नियमित अपडेट के लिए सब्सक्राईब करें।
ದಕ್ಷಿಣ
ದೂರದ ಚೀನಾ ಗಡಿಯಲ್ಲಿ ಹಿಮಾಚ್ಛಾದಿತ ತವಾಂಗ್‌ನಿಂದ 56 ಕಿ.ಮೀ ದೂರದಲ್ಲಿ, ದುರ್ಗಮವಾದ 8000 ಅಡಿ ಎತ್ತರದ ಸ್ಥಳ ಬೊಮ್ಡಿಲಾ. ಮಹಾರಾಷ್ಟ್ರದಿಂದ ಅರುಣಾಚಲಕ್ಕೆ ಸಂಘ ಪ್ರಚಾರಕರಾಗಿ ಬಂದಿದ್ದ ರಾಜೇಶ್ ಜೀ ಅಲ್ಲಿನ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಒಂದು ವಿಚಿತ್ರ ದೃಶ್ಯ ಕಂಡರು. ಹದಿಹರೆಯದ ಸುಮಾರು 70 ರಷ್ಟು ಹುಡುಗರು ಮತ್ತು ಹುಡುಗಿಯರು ಗುಂಪುಗುಂಪಾಗಿ ದುಃಖಾರ್ತರಾಗಿ ಕುಳಿತಿದ್ದರು. ಅವರಲ್ಲಿ ಕೆಲವು ಹುಡುಗಿಯರು ಅಳುತ್ತಲೂ ಇದ್ದರು, ಗಣಿತ ವಿಷಯದಲ್ಲಿನ ಫೇಲಾಗುವ ಭಯವೇ ಈ ಎಲ್ಲಾ ಮುಖಗಳು ಬಾಡಲು ಕಾರಣವೆಂದು ತಿಳಿದು ರಾಜೇಶ್ ಜೀ ಅಚ್ಚರಿಗೊಂಡರು. ಬೋಮ್ದಿಲಾ ಒಂದರಲ್ಲೇ 300 ವಿದ್ಯಾರ್ಥಿಗಳು ಗಣಿತಶಾಸ್ತ್ರದಲ್ಲಿ ಅನುತ್ತೀರ್ಣರಾಗಿದ್ದರು. ಈಗ ಇವರೆಲ್ಲ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಬಯಸಿದ್ದುದೂ ಆತಂಕದ ಸಂಗತಿಯಾಗಿತ್ತು. ಗಣಿತದ ಭಯದ ಕಾರಣದಿಂದ ಇಷ್ಟೊಂದು ಯುವಜನರ ಭವಿಷ್ಯ ವಿನಾಶದಂಚಿನಲ್ಲಿತ್ತು. ಈ ವೇದನೆಯ ಘಟನೆ ಅರುಣಾಚಲ ಸೇವಾಭಾರತಿಗೆ ಸೇವೆಯ ಹೊಸಮಾರ್ಗವನ್ನು ತೋರಿಸಿತು.
ಈ ವಿದ್ಯಾರ್ಥಿಗಳ ಗಣಿತದ ಭಯವನ್ನು ಹೊಡೆದೋಡಿಸುವತ್ತ ಸೀಮಿತ ಅವಧಿಯಲ್ಲಿ ಪೂರ್ತಿ ಸಿಲಬಸ್ ಪೂರೈಸುವಂಥ 70 ದಿನಗಳ ಕ್ರ್ಯಾಶ್ ಕೋರ್ಸ್ ರೂಪಿಸಲಾಯಿತು. ಸಮರ್ಪಣಾಭಾವದ ತರುಣ ಸ್ವಯಂಸೇವಕರು ತುಂಬು ಮನಸ್ಸಿನಿಂದ ದೂರದೂರದ ಊರುಗಳಿಗೆ ಹೋಗಿ ಆಸಕ್ತಿದಾಯಕ ಹಾಗೂ ಸರಳವಾದ ವಿಧಾನಗಳಿಂದ ಗಣಿತ ಪಾಠ ಪ್ರಾರಂಭಿಸಿದರು. 2009ರಲ್ಲಿ ಆರಂಭವಾದ ಈ ಅನನ್ಯ ಪ್ರಯೋಗದಿಂದಲೇ ಇಲ್ಲಿನ ವಿದ್ಯಾರ್ಥಿಗಳ ಗಣಿತದ ಭಯ ದೂರವಾಯಿತಲ್ಲದೆ, 8000 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಪಿ.ಯು.ಸಿ.ಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ಶಿಕ್ಷಣ ಪಡೆದರು. ಇವರಲ್ಲಿ ಬಹುತೇಕರು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ.
ಈಶಾನ್ಯ ಭಾಗದ ಜನಜೀವನ, ಪರಿಸ್ಥಿತಿಗಳನ್ನು ನಮ್ಮಿಂದ ಊಹಿಸಲೂ ಅಸಾಧ್ಯ. ಇಲ್ಲಿ ಬೊಮ್ದಿಲಾದಂತಹ ಅನೇಕ ಹಳ್ಳಿಗಳಿವೆ, ಅಲ್ಲಿ ವರ್ಷಪೂರ್ತಿ ಮೈಕೊರೆಯುವ ಛಳಿ ಮತ್ತು ವರ್ಷಕ್ಕೆ 7 ತಿಂಗಳು ಸತತ ಮಳೆ. ಮರ ಗಿಡಗಳು ಬಾಡುತ್ತವೆ. ಅಷ್ಟೇ ಅಲ್ಲ, ಭತ್ತ ಮತ್ತಿತರ ಆಹಾರ ಧಾನ್ಯಗಳನ್ನು ಬೆಳೆಯುವುದೂ ದುಸ್ತರ. ಚಿಕ್ಕಪುಟ್ಟ ವಸ್ತುಗಳನ್ನು ಖರೀದಿಸಲು ದುರ್ಗಮ ಬೆಟ್ಟಗಳನ್ನು ಏರಿಳಿಯಬೇಕಾಗುತ್ತದೆ. ಬಿದಿರಿನ ಮನೆಗಳಲ್ಲಿ ಅಗ್ಗಿಷ್ಟಿಕೆಯ ಶಾಖದ ಮೂಲಕ ಅಭದ್ರ ಜೀವನವನ್ನು ನಡೆಸುವ ಇಲ್ಲಿನ ಮಕ್ಕಳಿಗಾಗಿ ಸರ್ಕಾರವೇನೋ ಶಾಲೆಗಳನ್ನು ತೆರೆದಿತ್ತು. ಆದರೆ ಅಲ್ಲಿ ಕೆಲವೊಮ್ಮೆ ಶಿಕ್ಷಕರೇ ಬರುತ್ತಿರಲಿಲ್ಲ. ಇನ್ನು ಕೆಲವೊಮ್ಮೆ ವಿದ್ಯಾರ್ಥಿಗಳೇ ಬರುತ್ತಿರಲಿಲ್ಲ. ಇಂತಹ ಕಠಿಣ ಸವಾಲುಗಳ ನಡುವೆ ಅರುಣಾಚಲದ ಸೇವಾಭಾರತಿ, ಈ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮತ್ತು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಪಣ ತೊಟ್ಟಿತು.
ಬಿ.ಟೆಕ್ ಮಾಡಿದ ನಂತರ, ಸೇವಾ ಮನೋಭಾವದ ಯುವಕನೊಬ್ಬ, ಮೊದಲ ಬಾರಿಗೆ ತನ್ನ ಕೆಲಸದಿಂದ 40 ದಿನಗಳ ರಜೆ ತೆಗೆದುಕೊಂಡು, ಪುಣೆಯಿಂದ ಬೊಮ್ದಿಲಾ ಮಕ್ಕಳಿಗೆ ಗಣಿತದ ಕ್ರ್ಯಾಶ್ ಕೋರ್ಸ್ ಮಾಡಲು ಬಂದ. ಆಗ ಅವನಿಗೂ ತಿಳಿದಿರಲಿಲ್ಲ ಈ ಕಾರ್ಯವೇ, ಮುಂದೊಂದು ದಿನ ತನ್ನ ಜೀವನದ ಗುರಿಯಾಗುತ್ತದೆಯೆಂದು! ಸಂಘದ ಈ ನಿಸ್ವಾರ್ಥಿ ಸ್ವಯಂಸೇವಕ ಅರುಣಾಚಲದ ಹಲವು ಕುಗ್ರಾಮಗಳಲ್ಲಿ 2009ರಿಂದ ಇಂದಿಗೂ ಗಣಿತ ಕಲಿಸುತ್ತಿದ್ದಾನೆ. ಪ್ರತಿ ವರ್ಷ 5-8 ಸ್ಥಳಗಳಲ್ಲಿ ತರಗತಿಗಳನ್ನು ನೀಡಿ 70 ದಿನಗಳಲ್ಲಿ ಗಣಿತದ ಪಠ್ಯಕ್ರಮ ಪೂರ್ಣಗೊಳಿಸುತ್ತಿದ್ದಾನೆ.
ಸೇವಾಭಾರತಿಯ ಕರೆಗೆ ಓಗೊಟ್ಟು, ಕೆಲ ಯುವ ಸ್ವಯಂಸೇವಕರು ಬಂದು, 6 ತಿಂಗಳಿನಿಂದ ಒಂದು ವರ್ಷದವರೆಗೆ ಇಲ್ಲಿದ್ದು ಈ ಮಕ್ಕಳ ಕಲಿಕೆಗೆ ಸಹಾಯ ಮಾಡುತ್ತಿದ್ದಾರೆ. ಪುಣೆಯಿಂದ ವಾಸ್ತುಶಿಲ್ಪ ಪದವಿ ಪಡೆದ ಹರ್ಷದಾ, ಬಯೋಮೆಡಿಕಲ್ ಎಂಜಿನಿಯರಿಂಗ್ ಮುಗಿಸಿದ ರಾಧಿಕಾ ಮತ್ತು ಎಂ.ಎಸ್ಸಿ ಮುಗಿಸಿದ ಸ್ನೇಹ ಅವರಂತಹ ಯುವತಿಯರು ಅರುಣಾಚಲದಲ್ಲಿ ಆರು ತಿಂಗಳು ಉಳಿದು ಈ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಈಗಂತೂ ಇಂಗ್ಲಿಷ್ ವ್ಯಾಕರಣ ಮತ್ತು ಎ.ಪಿ.ಎಸ್.ಸಿ ಪರೀಕ್ಷೆಯ ಮಾರ್ಗದರ್ಶನ ನೀಡಲೆಂದು ಹಲವು ತರುಣ ಸ್ವಯಂಸೇವಕರು ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪ್ರಾಂಶುಪಾಲರ ಅನುಮತಿಯಿಂದ ನಡೆಸಲ್ಪಡುವ ಈ ಕೋರ್ಸ್ ಗಳಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ಹಾಗೂ ದೇಶಭಕ್ತ ನಾಗರಿಕರಾಗಲೂ ಪ್ರೇರೇಪಿಸಲ್ಪಡುತ್ತಾರೆ. ವಾರಕ್ಕೊಮ್ಮೆ ದೇಶಭಕ್ತಿಗೀತೆಗಳನ್ನು ಹಾಡಲಾಗುತ್ತದೆ ಮತ್ತು ಮಹಾಪುರುಷರ ಕಥೆಗಳನ್ನೂ ಹೇಳಲಾಗುತ್ತದೆ. ಕಾಲಕಾಲಕ್ಕೆ ಸಂಸ್ಥೆಯ ಪರವಾಗಿ ವೃತ್ತಿ ಸಮಾಲೋಚನಾ ಶಿಬಿರಗಳನ್ನೂ ಆಯೋಜಿಸಲಾಗುತ್ತದೆ. ಇಂಥ ಶಿಬಿರಗಳಿಗೆ ಪ್ರಸಿದ್ಧ ಮತ್ತು ಯಶಸ್ವೀ ವ್ಯಕ್ತಿಗಳನ್ನು ಮಾರ್ಗದರ್ಶನಕ್ಕಾಗಿ ಆಹ್ವಾನಿಸಲಾಗುತ್ತದೆ.
ಅರುಣಾಚಲದ ಸೇವಾಭಾರತಿಯ ಜೊತೆ ಪುಣೆಯ ಜ್ಞಾನಪ್ರಬೋಧಿನಿ ಸಂಸ್ಥೆಯೂ ಈ ಕಾರ್ಯದಲ್ಲಿ ಕೈಜೋಡಿಸಿದೆ. ಹರ್ಷದಾ, ಸ್ನೇಹಾರಂತಹ 450ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಪಡೆದವರು ಅರುಣಾಚಲಕ್ಕೆ ಬಂದು
ಈ ದುರ್ಗಮ ಪರ್ವತ ಪ್ರದೇಶದ ಗಲ್ಲಿ-ಗಲ್ಲಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹರಡುವ ಗುರಿಯೊಂದಿಗೆ ವಿಜ್ಞಾನದ ಪ್ರಯೋಗಗಳ ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತಿದ್ದಾರೆ.
ಸಂಪರ್ಕ- ಶೇಖರ್ ಕೇಲ್ಕರ್
ಮೊಬೈಲ್-09436838330
नियमित अपडेट के लिए सब्सक्राईब करें।