಲ ಬಾಲಗೃಹ ಎಂಬ ಹೆಸರಿನಲ್ಲಿ ಹಾಸ್ಟೆಲ್ ಪ್ರಾರಂಭಿಸಲಾಯಿತು. ಜೀವನದುದ್ದಕ್ಕೂ ಪುರಸ್ಕಾರಗಳಿಂದ ದೂರವಾಗಿ ಸರಳ ಜೀವನವನ್ನು ನಡೆಸಿದ ಬಾಪಟ್ ಜಿ, ಪದ್ಮಶ್ರೀ ಸ್ವೀಕರಿಸಿದ ನಂತರ ಹೇಳಿದ ಮಾತು..... ಆಶ್ರಮದಲ್ಲಿ ಕುಷ್ಠರೋಗದಿಂದ ಚಿಕಿತ್ಸೆ ಪಡೆದ ನಂತರ ಆರೋಗ್ಯವಂತ ಮನುಷ್ಯನಾಗಿ, ತನ್ನ ಕುಟುಂಬಕ್ಕೆ ಮರಳಿರುವುದೇ ನನಗೆ ದೊರೆತ ನಿಜವಾದ ಪುರಸ್ಕಾರ.नियमित अपडेट के लिए सब्सक्राईब करें।