सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನನಸಾದ ಕನಸುಗಳು - ಯಮಗರವಾಡೀ - ಒಂದು ಅಪೂರ್ವ ಸಂಚಲನ

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

ಹಸಿವು ನೀರಡಿಕೆಯ ಬಳಲಿಕೆಯಿಂದ ಹನುಮಾನ್ ಮಂದಿರದ ಆ ಚೌಕಿಯಲ್ಲಿ ಆ ಚಳಿಗಾಲದ ರಾತ್ರಿಯನ್ನು ಕಂಬಳಿಯಿಲ್ಲದೆ, ತನ್ನ ಎರಡು ಚಿಕ್ಕ ತಮ್ಮ- ತಂಗಿಯರೊಡನೆ ರೇಖಾ ಕಳೆಯಬೇಕಿತ್ತು, ಒಂದು ವೇಳೆ ಆ ಹೃದಯವಂತ ಜನರು ಬಂದು ಅವಳನ್ನು ಕರೆದುಕೊಂಡು ಹೋಗದಿದ್ದರೆ|

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಕಿನವಟ್ ಸಮೀಪ ಒಂದು ಸಣ್ಣ ಹಳ್ಳಿಯಿದೆ, ಪಾಟೋದಾ.. ಇಲ್ಲಿಯೇ ರೇಖಾ ತನ್ನ ತಾಯಿತಂದೆಯರೊಡನೆ ಇರುತ್ತಿದ್ದಳು. ಪಾರಧೀ ಜಾತಿಯ ಈ ಪರಿವಾರಗಳ ಕಸುಬೇ ಕಳ್ಳತನ ಅಥವಾ ಡಕಾಯಿತಿ ಅಥವಾ ಲೂಟಿ ಮಾಡುವುದೇ ಆಗಿತ್ತು. ಪಾರಧೀ ಒಂದೇ ಏನು, ಡೋಂಬರೀ, ಕೋಲಹಾಟೀ, ಗೋಂಧೀ.. ಮಹಾರಾಷ್ಟ್ರದ ಈ ಎಲ್ಲ ಜಾತಿಯ ಪಂಗಡಗಳೂ ಸಮಾಜದಲ್ಲಿ ದೋಷಪೂರಿತ/ತಪ್ಪಿತಸ್ಥ ಪಂಗಡಗಳೆಂದೇ ಭಾವಿಸಲ್ಪಟ್ಟಿವೆ.




ಬಹುಶಃ ಈ ಕಾರಣದಿಂದಲೇ, ತಾಯಿತಂದೆ ಇಲ್ಲವಾದಾಗ ರೇಖಾ ಮತ್ತು ಅವಳ ಒಡಹುಟ್ಟಿದವರನ್ನು ನೋಡಿಕೊಳ್ಳಲು ಯಾವುದೇ ಸಂಬಂಧಿಕರೂ ಬರಲಿಲ್ಲ. ಸಮಾಜವೂ ಇವರ ಸಹಾಯಕ್ಕೆ ಮುಂದೆ ಬರಲಿಲ್ಲ.

ಆದರೆ ಈಗ ಎಲ್ಲವೂ ಬದಲಾಗಿದೆ. ಚೆಸ್ ಆಟದಲ್ಲಿ ರಾಜ್ಯಮಟ್ಟದ ಆಟಗಾರ್ತಿಯಾಗಿದ್ದ ರೇಖಾ, ಈಗ ಮುಂಬಯಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳ ತಮ್ಮ ಅರ್ಜುನನಿಗೆ ಹತ್ತನೇ ತರಗತಿಯಲ್ಲಿ 85% ಅಂಕಗಳು ಲಭಿಸಿವೆ. ರೇಖಾ ಮತ್ತು ಅರ್ಜುನ್ ಅವರಂತೆಯೇ ಅಲೆಮಾರಿಗಳಾಗಿದ್ದ 350 ಮಕ್ಕಳು ವಿಮುಕ್ತ ವಿಕಾಸ ಪರಿಷತ್ ನ ಶಾಲೆಯಲ್ಲಿ ಅಭ್ಯಸಿಸುತ್ತ, ಓದು, ಕ್ರೀಡೆ, ನಟನೆ, ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಒಳ್ಳೆಯ ಫಲಿತಾಂಶವನ್ನು ತೋರುತ್ತಿದ್ದಾರೆ.




ಕಳೆದ 25 ವರ್ಷಗಳಿಂದ ಪರಿಷತ್ತಿನ ಕಾರ್ಯಕರ್ತರು ಈ ಬಂಜಾರಾ ಜಾತಿಯ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸಂಘದ ಮುಖ್ಯ ಕಾರ್ಯಕರ್ತ ಮತ್ತು ಹಿಂದಿನ ಪ್ರಚಾರಕರಾಗಿದ್ದ ಗಿರೀಶ ಪ್ರಭುಣೇ ಅವರ ಅವಿರತ ಶ್ರಮದಿಂದ 1993ರ ಆಗಸ್ಟ್ 23ರಂದು ಯಮಗರವಾಡಿಯಲ್ಲಿ ಅಲ್ಲಿಯ ಬಾವಿಯ ಹತ್ತಿರದ ಮರವನ್ನು ಕಡಿದು ಜಾಗ ಹಸನು ಮಾಡಿ ಸ್ಥಾಪಿಸಲಾದ ಜೋಪಡಿಯಲ್ಲಿ 6 ಮಕ್ಕಳೊಂದಿಗೆ ವಿದ್ಯಾರ್ಥಿನಿಲಯವು ಪ್ರಾರಂಭವಾಯಿತು. ಸಮಾಜದ ಸಹಯೋಗ, ಹಾಗೂ ಮಹಾದೇವ ಗಾಯಕವಾಡ, ಚಂದ್ರಕಾಂತ ಗಡೇಕರ್ ಮತ್ತು ರಾವ್ ಸಾಹೇಬ ಕುಲಕರ್ಣಿ ಅವರಂಥ ಕಾರ್ಯಕರ್ತರ ಪರಿಶ್ರಮವು ಫಲ ನೀಡಿತು. ಇಂದು ಸಂಸ್ಥೆಯು ತನ್ನದೇ ಒಂದು ದೊಡ್ಡ ವಿದ್ಯಾರ್ಥಿನಿಲಯವಲ್ಲದೇ, ಮಕ್ಕಳಿಗೆ ಶಿಕ್ಷಣದ ಜೊತೆಜೊತೆಗೆ ವೃತ್ತಿಕೌಶಲ್ಯ ತರಬೇತಿ ನೀಡುವ ಒಂದು ಅತ್ಯಾಧುನಿಕ ಶಾಲೆಯನ್ನು ಹೊಂದಿದೆ.




ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರ ತಾಲೂಕಿನಲ್ಲಿ ಇರುವ ಯಮಗರವಾಡೀ ಈಗ ದೇಶದಲ್ಲಿ ಪರಿಚಿತ ಹೆಸರು. ಅಪರಾಧಿಗಳೆಂದು ಭಾವಿಸಲ್ಪಡುವ ಈ ವನವಾಸಿ ಮಕ್ಕಳಿಗೋಸ್ಕರ ಸಂಘದ ಕಾರ್ಯಕರ್ತರು ಅವಿರತ ಶ್ರಮ ವಹಿಸಿ ಶಾಲೆಯನ್ನು ಪ್ರಾರಂಭಿಸಿದ ಈ ಅದ್ಭುತ ಕಾರ್ಯ ದೇಶದೆಲ್ಲೆಡೆ ಮನೆಮಾತಾಗಿದೆ. ಯಾವ ಇಲಾಖೆಯಲ್ಲಿ ಹತ್ಯೆ ಅಥವಾ ಲೂಟಿಯಂಥ ಯಾವುದೇ ಘಟನೆ ನಡೆದಾಗಲೂ ಪೊಲೀಸರು ಮೊದಲು ಪಾರಧೀ ಅಥವಾ ಕೋಟೀ ಸಮಾಜದವರನ್ನೇ ಅಪರಾಧಿಗಳೆಂದು ಪರಿಗಣಿಸಿ ಎಳೆದುಕೊಂಡು ಹೋಗುತ್ತಿದ್ದರೋ, ಈಗ ಅದೇ ಪರಿವಾರಗಳ 32 ಹೆಣ್ಣುಮಕ್ಕಳು ಬೇರೆಬೇರೆ ಆಸ್ಪತ್ರೆಗಳಲ್ಲಿ ದಾದಿಯರಾಗಿದ್ದಾರೆ.




ಪರಮೇಶ್ವರ ಕಾಲೇ ಅವರ ತಾಯಿತಂದೆಯರೂ ಇದೇ ಪಾರಧೀ ಸಮಾಜದವರೇ ಆಗಿದ್ದರು. ಮೂರು ತಿಂಗಳಿಗೊಮ್ಮೆ ಒಂದು ಜಾಗದಿಂದ ತಮ್ಮ ವಾಸ್ತವ್ಯವನ್ನು ಇನ್ನೊಂದು ಜಾಗಕ್ಕೆ ಬದಲಾಯಿಸುವಂಥ ದಯನೀಯ ಸ್ಥಿತಿಯಲ್ಲಿದ್ದರು. ಒಂದು ವೇಳೆ ಪರಮೇಶ್ವರ ಕಾಲೇಯವರು ಈ ವಿದ್ಯಾರ್ಥಿನಿಲಯಕ್ಕೆ ಬಾರದೇ ಹೋಗಿದ್ದರೆ, ಶಿಕ್ಷಣದ ಮಾತಂತಿರಲಿ, ಅವರು ಎಂದಿಗೂ ಯಾವ ಶಾಲೆಗೂ ನೋಂದಣಿ ಮಾಡಿಸುವುದು ಕಷ್ಟವಾಗುತ್ತಿತ್ತು. ಇಂದು ಅವರು ತಾವೇ ಶಿಕ್ಷಕರಾಗಿದ್ದು, ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ ಮತ್ತು ತಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಇತರ ಕಾರ್ಯಗಳಲ್ಲಿ ಮುಂದುವರಿಯಲು ಸಹಾಯಕವಾಗುವಂತೆ ಸಂಸ್ಥೆಯ ಮಾಧ್ಯಮದಿಂದ ಶ್ರಮಿಸುತ್ತಿದ್ದಾರೆ.


ಇದೆಲ್ಲ ಇಷ್ಟು ಸುಲಭವಾಗಿರಲಿಲ್ಲ. ರಾವ್ ಸಾಹೇಬ ಅವರು ಹೇಳುವುದನ್ನು ಕೇಳಿದರೆ, ಇಲ್ಲಿ ಬರುವ ಮಕ್ಕಳಿಗೆ ಸಂಸ್ಕಾರ ಅಥವಾ ಅದರ ಅನುಷ್ಠಾನದ ಮಾತು ಹಾಗಿರಲಿ, ಪ್ರತಿ ದಿನ ಸ್ನಾನ ಮಾಡಲು ಅಥವಾ ಹಲ್ಲುಜ್ಜಲು ಬೇಕಾಗುವ ಸಾಮಗ್ರಿಯೂ ಇರಲಿಲ್ಲ. ಮಾಂಸ ಮೀನು ಇಲ್ಲದ ಊಟ ಮಾಡುವುದು ಅವರ ಗುಣದಲ್ಲೇ ಇರಲಿಲ್ಲ, ಇಷ್ಟವೂ ಇರಲಿಲ್ಲ, ಅವಕಾಶ ಸಿಕ್ಕಿದರೆ ಓಡಿಹೋಗುವ ಆತುರವಿತ್ತು ಆ ಮಕ್ಕಳಲ್ಲಿ. ದಿನವಿಡೀ ಕುರಿಗಳನ್ನು ಮೇಯಿಸಲು ಗಂಟೆಗಟ್ಟಲೆ ಕಾಡಿಗೆ ಕರೆದುಕೊಂಡು ಹೋಗಿ ಅಲೆದಾಡುವುದು, ಇಲ್ಲವಾದರೆ ಬಿಲ್ಲುಗಳನ್ನು ಮಾಡಿಕೊಂಡು ಪಾರಿವಾಳಗಳನ್ನು ಹೊಡೆದು ಸಾಯಿಸುವ ಪರಿಪಾಠ ಅಭ್ಯಾಸವಾಗಿಬಿಟ್ಟಿದ್ದ ಮಕ್ಕಳಿಗೆ ಯೋಗ, ವ್ಯಾಯಾಮ ಮತ್ತು ಮಂತ್ರ ಹೇಳಿಕೊಡುವುದು ಅತ್ಯಂತ ಕಷ್ಟಕರವಾಗಿತ್ತು. ಇಂದು ಇವರಿಗೆಂದೇ ಏಕಲವ್ಯ ವ್ಯಾಯಾಮ ಶಾಲೆ ಇದೆ. ಇಲ್ಲಿ ಇವರೆಲ್ಲರೂ ನಿತ್ಯವೂ ವ್ಯಾಯಾಮ ಮಾಡುತ್ತಾರೆ. ಒಂದು ದೊಡ್ಡ ಗ್ರಂಥಾಲಯವಿದೆ, ಅದರಲ್ಲಿ ರೈಲ್ವೆ, ಬ್ಯಾಂಕ್ ಪರೀಕ್ಷೆಗಳಿಗೆ ತಯಾರಿ ನೀಡುವಂಥ ಪುಸ್ತಕಗಳಿಗೆ. ತಮ್ಮ ತಮ್ಮ ಇಚ್ಛೆಗೆ ಅನುಸಾರವಾಗಿ ಮಕ್ಕಳಿಗೆ ಪ್ಲಂಬರ್, ಎಲೆಕ್ಟ್ರಿಶಿಯನ್ ಕೆಲಸಗಳಿಗೆ ತರಬೇತಿ ಕೊಡಲಾಗುತ್ತದೆ. ಪ್ರತೀ ವರ್ಷವೂ ನಡೆಯುವ ವಿಜ್ಞಾನ ಮೇಳದಲ್ಲಿ ಇಲ್ಲಿನ ಮಕ್ಕಳು ಪ್ರಸ್ತುತಪಡಿಸುವ ವಿಜ್ಞಾನ ಮಾದರಿಗಳು ಮೊದಲ ಬಹುಮಾನ ಪಡೆಯುತ್ತವೆ.

 ಸಂಘದ ಒಂದು ಅದ್ಭುತ ಪರಿಕಲ್ಪನೆಯಡಿ ಯಮಗರವಾಡೀ ತನ್ನ ನನಸಾದ ಕನಸುಗಳೊಡನೆ ಪ್ರಕಾಶಿಸುತ್ತಿದೆ.

825 Views
अगली कहानी