सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಒಂದು ಅನುಪಮ ಸೇವೆ... ದಿವ್ಯ ಪ್ರೇಮದ ಸೇವಾಮಿಶನ್.. ಹರಿದ್ವಾರ.

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ಅಂದು ಹರಿದ್ವಾರದ ಚಂಡೀಘಾಟ್ ನಲ್ಲಿ ಪುಣ್ಯಸ್ನಾನಕ್ಕೆಂದು ನೆರೆದಿದ್ದವರ ಪೈಕಿ ಯುವಕನೊಬ್ಬ ಚಿಂತಿತನಾಗಿದ್ದ. ಎದುರಿನಲ್ಲಿ ಹರಿಯುತ್ತಿದ್ದ ಪ್ರವಾಹ ಆತನಿಗೆ ಅಲಕನಂದಾಳ ಕಣ್ಣೀರಕೋಡಿಯಂತೆ ಕಾಣಿಸುತ್ತಿತ್ತು. ಆ ಪುಣ್ಯತಟದಲ್ಲಿ ಭಿಕ್ಷೆ ಬೇಡುತ್ತಿದ್ದ ಕೆಲ ಕುಷ್ಠರೋಗಿಗಳ ಯಾತನೆಗೆ ನೊಂದ ನದಿ ಕಂಬನಿಗರೆಯುತ್ತಿದ್ದಂತೆ ಆತನಿಗೆ ಭಾಸವಾಗುತ್ತಿತ್ತು. ಅಷ್ಟಾವಕ್ರ ದೇಹ, ಗಾಯಗಳಿಂದ ಸೋರುತ್ತಿದ್ದ ಕೀವು, ಮುತ್ತುತ್ತಿರುವ ನೊಣಗಳು ಹೀಗೆ ನರಕವನ್ನೇ ಕಣ್ಮುಂದೆ ತರುವಂತಿದ್ದ ಆ ದೃಶ್ಯ ಘೋರವಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಆ ಯುವ ಪ್ರಚಾರಕಕನಿಗೆ ತಾಳಲಾಗಲಿಲ್ಲ. ಅಕ್ಟೋಬರ್ 1996ರ ರಾತ್ರಿ ಹರಿದ್ವಾರದ ಚಂಡೀಘಾಟ್ ನಲ್ಲಿ ಅಂದು ಕಳೆದ ಇರುಳು ಆ ಯುವಕ ಆಶೀಶ್ ಗೌತಮನ ಬದುಕಿನ ದಾರಿಯನ್ನೇ ಬದಲಿಸಿ ಅದೇ ಆತನ ಕಾರ್ಯಕ್ಷೇತ್ರವಾಯಿತು. ಪೂರ್ತಿ ಓದಲು ಉತ್ತರ ಪ್ರದೇಶದ ಹಮೀರಪುರ ಜಿಲ್ಲೆಯ ನೆವಾದಾ ಎಂಬ ಚಿಕ್ಕ ಊರಿನಲ್ಲಿ 1962ರ ಆಕ್ಟೊಬರ್ 22ರಂದು ಶ್ರೀ ಆಶಿಶ್ ಗೌತಮರ ಜನನದೊಂದಿಗೆ ಈ ಯಶೋಗಾಥೆಯ ಆರಂಭ.


ಅಲಹಾಬಾದ್ (ಇಂದಿನ ಪ್ರಯಾಗರಾಜ್) ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿ ಹಾಗೂ ಎಲ್.ಎಲ್.ಬಿ.ಗಳನ್ನು ಪೂರೈಸಿದ ಆಶೀಶರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದರು. 1988 ರಿಂದ 1996 ರ ತನಕ 8 ವರ್ಷಗಳ ಕಾಲ ಪ್ರಚಾರಕರಾಗಿದ್ದ ಅವರು, ದೈವಸಾಕ್ಷಾತ್ಕಾರಕ್ಕೆ ಹಂಬಲಿಸಿ, ಹಿಮಾಲಯದ ದುರ್ಗಮ ಕಣಿವೆಗಳಿಗೆ ಹೋದರು. ಆ ಸಮಯದಲ್ಲಿ ತಮ್ಮನ್ನು ಕಾಣಲು ಬಂದ ಕೆಲ ಸ್ವಯಂಸೇವಕ ಬಂಧುಗಳನ್ನು ಬೀಳ್ಕೊಡಲು ಹರಿದ್ವಾರಕ್ಕೆ ಬಂದ ಆಶೀಶರು, ಅಲ್ಲಿನ ಚಂಡೀಘಾಟ್ ನ ಧರ್ಮಛತ್ರದಲ್ಲಿ ತಂಗಿದ್ದೇ ಮಹತ್ತರ ತಿರುವಿಗೆ ಕಾರಣವಾಯಿತು. ಮಾನವನ ಸೇವೆಯೇ ಮಾಧವನ ಸೇವೆಯೆಂಬಂತೆ ಆಶೀಶರು, ಆ ಕುಷ್ಠರೋಗಿಗಳಲ್ಲಿಯೇ ಪರಮಾತ್ಮನನ್ನು ಕಂಡರು. ಕುಷ್ಠರೋಗವನ್ನು ಸಾಂಕ್ರಾಮಿಕವೆಂದು ಭಾವಿಸಲಾಗಿದ್ದ ಅವಧಿಯಲ್ಲಿ, ಕುಷ್ಠರೋಗಿಗಳಿಗಾಗಿಯೇ ತಮ್ಮ ಬದುಕನ್ನು ಮೀಸಲಾಗಿರಿಸಿದರು.



ಕುಷ್ಠರೋಗಿಗಳೊಂದಿಗೆ ಅವರ ಮಕ್ಕಳನ್ನೂ ಅಸ್ಪೃಷ್ಯರಂತೆ ಕಾಣಲಾಗುತ್ತಿದ್ದ ಆ ಕಾಲದಲ್ಲಿ ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಮಿಷನರಿಗಳ ವಶಕ್ಕೆ ಒಪ್ಪಿಸುವ ಅನಿವಾರ್ಯತೆ ಕುಷ್ಠರೋಗಿಗಳದ್ದಾಗಿತ್ತು. ಆದರೆ ಅಂಥ ಮಕ್ಕಳ ಬದುಕನ್ನು ರೂಪಿಸುವ ಹೊಣೆಯನ್ನು ಮಿಷನರಿಗಳೂ ನಿಭಾಯಿಸಲಿಲ್ಲ. ಆಗ 15 ಮಕ್ಕಳಗಾಗಿ ಆರಂಭವಾದ ವಂದೇಮಾತರಂ ಕುಂಜವು ಕಳೆದ 23 ವರ್ಷಗಳಲ್ಲಿ ಅಂಥ ನೂರಾರು ಮಕ್ಕಳಿಗೆ ಶಿಕ್ಷಣ-ಸಂಸ್ಕಾರ ನೀಡುವ ಮೂಲಕ ಅವರೆಲ್ಲರ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿದೆ. ಇಲ್ಲಿಯೇ ಬೆಳೆದ ಹುಡುಗ ಮನೋಹರ್ ಇಂದು ಶಾಲೆಯ ಕಂಪ್ಯೂಟರ್ ವಿಭಾಗದ ಮುಖ್ಯಸ್ಥನಾಗಿರುವುದನ್ನು ದಿವ್ಯ ಪ್ರೇಮ ಸೇವಾ ಮಿಷನ್ನಿನ ಸಂಯೋಜಕರಾದ ಶ್ರೀ ಸಂಜಯ ಚತುರ್ವೇದಿಯವರು ಹೆಮ್ಮೆಯಿಂದ ಹೇಳುತ್ತಾರೆ. ಇಲ್ಲಿ ಶಿಕ್ಷಣ ಸಂಸ್ಕಾರಗಳ ಜೊತೆಗೆ ದೇಶದ ಉತ್ತಮ ಪ್ರಜೆಗಳಾಗುವಂತೆ ಮಕ್ಕಳನ್ನು ಪ್ರೇರೇಪಿಸಲಾಗುತ್ತದೆ.



ಕುಷ್ಠರೋಗಿಗಳಿಗೆಂದೇ ಆರಂಭವಾಗಿದ್ದ ಸಮಿಧಾ ಉಚಿತ ಚಿಕಿತ್ಸಾಲಯದಲ್ಲಿ ಇಂದು ಇತರೇ ಬಡಜನರಿಗೂ ಶುಲ್ಕರಹಿತ ವೈದ್ಯಕೀಯ ಶುಶ್ರೂಷೆ ನೀಡಲಾಗುತ್ತಿದೆ. ಪಟ್ಟಣದ ದೊಡ್ಡ ದೊಡ್ಡ ವೈದ್ಯರುಗಳೂ ಇಲ್ಲಿ ಒಂದಿಷ್ಟು ಸಮಯ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಪುರಸ್ಕಾರವೂ ಸೇರಿದಂತೆ 23 ಅನ್ಯಾನ್ಯ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟ ದಿವ್ಯ ಪ್ರೇಮ ಸೇವಾ ಮಿಷನ್, ಮಹಿಳಾ ಕುಷ್ಠರೋಗಿಗಳೊಂದಿಗೆ ಬಡಕುಟುಂಬಗಳ ಅನ್ಯ ಸ್ತ್ರೀಯರಿಗೂ ವೃತ್ತಿಪರ ತರಬೇತಿ ನೀಡಿ ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸುತ್ತಿದೆ. ಸುತ್ತಮುತ್ತಲಿನ ಸ್ಥಿತಿವಂತರು ತಂತಮ್ಮ ಮಕ್ಕಳ ಜನ್ಮದಿನದ ಆಚರಣೆಯನ್ನು ವಂದೇಮಾತರಂ ಕುಂಜದಲ್ಲಿ ಏರ್ಪಡಿಸುತ್ತಿದ್ದಾರೆ. ಸೇವೆಯನ್ನು ಸೌಭಾಗ್ಯವೆಂದು ತಿಳಿದು ಬಾಳುತ್ತಿರುವ ಆಶೀಶರು- "ಕುಷ್ಠರೋಗಿಗಳ ಮಕ್ಕಳಿಗೆ ಲಭಿಸಿರುವ ಸಾಮಾಜಿಕ ಸ್ಥಾನಮಾನವೇ ನಮ್ಮ ಅತಿದೊಡ್ಡ ಹೆಗ್ಗಳಿಕೆ"

-ಎನ್ನುತ್ತಾರೆ.ಬನ್ನಿ, ಇಂಥ ಪುಣ್ಯ ಕಾರ್ಯದಲ್ಲಿ ನಾವೂ ಕೈಜೋಡಿಸೋಣ.


ಸಂಕಲನ----- ಪಾರಿತೋಷ್ ಬಂಗ್ವಾಲ್

ಸಂಪರ್ಕ ಸಂಖ್ಯೆ-- 9837088910

(ಸಂಜಯ ಚತುರ್ವೇದಿ)


606 Views
अगली कहानी