नियमित अपडेट के लिए सब्सक्राईब करें।
5 mins read
ದಕ್ಷಿಣ
ವಿಕಲಚೇತನರಾದ ವಿಕ್ರಂ ತಮ್ಮ ಮುಂದಿದ್ದ ಕಸದ ರಾಶಿಯಲ್ಲಿ ದೃಷ್ಟಿ ನೆಟ್ಟು ಅದರಲ್ಲಿದ್ದ ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಗಳನ್ನು ಹೆಕ್ಕಿ ತಮ್ಮ ಜೋಳಿಗೆಗೆ ತುಂಬುತ್ತಿದ್ದರು. ಅನತಿದೂರದಲ್ಲಿ ಅವರ ಪತ್ನಿ ಕೂಡ ಅದೇ ಕೆಲಸದಲ್ಲಿ ತೊಡಗಿದ್ದರು. ಮೂವರು ಮಕ್ಕಳೂ ತಾಯಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಕಸದ ತೊಟ್ಟಿಗಳಿಂದಲೇ ಹೊಟ್ಟೆ ಹೊರೆಯುತ್ತಿರುವ ನೂರಾರು ಕುಟುಂಬಗಳನ್ನು ನಾವೆಲ್ಲರೂ ನೋಡಿದ್ದೇವೆ.
ಹರಿದು ಕೊಳಕಾದ ಬಟ್ಟೆ ತೊಟ್ಟ ಚಿಂದಿ ಆಯುವ ಹತ್ತು ವರ್ಷ ವಯಸ್ಸಿನ ಹುಡುಗಿ ಗೀತಾ (ಹೆಸರು ಬದಲಿಸಿದೆ) ರಸ್ತೆ ಬದಿಯಲ್ಲಿ ಸಮೋಸಾ ಮೆಲ್ಲುತ್ತಿದ್ದವರನ್ನೇ ನೋಡುತ್ತಿದ್ದಾಳೆ. ಏನನ್ನೋ ಹುಡುಕುತ್ತಿರುವಂತೆ ನಟಿಸುತ್ತಾ ಬಳಿಸಾರಿದ ಹುಡುಗಿ ಸಮೋಸಾ ತಿನ್ನುವವರಿಗೆ ತಿಳಿಯದಂತೆ ಧೂಳು ಎಬ್ಬಿಸುತ್ತಾಳೆ. ಸಿಡಿಮಿಡಿಗೊಂಡ ಗ್ರಾಹಕ ಇವಳ ಕೆನ್ನೆಗೆ ಬಾರಿಸಿ ಉಳಿದ ಸಮೋಸಾಗಳನ್ನು ತಿಪ್ಪೆಗೆಸೆಯುತ್ತಾನೆ. ಗೀತಾ ತಿಪ್ಪೆಯಿಂದ ತೆಗೆದು ಸಮೋಸಾ ತಿನ್ನುತ್ತಾಳೆ. ಅವಳು ರುಚಿ ನೋಡಿದ ಮೊದಲ ಸಮೋಸಾ ಅದು! ಅಂದಿನಿಂದ ಅವಳು ಪ್ರತಿನಿತ್ಯ ಸಮೋಸಾ ತಿಂದಳು. ಸಮೋಸಾ ಗಳಿಸುವ ಉಪಾಯ ಅವಳಿಗೆ ತಿಳಿದುಹೋಗಿತ್ತು. ಇವೆರಡೂ ಮನಮಿಡಿವ ಕಟ್ಟುಕತೆಗಳಲ್ಲ......ಮಧ್ಯಪ್ರದೇಶದ ಆಗರ್ ಮಾಲ್ವಾದಲ್ಲಿ ಎಲ್ಲರಿಂದಲೂ ತಾತ್ಸಾರಕ್ಕೆ ಗುರಿಯಾಗಿದ್ದ ಪಾರ್ಧೀ ಸಮಾಜದ ನೋವಿನ ವಾಸ್ತವಿಕತೆ ಆಗಿತ್ತು. ಆಗ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಲೆಮಾರಿ ಜನಾಂಗದ ಸಂಘಟನೆಯನ್ನು
ಹುಟ್ಟುಹಾಕುವ ಮೂಲಕ ಬದಲಾವಣೆಯ ಹೊಸ ಪರ್ವಕ್ಕೆ ನಾಂದಿ ಹಾಡಿತು. ಇಂದು, ಪ್ರಧಾನಮಂತ್ರಿ ಗೃಹ ಯೋಜನೆಯ ಅಡಿಯಲ್ಲಿ ನಿರ್ಮಿತವಾಗಿರುವ ತಮ್ಮದೇ ಸ್ವಂತ ಮನೆಯಿಂದ ದುಡಿಯಲೆಂದು ಹೊರಡುವ ವಿಕ್ರಮ್, ಶಾಲಾ ಸಮವಸ್ತ್ರದಲ್ಲಿ ಕಂಗೊಳಿಸುತ್ತಿರುವ ತಮ್ಮ ಮಕ್ಕಳನ್ನು ಕಣ್ತುಂಬಿಕೊಂಡು ಕೈಬೀಸುತ್ತಾರೆ. ದಾಖಲಾತಿಗಳ ಕೊರತೆಯಿಂದ ಸರ್ಕಾರದ ಯೋಜನೆಗಳು ಪಾರ್ಧೀಗಳನ್ನು ತಲುಪುತ್ತಿರಲಿಲ್ಲ ಎನ್ನುತ್ತಾರೆ, ಪರಿವರ್ತನೆಯ ಈ ಹೊಸ ಅಧ್ಯಾಯವನ್ನು ಬರೆದ ಅಲೆಮಾರಿ ಜನಾಂಗದ ಸಂಘಟನೆಯ ಮಾಲ್ವಾ ಪ್ರಾಂತ್ಯದ ಪ್ರಮುಖರಾದ ರವಿ ಬುಂಡೇಲಾ. ಮೊದಲು ಎಲ್ಲ ಪಾರ್ಧೀಗಳಿಗೆ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಮಾಡಿಸಿಕೊಟ್ಟು ಅವರನ್ನು ಮುಖ್ಯವಾಹಿನಿಗೆ ಜೋಡಿಸಲಾಯಿತು. ಇಂದು ಆ ಪಾರ್ಧೀಗಳು ಅಚ್ಚರಿಯಾಗುವಷ್ಟು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ.
ಕರೋನಾ ಕಾಲದಲ್ಲಿ ಮನೆಬಾಗಿಲಿಗೆ ಬಂದಿದ್ದ ಉಚಿತ ದಿನಸಿ ಸಾಮಾನುಗಳನ್ನು ಪಡೆಯಲು ನಿರಾಕರಿಸಿದ್ದು ಮಾತ್ರವಲ್ಲ, ಸಂತ್ರಸ್ತರಿಗೆ ದಿನಸಿ ತಲುಪಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾಕಾರ್ಯದಲ್ಲಿ ಪಾರ್ಧೀ ಯುವಕರೂ ಕೈಜೋಡಿಸಿದರು. ಕಾಲ್ಬೇಲಿಯಾ, ಪಾರ್ಧೀಗಡೋಲಿಯಾ ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಿಕೊಂಡ ಅಲೆಮಾರಿಗಳು ದೇಶಾದ್ಯಂತ ತಿಪ್ಪೆ ಹೆಕ್ಕುವ ಅಥವಾ ತಿರುಪೆ ಎತ್ತುವ ಮೂಲಕವೇ ಜೀವನ ನಡೆಸುತ್ತಿದ್ದಾರೆ. ಅಲೆಮಾರಿ ಜನಾಂಗದ ಸಂಘಟನೆಯ ಆಗರ್ ಮಾಲ್ವಾ ಜಿಲ್ಲಾ ಸಂಯೋಜಕ ಹರ್ಷ ತಿವಾರಿ ಪ್ರಕಾರ ಅಲೆಮಾರಿಗಳ ಬಾಳನ್ನು ಹಸನುಗೊಳಿಸುವ ಕಾರ್ಯಕ್ಕೆ ಒದಗಿದ ಅಡ್ಡಿ ಆತಂಕಗಳು ಒಂದೆರಡಲ್ಲ. ತಮ್ಮದೇ ದೇಶವಾಸಿಗಳಿಂದ ಕೇವಲ ಅವಜ್ಞೆ, ತಾತ್ಸಾರ ಹಾಗೂ ಅವಮಾನಗಳಿಗೆ ತುತ್ತಾಗಿ ನೊಂದಿದ್ದ ಪಾರ್ಧೀಗಳು ತಮ್ಮ ತಲೆಯೆತ್ತಲಾಗದ ಕೀಳರಿಮೆಯಿಂದಾಗಿ ಯಾರನ್ನೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿಯೇ ಅವರ ಮಕ್ಕಳಿಗಾಗಿ ನಡೆಸಲಾಗುತ್ತಿದ್ದ ಬಾಲ ಸಂಸ್ಕಾರ ಕೇಂದ್ರವನ್ನೂ ಮೂರು ಬಾರಿ ನಿಲ್ಲಿಸಬೇಕಾಗಿ ಬಂದಿತ್ತೆಂದರೆ ಪರಿಸ್ಥಿತಿಯ ಗಂಭೀರತೆಯ ಅರಿವಾದೀತು.
ಸಂಘದ ಕಾರ್ಯಕರ್ತರು ತಮ್ಮನ್ನು ಅಪಮಾನಿಸಲು ಬಂದವರಲ್ಲ, ತಮಗೆ ಸಹಾಯಹಸ್ತ ನೀಡಲು ಬಂದವರು ಎಂಬ ವಿಶ್ವಾಸ ಪಾರ್ಧೀಗಳಲ್ಲಿ ಕ್ರಮೇಣ ಮೂಡತೊಡಗಿತು. ಬಳಿಕ 50 ಪಾರ್ಧೀ ಕುಟುಂಬಗಳ ಪಟ್ಟಿ ಮಾಡಿ ಅವರಿಗೆಲ್ಲ ಆಧಾರ್ ಹಾಗೂ ರೇಶನ್ ಕಾರ್ಡುಗಳನ್ನು ನೀಡಲಾಯಿತು. ಉದ್ಯೋಗ ಖಾತರಿ ಹಾಗೂ ಇತರ ಗ್ರಾಮ ಪಂಚಾಯಿತಿ ಯೋಜನೆಗಳ ಅಡಿಯಲ್ಲಿ ಜಾಬ್ ಕಾರ್ಡ್ ನೀಡುವ ಮೂಲಕ ಅವರ ಎಂದಿನ ಭಿಕ್ಷಾಟನೆಯನ್ನು ಕೊನೆಗೊಳಿಸಿದ್ದಾಯಿತು. ಈಗ ಅವರೆಲ್ಲ ಪ್ರತಿದಿನವೂ ನಿಗದಿತವಾದ ಕೂಲಿಗೆಂದು ಹೊರಡುತ್ತಾರೆ.
ಎಲ್ಲದಕ್ಕೂ ಕಳಶವಿಟ್ಟಂತೆ, ಅದೇ ಸಮಯದಲ್ಲಿ ಜಾರಿಯಾದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಲಾಭವೂ ಪಾರ್ಧೀಗಳಿಗೆ ದೊರಕಿತು. ಶತಮಾನಗಳ ನೆಲೆಯಿಲ್ಲದ ಅಲೆದಾಟ ಅಂತ್ಯವಾಗಿ, ತಮ್ಮದೇ ಸೂರಿನಡಿ ತಮ್ಮ ಗೌರವಾರ್ಹ ಬದುಕಿನ ಹೊಂಗನಸು ಕಟ್ಟುವ ಸಂತೋಷ ಪಾರ್ಧೀಗಳದಾಯಿತು. ಹಲವಾರು ವರ್ಷಗಳಿಂದ ಕಾತರಿಸುತ್ತಿದ್ದ ಕಂಗಳಲ್ಲಿ ನೆಮ್ಮದಿಯ ಬದುಕಿನ ಬೆಳಕು ಮಿಂಚುವಂತಾಯಿತು.
ಸಂಪರ್ಕ ಸಂಖ್ಯೆ---
ರವಿ ಬುಂಡೇಲಾ
87701 19986
नियमित अपडेट के लिए सब्सक्राईब करें।