सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನಾವು ಸಫಲರಾಗುವೆವು

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

ರೀಟಾ ಕರಮಾಕರ್, ರುಮಾ ಹಜಾರಾ ಮತ್ತು ರುಖ್ಸಾನಾ ಖಾತೂನ್ ಈ ಮೂವರು ವಿಭಿನ್ನ ಹಿನ್ನೆಲೆಗಳನ್ನು ಹೊಂದಿರಬಹುದಾದರೂ ತಮ್ಮ ಯಶಸ್ಸಿನ ಕಥೆಗಳನ್ನು ಒಂದೇ ಶಾಯಿಯಿಂದ ಬರೆದಿದ್ದಾರೆ. ಸೇವೆ ಎಂಬ ಶಾಯಿ ಹಾಗು ಸಮರ್ಪಣೆ ಎಂಬ ಲೇಖನಿಯ ಮೂಲಕ ಬರೆದ ಈ ಯಶಸ್ವೀ ಜೀವನದ ಕಥೆ, ಇಂದು ಪಶ್ಚಿಮ ಬಂಗಾಳದ ಅನೇಕ ಹಿಂದುಳಿದ ಹಳ್ಳಿಗಳಲ್ಲಿ ಸಾವಿರಾರು ಸಹೋದರಿಯರಿಗೆ ಸ್ಫೂರ್ತಿ ನೀಡುತ್ತಿದೆ.

ಪಶ್ಚಿಮ ಬಂಗಾಳದ ಸೇವಾ ಭಾರತಿಗೆ ಸಂಬಂಧಿಸಿದ ವಿವೇಕಾನಂದ ವಿಕಾಸ್ ಪರಿಷತ್ ಮೂಲಕ ನಡೆಸಲ್ಪಡುತ್ತಿರುವ ವಿವಿಧ ವೃತ್ತಿಪರ ತರಬೇತಿ ಕೋರ್ಸ್‌ ಮತ್ತು ಇತರ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತರಬೇತಿ ಪಡೆದಿರುವ ರೀಟಾ, ರುಮಾ ಮತ್ತು ರುಖ್ಸಾನಾ ಅವರು ತಮ್ಮ ತಮ್ಮ  ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯಿಂದ ಯಶಸ್ವಿಯಾಗಿದ್ದಾರೆ. ರೀಟಾ ಜಾರ್ಖಂಡ್‌ನಲ್ಲಿ ಉತ್ತಮ ಸರ್ಕಾರಿ ಉದ್ಯೋಗದಲ್ಲಿದ್ದಾರೆ, ರುಮಾ ತಮ್ಮ ಫ್ಯಾಶನ್ ಬ್ಯೂಟಿ ಪಾರ್ಲರ್ ನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ, ಹಾಗೂ ರುಖ್ಸಾನಾ ಖಾತುನ್ ಪರಿಷತ್ತಿನ ಮೂಲಕ ನಡೆಸುತ್ತಿರುವ ವೃತ್ತಿಪರ ತರಬೇತಿ ಕೋರ್ಸ್‌ಗಳ ಫ್ಯಾಕಲ್ಟಿಯ ಸದಸ್ಯರಾಗಿದ್ದಾರೆ.

ಕಲ್ಕತ್ತದಿಂದ 214ಕಿ.ಮೀ. ದೂರದಲ್ಲಿರುವ ಆಸನಸೋಲ್ ಜಿಲ್ಲೆಯ ಇಚ್ಚಾಪುರ ಹಳ್ಳಿಯು ಪಶ್ಚಿಮ ಬಂಗಾಳದ ಅತ್ಯಂತ ಹಿಂದುಳಿದ ಗ್ರಾಮೀಣ ವಲಯ. ಇಲ್ಲಿ ಇಂದು ವಿವೇಕಾನಂದ ವಿಕಾಸ ಪರಿಷತ್ತಿನ ಮೂಲಕ 6 ತರಬೇತಿ ಕೇಂದ್ರ,10 ಬಾಲಸಂಸ್ಕಾರ ಕೇಂದ್ರ, 3 ಉಚಿತ ಆರೋಗ್ಯ ಕೇಂದ್ರ, 2 ನರರೋಗ ಕೇಂದ್ರ, 5 ಮಹಿಳಾ ಸ್ವ-ಸಹಾಯ ಸಂಘಗಳನ್ನು ನಡೆಸುವುದರ ಜೊತೆಗೆ ಅನೇಕ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.


1989ನೇ ಇಸವಿಯಲ್ಲಿ ಆಗಿನ ಸ್ಥಳೀಯ ಜಿಲ್ಲಾ ಸಂಘಚಾಲಕರಾದ ದಿವಂಗತ ಮಲಯ್ ರಾಯ್ ಜೀಯವರ ಪ್ರಯತ್ನಗಳಿಂದ ವಿವೇಕಾನಂದ ವಿಕಾಸ ಪರಿಷತ್ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಂದಿನವರೆಗೆ ಈ ಪರಿಷತ್ ಗ್ರಾಮ-ವಿಕಾಸದ ಕ್ಷೇತ್ರದಲ್ಲಿ ಅದ್ಭುತ ಕಾರ್ಯಗಳನ್ನು ಮಾಡುತ್ತಿದೆ. ಪ್ರಾಂತ ಸೇವಾ ಪ್ರಮುಖರಾದ ಮನೋಜ್ ದಾ ಹೇಳುವ ಪ್ರಕಾರ ಪರಿಷತ್ತಿನ ವತಿಯಿಂದ ನಡೆಯುತ್ತಿರುವ ಬೇರೆ ಬೇರೆ ಪ್ರಶಿಕ್ಷಣ ವರ್ಗಗಳ ಫಲಾನುಭವಿ ಹಿಂದುಳಿದ ಗ್ರಾಮೀಣವಲಯದ 200 ಸಹೋದರಿಯರು ಇಂದು ಆತ್ಮನಿರ್ಭರರು ಹಾಗು ಸ್ವಾವಲಂಬಿಗಳು. ಹಾಗೆಯೆ ಕಂಪ್ಯೂಟರ್ ತರಬೇತಿಯ ವಿದ್ಯಾರ್ಥಿಗಳು ಖಾಸಗಿ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗವನ್ನೂ ಪಡೆದಿದ್ದಾರೆ.  

ಗ್ರಾಮ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಾ ಶಾರದಾ ಗ್ರಾಮ ವಿಕಾಸ ಸಮಿತಿಯ ಮೂಲಕ ಸೇವಾ ಭಾರತಿ ವತಿಯಿಂದ ತಾರಕೇಶ್ವರ ಜಿಲ್ಲೆಯ ತೇಜಪುರ ಗ್ರಾಮವನ್ನು ಪುನಶ್ಚೇತನಗೊಳಿಸಲಾಗಿದೆ. ಈ ಗ್ರಾಮದಲ್ಲಿ ನಡೆಯುತ್ತಿರುವ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಕೇಂದ್ರ, ಡಾಕ್ಟರ್ ಹೆಡ್ಗೇವಾರ್ ಚಾರಿಟೆಬಲ್ ಕ್ಲಿನಿಕ್, ಬುಕ್-ಬ್ಯಾಂಕ್, ಧರ್ಮ ಜಾಗರಣ ಕೇಂದ್ರ, ಮಾ ಶಾರದ ಮಾತೃ ಮಂಡಳಿ ಹಾಗು ಸ್ವ ಸಹಾಯ ಸಂಘಗಳ ಮೂಲಕ ತೇಜಪುರ ಗ್ರಾಮವನ್ನು ಆದರ್ಶ ಗ್ರಾಮದ ಸ್ತರಕ್ಕೆ ಏರಿಸಲಾಗಿದೆ.

ಇದೇ ರೀತಿಯಲ್ಲಿ  ಪಾಲಿ ನದಿಯ ದಡದಲ್ಲಿರುವ ಮತ್ತೊಂದು ಅತ್ಯಂತ ಹಿಂದುಳಿದ ಗ್ರಾಮ ಪಿಚಖಲೀಯಾದ ಚಿತ್ರಣ ಇಂದು ಬದಲಾಗಿದೆ. ಸುಂದರಬನ ಜಿಲ್ಲೆಯ ಸಹ ಸೇವಾ ಪ್ರಮುಖ್ ಸೃಜನ್ ಹಜಾರೆಯವರ ಪ್ರಯತ್ನಗಳು ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿದೆ. ಅತ್ಯಂತ ಹಿಂದುಳಿದ ಈ ಗ್ರಾಮದಲ್ಲಿ ಸೇವಾಕಾರ್ಯಗಳನ್ನು ಪ್ರಾರಂಭಿಸಲು ಅವರು ಸ್ವತಃ ಹೋಮಿಯೋಪತಿ ಪದ್ಧತಿಯನ್ನು ಕಲಿತರು ಮತ್ತು ಗ್ರಾಮದಲ್ಲಿ ಉಚಿತ ಹೋಮಿಯೊಪತಿ ಚಿಕಿತ್ಸಾಲಯವನ್ನು ಸ್ಥಾಪಸಿದರು.

ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಖ್ಯಾತಿಯನ್ನು ಪಡೆದಿರುವ ಹೋಮಿಯೋಪತಿ ಚಿಕಿತ್ಸೆ ನೀಡುವ ಡಾಕ್ಟರ್ ಗೋಪಾಲ್ ಜೀಯವರೂ ತಿಂಗಳಿಗೊಮ್ಮೆ ಇಲ್ಲಿಗೆ ಬಂದು ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಾರೆ. ಮಾ ಅನ್ನಪೂರ್ಣ ವಿಕಾಸ ಸಮಿತಿಯ ಮೂಲಕ ಇಲ್ಲಿಯ ಭಗಿನಿ ಶಿಶು ಸಂಸ್ಕಾರಕೇಂದ್ರ, ಗ್ರಂಥಾಲಯ, ಭಜನಾ ಮಂಡಳಿ ಹಾಗು ಎರೆಹುಳು ಗೊಬ್ಬರ ತಯಾರಿಕಾ ಪ್ರಶಿಕ್ಷಣ ಕೇಂದ್ರವನ್ನು ನಡೆಸಲಾಗುತ್ತಿದೆ. ಕೇವಲ 800 ಜನಸಂಖ್ಯೆ ಇರುವ ಈ ಸಣ್ಣ ಗ್ರಾಮದಲ್ಲಿ ಇಂದು ಸ್ವಯಂಸೇವಕರ ಪ್ರೇರಣೆ ಹಾಗೂ ಗ್ರಾಮ ಪಂಚಾಯತಿಯ ಸಹಾಯದಿಂದ 250 ಕುಟುಂಬಗಳು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡು ಮಾದರಿಯಾಗಿದ್ದಾರೆ.

929 Views
अगली कहानी