नियमित अपडेट के लिए सब्सक्राईब करें।
5 mins read
ದಕ್ಷಿಣ
ಕೃತಜ್ಞತಾ ಭಾವದ ಅಶ್ರುಗಳು ರಾಮವತಿಯ ಕಣ್ಣುಗಳಿಂದ ಸುರಿಯುತ್ತಿದ್ದವು. ಕಳೆದ 3 ದಿನಗಳಿಂದ ಬರೀ ಅಕ್ಕಿಯನ್ನು ಬೇಯಿಸಿ, ಗಂಡನಿಗೆ ಹಾಗೂ ಮಕ್ಕಳಿಗೆ ಉಣಿಸಿದ ನಂತರ, ಇವಳು ಖಾಲಿ ಹೊಟ್ಟೆಯಲ್ಲಿ ಮಲಗುವುದು ಖಾತ್ರಿ. ಹತ್ತಿರದ ಮರದಿಂದ ನುಗ್ಗೆಯನ್ನು ಕಿತ್ತು ಮಾರಿ ಬಂದ ಹಣದಿಂದ ಮೂರು ಮಕ್ಕಳು ಮತ್ತು ಅತ್ತೆ-ಮಾವಂದಿರ ಹೊಟ್ಟೆಗಳನ್ನು ತುಂಬಿಸಲು ಸಾಕುಸಾಕಾಗುತ್ತಿತ್ತು. ಲಾಕ್ಡೌನ್ ಪರಿಸ್ಥಿತಿಯು ಪತಿಯ ದಿನಗೂಲಿಯನ್ನೂ ಅಲ್ಲದೆ, ಮನೆಯಲ್ಲಿದ್ದ ಕಾಳು ಇತ್ಯಾದಿಗಳನ್ನೂ ಕಸಿದುಕೊಂಡಿತ್ತು. ಭೂಪಾಲ್ ನ ಗೋವಿಂದಪುರದ ಸೆಕ್ಟರ್-ಸಿ ಯ ಸಮೀಪ ಒಂದು ಕಚ್ಚಾ ಮನೆಯಲ್ಲಿ ವಾಸಿಸುವ ಈ ಪರಿವಾರಕ್ಕೆ ಸೇವಾಭಾರತಿಯ ಕಾರ್ಯಕರ್ತರು ಭೇಟಿ ನೀಡಿದಾಗ, ದೇವರೇ ಕಳಿಸಿದ ದೂತರಂತೆ ಪಡಿತರ ಸಾಮಗ್ರಿಗಳನ್ನು ತೆಗೆದುಕೊಂಡು ಹೋದಾಗ, ರಾಮವತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಲಾಕ್ಡೌನ್ ನ ಎರಡೂವರೆ ತಿಂಗಳು ಈ ಪರಿವಾರಕ್ಕೆ ಅನ್ನದ ಕೊರತೆಯಾಗಬಾರದೆಂದು ದೃಢನಿಶ್ಚಯ ಮಾಡಿದವರು ಸಂಘಟನೆಯ ಪೂರ್ಣಾವಧಿ ಕಾರ್ಯಕರ್ತರಾದ ಕರಣಸಿಂಹ ಜೀ ಅವರು.
ಅದೇ, ಕೊಲ್ಕತ್ತಾದ ಬಾಗ್ ಬಜಾರ್ ನ ಒಂದು ಬಹುಮಹಡಿ ಕಟ್ಟಡದ ಕೆಳಗೆ ಒಂದು ಹರಕು ಮುರುಕು ಗುಡಿಸಿಲಿನಲ್ಲಿ ಸ್ವಲ್ಪವೇ ಪಾತ್ರೆಪಗಡಿಗಳನ್ನು ಇಟ್ಟುಕೊಂಡು, ಅರೆಬರೆ ಬೆಂದದ್ದನ್ನು ತಿಂದು ಜೀವನ ಸಾಗಿಸುತ್ತಿದ್ದ ಒಬ್ಬ ವೃದ್ಧೆಗೆ, ಲಾಕ್ಡೌನ್ ಪರಿಸ್ಥಿತಿಯು ಬಹಳ ವರ್ಷಗಳ ನಂತರ ಮನೆಯ ಬಿಸಿಬಿಸಿ ಊಟವನ್ನು ಹೊತ್ತು ತಂದಿತು. ಅನ್ನ ಸಾಂಬಾರನ್ನು ಹಂಚುವ ಸ್ವಯಂಸೇವಕರ ಗುಂಪು ಬಸ್ತಿ ಬಸ್ತಿಗಳಲ್ಲಿ ಭೋಜನವನ್ನು ವಿತರಿಸಿದ ನಂತರ ಫುಟ್‌ಪಾತ್ ಮತ್ತು ರೈಲ್ವೆ ನಿಲ್ದಾಣದ ಬಳಿ ಭಿಕ್ಷೆ ಬೇಡಿ ಜೀವನ ಸಾಗಿಸುವವರನ್ನು ಹುಡುಕಿಕೊಂಡು ಹೊರಟಾಗ ಒಂದು ಮೂಲೆಯಲ್ಲಿ ಈ ವೃದ್ಧೆ ಅವರಿಗೆ ಸಿಕ್ಕಿದಳು. ಕೆಲವು ದಿನಗಳು ಸಂಜೆಯಲ್ಲಿ ಸಾಂಬಾರು ಅನ್ನವನ್ನು ತಿಂದ ಮನೋರಮಾ ಅಮ್ಮ ಹಗಲಿನಲ್ಲೂ ಭೋಜನ ಬಯಸಿದಾಗ, ಹತ್ತಿರವೇ ಇದ್ದ ಸ್ವಯಂಸೇವಕ ಸುಮಿತ್ ಸಾಹು ತಮ್ಮ ಮನೆಯಿಂದ ಅವಳಿಗೆ ನಿಯಮಿತವಾಗಿ ಬಿಸಿಬಿಸಿ ಭೋಜನವನ್ನು ತಲುಪಿಸುವ ವ್ಯವಸ್ಥೆ ಮಾಡಿದರು. ಹಾಗೇ ಒಂದು ದಿನ ಸ್ವಯಂಸೇವಕರಿಗೆ ತನ್ನ ಮನ:ಪೂರ್ವಕವಾದ ಆಶೀರ್ವಾದವನ್ನು ನೀಡುತ್ತ, ಈ ವೃದ್ಧೆಯು ತನ್ನ ವ್ಯಥೆಯ ಕಥೆಯನ್ನು ತಿಳಿಸಿದಳು, ಹೇಗೆ 10 ವರ್ಷಗಳಲ್ಲಿ ಮೊದಲ ಬಾರಿಗೆ ಅವಳಿಗೆ ಸರಿಯಾಗಿ ಉಣ್ಣುವ ಭಾಗ್ಯ ದೊರೆಯಿತೆಂದು... ಇಲ್ಲಿಯವರೆಗೆ ಅವಳು ದಿನವೂ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ತಿಂದು ತನ್ನ ಜೀವನವನ್ನು ಸಾಗಿಸುತ್ತಿದ್ದಳು.
ಈಗ ಕೊರೋನಾ ವೈರಾಣುವಿನಿಂದ ಅತ್ಯಂತ ಹಾನಿಗೊಳಗಾದ ಇಂದೋರ್ ಬಗ್ಗೆ ಹೇಳುವುದಾದರೆ, ಇಲ್ಲಿ ರೈಲು ನಿಲ್ದಾಣದ ಸಮೀಪ ಎಲೈಟ್ ಟವರ್ನಲ್ಲಿರುವ ಮಂಜೂ ಅಗರ್ವಾಲ್ ಅವರ ತಾಯಿಯ ಆಕಸ್ಮಿಕ ಸಾವಾದಾಗ ಅವರ ಸಹಾಯಕ್ಕೆ ಸಂಬಂಧಿಕರೂ ಬರಲಿಲ್ಲ, ನೆರೆಹೊರೆಯವರೂ ಬರಲಿಲ್ಲ. ಆಗ ಮುಂದೆ ಬಂದು ಅವರ ಅಂತಿಮ ಸಂಸ್ಕಾರಕ್ಕೆ ಕೈ ಜೋಡಿಸಿದವರು ಸಂಘದ ಸ್ವಯಂಸೇವಕರು. ಕೊರೋನಾ ಸಮಯದಲ್ಲಿ ಈ ಬ್ರಹ್ಮಾಂಡದಲ್ಲಿ ಮುಳುಗೇಳುತ್ತಿರುವ ಈ ಸೇವಾ ಕಥೆಗಳ ಸೂತ್ರಧಾರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ಮಹಾಮಾರಿಯ ಈ ಸಮಯವನ್ನು ಸೇವೆಗೆ ಸಿಕ್ಕಿದ ಅವಕಾಶವೆಂದು ಭಾವಿಸಿದರು ಹಾಗೂ ಕೇಸರಿ ವಸ್ತ್ರ ಧರಿಸಿ, ಮನದಲ್ಲಿ ರಾಷ್ಟ್ರಭಾವವನ್ನು ಹೊತ್ತು, ಮುಂಬಯಿ, ದೆಹಲಿ ಮತ್ತು ಇಂದೋರ್ ನ ಹಾಟ್ಸ್ಪಾಟ್ ಸ್ಥಳಗಳಲ್ಲಿ ಹಾಗೂ ದೇಶದೆಲ್ಲೆಡೆ ಅವಿರತವಾಗಿ ಸೇವೆಯನ್ನು ನೀಡಿದರು.
ಬಾರಾಬಾಂಕಿ ಜಿಲ್ಲೆಯ ಕಾರ್ಯವಾಹ ಅಜಯ್ ಕುಮಾರ್ ಜೀ ಅವರ ಬಲಿದಾನವನ್ನು ನಮ್ಮ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೇ 22 ಶುಕ್ರವಾರದಂದು ಲಕ್ನೋ - ಅಯೋಧ್ಯಾ ಹೆದ್ದಾರಿಯಲ್ಲಿ ಪಡಿತರ ಸಾಮಾಗ್ರಿಗಳನ್ನು ಹಂಚುವಾಗ ಒಂದು ಟ್ರಕ್ ಅಪಘಾತಕ್ಕೆ ಈಡಾದರು. ವೃತ್ತಿಯಿಂದ ಅಧ್ಯಾಪಕರಾಗಿದ್ದ ಅಜಯ್ ಜೀ ಅವರು ಕಳೆದ 55 ದಿನಗಳಿಂದ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ನಿರ್ಗತಿಕರಿಗೆ ಸಿದ್ಧ ಭೋಜನ ಮತ್ತು ಪಡಿತರ ಸಾಮಗ್ರಿಗಳ ಪ್ಯಾಕೆಟ್ಟುಗಳನ್ನು ಹಂಚುತ್ತಿದ್ದರು. ಅಗತ್ಯವಿದ್ದ ಒಬ್ಬ ವ್ಯಕ್ತಿಗೆ ಕಾರಿನ ಹಿಂಭಾಗದಿಂದ ಪಡಿತರ ಪ್ಯಾಕೆಟ್ ತೆಗೆಯುವ ಸಮಯದಲ್ಲಿ ಈ ಅವಘಡಕ್ಕೆ ತುತ್ತಾದರು.
ಅಂಕಿಅಂಶಗಳಲ್ಲಿ ಹೇಳುವುದಾದರೆ, ಸಂಘದ ಅಖಿಲ ಭಾರತೀಯ ಸೇವಾ ಪ್ರಮುಖರಾದ ಪರಾಗ್ ಜೀ ಅಭ್ಯಂಕರ್ ಹೇಳುತ್ತಾರೆ , 2020ರ ಜೂನ್ 5 ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸೇವಾಭಾರತಿಯ ವತಿಯಿಂದ 92,556 ಸ್ಥಳಗಳಲ್ಲಿ 7,38,1802, ಅಂದರೆ 73 ಲಕ್ಷಕ್ಕೂ ಅಧಿಕ ಪಡಿತರ ಪ್ಯಾಕೆಟ್ ಗಳು ಮತ್ತು 4 ಕೋಟಿಗೂ ಅಧಿಕ ಸಿದ್ಧಭೋಜನದ ಪ್ಯಾಕೆಟ್ಟುಗಳನ್ನು ಹಂಚಲಾಗಿದೆ. ಸ್ವಯಂಸೇವಕರು ಸೇವೆಯನ್ನು ಸೌಭಾಗ್ಯವೆಂದು ಪರಿಗಣಿಸಿ ನಿರಂತರ ಸೇವಾಕಾರ್ಯದಲ್ಲಿ ಮಗ್ನರಾಗಿದ್ದಾರೆ.
ವಿಶ್ವದ ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯು ಪ್ರಪಂಚದ ಅತಿ ದೊಡ್ಡ ಮಹಾಮಾರಿಯೊಂದಿಗೆ ಸೆಣಸಾಡುವುದಕ್ಕಾಗಿ ಸರ್ಕಾರದ ಜೊತೆ ಹೆಗಲು ನೀಡಿ ಕಾರ್ಯ ನಿರ್ವಹಿಸಿದೆ. ಕೊರೋನಾದಿಂದ ಪಾರಾಗಲು ಮಾಸ್ಕ್ ಖರೀದಿಸಲು ಯಾರಿಗೆ ಶಕ್ತಿಯಿಲ್ಲವೋ, ಅಂತಹ 90,02,313 ಜನರಿಗೆ ಮಾಸ್ಕ್ ವಿತರಿಸಲಾಯಿತು. ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾದ 1,90,000 ಜನರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಯಿತು. ಸಂಘದ ಸ್ವಯಂಸೇವಕರು ಸೇವೆಯ ಯಾವುದೇ ವಿಭಾಗದಲ್ಲಿ ನಕಾರಾತ್ಮಕವಾಗಿ ವರ್ತಿಸಲೇ ಇಲ್ಲ. ವೈದ್ಯರೊಂದಿಗೆ ಪಿಪಿಇ ಕಿಟ್ ಧರಿಸಿ ಸ್ಕ್ರೀನಿಂಗಿಗೋಸ್ಕರ ಹೊರಟ ಯುವ ಸ್ವಯಂಸೇವಕರಾಗಿರಬಹುದು, ಅಥವಾ ಗರ್ಭವತಿ ಮಹಿಳೆಯರ ಆರೈಕೆಯ ಜವಾಬ್ದಾರಿ ಹೊತ್ತ ರಾಷ್ಟ್ರೀಯ ಸೇವಿಕಾ ಸಮಿತಿಯ ಸೋದರಿಯರಿರಬಹುದು, ಒಟ್ಟಾರೆ ಇದು ಒಂದು ಅನಂತ ಯಾತ್ರೆಯಂತಿತ್ತು.
ರಾಷ್ಟ್ರೀಯ ಸೇವಾಭಾರತಿಯ 24 ಗಂಟೆಯೂ ಕಾರ್ಯ ನಿರ್ವಹಿಸುವ ಸಹಾಯವಾಣಿಯಲ್ಲಿ ಸಹಾಯ ಕೇಳುವ, ಅಗತ್ಯವಿರುವ ಕುಟುಂಬಗಳಿಗೆ ಸುವ್ಯವಸ್ಥೆಯನ್ನು ಮಾಡುವಲ್ಲಿ ನಿರತರಾಗಿದ್ದಾರೆ ರಾಷ್ಟ್ರೀಯ ಸೇವಾಭಾರತಿಯ ಕಾರ್ಯದರ್ಶಿ ಶ್ರವಣಕುಮಾರ್ ಜೀ. ಎಷ್ಟೋ ಜನ ತಮ್ಮ ವ್ಯಥೆಯನ್ನು ಹೇಳಲೂ ಆಗದಿರುವವರ ಕಥೆಯನ್ನೂ ಕೇಳಿದ್ದೇವೆ ಎನ್ನುತ್ತಾರೆ ಅವರು. ದೆಹಲಿಯ ಯಮುನಾ ಪಾರ್ಕ್, ಪುಣೆಯ ಕೆಂಪುದೀಪದ ಪ್ರದೇಶಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೂ ಸಹ ನಮ್ಮ ತಂಡ ನಿರಂತರ ಪಡಿತರವನ್ನು ತಲುಪಿಸುತ್ತಿದೆ. ಇಂದೋರ್ ನಲ್ಲಿ ಹೆಚ್ಚುತ್ತಿರುವ ಕೊರೋನಾ ಸಂಕಟದ ಮಧ್ಯದಲ್ಲಿ ಅವಿರತ ಸೇವೆಯಲ್ಲಿ ನಿರತರಾಗಿರುವ ಪೋಲಿಸರಿಗೆ ವಿಶ್ರಾಂತಿ ತೆಗೆದುಕೊಳ್ಳುವ ಸಮಯ ಬಂದಾಗ, ಅಲ್ಲಿನ ಬ್ಯಾರಿಕೇಡ್ ಗಳಲ್ಲಿ ಸ್ವಯಂಸೇವಕರ ಗುಂಪು ಸಮರ್ಪಕವಾಗಿ ಕಾರ್ಯ ನಿಭಾಯಿಸಿತು ಎನ್ನುತ್ತಾರೆ.
"ಹರಿ ಅನಂತ ಹರಿ ಕಥಾ ಅನಂತಾ" ಎಂಬ ಸೂಕ್ತಿಯಂತೆ ಸಂಘದ ಈ ಸೇವಾಯಾತ್ರೆಯು ಸೇವಾದೂತದ ಮುಂದಿನ ಅಂಕಣದವರೆಗೂ ಜಾರಿಯಲ್ಲಿರುತ್ತದೆ.नियमित अपडेट के लिए सब्सक्राईब करें।