सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಕಂಪಿಸಿ ನೆಲಸಮಗೊಂಡ ಹಳ್ಳಿಗೆ ಮರುಜೀವನದ ಆಸರೆ

ಶ್ರೀಮತಿ ರೂಪಶ್ರೀ ನಾಗರಾಜ್ | ಕಚ್ | ಗುಜರಾತ್

parivartan-img

ಕೆಲವೇ ನಿಮಿಷಗಳಲ್ಲಿ ಎಲ್ಲವೂ ಭೂಮಿಯೊಳಗೆ ಹುದುಗಿ ಹೋಗಿತ್ತು.. ನಮಗೆ ಹೊದ್ದುಕೊಳ್ಳಲು ವಿಶಾಲವಾದ ಆಕಾಶ ಮತ್ತು ಹಾಸಿಕೊಳ್ಳಲು ಭೂಮಿ ಮಾತ್ರ ಉಳಿದಿತ್ತು. ಮನೆ, ಪಾತ್ರೆ ಪಗಡಿ, ಹಾಸಿಗೆ, ಬಟ್ಟೆಬರೆ ಹೀಗೆ 40 ವರ್ಷಗಳಿಂದ ನಾವು ತಿಣುಕಾಡಿ ಒಪ್ಪ ಮಾಡಿದ್ದ ಎಲ್ಲವೂ ಕಸದ ಕುಪ್ಪೆಯ ರೀತಿ ಬದಲಾಗಿಬಿಟ್ಟಿತು. ಗುಜರಾತ್ ನ  ಕಚ್ ನಲ್ಲಿ 22 ವರ್ಷಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪದಿಂದ ಉಂಟಾದ ವಿನಾಶದ  ಕಥೆಯನ್ನು ಹೇಳುವಾಗ ಚಪರೇಡಿ ಜಿಲ್ಲೆಯ ಪ್ರಸ್ತುತ ಸರಪಂಚರಾದ ಶ್ರೀ ದಾಮಜೀ ಭಾಯಿಯವರ ಕಣ್ಣುಗಳು ಈಗಲೂ ತೇವವಾಗುತ್ತವೆ. ಆದರೆ ಮರುಕ್ಷಣದಲ್ಲಿಯೇ ಅಟಲ್ ನಗರದಲ್ಲಿ ಕಟ್ಟಲಾಗಿರುವ ಹೊಸ ಮನೆಗಳು, ಶುಚಿಯಾಗಿರುವ ಬೀದಿಗಳು, ವ್ಯವಸ್ಥಿತ ಶಾಲಾ ಕಟ್ಟಡಗಳು, ಪಂಚಾಯತ್ ಭವನ ಮತ್ತು ಹಳ್ಳಿಯ ಮಧ್ಯದಲ್ಲಿ ನಿರ್ಮಿಸಲಾಗಿರುವ ದೇವಿಯ ವಿಶಾಲ ಮಂದಿರದ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ಗರ್ವದಿಂದ ಚಪರೇಡಿಯ ಅಟಲ್ ನಗರದ ನಿರ್ಮಾಣದ ಬಗ್ಗೆ ಅವರು ಹೇಳಲು ಪ್ರಾರಂಭಿಸುತ್ತಾರೆ. . ನಿಮಗೆ ಗೊತ್ತೇ ಈ ವಿನಾಶಕಾರಿ ಭೂಕಂಪ ನೆಲಸಮವಾಗಿಸಿದ 14 ಗ್ರಾಮಗಳನ್ನು ಗುಜರಾತಿನ ಸೇವಾ ಭಾರತಿ, ಸೇವಾ ಇಂಟರ್ನ್ಯಾಷನಲ್ ಸಹಾಯದಿಂದ ಪುನಃ ನಿರ್ಮಾಣ ಮಾಡಿದ ವಿಷಯ…..  ನಿರ್ಮಾಣವಾದಂತಹ ಗ್ರಾಮಗಳಲ್ಲಿ ಒಂದು ಚಪರೇಡಿ ಗ್ರಾಮಇಂದು ಅದು ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಅಟಲ್ ನಗರವಾಗಿದೆ.

2001 ರ ಜನವರಿ 26. ಭಾರತವು ತನ್ನ 52ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದಾಗ  ಬೆಳಿಗ್ಗೆ 8:45ರ ಹೊತ್ತಿಗೆ  ಗುಜರಾತ್ ನ ಹಲವು ಜಿಲ್ಲೆಗಳಲ್ಲಿ ಒಂದು ಭೀಕರ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕ 7.7ರಷ್ಟಿದ್ದ  ಎರಡು ನಿಮಿಷಗಳ ಈ ಭೂಕಂಪವು 13,805 ಜನರನ್ನು ಆಹುತಿ ತೆಗೆದುಕೊಂಡಿತ್ತು. ಗುಜರಾತ್ ನ ನೂರಾರು ಗ್ರಾಮಗಳು ಇದಕ್ಕೆ ಬಲಿಯಾದವು. ಅದರಲ್ಲಿ ಚಪರೇಡಿಯೂ ಒಂದು. ಭೂಕಂಪದ ನಂತರ ಚಪರೇಡಿ ಗ್ರಾಮದಲ್ಲಿದ್ದ 300 ಪರಿವಾರಗಳ ಸರ್ವಸ್ವವೂ ನಾಶವಾಯಿತು. ಹತ್ತು ಜನರು ತಮ್ಮ ಜೀವವನ್ನೂ ಕಳೆದುಕೊಂಡಿದ್ದರು, ಇಡೀ ಗ್ರಾಮವೇ ಅವಶೇಷಗಳ ರಾಶಿಯಾಗಿತ್ತು.


ಆದರೆ  ಎಲ್ಲಿ ವಿನಾಶವಾಗುವುದೋ ಅದೇ ಸ್ಥಳದಲ್ಲಿ ಸೃಷ್ಟಿಯ ಮೊಳಕೆಯೊಡೆಯುವುದನ್ನೂ ಕಾಣಬಹುದು.  ಭೂಕಂಪದ ರಭಸಕ್ಕೆ ಸಿಲುಕಿ ಜೀವ ಕಳೆದುಕೊಂಡವರನ್ನು ಬಿಟ್ಟು ಚಪರೇಡಿ ಗ್ರಾಮದ ನಿವಾಸಿಗಳಿಂದ ವಿಧಿಯು ಏನನ್ನೆಲ್ಲಾ ಕಿತ್ತುಕೊಂಡಿತ್ತೋ ಅವೆಲ್ಲವನ್ನೂ ಆಪತ್ಬಾಂಧವರಂತೆ ಬಂದ ಕಾರ್ಯಕರ್ತರು ಹಗಲಿರುಳೂ  ಶ್ರಮಿಸಿ ಹಿಂತಿರುಗಿಸಿದರು. ಹಳೆಯ ಗ್ರಾಮವು ಎಲ್ಲಿತ್ತೋ ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ ಖಾಲಿ ಜಮೀನಿನಲ್ಲಿ ಇಡೀ ಗ್ರಾಮವನ್ನು ಮತ್ತೊಮ್ಮೆ ನಿರ್ಮಾಣ ಮಾಡಲಾಯಿತು. 2001 ರಲ್ಲಿ ಈ ಗ್ರಾಮದ ಭೂಮಿ ಪೂಜೆಯಾಯಿತು ಮತ್ತು 2004ರಲ್ಲಿ ಲೋಕಾರ್ಪಣೆಗೊಂಡಿತು. ಹೊಸ ಗ್ರಾಮಕ್ಕೆ ಅದ್ಭುತವಾದ ಒಂದು ಹೊಸ ಹೆಸರೂ ಸಿಕ್ಕಿತು.. ಅದುವೇ ಅಟಲ್ ನಗರ.


ನವ ನಿರ್ಮಾಣದ ಈ ಕಾರ್ಯವನ್ನು ರೂಪಿಸುವಲ್ಲಿ ಮಹತ್ವಪೂರ್ಣ ಭೂಮಿಕೆಯನ್ನು ನಿಭಾಯಿಸಿದ ಕಛ್ ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ವಿಭಾಗ ಕಾರ್ಯವಾಹರಾದ ಶ್ರೀ ಮಹೇಶ್ ಭಾಯಿ ಓಝ ಹೇಳುತ್ತಾರೆ.. "ಈ ಕೆಲಸ ಸುಲಭದ್ದಾಗಿರಲಿಲ್ಲ. ಚಪರೇಡಿ ಗ್ರಾಮ ಸಮೇತ ಅನೇಕ ಗ್ರಾಮಗಳು ಕಸದ ರಾಶಿಯಾಗಿ ಬಿಟ್ಟಿದ್ದವು. ಮೃತ್ಯು ತನ್ನ ಅಟ್ಟಹಾಸವನ್ನು ತೋರಿಸಿಬಿಟ್ಟಿತ್ತು. ಯಾರು ಬದುಕಿ ಉಳಿದುಕೊಂಡಿದ್ದರೋ ಅವರಿಗೆ ಜೀವನ ನಡೆಸುವುದು ಅತ್ಯಂತ ಕಠಿಣವಾಗಿತ್ತು. ಅದರಲ್ಲೂ ಮುಖ್ಯವಾಗಿ ಮಕ್ಕಳ ಶಿಕ್ಷಣವನ್ನು ಮುಂದುವರೆಸುವ ಸವಾಲು.. ಇದರ ಸಲುವಾಗಿ ಶಾಲೆಯ ಕಟ್ಟಡಗಳನ್ನು ಬೇಗನೆ ಸರಿ ಮಾಡುವ ತುರ್ತು ಅಗತ್ಯ ಇತ್ತು. ಕಚ್ಛ್ ನಲ್ಲಿ 14 ಗ್ರಾಮಗಳ ಜೊತೆ ಜಾಮ್ ನಗರ, ಬನಸಕಾಂಠಾ, ಪಾಠಣ್ ಗಳಲ್ಲಿ ಧ್ವಂಸಗೊಂಡಿದ್ದ 62  ಶಾಲಾ ಕಟ್ಟಡಗಳನ್ನು ಸಮಾಜದ ಸಹಯೋಗದಿಂದ ಮತ್ತೊಮ್ಮೆ ನಿರ್ಮಿಸಲಾಯಿತು ಎನ್ನುತ್ತಾರೆ ಅವರು. ನಮಗೆಲ್ಲಾ ಗೊತ್ತಿದೆ, ಒಂದು ಗ್ರಾಮವನ್ನು ನಿರ್ಮಿಸಲು ಕೆಲವು ದಿನಗಳಲ್ಲ, ಕೆಲವು ವರ್ಷಗಳೇ ಬೇಕಾಗುತ್ತವೆ. ವಿನಾಶ ಮತ್ತು ನಿರ್ಮಾಣದ ಮಧ್ಯದ ಈ ಎರಡು ವರ್ಷಗಳಲ್ಲಿ ಬಿದಿರಿನ ಮೆಳೆಗಳನ್ನು ಕಟ್ಟಿ, ಸ್ವಲ್ಪ ಮಾಮೂಲಿ ಪಾತ್ರೆಗಳು ಮತ್ತು ಹಾಸಿಗೆಗಳೊಂದಿಗೆ, ಕಲ್ಲುಗಳನ್ನು ಒಟ್ಟು ಮಾಡಿದ ಒಲೆಯ ಮೇಲೆ ಆಹಾರ ತಯಾರಿಸಿ ಜೀವನವನ್ನು ಸಾಗಿಸುತ್ತಿದ್ದ ಜನರ ಪ್ರತಿಯೊಂದು ಕಷ್ಟದ ಗಳಿಗೆಯಲ್ಲೂ ಜೊತೆಗಿದ್ದವರು ಸಂಘದ ಸ್ವಯಂಸೇವಕರು.


ಪ್ರಾಂತ ಮಂತ್ರಿ ಶ್ರೀ ಗಿರೀಶ್ ಭಾಯ್ ಹೇಳುತ್ತಾರೆ, ನಾವು ಈ ಪರಿವಾರಗಳಿಗೆ ದಿನಸಿ, ಪಾತ್ರೆ, ಹಾಸಿಗೆ ಮತ್ತು ಇತರ ಅವಶ್ಯಕ ಸಾಮಾನುಗಳನ್ನು ನೀಡುವುದರ ಜೊತೆಗೆ, ಆತ್ಮವಿಶ್ವಾಸ ಹಾಗೂ ಸ್ವಾಭಿಮಾನದಿಂದ ಜೀವಿಸುವ ಅವಕಾಶವನ್ನುಮಾಡಿಕೊಟ್ಟೆವು. ಈ ಸಂಪೂರ್ಣ ಕಾಮಗಾರಿಯ ಕಾರ್ಯದಲ್ಲಿ ಕೆಲವು ತಾಂತ್ರಿಕ ಕೆಲಸಗಾರರನ್ನು ಬಿಟ್ಟರೆ ಹೊರಗಿನಿಂದ ಬೇರೆ ಯಾರನ್ನೂ ಕರೆಸಲಿಲ್ಲ. ಗ್ರಾಮದ ಜನರು ತಾವೇ ಸ್ವತಃ ಗ್ರಾಮವನ್ನು ನಿರ್ಮಿಸಿದರು. ಕೂಲಿ ಕೆಲಸದಿಂದ ಹಿಡಿದು ಯಾರ್ಯಾರಿಗೆ ಯಾವ ಕೆಲಸ ಬರುತ್ತಿತ್ತೋ ಅವರು ಅದನ್ನು ಸಂಪೂರ್ಣ ಮನಸ್ಸಿಟ್ಟು ಮಾಡಿದರು. ಇದರಿಂದ ಅವರಿಗೆ ತಮ್ಮ ಮನೆಗಳನ್ನು ತಾವೇ ನಿರ್ಮಿಸುತ್ತಿರುವ ಸಂತೋಷವು ದೊರಕಿತು ಮಾತ್ರವಲ್ಲದೆ ಸರ್ಕಾರಿ ನಿಯಮದಂತೆ ದಿನಗೂಲಿಯೂ ಸಿಕ್ಕಿತು. ಕೆಲಸ ಪ್ರಾರಂಭವಾದ ನಂತರ  ಒಲೆಯ ಮೇಲೆ ಬೇಯುತ್ತಿದ್ದ ರೊಟ್ಟಿಗಳ ಘಮಘಮ ಪರಿಮಳದಲ್ಲಿ ಅವರ ಸ್ವಾಭಿಮಾನದ ಕಂಪು ಬೆರೆತು ಅವರ ದುಃಖವನ್ನು ಕಡಿಮೆಯಾಗಿಸಿತ್ತು.


ಈ ಕಾರ್ಯಕರ್ತರು ನಮ್ಮ ಗ್ರಾಮಕ್ಕೆ ಆಪದ್ಭಾಂಧವರಂತೆ  ಬಂದು ನಮ್ಮ ಸುಖ ದುಃಖಗಳ ಭಾರವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತು ನಮ್ಮ ಕಲ್ಪನೆಯಲ್ಲಿ ಇದ್ದುದಕಿಂತಲೂ ಸುಂದರವಾದ ಗ್ರಾಮವನ್ನು ನಿರ್ಮಿಸಿದರು ಎಂದು ಕೃತಜ್ಞತಾ ಭಾವದಿಂದ ಚಪರೇಡಿಯ ಸರಪಂಚರಾದ ದಾಮಜಿ ಭಾಯಿಯವರು ಗುಜರಾತ್ ನ ಸೇವಾ ಭಾರತೀಯನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತಾರೆ.

ಸಂಪರ್ಕಿಸಿ: ನಾರಾಯಣ್ ವೇಲಾಣಿ

ಮೊಬೈಲ್ ಸಂಖ್ಯೆ : 9727732588, 9428294365

1183 Views
अगली कहानी