सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಸಿಸ್ಟರ್ ನಿವೇದಿತಾ ಫೌಂಡೇಶನ್ – ಸ್ವಾಧಾರ ಸಾಂಗ್ಲಿ, ಮಹಾರಾಷ್ಟ್ರ

ರೂಪಶ್ರೀ ನಾಗರಾಜ್ | ಸಾಂಗ್ಲಿ | ಮಹಾರಾಷ್ಟ್ರ

parivartan-img

ಚಿನ್ನವು ಬೆಂಕಿಯಲ್ಲಿ ಕಾದ ಮೇಲೆಯೇ ಒಡವೆಯಾಗಿ ತಯಾರಾಗುವಂತೆ ಸಂಘರ್ಷವೂ ಜೀವನದ ಒಂದು ಶೃಂಗಾರವೇ ಆಗಿದೆ. ಜೀವನದ ಉಗಮ ಸಂಘರ್ಷದಿಂದಲೇ ಆಗುತ್ತದೆ. ಸರಿಯಾದ ಹಾದಿ ಮತ್ತು ಮಾರ್ಗದರ್ಶನ ಎರಡೂ ಸಿಕ್ಕಿದರೆ ಇದೇ ಸಂಘರ್ಷವು ಜೀವನವನ್ನು ಸಫಲವಾಗಿಸುತ್ತದೆ.


ಸ್ವರ್ಗೀಯ ಡಾಕ್ಟರ್ ಕುಸುಮಾತಾಯಿಯವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಗಿನಿ ನಿವೇದಿತ ಪ್ರತಿಷ್ಠಾನದ ಮೂಲಕ ಈ ರೀತಿಯ  ಸಂಘರ್ಷಮಯ ಜೀವನವನ್ನು ಸಾಗಿಸುತ್ತಿದ್ದ ಅನೇಕರಿಗೆ ಆತ್ಮವಿಶ್ವಾಸ ತುಂಬಿ ಅವರನ್ನು ಪ್ರೇರಣಾದಾಯಿ ವ್ಯಕ್ತಿಗಳನ್ನಾಗಿ ಮಾಡಿದರು. ಕೇವಲ ಆರು ವರ್ಷದ ಕಾಜಲಳ ತಂದೆ ತಾಯಿಯರು ಒಂದು ಗಂಭೀರ ರೋಗಕ್ಕೆ ತುತ್ತಾಗಿ ಈ ಲೋಕ ತ್ಯಜಿಸಿದಾಗ ಕಾಜಲಳು ಈ ದುಃಖವು ತನ್ನನ್ನು ಆವರಿಸಿಕೊಳ್ಳದ ಹಾಗೆ ನೋಡಿಕೊಂಡಳು. ಇಂದು ಇಡೀ ಆಶ್ರಮದವರಿಗೆ ಅವಳ ಮೇಲೆ ಗರ್ವವಿದೆ. ಅವಳು ತನ್ನ ವಿದ್ಯಾಭ್ಯಾಸ ಮುಗಿಸಿ ತನ್ನ ಸ್ವಂತ ಆರ್ಟ್ ಸ್ಟುಡಿಯೋ ಆರಂಭಿಸಿ ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ಬಾಳುತ್ತಿದ್ದಾಳೆ. ಹಾಗೆಯೇ ಇನ್ನೊಂದೆಡೆ ಕವಿತಾ ಅಶೋಕ್ ಗಾಯಕವಾಡ್


ಬಾಲ್ಯದಿಂದಲೇ ತಾಯಿ ತಂದೆಯರಿಂದ ದೂರವಾಗಿ ಆಶ್ರಮದಲ್ಲೇ ಬೆಳೆದು ತನ್ನ ಜೀವನದ ಸಂಘರ್ಷಗಳಿಂದ ಹೊರಬಂದು ಇಂದು ಒಂದು ಸುಂದರವಾದ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾಳೆ. ಕೊಥರುಡ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವುದಲ್ಲದೆ ದೇಶಾಭಿಮಾನವನ್ನು ಮೆರೆಯುವ ಒಬ್ಬ ಪೊಲೀಸ್ ಆಗಿ ದೇಶಕ್ಕೆ ತನ್ನ ನಿಜವಾದ ಸೇವೆಯನ್ನು ಸಲ್ಲಿಸುತ್ತಿದ್ದಾಳೆ.

ಸಮಾಜದಲ್ಲಿ ತಮ್ಮ ಕತ್ತಲು ಕವಿದ ಬಾಲ್ಯದಲ್ಲಿ ದುರ್ಮಾರ್ಗದಲ್ಲಿ ನಡೆಯುತ್ತಿದ್ದ ಅಥವಾ ಯಾವುದೋ ಗಂಭೀರವಾದ ಶಾರೀರಿಕ ಅಥವಾ ಮಾನಸಿಕ ರೋಗಗಳಿಂದ ಪೀಡಿತರಾಗಿದ್ದ ಅನೇಕ ಹುಡುಗಿಯರ ಕೈ ಹಿಡಿದು ಪೋಷಿಸಿ, ಭಗಿನಿ ನಿವೇದಿತಾ ಪ್ರತಿಷ್ಠಾನವು ಸಮಾಜದಲ್ಲಿ ತನ್ನ ಆಶ್ರಮದ ಮೂಲಕ ಒಳ್ಳೆಯ ನಡತೆ ಮತ್ತು ಸಂಸ್ಕಾರಗಳನ್ನು ನೀಡಿ ಒಂದು ಆದರ್ಶ ಸಮಾಜವನ್ನು ನಿರ್ಮಿಸಲು ಪ್ರೇರಣೆ ನೀಡಿದೆ. ಇಂದು ಈ ಎಲ್ಲ ಹುಡುಗಿಯರೂ ಪ್ರತಿಷ್ಠಾನದ ಹೆಮ್ಮೆಯ ಕುಡಿಗಳಾಗಿದ್ದಾರೆ.


1970ರ ಏಪ್ರಿಲ್ನಲ್ಲಿ ಡಾಕ್ಟರ್ ಕುಸುಮಾತಾಯಿ ಘಾಣೇಕರ್ ಅವರಿಂದ ಭಗಿನಿ ನಿವೇದಿತಾ ಪ್ರತಿಷ್ಠಾನದ ಸ್ಥಾಪನೆಯಾಯಿತು. ವಿಭಿನ್ನ ಆಯಾಮಗಳನ್ನು ಒಳಗೊಂಡ ಈ ಪ್ರತಿಷ್ಠಾನದಲ್ಲಿ ಇದುವರೆಗೆ 14,000ಕ್ಕೂ ಅಧಿಕ ಹೆಣ್ಣುಮಕ್ಕಳು ಮತ್ತು ಸ್ತ್ರೀಯರು ಸರಿಯಾದ ಮಾರ್ಗದರ್ಶನ, ಶಿಕ್ಷಣ ಮತ್ತು ಸಹಕಾರದೊಂದಿಗೆ ತಮ್ಮ ಬದುಕಿಗೆ ಯೋಗ್ಯವಾದ ಹೊಸ ರೂಪನ್ನು ಪಡೆದುಕೊಂಡಿದ್ದಾರೆ. ಒಬ್ಬ ಆಯುರ್ವೇದ ವೈದ್ಯೆ ಮತ್ತು ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕರ್ತೆಯಾಗಿ ಕುಸುಮಾ ತಾಯಿಯವರು ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಗಂಭೀರ ಪರಿಸ್ಥಿತಿಗಳನ್ನು ಬಹಳ ಹತ್ತಿರದಿಂದ ನೋಡಿದ್ದರು. ಒಬ್ಬ ಒಳ್ಳೆಯ ಪರಿಣತಿಯನ್ನು ಹೊಂದಿದ ವೈದ್ಯೆಯಾದ ಕಾರಣ, ಮಹಿಳೆಯರನ್ನು ಸಂಪೂರ್ಣ ಸ್ವಸ್ಥರನ್ನಾಗಿ ಮಾಡಲು ಕೇವಲ ಶಾರೀರಿಕ ರೂಪದಿಂದ ಮಾತ್ರವಲ್ಲ, ಅವರೆಲ್ಲರ ಮಾನಸಿಕ ಸ್ತರಗಳನ್ನೂ ಸುದೃಢ ಮತ್ತು ಸಕ್ಷಮ ಮಾಡಬೇಕೆಂದು ಅವರು ಅರಿತಿದ್ದರು. ಸಮಾಜದ ಒಳಗೊಳಗೇ ಅವಿತಿರುವ ಕ್ಷುದ್ರ ಮನಸ್ಸುಗಳು, ಅಶಿಕ್ಷಣ, ಅಜ್ಞಾನ, ಅಪೌಷ್ಟಿಕ ಆಹಾರ, ಹೀಗೆ ಅನೇಕ ಮಜಲುಗಳಲ್ಲಿ ಸರಿಯಾದದ್ದನ್ನು ಹುಡುಕಬೇಕಾದ ಅಗತ್ಯವಿತ್ತು. ನಿವೇದಿತಾ ಪ್ರತಿಷ್ಠಾನವು ಮೊಟ್ಟಮೊದಲಿಗೆ ಚಿಕ್ಕ ವಯಸ್ಸಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ತನ್ನ ದೇಹವನ್ನು ಅನಿವಾರ್ಯವಾಗಿ ಮಾರಿಕೊಳ್ಳುವ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಹುಡುಗಿಯರು ಮತ್ತು ಮಹಿಳೆಯರಿಗೆ ಆಶ್ರಯ ನೀಡಿ ಊಟ ಇತ್ಯಾದಿಗಳ ವ್ಯವಸ್ಥೆ ಮಾಡಲು "ಮಾಹೆರ್" (ಅಮ್ಮನ ಮನೆ) ಯೋಜನೆಯನ್ನು ಆರಂಭಿಸಿತು. ಈ ಯೋಜನೆ ವರ್ತಮಾನದಲ್ಲಿ "ಸ್ವಾಧಾರ" ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.

 ಸಂಸ್ಥೆಯ ಮುಖ್ಯಸ್ಥರು ಮತ್ತು ವಿದ್ಯಾರ್ಥಿ ಪರಿಷತ್ತಿನ ಪೂರ್ಣಕಾಲಿಕ ಕಾರ್ಯಕರ್ತೆಯೂ ಆಗಿರುವ ವಿನಿತಾ ತೆಲಂಗ್ ದೀದಿ ಹೇಳುತ್ತಾರೆ, ಯಾವುದೇ ಪ್ರಕಾರದಲ್ಲಿ ಪೀಡಿತರಾಗಿರುವ ಮಹಿಳೆಯರು ಆರು ತಿಂಗಳಿಂದ ಎರಡು ವರ್ಷಗಳವರೆಗೆ ಇಲ್ಲಿ ಉಚಿತವಾಗಿ ಇರಬಹುದು. ಅವರಿಗೆ ಆ ಸಂದರ್ಭದಲ್ಲಿ ಶಾರೀರಿಕ ಹಾಗೂ ಮಾನಸಿಕ ಬೆಂಬಲ, ಕಾನೂನಿನ ಸಲಹೆ, ವೈದ್ಯಕೀಯ ಸೌಲಭ್ಯಗಳು ಸಿಗುತ್ತವೆ. ಜೊತೆಗೆ ಕೌಶಲ್ಯ ಅಭಿವೃದ್ಧಿಯ ಮೂಲಕ ಆತ್ಮ ನಿರ್ಭರರಾಗಲು ಸಕಲ ಸಿದ್ಧತೆಗಳನ್ನು ಮಾಡಿಕೊಡಲಾಗುತ್ತದೆ. ಸರ್ಕಾರಿ ಯೋಜನೆಗಳ ಜೊತೆಜೊತೆಗೆ ಎಲ್ಲರನ್ನೂ ಒಟ್ಟಾಗಿ ಸೇರಿಸಿ ಮಹಿಳೆಯರಲ್ಲಿ ಜನಜಾಗೃತಿ ಶಿಬಿರ, ವಿವಿಧ ಯೋಜನೆಗಳ ಮೂಲಕ ತರಬೇತಿ, ಕ್ಯಾಂಟೀನ್ ನಡೆಸುವುದು, ಸ್ಟೇಷನರಿ ಅಂಗಡಿ, ಆಫೀಸಿನ ಫೈಲ್ಗಳನ್ನು ತಯಾರಿಸುವುದು, ಮೊದಲಾದ ಅನೇಕ ರೀತಿಯ ಉದ್ಯೋಗಗಳ ಮೂಲಕ ಪ್ರೋತ್ಸಾಹ ನೀಡಿ ಮಹಿಳೆಯರನ್ನು ಆತ್ಮನಿರ್ಭರರನ್ನಾಗಿ ಮಾಡಲಾಗುತ್ತದೆ. ಸ್ವಾಧಾರ ಗೃಹದಿಂದ ನಿಯಮಿತವಾಗಿ ಬ್ಯೂಟಿ ಪಾರ್ಲರ್, ಪೇಪರ್ ಬ್ಯಾಗ್ ಗಳನ್ನು ಮಾಡುವ ತರಬೇತಿಯನ್ನು ನೀಡಲಾಗುತ್ತದೆ. ಈ ಮೂಲಕ ಅನೇಕ ಹುಡುಗಿಯರು ಪಾರ್ಲರ್ ಮತ್ತು ನರ್ಸಿಂಗ್ ತರಬೇತಿಗಳನ್ನು ಪೂರೈಸಿ ಆಯಾಯ ಕ್ಷೇತ್ರಗಳಲ್ಲಿ ಕಾರ್ಯನಿರತರಾಗಿದ್ದಾರೆ.

ಸಮಾಜದಲ್ಲಿ ಕಂಡುಬರುವ ದೇವದಾಸಿಯರ ಸಾಮಾಜಿಕ ಪಿಡುಗುಗಳು ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿವೆ. ಕುಸುಮಾತಾಯಿಯವರು ಆಂದೋಲನ ನಡೆಸಿ ನೇತಾರರಾಗದೆ, ಇವರುಗಳಿಗೆ ಪ್ರೀತಿಯ ತಾಯಿಯಾದರು. ಸಾಮಾಜಿಕ ಪತನದ ಹಾದಿಯಲ್ಲಿ ಅಶಿಕ್ಷಣ ಮತ್ತು ಅಜ್ಞಾನದಿಂದ ಬಾರಿಬಾರಿಗೂ ಮೋಸ ಹೋಗುತ್ತಿದ್ದ ಈ ಹೆಣ್ಣು ಮಕ್ಕಳ ಸುಂದರ ಭವಿಷ್ಯದ ಬಗ್ಗೆ ಯೋಚಿಸುವುದಿರಲಿ, ಅವರನ್ನು ಈ ವರ್ತುಲದಿಂದ ಹೊರತರಲೂ ಸಹ ಸಾಧ್ಯವಾಗುತ್ತಿರಲಿಲ್ಲ. ಈ ಅಂಧಕಾರಗಳನ್ನು ದೂರ ಮಾಡುವ ಸಲುವಾಗಿ ಪ್ರತಿಷ್ಠಾನವು ಒಂದು ಸುರಕ್ಷಿತ ನಿವಾಸವನ್ನು ಸ್ಥಾಪಿಸಿತು. ಅಲ್ಲಿ 6 ವರ್ಷದ ಹೆಣ್ಣು ಮಕ್ಕಳು ಪೂರ್ತಿ ಶಿಕ್ಷಣ ಪಡೆದು, ಯೌವ್ವನಾವಸ್ಥೆಗೆ ಬರುವ ತನಕ ನಿಶ್ಚಿಂತೆಯಿಂದ ಆತ್ಮನಿರ್ಭರರಾಗಿ ಬೆಳೆದು, ಸಮಾಜದಲ್ಲಿ ಸ್ವಾಭಿಮಾನದಿಂದ ಜೀವಿಸಲು ಪ್ರೇರಣೆ ನೀಡಿತು.

ಅವರ ಈ ಮಹತ್ವದ ನಿರ್ಧಾರದಿಂದ ದೇವದಾಸಿಯರ ಜೀವನದಲ್ಲಿ ಅಷ್ಟೇ ಅಲ್ಲ, ಸಮಾಜದ ಆಲೋಚನೆಯಲ್ಲೂ ಪರಿವರ್ತನೆ ತರುವ ಒಂದು ಮಹತ್ವಪೂರ್ಣ ಬದಲಾವಣೆಯಾಯಿತು. ಎಷ್ಟೇ ಕಷ್ಟಗಳಿದ್ದರೂ ದೃಢ ಸಂಕಲ್ಪವಿದ್ದರೆ ಖಂಡಿತವಾಗಿ ಗುರಿಯನ್ನು ಮುಟ್ಟಬಹುದು.

ಹೆಚ್ಐವಿ ಅಂತಹ ಭಯಾನಕ ರೋಗದ ಬಗ್ಗೆ  ಯಾರಿಗೂ ತಿಳಿದಿರದ ಸಮಯದಲ್ಲಿ ಕುಸುಮಾತಾಯಿಯವರ ಸಾಹಸ ಮತ್ತು ನಿಸ್ವಾರ್ಥ ಸೇವೆಯ ಪರಿಣಾಮವಾಗಿ ಭಗಿನಿ ನಿವೇದಿತಾ ಪ್ರತಿಷ್ಠಾನವು ಆರಂಭವಾಯಿತು. ಇದು ಇಡೀ ಏಷ್ಯಾ ಖಂಡದಲ್ಲಿಯೇ ಪ್ರಥಮ ಪ್ರತಿಷ್ಠಾನವಾಯಿತು. ಅಲ್ಲಿ ಹೆಚ್ಐವಿ ಪಾಸಿಟಿವ್ ಇದ್ದ ಹುಡುಗಿಯರು ಮತ್ತು ಮಹಿಳೆಯರಿಗೆ ವಸತಿ ಮತ್ತು ಊಟೋಪಚಾರದ ಕೇಂದ್ರವನ್ನು ನಡೆಸಲಾಯಿತು. ಅಲ್ಲಿ ಅವರ ಶಿಕ್ಷಣ ಆರೋಗ್ಯ ಮತ್ತು ಕೌಶಲ್ಯ ವಿಕಾಸದ ಸಂಪೂರ್ಣ ವ್ಯವಸ್ಥೆಯು ಸರಕಾರ ಮತ್ತು ಸಮಾಜದ ಸಹಯೋಗದಿಂದ ನಡೆಯುತ್ತಿದೆ.

ವರ್ತಮಾನದಲ್ಲಿ ಸಾಂಗ್ಲಿಯ ಯಶವಂತ ನಗರದಲ್ಲಿ ಏಡ್ಸ್ ನಿಂದ ಬಾಧಿತರಾದ ಹುಡುಗಿಯರ ನಿವಾಸಿ ಆಶ್ರಮವಿದೆ.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಬೌದ್ಧಿಕ ಪ್ರಮುಖರಾದ ಸುನಿಲ್ ಕುಲಕರ್ಣಿ ಹೇಳುತ್ತಾರೆ, ಸಾಂಗ್ಲಿಯಲ್ಲಿ ಸಂಸ್ಥೆಯ ಮೂಲಕ ಹಲವಾರು ಕ್ಷೇತ್ರಗಳಲ್ಲಿ ಕಾರ್ಯಗಳು ನಡೆಯುತ್ತಿವೆ. 2 ಅನಾಥಾಶ್ರಮ, 2 ಕೌಟುಂಬಿಕ ಸಲಹಾ ಕೇಂದ್ರಗಳು, ಪೀಡಿತ ಮಹಿಳೆಯರಿಗೆ ಅಲ್ಪ ಸೌಲಭ್ಯಗಳಿರುವ ನಿರ್ಮಿತಿ ಕೇಂದ್ರ, ಸ್ವಾಧಾರ, ಅನ್ನಪೂರ್ಣ ಟೆಕ್ನಾಲಜಿ ಟ್ರೈನಿಂಗ್ ಸೆಂಟರ್ ಮತ್ತು ಅಲ್ಪ ಶಿಕ್ಷಣ ಹೊಂದಿದ, ಅವಶ್ಯಕತೆ ಇರುವ ಹುಡುಗರು ಮತ್ತು ಹುಡುಗಿಯರಿಗೆ ಡಾಕ್ಟರ್ ಕುಸುಮಾತಾಯಿ ಘಣೇಕರ್ ವ್ಯವಸಾಯ ತರಬೇತಿ ಕೇಂದ್ರ ನಡೆಯುತ್ತಿದೆ. ಈ ಕೇಂದ್ರಕ್ಕೆ ಒಕೇಶನಲ್ ವಾರ್ಡ್ ಎಂಬ ಮಾನ್ಯತೆಯೂ ದೊರೆತಿದೆ. ಇಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ಗಳು ಮತ್ತು ಬ್ಯೂಟಿ ಪಾರ್ಲರ್ ಮತ್ತು ಫ್ಯಾಶನ್ ಡಿಸೈನಿಂಗ್ ಕೋರ್ಸ್ಗಳು ನಡೆಯುತ್ತಿವೆ. ಕಲಿಯುವ ಹುಡುಗಿಯರಿಗೆ ಇಲ್ಲಿ ವಸತಿಗೃಹದ ಸೌಲಭ್ಯವು ಇದೆ.

ಕುಸುಮಾತಾಯಿಯವರ ದೂರದೃಷ್ಟಿಯಿಂದ ಆರಂಭವಾದ ಈ ಸಂಸ್ಥೆಯು 50 ವರ್ಷಗಳನ್ನು ಪೂರೈಸಿದೆ ಮತ್ತು ಮಹಿಳೆಯರಿಗೆ ಕಾಲಕ್ಕೆ ತಕ್ಕ ಹಾಗೆ ಯೋಜನೆಗಳು ನಡೆಯುತ್ತಿವೆ. ಈ ಸ್ವಾಧಾರ ಪ್ರತಿಷ್ಠಾನವು ದೇಶದ ಹೆಮ್ಮೆಯಾಗಿದೆ

56 Views
अगली कहानी