सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಹಿಮಾಲಯದ ಪುತ್ರ ಡಾ.ನಿತ್ಯಾನಂದ.

ಶ್ರೀ ಸುಬ್ರಾಯ ನಂದೋಡಿ | ದಕ್ಷಿಣ

parivartan-img

ದೇವರು ಉತ್ತರಾಖಂಡಕ್ಕೆ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ನೀಡಿದ್ದಾನೆ.  ಪರ್ವತಗಳ ರಾಣಿ ಮಸೂರಿಯನ್ನು ನೋಡಲು ಲಕ್ಷಗಟ್ಟಲೆ ಪ್ರವಾಸಿಗರು ಆಕರ್ಷಿತರಾಗಿ ಬರುತ್ತಿರುತ್ತಾರೆ. ಆದರೆ ಇದರ ಸೌಂದರ್ಯದಿಂದ ಪರ್ವತವಾಸಿಗಳ ಜೀವನದ ಕಷ್ಟಗಳು ಕಡಿಮೆಯಾಗುವುದಿಲ್ಲ. ಪರ್ವತವಾಸಿಗಳ ಇಂತಹ ಕಷ್ಟವನ್ನು ಮನಸಾರೆ ದೂರ ಮಾಡಲು ಜೀವನಪರ್ಯಂತ ಹೋರಾಟವನ್ನು ಮಾಡಿದವರು ಯಾರಾದರೂ ಇದ್ದರೆ ಅವರು ಪ್ರೊಫೆಸರ್ ನಿತ್ಯಾನಂದ. ಡೆಹರಾಡೂನ್ ಡಿ.ಬಿ.ಎಸ್. ಕಾಲೇಜಿನ ಭೂಗೋಳ ಶಾಸ್ತ್ರ ಪ್ರೊಫೆಸರ್ ಆಗಿದ್ದ ನಿತ್ಯಾನಂದರ ಸಂಪೂರ್ಣ ಜೀವನ ಸೇವೆ, ಸಮರ್ಪಣೆ ಮತ್ತು ತ್ಯಾಗದ ಅತ್ಯಮೂಲ್ಯ ದೃಷ್ಟಾಂತವಾಗಿದೆ.


1991ರ ದಸರಾದ ಒಂದು ದಿನ ಗಢವಾಲಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪ ಪ್ರಭಾವಿತ ಪರಿವಾರವನ್ನು ಆತ್ಮನಿರ್ಭರ ಮಾಡಲು ಹಾಗೂ ಅವರ ಮಕ್ಕಳಿಗೆ ಕಲಿಸಲು ನಿತ್ಯಾನಂದರು ಮನೇರಿಯನ್ನು ಕೇಂದ್ರವಾಗಿರಿಸಿ ಸಂಘದ ಸ್ವಯಂಸೇವಕರ ಮೂಲಕ 50 ಗ್ರಾಮಗಳಲ್ಲಿ ಆರಂಭಿಸಲಾದ ಸೇವಾಕಾರ್ಯಗಳ ಮಾರ್ಗದರ್ಶನ ಮಾಡಿದರು. 1975 ರಲ್ಲಿ ಭಾಗಶಃ ಪಾರ್ಶ್ವವಾಯು ಪೀಡಿತರಾದ ಈ ಕರ್ಮಯೋಗಿ ಡಾಕ್ಟರ್ ಸಲಹೆಯನ್ನು ಕಡೆಗಣಿಸಿ ಪರ್ವತಗಳಲ್ಲಿ ತಮ್ಮ ಪ್ರವಾಸವನ್ನು ಮುಂದುವರಿಸಿದರು.

ಭೂಕಂಪದ ನಂತರ ಸಂತ್ರಸ್ತ ಕುಟುಂಬಗಳಿಗೆ ಪಾತ್ರೆ, ಹಾಸಿಗೆ ಮೊದಲಾದ ಅವಶ್ಯಕ ವಸ್ತುಗಳನ್ನು ಹಂಚಿದರು, ಮಕ್ಕಳಿಗೆ ಕಲಿಸುವುದರ ಹೊರತಾಗಿ 400 ಕ್ಕೂ ಅಧಿಕ ಪರಿವಾರಗಳಿಗೆ ಭೂಕಂಪವನ್ನು ತಡೆಯಬಲ್ಲ ಮನೆಗಳನ್ನು ನಿರ್ಮಿಸಿಕೊಟ್ಟರು.1945 ರಿಂದ ತಮ್ಮ ಕೊನೆಯುಸಿರಿರುವ ತನಕ ಸಂಘದ ಪೂರ್ಣಕಾಲೀನ ಕಾರ್ಯಕರ್ತರಾಗಿದ್ದರು. (ಹಲವಾರು ವರ್ಷಗಳು ಪ್ರಾಂತ ಕಾರ್ಯವಾಹರಾಗಿದ್ದರು) ಉತ್ತರಾಂಚಲ ವಿಪತ್ತು ಸಂತ್ರಸ್ತ ಪರಿಹಾರ ಸಮಿತಿಯನ್ನು ರಚಿಸಿದ ಶ್ರೇಯಸ್ಸು ಡಾ.ನಿತ್ಯಾನಂದರಿಗೆ ಸಲ್ಲುತ್ತದೆ. ಈ ಸಮಿತಿಯು 14 ವರ್ಷಗಳಿಂದ ದೇಶದ ಯಾವುದೇ ಭಾಗದಲ್ಲಿ ವಿಪತ್ತು ಸಂಭವಿಸಿದರೂ ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದೆ.


ನಿತ್ಯಾನಂದಜೀಯವರ ಸಂಪೂರ್ಣ ಜೀವನ ಸಂಘ ಕಾರ್ಯದ ಪ್ರತಿಮೂರ್ತಿ. 9 ಫೆಬ್ರವರಿ 1926ರಲ್ಲಿ ರೈಲ್ವೇ ಕಾರ್ಮಿಕರಾದ ಶ್ಯೋವರಣಜೀಯವರ ಮನೆಯಲ್ಲಿ ಮೂವರು ಹುಡುಗಿಯರ ನಂತರ ಜನಿಸಿದ ಈ ಬಾಲಕ ಇಡೀ ಕುಟುಂಬದ ವಂಶ ಬೆಳಗುವನೆಂಬ ಆಸೆ ಇತ್ತು. ಆದರೆ ಅವರು ಮಾತ್ರ ಬೇರಾವುದೋ ಮಣ್ಣಿನಲ್ಲಿ ತಯಾರಾದಂತಿದ್ದರು. ಅವರು ಜೀವನಪೂರ್ತಿ ಅವಿವಾಹಿತರಾಗಿದ್ದು ಸೇವಾ ಮಾರ್ಗದಲ್ಲಿ ಸಾಗುವ ಹಾದಿಯನ್ನು ಆಯ್ಕೆ ಮಾಡಿಕೊಂಡರು. ನಿತ್ಯಾನಂದಜಿಯವರಿಗೆ ಬಡ ಮಕ್ಕಳ ಭವಿಷ್ಯದ ಚಿಂತೆ ಹೆಚ್ಚಾಗಿ ಕಾಡುತ್ತಿತ್ತು. ಅದೇರೀತಿ ಹಿಂದುಳಿದ ಮಕ್ಕಳ ಕಲಿಕೆಯನ್ನು ಮುಂದುವರಿಸುವ ಮತ್ತು ಅವರನ್ನು ಮುಂದೆ ತರುವ ಸಲುವಾಗಿ ನಿತ್ಯಾನಂದಜಿಯವರು ಮನೇರಿಯ ನಂತರ ಉತ್ತರ ಕಾಶಿಯ ಲಕ್ಷ್ಮೇಶ್ವರ, ಡೆಹರಾಡೂನ್ ಜಿಲ್ಲೆಯ ಮಾಗಟಿ ಪೋಖರಿ, ಪಾಟಿಯಾ ಮತ್ತು ಲಟೇರಿಯಲ್ಲಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದರು. ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಈಗ ಯಶಸ್ಸಿನ ಮಾರ್ಗದಲ್ಲಿ ಮುಂದುವರಿಯುತ್ತಿರುವರು.

ಹಿಮಾಲಯದ ಪುತ್ರ ಎಂದು ಕರೆಯಲ್ಪಡುವ ನಿತ್ಯಾನಂದಜಿಯವರು ನಿಜವಾಗಿಯೂ ಆಧುನಿಕ ಸಂತರಾಗಿದ್ದರು. ಜೀವನಪೂರ್ತಿ ನೌಕರಿ ಮಾಡಿದ ಈ ಪ್ರೊಫೆಸರ್ ತನಗೆ ಸ್ವಂತ ಮನೆ ಮಾಡಿಕೊಳ್ಳಲೂ ಇಲ್ಲ, ತನಗೋಸ್ಕರ ಹಣ ಇಟ್ಟುಕೊಳ್ಳಲೂ ಇಲ್ಲ. ಎಲ್ಲಿಯವರೆಗೆ ತಾಯಿ ಜೀವಂತವಿದ್ದರೋ ಅಲ್ಲಿಯವರೆಗೆ ಒಬ್ಬ ಜವಾಬ್ದಾರಿಯುತ ಮಗನ ಸ್ಥಾನವನ್ನು ನಿರ್ವಹಿಸಿದರು. ತಾಯಿಯ ನಿಧನದ ನಂತರ ತಾಯಿಯ ಹೆಸರಿನಲ್ಲಿ ಶ್ರೀಮತಿ ಭಗವತಿ ದೇವಿ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿ ವೇತನವನ್ನು ಆರಂಭಿಸಿದರು. ಈ ಟ್ರಸ್ಟಿನ ಮೂಲಕ ಪ್ರತಿವರ್ಷ 40 ಮೇಧಾವಿ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.


ಉತ್ತರಾಖಂಡ್ ಚಳವಳಿಯು ಯಾವಾಗ ನಕ್ಸಲೀಯರ ಹಿಡಿತಕ್ಕೆ ಹೋಗಲಾರಂಭಿಸಿತೋ ಆಗ ನಿತ್ಯಾನಂದಜಿಯವರು ಅದನ್ನು ರಾಷ್ಟ್ರವಾದದ ಕಡೆಗೆ ತಿರುಗಿಸಿ ಪ್ರತ್ಯೇಕ ಉತ್ತರಾಂಚಲ ರಚನೆಯ ಬೇಡಿಕೆಯನ್ನು ಮುಂದಿಟ್ಟರು. ಪ್ರೊಫೆಸರ್ ನಿತ್ಯಾನಂದಜಿಯವರು ಗ್ರಾಮ ವಿಕಾಸ ಕಾರ್ಯಗಳಿಗೂ ಹೆಸರಾಗಿದ್ದರು. ಅಲ್ಮೋಡಾದ ಪಟಿಯಾ, ಥೇಯಾ, ಟಿಹರೀಯ ಭಿಗುನ್ ಹಾಗೂ ಡೆಹರಾಡೂನಿನ ಪೋಖರಿಯನ್ನು ಸೇರಿಸಿ 50 ಆದರ್ಶ ಗ್ರಾಮಗಳ ಕನಸನ್ನು ನನಸಾಗಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು. ಇದಕ್ಕಾಗಿ ಅವರು ತಮ್ಮ ವಿದ್ಯಾರ್ಥಿಗಳನ್ನು ಸೇವಾಕಾರ್ಯದಲ್ಲಿ ತೊಡಗಿಸಿದರು. ಕಲ್ಕತಾದ ಬಡಾಬಜಾರಿನ ಕುಮಾರ್ ಪುಸ್ತಕಾಲಯ ಸಮಿತಿ ಮತ್ತು ಬನಾರಸಿನ ಭಾವೂರಾವ್ ದೇವರಸ್ ಸಂಸ್ಥೆಯು ಅವರ ಸೇವಾ ಕಾರ್ಯಕ್ಕಾಗಿಯೇ ಸನ್ಮಾನಿಸಿ ನೀಡಿದ ಪ್ರಶಸ್ತಿಗಳನ್ನು ಅವರು ಸೇವಾ ಕಾರ್ಯಗಳಿಗಾಗಿಯೇ ಕೊಟ್ಟು ಬಿಟ್ಟರು.

ಇತಿಹಾಸ ಮತ್ತು ಭೂಗೋಲದ ಅನೇಕ ಪುಸ್ತಕಗಳನ್ನು ರಚಿಸಿದ ನಿತ್ಯಾನಂದಜಿಯವರು ಹಿಮಾಲಯದ ಕುರಿತಾದ ತಮ್ಮ ಸಂಶೋಧನೆಗೂ ಹೆಸರುವಾಸಿಯಾಗಿದ್ದಾರೆ. ಅವರ ಹೆಸರಿನಲ್ಲಿ ಡಾಕ್ಟರ್ ನಿತ್ಯಾನಂದ ಹಿಮಾಲಯ ಸಂಶೋಧನೆ ಹಾಗೂ ಅಧ್ಯಯನ ಕೇಂದ್ರ ಎಂಬ ಹೆಸರಿನ ವಿಶ್ವವಿದ್ಯಾಲಯವು ಡೆಹರಾಡೂನ್'ನಲ್ಲಿ ನಿರ್ಮಾಣವಾಗುತ್ತಿದೆ. ಈ ಆಧುನಿಕ ಸಂತರು 8 ಜನವರಿ 2016 ರಲ್ಲಿ ಡೆಹರಾಡೂನ್ ಸಂಘ ಕಾರ್ಯಾಲಯದಲ್ಲಿ ಕೊನೆಯುಸಿರೆಳೆದರು. ಅವರ ಜೊತೆಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿರುವ ಸಂಘದ ಜ್ಯೇಷ್ಠ ಪ್ರಚಾರಕರೂ ಮತ್ತು ವಿಶ್ವಸಂವಾದ ಕೇಂದ್ರ ಡೆಹರಾಡೂನ್ ನಿರ್ದೇಶಕರೂ ಆಗಿರುವ ವಿಜಯ್'ಜೀಯವರ ಮಾತುಗಳಲ್ಲಿ ಹೇಳುವುದಾದರೆ ಅವರು ಆಧುನಿಕ ದಧೀಚಿಯಾಗಿದ್ದರು, ಅವರು ತಮ್ಮ ದೇಹವನ್ನು ದಂಡಿಸಿ ಉತ್ತರಾಖಂಡದ ಘಾಟಿ ಪ್ರದೇಶಗಳಲ್ಲಿ ಸೇವಾ ಕಾರ್ಯದ ಮಾರ್ಗವನ್ನು ಸುಗಮಗೊಳಿಸಿದರು.

1219 Views
अगली कहानी