सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಮಹಾವಿನಾಶದಲ್ಲಿ ಕೇದಾರಘಾಟಿಯಲ್ಲಿ ಕ್ರಿಯಾಶೀಲರಾದ ದೇವದೂತರು

ದಕ್ಷಿಣ

parivartan-img

ಪ್ರಸಿದ್ಧ ಯಾತ್ರಾಸ್ಥಳ ಕೇದಾರದಲ್ಲಿ ಭೋರ್ಗರೆದ ಜಲಪ್ರಳಯವನ್ನು ಬಹುತೇಕ ಯಾರೂ ಮರೆತಿರಲಾರರು. ಜೀವವನ್ನು ಪ್ರದಾನ ಮಾಡುವ ನೀರು ತಾನೇ ಪ್ರಳಯವಾಗಿ ಜೀವಗಳನ್ನೇ ಕೊಚ್ಚಿಕೊಂಡು ಹೋಗುವುದು, ದುರ್ಗಂಧದಿಂದ ನಾರುತ್ತಿರುವ ಶವಗಳ ಮಧ್ಯೆ ಮಾನವತೆಯ ಹುಡುಕಾಟ, ತೀರ್ಥಯಾತ್ರಿಗಳ ಅಸಹಾಯಕ ಸ್ಥಿತಿಗೆ ಅಲಕನಂದಾ ಮೌನವಾಗಿ ಕಣ್ಣೀರ್ಗರೆಯುವುದು.... ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಟಿವಿ ಚಾನೆಲ್ಲುಗಳಲ್ಲಿ ನೋಡಿದ್ದೇವೆ, ಮರುಗಿದ್ದೇವೆ. ಆದರೆ, ಕಠಿಣ ಸಮಯದಲ್ಲಿ ಯಾತ್ರಿಗಳಿಗೆ ಒಂದು ದೊಡ್ಡ ಆಸರೆಯಾಗಿ ನಿಂತ ಮಾನವತೆಯ ರೂಪವನ್ನು ನಾವ್ಯಾರೂ ನೋಡಿಲ್ಲ.

ಭೋರ್ಗರೆಯುತ್ತಿರುವ ವರ್ಷಧಾರೆಯಲ್ಲಿ, ರಾಡಿಗೊಂಡು ಅಧ್ವಾನವಾಗಿರುವ ಸಂದಿಬೀದಿಗಳಲ್ಲಿ, ಜೀವಕ್ಕೇ ಕುತ್ತು ತರುವ ತಿರುವು ರಸ್ತೆಗಳಲ್ಲಿ, ಆಪತ್ಕಾಲದಲ್ಲಿ, ನಿರಂತರವಾಗಿ ಸೇವಾಕಾರ್ಯದಲ್ಲಿ ನಿರತರಾದ ಸಂಘದ ಸ್ವಯಂಸೇವಕರೇ ಆಸರೆಯ ಘನಿಗಳು. ಕೇದಾರಘಾಟಿಯಲ್ಲಿ ಮೊದಲ ಹೆಲಿಪ್ಯಾಡ್ ಪ್ರಾರಂಭವಾಗುವುದರಿಂದ ಹಿಡಿದು, ಆಪತ್ಕಾಲದಲ್ಲಿ ಛಿದ್ರಗೊಂಡ ಅನಾಥ ಮಕ್ಕಳ ಶಿಕ್ಷಣದ ವ್ಯವಸ್ಥೆಯ ತನಕ ಸಂಘದ ಕಾರ್ಯ ನಡೆದಿದೆ, ಈಗಲೂ ನಡೆಯುತ್ತಿದೆ.




ನಿಮ್ಮಲ್ಲಿ ಯಾರೂ ಯೋಗೇಂದ್ರ ಅಥವಾ ಬೃಜಮೋಹನ್ ಬಿಷ್ಟ್ ಅವರ ಹೆಸರನ್ನು ಕೇಳದಿರಬಹುದು. ಸಂಘದ ಇಬ್ಬರು ಸ್ವಯಂಸೇವಕರು ಸೇನೆ ಅಥವಾ ವಾಯುಪಡೆಯು ಸ್ಥಳಕ್ಕೆ ತಲುಪುವ ಮುನ್ನವೇ ಯಾತ್ರಿಗಳನ್ನು ಸುರಕ್ಷಿತವಾಗಿ ಖಾಸಗಿ ಹೆಲಿಕಾಪ್ಟರ್ನಲ್ಲಿ ರವಾನಿಸಲು ಪ್ರಾರಂಭಿಸಿದ್ದರು. ಜೂನ್ ತಿಂಗಳ 16 ಮತ್ತು 17 ಭೀಷಣ ವರ್ಷಾಧಾರೆಯು ಎಲ್ಲವನ್ನೂ ಅಲ್ಲೋಲಕಲ್ಲೋಲ ಮಾಡಿತು. ಇಂತಹ ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್ ಕೆಳಗಿಳಿಸಲು ಹೆಲಿಪ್ಯಾಡ್ ಎಲ್ಲಿ ಸಿಗುತ್ತದೆ?? ಆಗ ತಮ್ಮ ಪ್ರಾಣದ ಹಂಗನ್ನು ತೊರೆದು ಸಾಹಸಿ ಯುವಕರು ಪ್ಯಾರಾಚೂಟಿನಿಂದ ಜಿಗಿದು ಮೊದಲ ಹೆಲಿಪ್ಯಾಡನ್ನು ನಿರ್ಮಿಸಿದರು. ನಂತರ ರಾಮಬಾಡ, ಕೇದಾರನಾಥ ಮಂದಿರಗಳ ಹಿಂಭಾಗದಲ್ಲೂ ಮತ್ತು ಜಂಗಲ್ಚಟ್ಟಿಯಲ್ಲಿಯೂ ಇವರುಗಳೇ ಸೇನೆಯ ಸಹಾಯದಿಂದ ಹೆಲಿಪ್ಯಾಡ್ ತಯಾರಿಸಿದರು.




ಇಷ್ಟೇ ಅಲ್ಲ, ಶೀಘ್ರವೇ ರಾಮಬಾಡ, ಘೋಡಾಪಡಾವ್, ಮತ್ತು ಗೌರೀಕುಂಡದಲ್ಲಿ ಸಿಕ್ಕಿಹಾಕಿಕೊಂಡಿದ್ದ ಯಾತ್ರಿಗಳನ್ನು ಹೆಲಿಕಾಪ್ಟರ್ ನಲ್ಲಿ ಸಾಗಿಸುವ ಕೆಲಸವನ್ನು ಪ್ರಾರಂಭಿಸಿದರು. ಕೆಲವೊಮ್ಮೆ 50 ಅಡಿಗಳ ಎತ್ತರದಿಂದ ಹಗ್ಗದ ಮೂಲಕ ಕೆಳಗಿಳಿದು ಯಾತ್ರಿಗಳನ್ನು ಹೊರಗೆಳೆಯುವ ಸಾಹಸವನ್ನೂ ಮಾಡಬೇಕಾಯಿತು. ಅಂದರೆ... ಸೇನೆಯಲ್ಲಿ ಕಠಿಣ ತರಬೇತಿ ಹೊಂದಿದ ಮೇಲೆ ಯೋಧರು ಮಾಡುವ ಕೆಲಸಗಳನ್ನೆಲ್ಲ ಯೋಗೇಂದ್ರ ಮತ್ತು ಬೃಜಮೋಹನ್ ಮಾಡಿದರು. ಸಾಹಸಕ್ಕೆ ಪಿನಾಕಲ್ ಏವಿಯೇಶನ್ ಕಂಪನಿಯ ಅಧಿಕಾರಿಗಳು ನಕಾರ ಸೂಚಿಸಿದ್ದರೂ, ತಮ್ಮ ನೌಕರಿಯನ್ನೇ ಪಣವಾಗಿಟ್ಟು ಯುವ ಸ್ವಯಂಸೇವಕರು ರಕ್ಷಣಾ ಕಾರ್ಯವನ್ನು ಮುಂದುವರೆಸಿದರು.




 
ಗಣೇಶ್ ಅಗ್ಗೋಡಾ ಎಂಬವರಂತೂ, ಒಬ್ಬ ಹೃದ್ರೋಗಿ ವೃದ್ಧರನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು, ಮಂಜಗಾವನಿಂದ ಮುನೇರಿಯವರೆಗೆ 6 ಕಿ. ಮೀ. ದೂರವನ್ನು ನಡೆದು ಕ್ರಮಿಸಿ, ಅವರನ್ನು ಪಾರುಮಾಡಿದ್ದನ್ನು ಇಲ್ಲಿ ಹೇಳಲೇಬೇಕು. ಇಂತಹದೇ ಅದೆಷ್ಟೋ ರೋಚಕ ಕಥೆಗಳು ಘಾಟಿಯಲ್ಲಿ ತೇಲಿಹೋಗಿವೆ, ಅಥವಾ ಮರೆತು ಹೋಗಿವೆ. ಕಠಿಣ ಪರಿಸ್ಥಿತಿಗಳಲ್ಲಿ ಸಂಘದ ಸ್ವಯಂಸೇವಕರು ಸೇವೆಯ ಪರಿಚಾರಕರಾಗಿಯೋ, ಇಲ್ಲ ಪಾಲಕರಾಗಿಯೋ, ಯಾತ್ರಿಗಳೊಂದಿಗೆ ಸದಾ ಬೆನ್ನೆಲುಬಾಗಿ ನಿಂತಿರುತ್ತಾರೆ. ಮನೇರಿ ಸೇವಾಶ್ರಮದ ವತಿಯಿಂದ ಚಂಬಾದ ದಿಖೋಲ್ ಗ್ರಾಮದಿಂದ ಹಿಡಿದು ಊಖೀಮಠದ ಆಸುಪಾಸಿನಲ್ಲಿರುವ ಭ್ಯೋಡಾಂಡ್ ತನಕ 68 ಗ್ರಾಮಗಳಲ್ಲಿ ಪುನರ್ವಸತಿ ಶಿಬಿರಗಳಿಂದ ಊಟ, ಬಟ್ಟೆ, ಪಾತ್ರೆ, ಸರಂಜಾಮು ಮತ್ತಿತರ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲಾಯಿತು. ಮನೇರಿ ಒಂದರಲ್ಲೇ 10,000 ಯಾತ್ರಾರ್ಥಿಗಳು ಭೋಜನ ಮಾಡಿದರು. ದಿಖೋಲ್ ನಲ್ಲಿ 20,000 ಜನರಿಗೆ ಅವಶ್ಯಕ ಸಾಮಗ್ರಿಗಳನ್ನು ನೀಡಲಾಯಿತು. ಚಮೋಲಿಯ ಸರಸ್ವತಿ ಶಿಶುಮಂದಿರ ಮತ್ತು ಮನೇರಿಯ ಸೇವಾಶ್ರಮ ಎರಡೂ ಕಡೆಗಳಲ್ಲಿ ಬಹಳ ದಿನಗಳವರೆಗೆ ರಕ್ಷಣಾ ತಾಣಗಳು ವ್ಯವಸ್ಥಿತವಾಗಿ ನಡೆದವು. ಯಾತ್ರಿಗಳು ಹಾಗೂ ಸೇನೆಯ ಯೋಧರು, ಎಲ್ಲರೂ ಇಲ್ಲಿ ಊಟೋಪಚಾರ ಸ್ವೀಕರಿಸಿದರು.




ವಿಪತ್ತಿನ ಸಮಯದ ನಂತರ ಉಳಿದ ಸಂಘಟನೆಗಳು ಅಲ್ಲಿಂದ ಸಾಮಾನು ಸರಂಜಾಮುಗಳನ್ನು ಒಟ್ಟುಮಾಡಿ ಹೊರಡಲು ಅನುವಾದಾಗಲೂ, ಸರ್ಕಾರದ ಸಹಾಯದ ವೇಗವು ಮಂದಗತಿಯನ್ನು ಪಡೆದುಕೊಂಡಾಗಲೂ, ಅಲ್ಲಿ ಉತ್ತರಾಖಂಡದ ವಿಪತ್ತು ರಕ್ಷಣಾ ಸಮಿತಿಯ ವತಿಯಿಂದ ಸಂಘದ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇದ್ದವು. ಗೌರೀಕುಂಡ, ರಾಮಬಾಡ, ಸೋನಾರಚಟ್ಟೀ, ಸೋನಪ್ರಯಾಗ ಎಲ್ಲವನ್ನೂ ಒಳಗೊಂಡ ಕೇದಾರಘಾಟಿಯಲ್ಲಿ ಈಗ ನೀರವತೆ ತಾಂಡವಾಡುತ್ತಿತ್ತು. ಸ್ಥಳೀಯರು ತಮ್ಮ ಮನೆ ಮಠಗಳನ್ನು ಕಳೆದುಕೊಳ್ಳುವುದರೊಂದಿಗೆ ಕೆಲಸಗಳನ್ನೂ ಕಳೆದುಕೊಂಡು ಹತಾಶರಾಗಿದ್ದರು. ಬದುಕುವ ಯಾವುದೇ ಸಣ್ಣ ಆಸರೆಯೂ ಸಿಗದಾಗಿತ್ತು. ಇಂತಹ ಸಂದರ್ಭದಲ್ಲಿ ಸಮಿತಿಯು ಪುನರ್ವಸತಿ ಕಾರ್ಯವನ್ನು ಪ್ರಾರಂಭಿಸಿತು ಮತ್ತು ಈಗಲೂ ಮುಂದುವರಿಸುತ್ತಿದೆ.




ಸಮಿತಿಯ ಸಂಘಟನೆಯ ಮುಖ್ಯಸ್ಥ ರಾಜೇಶ್ ಥಪಲಿಯಾಲ್ ಹೀಗೆ ಹೇಳುತ್ತಾರೆ : ಜಲಪ್ರಳಯದಲ್ಲಿ ಅನಾಥರಾಗಿದ್ದ 6 ರಿಂದ 12 ವರ್ಷಗಳವರೆಗಿನ 200 ಮಕ್ಕಳಿಗೆ ನೈಠವಾಡ, ಲಕ್ಷೇಶ್ವರ, ಕೋಟೀಕಾಲೋನಿ ಮತ್ತು ಗುಪ್ತಕಾಶಿಗಳಲ್ಲಿ ನಾಲ್ಕು ಹಾಸ್ಟೆಲ್ ಗಳನ್ನು ಪ್ರಾರಂಭಿಸಲಾಯಿತು. ಈಗಲೂ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಬಂದಿಲ್ಲ. ಗ್ರಾಮಗಳಲ್ಲಿ ಸೋಲಾರ್ ಲ್ಯಾಂಪುಗಳನ್ನು ವಿತರಿಸಲಾಗಿದೆ, ಪೀಡಿತ ಪ್ರದೇಶಗಳ 100 ಬಡ ಮಕ್ಕಳಿಗೆ ಶಿಕ್ಷಣವನ್ನು ಮುಂದುವರೆಸುವ ಸಲುವಾಗಿ ತಿಂಗಳಿಗೆ 1000 ರೂಪಾಯಿಗಳನ್ನು ವಿದ್ಯಾರ್ಥಿ ಸಹಾಯಧನವಾಗಿ ನೀಡಲಾಗಿದೆ. ಉಷಾಡಾ, ಸ್ಯಾನಟ್ಟಿ ಮುಂತಾದ 8 ಗ್ರಾಮಗಳಲ್ಲಿ ವೈದ್ಯಕೀಯ ಕೇಂದ್ರಗಳು ಪ್ರಾರಂಭವಾಗಿವೆ. ನಿರ್ನಾಮಗೊಂಡ ಗ್ರಾಮಗಳ ವಿಧವೆಯರಿಗೆ ಹಾಗೂ ಕೆಲಸವಿಲ್ಲದ ಯುವಕರಿಗೆ ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇಷ್ಟೇ ಅಲ್ಲ, ಮಕ್ಕಳಿಗೆ ಓದಲು ಸಹಾಯವಾಗುವಂತೆ ಪ್ರಾಥಮಿಕ ಹಂತದಲ್ಲಿ 4 ಶಿಶುಮಂದಿರಗಳು ಮತ್ತು 8 ಬಾಲಸಂಸ್ಕಾರ ಕೇಂದ್ರಗಳು ಘಾಟಿಯಲ್ಲಿ ಪ್ರಾರಂಭವಾಗಿವೆ. ನಾರಾಯಣಕೋಟಿಯಲ್ಲಿ 30 ಹಾಸಿಗೆಗಳ ಆಸ್ಪತ್ರೆಯೂ ಶುರುವಾಗಿದೆ, ವಿಪತ್ತಿನಲ್ಲಿ ಸಿಕ್ಕಿಹಾಕಿಕೊಂಡಿರುವವರಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ಎಲ್ಲರೂ ಜಲಪ್ರಳಯವನ್ನು ಮರೆತುಬಿಟ್ಟರೂ, ಸಮಿತಿಯ ವತಿಯಿಂದ ಸ್ವಯಂಸೇವಕರು ಈಗಲೂ ಪುನರ್ವಸತಿ ಕಾರ್ಯದಲ್ಲಿ ತೊಡಗಿಕೊಂಡೇ ಇದ್ದಾರೆ.


ಸಂಪರ್ಕ - ರಾಜೇಶ್ ಥಪಲಿಯಾಲ್

9410196581


1225 Views
अगली कहानी