सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಜೀವನವನ್ನು ಗೆದ್ದವರು.

ದಕ್ಷಿಣ

parivartan-img

ದೂರವಾಣಿಯಲ್ಲಿ ದನಿಯೂ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ ಮತ್ತು ಕೃಷ್ಣಮಹಾದಿಕರಿಗೆ ಆ ಬಂಗಾಲಿ ಬಾಬು ಯಾರು ಎಂಬುದೇ ಅಂದಾಜಾಗುತ್ತಿರಲಿಲ್ಲ. ಸಿಲಿಗುಡಿಯ ಯಾರೋ ವಿಕಾಸ ಚಕ್ರವರ್ತಿ ತಮ್ಮ ಮಗನ ವಿವಾಹಕ್ಕೆ ನನಗೇಕೆ ವಿಮಾನ ಟಿಕೆಟ್ ಕಳುಹಿಸಿದ್ದಾರೆ ಎಂಬ ಗೊಂದಲ ಅವರದು!

ಅದು ಸುಮಾರು 20 ವರ್ಷಗಳ ಹಿಂದಿನ ಕಥೆ. ಅಂದು ಇದೇ ವಿಕಾಸ ಚಕ್ರವರ್ತಿ ತಮ್ಮ ಮಗನನ್ನು ಉಲ್ಬಣಿಸಿದ್ದ ಕಾಯಿಲೆಯ ಚಿಕಿತ್ಸೆಗಾಗಿ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಕರೆತಂದಿದ್ದರು. ಆಗ ಅವರ ಕುಟುಂಬದವರೆಲ್ಲಾ ನಾನಾ ಪಾಲ್ಕರ್ ಸ್ಮೃತಿ ಸಮಿತಿಯ ರುಗ್ಣಸೇವಾ ಸದನದಲ್ಲಿ ಉಳಿದುಕೊಂಡಿದ್ದರು. ಆಗ ಆ ಸಮಿತಿಯ ಪ್ರಬಂಧಕರಾಗಿದ್ದವರು ಸಂಘದ ಸ್ವಯಂಸೇವಕ ಕೃಷ್ಣಮಹಾದಿಕ್.


ಅಲ್ಲಿಗೆ ಬರುತ್ತಿದ್ದ ನೂರಾರು ಕುಟುಂಬಗಳಂತೆಯೇ ಈ ಬಂಗಾಲಿ ಮಧ್ಯಮ ವರ್ಗದ ಕುಟುಂಬದವರಿಗೂ ಉಚಿತ ಊಟ ಮತ್ತು ವಸತಿಯ ಜೊತೆಯಲ್ಲಿ ಉಳಿದೆಲ್ಲ ತರಹದ ಸಹಾಯವೂ ದೊರೆತಿತ್ತು. 5 ವರ್ಷ ವಯಸ್ಸಿನ ವಿದುರನ್  ಗಂಭೀರವಾದ ರಕ್ತದ ಕ್ಯಾನ್ಸರಿನಿಂದ ಬಳಲುತ್ತಿದ್ದ. ಬಳಲುವವರಲ್ಲಿ ಲಕ್ಷಕ್ಕೆ ಒಬ್ಬರು ಮಾತ್ರ ಬದುಕುಳಿಯುವ ಸಾಧ್ಯತೆ ಇರುವ ಕುಖ್ಯಾತಿ ಹೊಂದಿದ್ದ ಈ ಹೆಮ್ಮಾರಿಯನ್ನು ಹೊಡೆದೋಡಿಸಲು ಬೋನ್ ಮ್ಯಾರೋ ಟ್ರಾನ್ಸ್ ಪ್ಲ್ಯಾಂಟೇಶನ್ ಅನಿವಾರ್ಯವಿತ್ತು. 1997ರಲ್ಲಿ ವೈದ್ಯರು ಹೇಳಿದ್ದ 13 ಲಕ್ಷ ರೂಪಾಯಿಗಳನ್ನು ಹೊಂದಿಸುವುದು ಆ ಕುಟುಂಬದ ಕಲ್ಪನೆಗೂ ಮೀರಿದ್ದಾಗಿತ್ತು. ಆಗ ಮುಂಬಯಿಯ ನಾನಾ ಪಾಲ್ಕರ್ ಸ್ಮೃತಿ ಸಮಿತಿಯು ಈ ಪರಿವಾರಕ್ಕೆ  ಸಹಾಯ ಮಾಡುವ ಹೊಣೆ ಹೊತ್ತಿತ್ತು. 


ಇಂದು IIT ಯಿಂದ ಇಂಜಿನಿಯರ್ ಪದವಿ ಪಡೆದಿರುವ ವಿದುರನ್ ತನಗೆ ಪುನರ್ಜನ್ಮ ನೀಡಿದ್ದ ಕೃಷ್ಣ ಚಾಚಾರನ್ನು ಮರೆತಿರಲಿಲ್ಲ. ಅದಕ್ಕೆಂದೇ, ವಿಕಾಸ ಚಕ್ರವರ್ತಿಯವರು ತಮ್ಮ ಮಗನ ವಿವಾಹದ ಮೊದಲ ಆಮಂತ್ರಣ  ಪತ್ರಿಕೆಯನ್ನು ದೇವರ ಮುಂದಿಡದೇ, ಸಮಿತಿಯ ಕಾರ್ಯಕರ್ತರ ಮುಂದಿರಿಸಿದ್ದರು. ವಿದುರನ್ ತರಹದ ಅದೆಷ್ಟೋ ರೋಗಿಗಳು ಕ್ಯಾನ್ಸರಿನಂತಹ ಭೀಕರ ಖಾಯಿಲೆಯ ಚಿಕಿತ್ಸೆಗಾಗಿ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಬಂದಾಗಲೆಲ್ಲಾ, ನಾನಾ ಪಾಲ್ಕರ್ ರುಗ್ಣ ಸೇವಾ ಸದನವೇ ಅವರಿಗೆಲ್ಲಾ ಮನೆ ಹಾಗೂ ಸಮಿತಿಯ ಸದಸ್ಯರೇ ಅವರ ಬಂಧುಗಳು. ರೋಗಿಗಳಿಗಾಗಿ ಮತ್ತು ಅವರನ್ನು ನೋಡಿಕೊಳ್ಳುವವರಿಗಾಗಿ ಒಂದು ತಿಂಗಳವರೆಗೆ 5 ರೂಪಾಯಿಯ ತಿಂಡಿ ಹಾಗೂ 10 ರೂಪಾಯಿಯ ಊಟ ಮಾತ್ರವಲ್ಲದೆ ಉಚಿತ ವಸತಿ ಸೌಲಭ್ಯವನ್ನೂ ಸಮಿತಿ ಕಲ್ಪಿಸಿತ್ತು. 1968ರಲ್ಲಿ ಕೆಲವೇ ಕೊಠಡಿಗಳಿಂದ ಪ್ರಾರಂಭವಾದ ಈ ಸಮಿತಿ ಇಂದು ಹತ್ತು ಅಂತಸ್ತಿನ ಕಟ್ಟಡವಾಗಿ ಬೆಳೆದಿದೆ. ಇದರಲ್ಲಿ ಇಂದು ಡಯಾಲಿಸಿಸ್ ಪ್ಯಾಥಾಲಜಿ ಲ್ಯಾಬ್, 14 ಡಯಾಲಿಸಿಸ್ ಯಂತ್ರಗಳು, ಟಿಬಿ ಚಿಕಿತ್ಸಾ ಕೇಂದ್ರ, ಯೋಗ ಪ್ರಶಿಕ್ಷಣ ಕೇಂದ್ರ, ಆಂಬ್ಯುಲೆನ್ಸ್ ಸೇವೆ ಹಾಗೂ ಚಿಕಿತ್ಸಾ ಕೇಂದ್ರಗಳೆಲ್ಲ ಸುಗಮವಾಗಿ ಕಾರ್ಯನಿರ್ವಹಿಸುತ್ತಿವೆ.




ಅಂದು ತಂದೆ ತಾಯಿಯ ಒಬ್ಬನೇ ಮಗನಾದ ವಿದುರನ್ ಚಕ್ರವರ್ತಿಯ ಚಿಕಿತ್ಸೆಗಾಗಿ, ಬೋನ್ ಮ್ಯಾರೋವನ್ನು ಕೇವಲ ಒಡಹುಟ್ಟಿದವರಿಂದಲೇ ಪಡೆದು ವಿದುರನ್ ಗೆ ಟ್ರಾನ್ಸ್ ಪ್ಲ್ಯಾಂಟ್ ಮಾಡಬೇಕಾಗಿತ್ತು. ಆಗ ವಿದುರನ್ ನ ತಾಯಿಗೆ ಸಮಿತಿಯ ಸದನವೇ ತವರು ಮನೆಯಂತಾಗಿ ಒಂಭತ್ತು ತಿಂಗಳ ಬಳಿಕ ಆಕೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು. ನಂತರವೇ ವಿದುರನ್ ನ  ಚಿಕಿತ್ಸೆ ಪೂರ್ಣಗೊಂಡಿದ್ದು!  ನಂತರದ ಸಮಸ್ಯೆ ಚಿಕಿತ್ಸೆಯನ್ನು ಮುಂದುವರಿಸಲು ಆಗುವ ಖರ್ಚಿನದಾಗಿತ್ತು. ಆಗ ಸಮಿತಿಯು ಮುಂದೆ ಬಂದು ಕೆಲ ದಾನಿಗಳ ಮುಖಾಂತರ ಒದಗಿಸಿದ 2 ಲಕ್ಷ ರೂಪಾಯಿಗಳ ಸಹಾಯದೊಂದಿಗೆ ಭಾರತ  ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯವರ 4 ಲಕ್ಷ ರೂಪಾಯಿಗಳ ಉದಾರ ಧನಸಹಾಯವೂ ಬಂದು ಸೇರಿತು. 


ಇಂದು ಬೆಂಗಳೂರಿನಲ್ಲಿ ಎಸೆಂಚರ್ ಕಂಪನಿಯಲ್ಲಿ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ವಿದುರನ್ ಚಕ್ರವರ್ತಿಯ ಬಾಲ್ಯದಲ್ಲಿ ನಡೆದ ಯಶಸ್ವೀ ಶಸ್ತ್ರಚಿಕಿತ್ಸೆಯನ್ನು ವೈದ್ಯಕೀಯ ಪವಾಡವೆಂಬಂತೆ ಇಂದಿಗೂ ಅಮೆರಿಕದ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗುತ್ತಿದೆ. ಇದೆಲ್ಲಾ ಕೇವಲ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯರ ಪರಿಶ್ರಮದಿಂದ ಮಾತ್ರವಲ್ಲದೆ ಸಮಿತಿಯ ಕಾರ್ಯಕರ್ತರ ಸ್ನೇಹ, ಸಹಕಾರ ಹಾಗೂ ಹಾರೈಕೆಗಳಿಂದ ಸಾಧ್ಯವಾಯಿತೆಂದು ವಿಕಾಸರು ನಂಬಿದ್ದಾರೆ. ಇಂತಹ ಅದೆಷ್ಟೋ ಮನಮುಟ್ಟುವ ಕಥೆಗಳಿಗೆ ರುಗ್ಣಸೇವಾ ಸದನವು ಕಾರಣವಾಗಿದೆ. ಆರ್.ಎಸ್.ಎಸ್. ಪ್ರಚಾರಕರಾಗಿದ್ದ ಸ್ವರ್ಗೀಯ ನಾನಾ ಪಾಲ್ಕರ್ ರವರ ನೆನಪಲ್ಲಿ ರಚಿತವಾದ ಈ ರುಗ್ಣಸೇವಾ ಸದನವು ಬಡ ರೋಗಿಗಳು ಮತ್ತು ಅವರ ಮನೆಮಂದಿಯ ಪಾಲಿಗೆ ದೇವಾಲಯವೇ ಆಗಿಹೋಗಿದೆ. ಇತರೆಡೆ ಸಾವಿರಾರು ರೂಪಾಯಿಗಳಷ್ಟು ಶುಲ್ಕವಿರುವ ಡಯಾಲಿಸಿಸನ್ನು ಇಲ್ಲಿ ಕೇವಲ 350 ರೂಪಾಯಿಗಳಲ್ಲಿ ಮಾಡಲಾಗುತ್ತಿದೆ. ಅಂತಹ  1,10,000 ಡಯಾಲಿಸಿಸುಗಳನ್ನು ಸದನದ ಡಯಾಲಿಸಿಸ್ ಸೆಂಟರಿನಲ್ಲಿ 2004ರಿಂದ 2017ನೇ ಇಸವಿಯವರೆಗಿನ ಅವಧಿಯಲ್ಲಿ ಮಾಡಲಾಗಿದೆ. ಈ ಸಮಿತಿಯು ಮಾಸಿಕ ಆರೂವರೆ ಲಕ್ಷ ರುಪಾಯಿಗಳನ್ನು ವಿವಿಧ ಚಿಕಿತ್ಸಾ ಕೇಂದ್ರಗಳಲ್ಲಿರುವ ಅನಾರೋಗ್ಯಪೀಡಿತರ ಶಸ್ತ್ರಚಿಕಿತ್ಸೆ ಇತ್ಯಾದಿಗಳಿಗಾಗಿ ವ್ಯಯಿಸುತ್ತಿದೆ. 

ವಾಡಿಯಾ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಶುಲ್ಕರಹಿತ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

 

ಮುಂಬಯಿಯ ಯಾವೊಬ್ಬ ರೋಗಿಯೂ ಚಿಕಿತ್ಸೆಯಿಂದ ವಂಚಿತನಾಗದಿರುವಂಥ ವ್ಯವಸ್ಥೆ ನಿರ್ಮಿಸುವುದು ಈ ಸಮಿತಿಯ ಗುರಿಯಾಗಿದೆ. 


ಸಂಪರ್ಕ- ಕೃಷ್ಣ ಮಹಾದಿಕ್

ಮೊಬೈಲ್- 9969612553

1275 Views
अगली कहानी