नियमित अपडेट के लिए सब्सक्राईब करें।
5 mins read
ದಕ್ಷಿಣ
ಪ್ರಜ್ಞಾಹೀನ ಮಗುವಿನ ದೇಹದ ಮೇಲೆ ವೈದ್ಯರ ಬೆರಳುಗಳು ಚಲಿಸುತ್ತಿದ್ದಾಗಲೆಲ್ಲಾ ಮಗುವಿನಲ್ಲುಂಟಾಗುತ್ತಿದ್ದ ಚಲನೆಯನ್ನು ಕಂಡು ತಾಯಿಯ ಕಣ್ಣುಗಳಲ್ಲಿ ಸಂತಸದ ಹೊಳಪು ಹೆಚ್ಚುತ್ತಿತ್ತು. ಮಗನ ಚಿಕಿತ್ಸೆಗಾಗಿ ನೀರಿನಂತೆ ಹಣವನ್ನು ವ್ಯಯಿಸಿದ ನಂತರವೂ ಚೇತರಿಸಿಕೊಳ್ಳುವ ಯಾವುದೇ ಭರವಸೆ ಇರಲಿಲ್ಲ. ಅಲ್ಲದೇ, ವೈದ್ಯ ಪರಲ್ಕರ್ ಶುಲ್ಕದ ರೂಪದಲ್ಲಿ ಒಂದು ರೂಪಾಯಿಯನ್ನೂ ಪಡೆದಿರಲಿಲ್ಲ. ಆದರೆ ಈ ಪವಾಡ ಪರಲ್ಕರರ ಕೈಯ ಮಸಾಜಿನಿಂದಾದದ್ದೋ ಅಥವಾ ಮಾಧವರಾಯರಲ್ಲಿ ರಕ್ತಗತವಾಗಿರುವ ನಿಸ್ವಾರ್ಥ ಸೇವೆಯಿಂದಾದದ್ದೋ ತಿಳಿಯದು. ಗಂಭೀರ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆ ಮಗು 6 ಗಂಟೆಯೊಳಗೆ ಎದ್ದು ಕುಳಿತಿತ್ತು.ಅದೇ ಬಾಲಕ ಇಂದು ಮುಂಬಯಿನ ಅತ್ಯಂತ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟರಲ್ಲಿ ಒಬ್ಬನಾಗಿದ್ದಾನೆ.
ಸಿ. ಎ. ಕಂಚನ್ ನಾರಂಗ್ ರಂತಹ ಅದೆಷ್ಟೋ ರೋಗಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರ ಪಾಲಿಗೆ ಮಾಧವ್ ರಾವ್'ಜಿ ದೇವರೇ ಆಗಿದ್ದರು. ಡಾ.ಪರಲ್ಕರರು ಎಂತಹ ಪ್ರಚಾರಕರಾಗಿದ್ದರೆಂದರೆ ಅವರ ಅಮೂಲ್ಯವಾದ ಜೀವನ ಸೇವಾ ಗಂಗೋತ್ರಿಯೇ ಆಗಿತ್ತು. ಅದೆಷ್ಟೋ ರೋಗಿಗಳ ಮತ್ತು ಅವರ ಪರಿವಾರದವರ ಕಷ್ಟಗಳನ್ನು ಪರಿಹರಿಸಿದರು. ಡಾಕ್ಟರ್ ಪರಲ್ಕರರಿಂದ ಸ್ಥಾಪಿಸಲ್ಪಟ್ಟ "ನಾನಾ ಪಾಲ್ಕರ್ ರುಗ್ಣ ಸೇವಾ ಸದನವು", ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ ಒಂದು ವರದಾನವೇ ಸರಿ.
ಬಾಲ್ಯದಿಂದಲೇ ಸಂಘದ ಸ್ವಯಂಸೇವಕರಾಗಿದ್ದ ಮಾಧವರಾವ್ ಪರಲ್ಕರ್, ವಿದ್ಯಾರ್ಥಿಯಾಗಿದ್ದಾಗ ಕಲಿಕೆಯಲ್ಲಿ ಬುದ್ಧಿವಂತರಾಗಿದ್ದರು. 1947ರಲ್ಲಿ ಆಯುರ್ವೇದ ಚಿಕಿತ್ಸೆಯಲ್ಲಿ ಪದವಿ ಪೂರ್ಣಗೊಳಿಸಿ, ಕೆಲ ದಿನಗಳ ಕಾಲ ಕ್ಲಿನಿಕ್ ನಡೆಸಿದ ಅವರು ನಂತರ ಸಂಘದ ಪ್ರಚಾರಕರಾದರು. ಆ ದಿನಗಳಲ್ಲಿ ಅವರು ಬಾಂದ್ರಾದಿಂದ ವಿರಾರ್ ಮತ್ತು ಚೆಂಬೂರಿಗೆ ಸೈಕಲ್ಲಿನಲ್ಲೇ ಓಡಾಡುತ್ತಿದ್ದರು. ಅವರು ತಮ್ಮ ವಾಕ್ಚಾತುರ್ಯ ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಯುವಜನ ವಲಯದಲ್ಲಿ ಬಹಳ ಜನಪ್ರಿಯರಾಗಿದ್ದರು. ಇವರು ಹಲವಾರು ವರ್ಷಗಳ ಕಾಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಆದಾಗ್ಯೂ ಅವರ ಮನಸ್ಸಿನಲ್ಲಿ ಬಡ ರೋಗಿಗಳ ಬಗೆಗಿನ ಸೇವಾ ಮನೋಭಾವವನ್ನು ಗುರುತಿಸಿದ ಅಂದಿನ ಸರಸಂಘಸಂಚಾಲಕರಾದ ಪರಮ ಪೂಜನೀಯ ಶ್ರೀ ಗುರೂಜಿ ಗೋಳವಲ್ಕರ್, ಡಾಕ್ಟರ್ ಪರಲ್ಕರರಿಗೆ ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರ ಊಟ, ವಸತಿಯ ಸೌಲಭ್ಯಕ್ಕಾಗಿ ಒಂದು ಸೇವಾಸದನವನ್ನು ಸ್ಥಾಪಿಸುವ ಗುರುತರ ಜವಾಬ್ದಾರಿಯನ್ನು ನೀಡಿದರು.
ಕ್ಯಾನ್ಸರ್ ಮತ್ತು ಟಿ. ಬಿ. ಯಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಯು ದುಬಾರಿ ಹಾಗೂ ದೀರ್ಘಕಾಲದ್ದಾಗಿರುತ್ತದೆ. ರೋಗಿಗಳಿಗೇನೋ ಆಸ್ಪತ್ರೆಯಲ್ಲಿಯೇ ಆಹಾರವನ್ನು ನೀಡಲಾಗುತ್ತದೆ. ಆದರೆ ಕುಟುಂಬದ ಸದಸ್ಯರಿಗೆ ಮುಂಬೈನಂಥ ಮಹಾನಗರದಲ್ಲಿ ವಸತಿ ಹಾಗೂ ಊಟದ ವೆಚ್ಚವನ್ನು ನಿಭಾಯಿಸುವುದು ಕಷ್ಟಸಾಧ್ಯ.ಇಂದು ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ 10 ಅಂತಸ್ತಿನ ನಾನಾ ಪಾಲ್ಕರ್ ಸ್ಮಾರಕ ರುಗ್ಣ ಸೇವಾಸದನವು ನೂರಾರು ರೋಗಿಗಳಿಗೆ ಹಾಗೂ ಕುಟುಂಬದವರಿಗೆ ಆಪದ್ಬಾಂಧವನೆನಿಸಿದೆ. 10 ರೂಪಾಯಿಗೆ ಊಟ ಮತ್ತು 1 ತಿಂಗಳವರೆಗೆ ಉಚಿತ ವಸತಿ ಈ ಬಡ ಪರಿವಾರದವರಿಗೆ ದೊಡ್ಡ ಸಹಾಯವೇ ಸರಿ.
ತಮ್ಮ ಅವಿರತ ಪರಿಶ್ರಮ ಹಾಗೂ ಸೇವಾಭಾವದ ಬಲದಿಂದ ಪರಲ್ಕರರು ಈ ಸೇವಾಸದನವನ್ನು ಕಟ್ಟಿ ಬೆಳೆಸಿದರು. ಪರಲ್ಕರರು ಸಮಾಜದ ಪ್ರತಿಯೊಂದು ವರ್ಗದವರ ಸಹಕಾರವನ್ನು ಪಡೆದರು. ಸಾಮಾನ್ಯ ಸ್ವಯಂಸೇವಕ ಕುಟುಂಬಗಳಿಂದ ವಾರ್ಷಿಕ 500 ರೂಪಾಯಿ ಪಡೆದರೆ, ಬಿರ್ಲಾ ಫೌಂಡೇಶನ್‌ನ ಮಾಲೀಕ ಆದಿತ್ಯ ಬಿರ್ಲಾರಿಂದ 75 ಲಕ್ಷ ಬೆಲೆಯುಳ್ಳ ಲಿಥೋಟ್ರೆಸ್ಪಿ ಯಂತ್ರವನ್ನು ದಾನವಾಗಿ ಪಡೆದರು. ಅಂತೆಯೇ, ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಉಚಿತವಾಗಿ ಲೇಜರ್ ಶಸ್ತ್ರಚಿಕಿತ್ಸೆ ಮಾಡಲೆಂದು ಡಾಕ್ಟರ್ ಅಜಿತ್ ಫಡಕೆ ಅವರನ್ನು ಮನವೊಲಿಸಿದರು.
ಪರಲ್ಕರ್ ಜಿ ಅವರ ಸತತ ಪ್ರಯತ್ನದಿಂದ ಪ್ರಾರಂಭವಾದ ಗೋಖಲೆ ಡಯಾಲಿಸಿಸ್ ಕೇಂದ್ರದಲ್ಲಿ ಇಂದು 14 ಯಂತ್ರಗಳ ಸಹಾಯದಿಂದ ಹಲವು ಶಿಫ್ಟ್ ಗಳಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಸೇವಾ ಸದನದ ಟ್ರಸ್ಟಿ ಹಾಗೂ ಪರಲ್ಕರರ ಸಹೋದ್ಯೋಗಿಯಾಗಿದ್ದ ವಿವೇಕ್ ಛತ್ರೆಯವರ ಅಭಿಪ್ರಾಯದಂತೆ ವೈದ್ಯಕೀಯ ವಲಯದ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಪರಲ್ಕರ್ ಅಗ್ರಗಣ್ಯರು. ಪರಲ್ಕರರ ಅಪ್ರತಿಮ ಸೇವೆಯಿಂದ ಪ್ರಭಾವಿತರಾಗಿದ್ದ ಮುಂಬೈ ಆಸ್ಪತ್ರೆಯ ಡೀನ್ ಗೋಯಲ್ ರಿಂದ ಹಿಡಿದು ಎಲ್ಲಾ ವೈದ್ಯರೂ, ಸರಳವಾದ ಧೋತಿ ಕುರ್ತಾದಲ್ಲಿರುವ ಈ ಆಯುರ್ವೇದ ವೈದ್ಯರಿಗೆ ಎಲ್ಲಾ ರೀತಿಯ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಿದ್ದರು. ಮಾಧವರಾಯರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಸಮಾಜದ ಹಿತದೃಷ್ಟಿಗಾಗಿ ಮುಡಿಪಾಗಿಟ್ಟಿದ್ದರು.
ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದು, ಖೈದಿಗಳಿಗೆ ಯೋಗ ಕಲಿಸಿದ್ದು ಮಾತ್ರವಲ್ಲದೆ ಮಸಾಜ್ ನ ಅದ್ಭುತ ಕಲೆಯಿಂದ ಉಚಿತವಾಗಿ ನೂರಾರು ರೋಗಿಗಳನ್ನು ಗುಣಪಡಿಸಿದರು. 22 ಫೆಬ್ರವರಿ 2008ರಲ್ಲಿ, ತಮ್ಮ 81ನೇ ವಯಸ್ಸಿನಲ್ಲಿ, ಕೊನೆಯುಸಿರೆಳೆವ ಮುನ್ನ ಅವರು, ಪಾಲ್ಕರ್ ಸ್ಮೃತಿ ಸಂಸ್ಥಾನವನ್ನು ಏಳನೇ ಮಹಡಿಯವರೆಗೆ ಎತ್ತರಿಸಿದ್ದರು.
नियमित अपडेट के लिए सब्सक्राईब करें।