सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಒಂದು ಧಾಮ ಅನೇಕ ಕಾರ್ಯ - ಪಂಡಿತ ದೀನದಯಾಳ ಧಾಮ, ಮಥುರಾ

ರೂಪಶ್ರೀ ನಾಗರಾಜ್ | ಮಥುರಾ | ಉತ್ತರ ಪ್ರದೇಶ

parivartan-img

ಪಂಡಿತ ದೀನದಯಾಳ ಉಪಾಧ್ಯಾಯ ಸ್ಮೃತಿದ್ವಾರ. 

ದೇವಭೂಮಿ ಮಥುರಾದ ಫರಹ ಕ್ಷೇತ್ರದಲ್ಲಿ ಮಹಿಳೆಯರ, ಮಕ್ಕಳ, ಹಲವೊಮ್ಮೆ ಪುರುಷರ ಹೆಗಲುಗಳ ಮೇಲೆ, ತಲೆಯ ಮೇಲೆ, ಕೈಗಳಲ್ಲಿ ಹೊತ್ತುಕೊಂಡ ನಳನಳಿಸುವ ಪಾತ್ರೆಗಳಲ್ಲಿ ಹಲವು ಮೈಲುಗಳ ದೂರದಿಂದ ಸಿಹಿಯಾದ ನೀರು ಗ್ರಾಮಗಳನ್ನು ತಲುಪುತ್ತಿತ್ತು. ನಾಲ್ಕೂ ದಿಕ್ಕುಗಳಲ್ಲಿ ಉಪ್ಪಿನ ನೀರಿದ್ದ ಕಾರಣ, ಸಿಹಿ ನೀರಿನ ಒಂದೊಂದು ಹನಿಯೂ ಎಷ್ಟು ಬೆಲೆಯುಳ್ಳದ್ದಾಗಿತ್ತು ಎಂದರೆ, ಇದೇ ಸಿಹಿ ನೀರು ಹಲವೊಮ್ಮೆ ಪರಸ್ಪರ ಮನಸ್ತಾಪದ ಕಾರಣವೂ ಆಗುತ್ತಿತ್ತು. ಈ ನೀರಿಗೋಸ್ಕರ ಗ್ರಾಮಗಳಲ್ಲಿ ಕೈ ಕೈ ಮಿಲಾಯಿಸಿ ಜಗಳವಾಡುವುದು ಒಂದು ಸಾಮಾನ್ಯ ಸಂಗತಿಯಾಗಿತ್ತು. ಕೃಷಿಯೇ ಅಲ್ಲಿನ ಮುಖ್ಯ ಉದ್ಯೋಗವಾಗಿತ್ತು. ಅದಕ್ಕಾಗಿ ನೀರಿನ ಅಗತ್ಯ ತುಂಬಾ ಇತ್ತು. ರೈತರು ತಮ್ಮ ಹೊಟ್ಟೆಪಾಡಿಗೆ ಸಾಕಾಗುವಷ್ಟು ಗಳಿಸುತ್ತಿದ್ದರು, ಆದರೆ ಅವರು ತಮ್ಮ ಮುಂದಿನ ಪೀಳಿಗೆಯ ಪ್ರಗತಿಗಾಗಿ ದುಡಿದಿಡುವಷ್ಟು ಸಮರ್ಥರಾಗಿರಲಿಲ್ಲ. ವಿಧಿ ಇಲ್ಲದೆ ಕೆಲವು ಪರಿವಾರಗಳು ಕೆಲಸಕ್ಕೋಸ್ಕರ ಅಲ್ಲಿಂದ ಪಲಾಯನವನ್ನೂ ಮಾಡಬೇಕಾಗುತ್ತಿತ್ತು. ಮಕ್ಕಳ ಶಿಕ್ಷಣಕ್ಕೆ ಸರಿಯಾದ ವ್ಯವಸ್ಥೆಯೂ ಇರಲಿಲ್ಲ.

ಆದರೆ ಒಬ್ಬ ಯೋಗಿಯು ಯಾವುದೇ ಭೂಮಿಯಲ್ಲಿ ಜನ್ಮ ತಾಳಿದನಾದರೆ, ಅವನ ತಪಸ್ಸಿನ ಫಲವು ಅನೇಕ ವರ್ಷಗಳವರೆಗೂ ಆ ಭೂಮಿಯ ಜನಮಾನಸಕ್ಕೆ ಪ್ರಾಪ್ತವಾಗುತ್ತದೆ. ಹಾಗೆಯೇ, ಯೋಗಿಯಂತೆ ಬಾಳಿದ ಸಂಘದ ಮುಖ್ಯ ಪ್ರಚಾರಕ ಮತ್ತು ಏಕಾತ್ಮ ಮಾನವದರ್ಶನದ ಪಿತಾಮಹ ಮಾ.ಪಂಡಿತ್ ದೀನದಯಾಳ ಉಪಾಧ್ಯಾಯರ ಜನ್ಮವು ಮಥುರಾದಿಂದ 22 ಕಿಮೀ ದೂರದ ಫರಹ ಕ್ಷೇತ್ರದಲ್ಲಿ ನಾಗಲಾ ಚಂದ್ರಭಾನ ಗ್ರಾಮದಲ್ಲಿ ಆಯಿತು. ಇಂದು ಆ ಗ್ರಾಮ ದೀನದಯಾಳ ಗ್ರಾಮ ಎಂದೇ ಪ್ರಚಲಿತವಾಗಿದೆ.

1982 ರಲ್ಲಿ ಪಂಡಿತ ದೀನದಯಾಳ ಅವರ ಪಾರಂಪರಿಕ ಮನೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರಾದ ಮಾ. ಬಾಬುರಾವ್ ದೇವರಸ ಜೀ, ಮಾ.ಅಟಲ್ ಬಿಹಾರಿ ವಾಜಪೇಯಿ ಜೀ, ಮಾ.ಓಂಪ್ರಕಾಶ್ ಜೀ ಮೊದಲಾದ ಅನೇಕ ಅಧಿಕಾರಿಗಳು ಸೇರಿ ಪಂಡಿತ್ ದೀನದಯಾಳ ಉಪಾಧ್ಯಾಯ ಜನ್ಮಭೂಮಿ ಸ್ಮಾರಕ ಸಮಿತಿಯ ಉದ್ಘಾಟನೆ ಮಾಡಿ ಈ ಕ್ಷೇತ್ರದ ವಿಕಾಸ ದ್ವಾರವನ್ನು ತೆರೆದರು. ಇಲ್ಲಿ ದೀನದಯಾಳಜಿ ಅವರ ಸ್ಮಾರಕದ ರೂಪದಲ್ಲಿ ಭವ್ಯ ಸ್ಮೃತಿಭವನ ನಿರ್ಮಾಣವಾಯಿತು. ಇಂದು ಈ ಭವನ ದೀನದಯಾಳ ಧಾಮ ಎಂದೇ ಪ್ರಖ್ಯಾತವಾಗಿದೆ.

ಮನೆಯಲ್ಲಿ ಒಂದು ಒಲೆಯಿಂದ ಮಾಡಿದ ಭೋಜನವು ಹೇಗೆ ಇಡೀ ಪರಿವಾರದ ಅನೇಕ ಸದಸ್ಯರನ್ನು ತೃಪ್ತಿಗೊಳಿಸುವುದೋ, ಅದೇ ರೀತಿ ಸ್ಮಾರಕ ಸಮಿತಿಯ ಮೂಲಕ ಫರಹ ವಿಕಾಸಖಂಡದ 56 ಗ್ರಾಮಗಳ ತಳಹದಿ ಮತ್ತು ಸರ್ವಾಂಗೀಣ ವಿಕಾಸವೂ ಸಹ‌ ಹಿಂದಿನ ಅನೇಕ ವರ್ಷಗಳಿಂದ ನಡೆದು ಬರುತ್ತಿದೆ.

 

. ದೀನದಯಾಳ ಧಾಮ ಆಯುರ್ವೇದದ ಔಷಧಿ ನಿರ್ಮಾಣ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು. 

ಬಾಲ್ಯದಿಂದಲೂ ಇದೇ ಜಾಗದಲ್ಲಿ ಶಾಖೆಗೆ ಹೋಗುತ್ತಿದ್ದ ಸಂಘದ ಪ್ರಚಾರಕ ಹಾಗೂ ಸಮಿತಿಯ ನಿರ್ದೇಶಕ ಮಾನ್ಯ ಶ್ರೀ. ಸೋನಪಾಲ್ ಜೀ ಹೇಳುತ್ತಾರೆ, ಸಿಹಿ ನೀರಿನ ಅಭಾವದಿಂದಾಗಿ ಜನರಿಗೆ ಮೈಲುಗಟ್ಟಲೆ ದೂರದಿಂದ ಕುಡಿಯುವ ನೀರನ್ನು ಹುಡುಕಿ ಕಷ್ಟಪಟ್ಟು ತರಬೇಕಾಗಿತ್ತು ಎಂಬುದಾಗಿ.

ಆದ್ದರಿಂದ 1992 ರಲ್ಲಿ ಪ್ರಪ್ರಥಮವಾಗಿ ಸಿಹಿ ನೀರಿನ ಪೈಪು ಲೈನುಗಳ 15 ಸ್ಟ್ಯಾಂಡ್ ಗಳನ್ನು ಸ್ಥಾಪಿಸಲಾಯಿತು. ಇಂದು ಫರಹ ಕ್ಷೇತ್ರದಲ್ಲಿ ಸಿಹಿ ನೀರಿನ ದೊಡ್ಡ ಟ್ಯಾಂಕ್ ಇದೆ. ಅದರಿಂದ ಗ್ರಾಮದ ಪ್ರತಿಯೊಂದು ಮನೆಗೂ ಸಿಹಿ ನೀರು ಲಭ್ಯವಾಗುತ್ತದೆ. ನೀರಿನ ಸಮಸ್ಯೆ ಕಡಿಮೆಯಾದ ಕೂಡಲೇ ವ್ಯವಸಾಯದ ಅನೇಕ ಸಮಸ್ಯೆಗಳು ಎದುರಾದವು. ಅವುಗಳನ್ನೂ ನಿವಾರಿಸಲಾಯಿತು. ಇಂದು ದೀನದಯಾಳ ಧಾಮದಲ್ಲಿ 5000 ಮರಗಳನ್ನು ನೆಡಲಾಗಿದೆ. ಒಂದು ಸುಂದರವಾದ ಮಾವಿನ ತೋಪು ಸಹ ಇಲ್ಲಿ ಲಭ್ಯವಿದೆ. ವಿಭಿನ್ನ ಪ್ರಯೋಗಗಳ ಮೂಲಕ ರೈತರಿಗೆ ಪ್ರಾಕೃತಿಕ ಹಾಗೂ ಜೈವಿಕ ಕೃಷಿಯ ಉತ್ತೇಜನ ನೀಡಲಾಗುತ್ತಿದೆ. ಕೊಳಚೆ ನೀರು ಸ್ಥಾವರದಿಂದ ಹಳ್ಳಿಯ ಕಲುಷಿತ ನೀರು ಶುದ್ಧವಾಗಿ, ಸುಮಾರು 75,000 ಲೀಟರ್ ಪ್ರತಿದಿನವೂ ನೀರಾವರಿ ಕಾರ್ಯಕ್ಕೆ ಬಳಸಲ್ಪಡುತ್ತದೆ. ಪುನರ್ ನಿರ್ಮಾಣ ಮತ್ತು ಸೌಂದರ್ಯದ ಕಾರಣದಿಂದ ಇಂದು ದೀನದಯಾಳ್ ಧಾಮವು ಉತ್ತರ ಪ್ರದೇಶದಲ್ಲಿ ಒಂದು ಭವ್ಯ ಪ್ರೇಕ್ಷಣೀಯ ಸ್ಥಳವಾಗಿದೆ.


ಇಂದು ಇಲ್ಲಿನ ಮಕ್ಕಳು ಕೇವಲ ಸರ್ಕಾರಿ ಶಾಲೆಗಳ ಮೇಲೆ ಮಾತ್ರ ಅವಲಂಬಿತರಾಗಿಲ್ಲ. ದೀನದಯಾಳ ಉಪಾಧ್ಯಾಯ ಸರಸ್ವತಿ ವಿದ್ಯಾಮಂದಿರದ ಮೂಲಕ ಎರಡು ವಿದ್ಯಾಲಯಗಳ ಚಾಲನೆಯನ್ನು ಮಾಡಲಾಗುತ್ತಿದೆ. ಅವುಗಳಲ್ಲಿ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಷ್ಟೇ ಅಲ್ಲ, ಸುಮಾರು 25 ಗ್ರಾಮಗಳಲ್ಲಿ ಉಚಿತವಾಗಿ ವನ ಬೋಧನೆ, ವನಶಾಲೆಯ ಕಾರ್ಯಕ್ರಮಗಳು ನಡೆಯುತ್ತವೆ. ಈ ಶಾಲೆಗಳೇ ಮಕ್ಕಳನ್ನು ಸುಶಿಕ್ಷಿತರನ್ನಾಗಿ, ಸಂಸ್ಕಾರಯುತರನ್ನಾಗಿ ಮಾಡುತ್ತ ಅವರ ಜೀವನಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುತ್ತವೆ. ಫರಹ ವಿಕಾಸಖಂಡದ 8 ನ್ಯಾಯ ಪಂಚಾಯಿತಿಗಳಲ್ಲಿ 6 ಸರಸ್ವತೀ ಶಿಕ್ಷಣ ಮಂದಿರಗಳಿವೆ. ಅವುಗಳಲ್ಲಿ 33 ಹಳ್ಳಿಗಳಿಂದ 1383 ಮಕ್ಕಳು ಕಲಿಯುವುದಕ್ಕೋಸ್ಕರ ಬರುತ್ತಾರೆ.

 ಸಮಿತಿಯು ಎಲ್ಲಾ ಕ್ಷೇತ್ರಗಳಲ್ಲೂ ಯೋಜನೆಗಳನ್ನು ಆರಂಭಿಸಿ ಸರ್ವಾಂಗೀಣ ವಿಕಾಸದ ತಳಹದಿಯನ್ನು ಹಾಕಿತು.


ದೀನದಯಾಳ ಧಾಮದಿಂದ ಸುಮಾರು 5000 ಸೋದರಿಯರು ಹೊಲಿಗೆಯ ತರಬೇತಿಯನ್ನು ಹೊಂದಿ ಸ್ವಾವಲಂಬಿಗಳಾಗಿರುವುದು. 

ಕಾಮಧೇನು ಖಾದ್ಯ ಮತ್ತು ಗ್ರಾಮೋದ್ಯೋಗ ಫಾರ್ಮಸಿ ಸಚಿವರಾದ ಶ್ರೀ ಹೇಮೇಂದ್ರ ಜೀ ಹೇಳುತ್ತಾರೆ….ಮೊದಲು ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ದೊಡ್ಡ ಕಾಯಿಲೆಗಳಿಗೂ ಮೈಲುಗಟ್ಟಲೆ ಕ್ರಮಿಸಿ ಮಥುರಾದ ಆಸ್ಪತ್ರೆಯ ತನಕ ಹೋಗಬೇಕಾಗಿತ್ತು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಸೇವಾಕೇಂದ್ರದ ಪರಿಸರದಲ್ಲಿಯೇ ಒಂದು ಉಚಿತ ಆಯುರ್ವೇದ ಚಿಕಿತ್ಸಾಲಯವನ್ನು ಆರಂಭಿಸಲಾಯಿತು. ಅದರಲ್ಲಿ ಪ್ರತಿವರ್ಷ 30,000 ರೋಗಿಗಳ ಆರೈಕೆಯನ್ನು ಮಾಡಲಾಗುತ್ತದೆ. ಇಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸೆ, ವಿಕಲಾಂಗರಿಗೆ ಸಹಾಯ, ದಂತವೈದ್ಯಕೀಯ ತಪಾಸಣೆ ಮತ್ತು ಬೇರೆ ಎಲ್ಲಾ ಖಾಯಿಲೆಗಳಿಗೂ ಸಂಬಂಧಿಸಿದಂತೆ ಮೆಡಿಕಲ್ ಕ್ಯಾಂಪುಗಳನ್ನು ಆಯೋಜಿಸಲಾಗುತ್ತದೆ. ಈ ಪರಿಸರದಲ್ಲಿ ಒಂದು ಕಾಮಧೇನು ಗೋಶಾಲೆಯೂ ಇದೆ. ಇಲ್ಲಿ ಪಂಚಗವ್ಯ ಆಧಾರಿತ ಆಯುರ್ವೇದದ ಔಷಧಿಗಳು ತಯಾರಿಸಲ್ಪಡುತ್ತವೆ. ಈ ಗೋಶಾಲೆಯು ಗ್ರಾಮದ ಮಹಿಳೆಯರ ಸ್ವಾವಲಂಬನೆಯ ಆಧಾರವೂ ಆಗಿದೆ. ಇಲ್ಲಿಯವರೆಗೆ 40 ಸೋದರಿಯರು ಔಷಧಿ ನಿರ್ಮಾಣದ ವಿಭಿನ್ನ ಆಯಾಮಗಳ ತರಬೇತಿ ಪಡೆದಿದ್ದಾರೆ. ಈ ಮಹಿಳೆಯರು ಈಗ ತಿಂಗಳಿಗೆ 4,500/- ರೂಪಾಯಿಗಳನ್ನು ದುಡಿಯುತ್ತಿದ್ದಾರೆ.

ಪತಿಯ ಮರಣದ ನಂತರ ಎರಡು ಮಕ್ಕಳೊಂದಿಗಿರುವ ಅನಿತಾ ಪರಿವಾರಕ್ಕೆ ಹೊರೆಯಾಗಿಲ್ಲ, ಬದಲಾಗಿ ಹೊಲಿಗೆ ಕಲಿತು, ದುಡಿದು ಸ್ವಾಭಿಮಾನದಿಂದ ಜೀವನವನ್ನು ಸಾಗಿಸುತ್ತಿದ್ದಾಳೆ. ಹಾಗೆಯೇ ಅಲ್ಲಿ ರಮಾಳ ಅತ್ತೆಯೂ ಇದೇ ಧಾಮದಲ್ಲಿ ಹೊಲಿಗೆ ತರಬೇತಿ ಪಡೆದುಕೊಂಡು ಹಲವಾರು ವರ್ಷಗಳ ತನಕ ಕಾರ್ಯನಿರ್ವಹಿಸುತ್ತಿದ್ದರು. ವಿವಾಹದ ನಂತರ ಸೊಸೆ ರಮಾ ಕೂಡ ಇಲ್ಲೇ ಹೊಲಿಗೆ ಕಲಿತು ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾಳೆ. ಹೊಲಿಗೆ ತರಬೇತಿ ಮತ್ತು ವಸ್ತ್ರ ಉದ್ಯೋಗ ಕೇಂದ್ರದಿಂದ ಇಲ್ಲಿಯವರೆಗೂ ಸುಮಾರು 5,000 ಸೋದರಿಯರು ಉಚಿತವಾಗಿ ಹೊಲಿಗೆಯನ್ನು ಕಲಿತರು ಮತ್ತು ದುಡಿಯಲು ಪ್ರಾರಂಭಿಸಿದರು. ವರ್ತಮಾನದಲ್ಲಿ 35 ಸೋದರಿಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ತಿಂಗಳಿಗೆ 5,000/- ಸಿಗುತ್ತದೆ. ಇಲ್ಲಿನ 8 ಹಳ್ಳಿಗಳಿಂದ ಮಹಿಳೆಯರು ಬರುತ್ತಾರೆ. ತರಬೇತಿ ಪಡೆದ ಸೋದರಿಯರಿಗೆ ಅವರ ವಿವಾಹದ ಸಂದರ್ಭದಲ್ಲಿ ದೀನದಯಾಳ ಧಾಮದ ಪರಿವಾರದಿಂದ ಹೊಲಿಗೆ ಯಂತ್ರಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಸಮಿತಿಯ ಮುಖ್ಯಸ್ಥ ನಿತಿನ್ ಬಹಲ್ ಹೇಳುತ್ತಾರೆ, ಪಂಡಿತ್ ಅವರ ಜನ್ಮೋತ್ಸವ ಮತ್ತು ಜಯಂತಿಗಳ ಸಂದರ್ಭದಲ್ಲಿ ಮೇಳ, ಪ್ರದರ್ಶನ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಸಮಿತಿಯಿಂದ ನಿರ್ಮಿತವಾಗಿರುವ ಸಮುದಾಯ ಭವನ, ರಾಧಾಕೃಷ್ಣ ಮಂದಿರ, ಸತ್ಸಂಗ ಭವನ ಮತ್ತು ಶೋಧ ಪುಸ್ತಕಾಲಯ, ಎಲ್ಲವೂ ಅಕ್ಕಪಕ್ಕದ ಎಲ್ಲಾ ಗ್ರಾಮಗಳನ್ನು ಬೆಸೆದು ಒಟ್ಟಾಗಿರಿಸುತ್ತದೆ. ಪ್ರಕೃತಿಯಿಂದ ಪೂರ್ಣ ಸಹಯೋಗದೊಂದಿಗೆ ಮಾನವನ ವಿಕಾಸ... ಇದೇ ಏಕಾತ್ಮ ಮಾನವ ದರ್ಶನ... ಪಂಡಿತ್ ಜೀ ಅವರ ವಿಚಾರಗಳ ರೂಪದಲ್ಲಿ ಪಂಡಿತ್ ದೀನದಯಾಳ ಜನ್ಮ ಸ್ಮಾರಕ ಸಮಿತಿ ಭವನವು ಜೀವಂತವಷ್ಟೇ ಅಲ್ಲ, ಬದಲಾಗಿ ಈ ದೇವಭೂಮಿಯ ಅಭಿಮಾನವೂ ಆಗಿದೆ.

ಸಂಪರ್ಕ : ಶ್ರೀ ರೋಹಿತ್ ಜೀ

ಮೊಬೈಲ್ ನಂಬರ್ : +919690878956

267 Views
अगली कहानी