नियमित अपडेट के लिए सब्सक्राईब करें।
5 mins read
ದಕ್ಷಿಣ
ಎಂಟನೇ ತರಗತಿ ಅಂದರೆ 13-14ರ ವಯಸ್ಸು. ಈ ಸಮಯ ಹದಿಹರೆಯದ ವಯಸ್ಸಿನ ಮಕ್ಕಳು ತಮ್ಮ ಬದುಕಿನ ಪಾಠಗಳನ್ನು ಕಲಿಯಲು ಆರಂಭಿಸುವ ಸಮಯ. ಇಂತಹ ಪರಿಪಕ್ವವಲ್ಲದ ವಯಸ್ಸಿನಲ್ಲಿ ನಾಲ್ಕು ಹುಡುಗರು ತಮ್ಮ ಸಹಪಾಠಿ ಮೋನುವಿಗೆ ಶಾಲೆಯ ಸಮೀಪದ ಹೊಲವೊಂದರಲ್ಲಿ ಒಡೆದ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದರು. ಗಾಜಿನ ತುಂಡು ಹೊಟ್ಟೆಗೆ ಪ್ರವೇಶಿಸಿದ ನಂತರವೂ ಮೋನು ಬದುಕಿ ಉಳಿದ ಅದೃಷ್ಟಶಾಲಿ.ಆದರೆ 10 ಸೆಪ್ಟೆಂಬರ್, 2012 ರಂದು ಈ ನಾಲ್ಕು ಹುಡುಗರಿಗೆ ಜೀವನದ ಎಲ್ಲಾ ಬಾಗಿಲುಗಳು ಮುಚ್ಚಲ್ಪಟ್ಟವು. ಪುಣೆಯ ಮುನ್ಶಿ ತಾಲೂಕಿನ ಪಿರಂಗುಟ್ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯು ಈ ಘಟನೆಯ ನಂತರ ನಾಲ್ವರನ್ನು ಶಾಲೆಯಿಂದ ಹೊರಹಾಕಿತು.ಎರಡು ವರ್ಷಗಳ ಕಾಲ ಬಾಲ ಅಪರಾಧಿ ಜೈಲಿನಲ್ಲಿದ್ದ ಇವರು ಪಿರಂಗುಟ್‌ಗೆ ಹಿಂದಿರುಗಿದಾಗ, ಹಣೆಯ ಮೇಲೆ ಅಪರಾಧಿ ಎಂಬ ಕಳಂಕ ಅಂಟಿಕೊಂಡಿತ್ತು. ಹಳ್ಳಿಯ ಜನರ ದ್ವೇಷ ಹಾಗೂ ನಿರ್ಲಕ್ಷವು ಇವರನ್ನು ಮತ್ತೆ ಅಪರಾಧದ ಮಡುವಿನಲ್ಲಿ ಮುಳುಗಿಸುತ್ತಿತ್ತು. ಆದರೆ ಹಿಮ್ಮತ್ ಎಂಬ ಶಾಲೆಯು ಇವರ ಕೈ ಹಿಡಿದು ಸರಿಯಾದ ಮಾರ್ಗವನ್ನು ತೋರಿಸಿತು.ಇಂತಹ ವಿಶಿಷ್ಟವಾದ "ಹಿಮ್ಮತ್ ವಿದ್ಯಾಲಯ" ವನ್ನು ಪುಣೆಯ ಮುನ್ಶೀ ತಾಲೂಕಿನ ಅಂಬಡವೆಟ್ ಎಂಬ ಗ್ರಾಮದಲ್ಲಿ, ಪುಣೆಯ ರಾಷ್ಟ್ರೀಯ ಸರ್ವತೋಮುಖ ಗ್ರಾಮ ವಿಕಾಸ ಸಂಸ್ಥೆಯು ನಡೆಸುತ್ತಿದೆ.
ಅಪರಾಧ, ಮಾದಕ ವ್ಯಸನ ಮತ್ತಿತರ ದುರಾಭ್ಯಾಸವನ್ನು ಅಂಟಿಸಿಕೊಂಡು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ ಮಕ್ಕಳನ್ನು ಈ ಶಾಲೆಯು ಮತ್ತೆ ಶಿಕ್ಷಣ ನೀಡಿ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುತ್ತದೆ. ಕೆಲವು ಮಕ್ಕಳು 10ರಿಂದ 12ವರ್ಷಗಳ ದೀರ್ಘ ಅಂತರದ ನಂತರ ಮತ್ತೆ ಇಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಾರೆ.ಸಂಘದ ಪಶ್ಚಿಮ ಮಹಾರಾಷ್ಟ್ರ ಪ್ರಾಂತದ ಸೇವಾ ಪ್ರಮುಖರಾದ ಶ್ರೀ ಅನಿಲ್ ವ್ಯಾಸ್ ಮತ್ತು ಸ್ವಯಂಸೇವಕರಾದ ನಿತಿನ್ ಘೋಡ್ಕೆ ಅವರ ಪ್ರಯತ್ನದಿಂದಾಗಿ ಹಿಮ್ಮತ್ ವಿದ್ಯಾಲಯ ಎಂದು ಕರೆಯಲ್ಪಡುವ ಈ ವಿಶಿಷ್ಟ ಶಾಲೆಯು ಜುಲೈ 15, 2012 ರಂದು 8 ಮಕ್ಕಳಿಂದ ಪ್ರಾರಂಭವಾಯಿತು. ಈ ಶಾಲೆಯಲ್ಲಿ ನಡೆಯುವ ಏಕೈಕ ತರಗತಿ ಎಂದರೆ ಅದು ಹತ್ತನೆಯ ತರಗತಿ.
ದೇಶಾದ್ಯಂತ ಇರುವ ಬೇರೆ ಬೇರೆ ಶಿಕ್ಷಣ ಬೋರ್ಡಿನಲ್ಲಿ (Education Board) ಓದುತ್ತಿದ್ದ ಮಕ್ಕಳು ಇಲ್ಲಿ ಅಧ್ಯಯನ ಮಾಡುತ್ತಾರೆ. ಇಲ್ಲಿ ಶಿಕ್ಷಣದ ಜೊತೆಗೆ ಮೊಬೈಲ್ ರಿಪೇರಿ, ಡೈರಿ ನಿರ್ವಹಣೆ, ಕೃಷಿ, ವಿದ್ಯುತ್ ಚಾಲಿತ ಯಂತ್ರಗಳ ರಿಪೇರಿಯಂತಹ ಉದ್ಯೋಗ ಆಧಾರಿತ ತರಬೇತಿಗಳನ್ನೂ ನೀಡಲಾಗುತ್ತದೆ.
ಇಲ್ಲಿ ಓದು ಮುಗಿಸಿ ಈಗ ಹಿಂಜೇವಾಡಿ ಐಟಿ ಪಾರ್ಕ್‌ನಲ್ಲಿ ಕೇಟರಿಂಗ್ ಕಂಪನಿಗಳಿಗೆ ಚಪಾತಿಯ ಬೇಡಿಕೆಯನ್ನು ಪೂರೈಸಲು ಗುತ್ತಿಗೆ ಪಡೆದಿರುವವನೆ ಮನೀಶ್ ಅಠಾವಳೆ. (ಹೆಸರು ಬದಲಾಯಿಸಲಾಗಿದೆ) ಅಂದು ಮೋನುವಿನ ಮೇಲೆ ಬಿಯರ್ ಬಾಟಲಿಯಿಂದ ಅತಿ ಹೆಚ್ಚು ಹಲ್ಲೆ ಮಾಡಿದ ಹುಡುಗ.ಪುಣೆಯ ಪ್ರತಿಷ್ಠಿತ ಕುಲಕರ್ಣಿ ಕುಟುಂಬದ ಏಕಮಾತ್ರ ಪುತ್ರ ಸುಶೀಲ್ ಬಗ್ಗೆ ಈಗ ಸಹ್ಯಾದ್ರಿ ಶಾಲೆಯ ಪ್ರಾಂಶುಪಾಲರಿಗೆ ಯಾವುದೇ ದೂರು ಇಲ್ಲ. ಹಲವು ವರ್ಷಗಳ ಹಿಂದೆ, ಸುಶೀಲ್ ಕೋಪಗೊಂಡು ಸಿಗರೇಟ್ ಲೈಟರ್ ನಿಂದ ಶಾಲೆಯ ಪಿಕ್ನಿಕ್ ನಲ್ಲಿ ಇಡೀ ಬಸ್ಸಿಗೆ ಬೆಂಕಿ ಹಚ್ಚಿದ್ದ.
ಇಂದು ಅದೇ ಯುವಕ ನಾಸಿಕ್‌ನ ಹೆಸರಾಂತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಧ್ಯಯನವನ್ನು ಮುಗಿಸುತ್ತಿದ್ದಾನೆ. ಈ ಮಕ್ಕಳಲ್ಲಿ ಉಂಟಾದ ಬದಲಾವಣೆಯ ಶ್ರೇಯಸ್ಸು ಈ ಶಾಲೆಯ ಯೋಗ, ಶಿಸ್ತು ಮತ್ತು ಸಂಸ್ಕಾರಗಳಿಂದ ಕೂಡಿದ ದಿನಚರಿ ಹಾಗು ರಾಷ್ಟ್ರಭಾವದಿಂದ ಕೂಡಿರುವ ಶಿಕ್ಷಣ ವ್ಯವಸ್ಥೆಗೆ ಸಲ್ಲುತ್ತದೆ ಎಂದು ಶಾಲೆಯ ಪ್ರಾರಂಭದಿಂದಲೂ ಇಲ್ಲಿ ಮರಾಠಿ ವಿಷಯಗಳನ್ನು ಕಲಿಸುತ್ತಿರುವ ಪ್ರದೀಪ್ ಪಾಟೀಲ್ ಹೇಳುತ್ತಾರೆ. ಹಾಗೆಯೆ ಇಲ್ಲಿ ನಿಯಮಿತ ವ್ಯಾಯಾಮ ಮತ್ತು ಯೋಗದ ಜೊತೆಗೆ ಮಕ್ಕಳನ್ನು ಹೊಲಗಳಲ್ಲೂ ಕೆಲಸ ಮಾಡಿಸಲಾಗುತ್ತದೆ, ಪುಸ್ತಕದ ಅಧ್ಯಯನಕ್ಕಿಂತ ನಾವು ಔದ್ಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದೂ ಅವರು ಹೇಳುತ್ತಾರೆ.
ಕೈಗಾರಿಕಾ ಅಭಿವೃದ್ಧಿಯಿಂದ ಜೀವನದಲ್ಲಿ ಸಮೃದ್ಧಿಯ ಬಾಗಿಲು ತೆರೆಯುತ್ತದೆ ಎಂಬುದು ನಿಜ, ಆದರೆ ವಿಪರ್ಯಾಸವೆಂದರೆ, ಕೆಲವೊಮ್ಮೆ ಅದು ಗುಟ್ಟಿನಲ್ಲಿ ವಿನಾಶದ ಹಾದಿಗೆ ತಳ್ಳುತ್ತದೆ. ಪುಣೆಯಿಂದ 40 ಕಿ.ಮೀ. ದೂರದ ಮುನ್ಶಿ ತಾಲೂಕಿನಲ್ಲಿ ಅನೇಕ ಕಾರ್ಖಾನೆಗಳು ತೆರೆದಾಗ, ಇಲ್ಲಿನ ಭೂಮಿಯ ಬೆಲೆ ಗಗನಕ್ಕೇರಿತು. ತಮ್ಮ ಭೂಮಿಯನ್ನು ಮಾರಿ ಹೊಸದಾಗಿ ಲಕ್ಷಾಧಿಪತಿಗಳಾದ ಜನರಿಗೆ ತಮ್ಮನ್ನು ಅಥವಾ ತಮ್ಮ ಮಕ್ಕಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಹದಿಹರೆಯದವರು ಅನೇಕ ರೀತಿಯ ಮಾದಕ ವ್ಯಸನಕ್ಕೆ ಬಲಿಯಾದ ನಂತರ ಅಪರಾಧದ ಹಾದಿ ಹಿಡಿದರು.
2011-12ರಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ, ಮುನ್ಶಿ ತಾಲೂಕು ಬಾಲಾಪರಾಧಗಳಲ್ಲಿ ಮಹಾರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆಯಿತು. ಮತ್ತೊಂದೆಡೆ, ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ, ಎಂಟನೇ ತರಗತಿಯ ತನಕ ಯಾವುದೇ ಮಗುವನ್ನು ಅನುತ್ತೀರ್ಣಗೊಳಿಸಬಾರದು ಎಂಬ ನೀತಿಯಿಂದಾಗಿ, ಒಂಬತ್ತನೇ ತರಗತಿಯಲ್ಲಿ ಓದಿನಲ್ಲಿ ಹಿಂದೆ ಬಿದ್ದು ಶಾಲೆಗೆ ಹೊರೆಯಾಗಿ ಅನುತ್ತೀರ್ಣಗೊಂಡ ಮಕ್ಕಳ ಕೈ ಹಿಡಿದಿದ್ದು ಹಿಮ್ಮತ್ ಶಾಲೆ. ಒಂಬತ್ತನೇ ತರಗತಿಯಲ್ಲಿ ಸರಿಯಾಗಿ ಓದಲು ಸಹ ತಿಳಿಯದ ಕೆಲವು ಮಕ್ಕಳು ಇಲ್ಲಿಗೆ ಬರುತ್ತಾರೆ ಎಂದು ಶಾಲೆಯ ನಿರ್ದೇಶಕ ಯೋಗೇಶ್ ಕೋಳವಣಕರ್ ಹೇಳುತ್ತಾರೆ. ಕೆಲವರು 10 ವರ್ಷಗಳ ವಿದ್ಯಾಭ್ಯಾಸವನ್ನು ತೊರೆದ ನಂತರ ಇಲ್ಲಿಗೆ ಬರುತ್ತಾರೆ. ಅಂತಹ ಮಕ್ಕಳು ತಮ್ಮ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಲು ಎರಡು ಮೂರು ವರ್ಷಗಳು ಬೇಕಾಗುತ್ತದೆ.
नियमित अपडेट के लिए सब्सक्राईब करें।