सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನನಸಾದ ಕನಸುಗಳು.

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

ವೇಗವಾಗಿ ರನ್ ವೇ ಬಿಟ್ಟು ಮೇಲೆ ಜಿಗಿದ ವಿಮಾನದ ಅಲುಗಾಟಕ್ಕೆ ಸೋನು ಬೆಚ್ಚಿದ. ಮೊದಲ ಬಾರಿಯ ವಾಯುಯಾನ ಸೋನುವಿನ ಬೆನ್ನುಹುರಿಯಾಳದಿಂದ ನಡುಕ ಹುಟ್ಟಿಸಿತ್ತು. ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಸಿರೌಲ್ ಎಂಬ ಸಣ್ಣ ಹಳ್ಳಿಯ ಈ ಉದಯೋನ್ಮುಖ ಪ್ರತಿಭೆ ಬೇಸ್ ಬಾಲ್ ಆಟದಲ್ಲಿ ಭಾರತವನ್ನು ಪ್ರತಿನಿಧಿಸಲೆಂದು ಆಸ್ಟ್ರೇಲಿಯಾಗೆ ಹೊರಟಿದ್ದ. ಮೋಡಗಳನ್ನು ಸೀಳಿಕೊಂಡು ವಿಮಾನ ಹಾರುತ್ತಿದ್ದರೆ, ಸೋನು ತನ್ನ ಬಾಲ್ಯದ ನೆನಪುಗಳಲ್ಲಿ ವಿಹರಿಸುತ್ತಿದ್ದ. ಆಗೆಲ್ಲಾ ಆಗಸದಲ್ಲಿ ತೇಲುವ ವಿಮಾನ ಕಂಡಾಗಲೆಲ್ಲ ಅದು ಮರೆಯಾಗುವ ತನಕ ಅದನ್ನು ಹಿಂಬಾಲಿಸಿ ಓಡುತ್ತಿದ್ದುದು, ಸರ್ಕಾರಿ ಶಾಲೆಯಿಂದ ಬಂದೊಡನೆ ತಂದೆಯ ಜೊತೆಗೆ ಕೂಲಿಗೆ ಹೋಗಬೇಕಾಗಿದ್ದ ಕಷ್ಟದ ದಿನಗಳು-ಹೀಗೆ ಹಲವು ದೃಶ್ಯಗಳು ಆತನ ಕಣ್ಮುಂದೆ ಮಿಂಚಿ ಮರೆಯಾದವು. ವಿಮಾನದಲ್ಲಿ ಪಯಣಿಸಬೇಕೆಂಬ ಕನಸಿನ ಸಾಕಾರಕ್ಕಾಗಿ ಜೀವನದ ಎಲ್ಲ ಪೆಟ್ಟುಗಳನ್ನು ಮೆಟ್ಟಿ ನಿಂತ ಸೋನುವಿನ ಮುಖದಲ್ಲಿ ಇಂದು ಜಗತ್ತನ್ನೇ ಗೆದ್ದ ಮಂದಹಾಸವಿತ್ತು.

ಗಾಢೀ ಎಂಬ ಹಳ್ಳಿಯ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೇ ಮೊದಲಿಗನಾದ ಭಾನುಸಿಂಹನಿಗೂ, 26 ಜನವರಿ 2016ರಂದು ಸ್ವತಃ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣರಿಂದ ಪುರಸ್ಕಾರ ಪಡೆದಾಗ ಹಾಗೇ ಅನಿಸಿತ್ತು. ಇವರಂತೆಯೇ, ಸೆಹರಿಯಾ ಬುಡಕಟ್ಟಿನ 171 ವಿದ್ಯಾರ್ಥಿಗಳು ಡಬರಾ ತಾಲೂಕು ಕೇಂದ್ರದಲ್ಲಿ ಸೇವಾಭಾರತಿಯಿಂದ ನಡೆವ ವಸತಿಶಾಲೆಯಲ್ಲಿ ಶಿಕ್ಷಣ ಪಡೆದು ಯಶಸ್ಸಿನತ್ತ ಮುನ್ನಡೆದಿದ್ದಾರೆ.


ಅತ್ಯಂತ ಹಿಂದುಳಿದ ಹಾಗೂ ಅಳಿವಿನಂಚಿನಲ್ಲಿರುವ ಸೆಹರಿಯಾ ಬುಡಕಟ್ಟು ಜನರಿಗೆ ಸ್ವಂತ ಜಮೀನಿಲ್ಲ, ಉದ್ಯೋಗಾವಕಾಶಗಳೂ ಇಲ್ಲ. ಸೆಹರಿಯಾಗಳು ಇತರರ ಹೊಲಗಳಲ್ಲಿ ಕಟಾವು ಮುಂತಾದ ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಿದ್ದಾರೆ. ಸೆಹರಿಯಾ ಬುಡಕಟ್ಟಿನಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆ ಇತ್ತು. ಇಂದಿಗೂ ಹಾಗೆಯೇ ಇರುತ್ತಿತ್ತೇನೋ!

ಸಂಘದ ಪ್ರಚಾರಕರೂ, ಸೇವಾಭಾರತಿಯ ಸಂಸ್ಥಾಪಕರೂ ಆದ ವಿಷ್ಣುಜೀಯವರ ಪ್ರೇರಣೆಯಿಂದ 2003ರ ಜುಲೈ 10ರಂದು ಸೆಹರಿಯಾ ಜನಾಂಗದ 6ರಿಂದ 8ನೇ ತರಗತಿಯವರೆಗಿನ ಮಕ್ಕಳಿಗಾಗಿ ಬಾಡಿಗೆ ಕಟ್ಟಡವೊಂದರಲ್ಲಿ ವಸತಿ ಶಾಲೆಯನ್ನು ತೆರೆಯಲಾಯಿತು. ಅದರಲ್ಲಿ ಆ ಎಲ್ಲ ಮಕ್ಕಳ ಊಟ, ವಸತಿ, ಸಮವಸ್ತ್ರಗಳಷ್ಟೇ ಅಲ್ಲ, ಪುಸ್ತಕ ಹಾಗೂ ಶಾಲಾ ಶುಲ್ಕಗಳ ಎಲ್ಲಾ ಖರ್ಚನ್ನೂ ಆಡಳಿತ ಮಂಡಳಿಯೇ ವಹಿಸಿಕೊಂಡಿದೆ. ಸೇವಾಭಾರತಿಯ ರಾಜ್ಯ ಉಪಾಧ್ಯಕ್ಷರೂ, ಮೊದಲಿನಿಂದಲೂ ಆ ವಸತಿ ಶಾಲೆಯ ಮುಖ್ಯಸ್ಥರೂ ಆಗಿರುವ ನಿರ್ಮಲದಾಸಜೀ ಹೇಳುವಂತೆ-- ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಬೇಸ್ ಬಾಲ್ ಮತ್ತು ಥ್ರೋಬಾಲ್ ನಂತಹ ಕ್ರೀಡೆಗಳಲ್ಲಿ ವೃತ್ತಿನಿರತ ತರಬೇತುದಾರರಿಂದ ವಿಶ್ವದರ್ಜೆಯ ಕೋಚಿಂಗ್ ಒದಗಿಸಲಾಗುತ್ತದೆ. ಅಲ್ಲದೇ, ಶಾಲೆಯಲ್ಲಿ ಸ್ಟೇಟ್ ಆಫ್ ದಿ ಆರ್ಟ್ ಕಂಪ್ಯೂಟರ್ ಶಿಕ್ಷಣದ ಪೂರ್ತಿ ವ್ಯವಸ್ಥೆ ಮಾಡಲಾಗಿದೆ.


ಕೇವಲ 35 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 171 ತಲುಪಿದಾಗ ಸ್ವಂತ ಕಟ್ಟಡದ ಅಗತ್ಯ ತಲೆದೋರಿತು. ಅನಿವಾಸೀ ಭಾರತೀಯ ಇಂಜಿನಿಯರ್ ಪಂಕಜ್ ಮಹೇಶ್ವರಿ ಸಹಾಯಕ್ಕೆ ಮುಂದೆ ಬಂದರು. ಪೂಜ್ಯ ತಂದೆಯವರೂ ಗ್ವಾಲಿಯರಿನ ಪ್ರಖ್ಯಾತ ವೈದ್ಯರೂ, ಆಗಿದ್ದ ದಿವಂಗತ ಕೆ.ಜಿ. ಮಹೇಶ್ವರಿಯವರ ಸ್ಮರಣಾರ್ಥ 20 ಲಕ್ಷ ರೂಪಾಯಿಗಳನ್ನು ಕಟ್ಟಡಕ್ಕಾಗಿ ದೇಣಿಗೆ ನೀಡಿದರು. ಪರೀಕ್ಷೆಯಲ್ಲಿ ಶಾಲೆಯ ಮಕ್ಕಳ ಅದ್ಬುತ ಫಲಿತಾಂಶ ಹಾಗೂ ಆಟೋಟಗಳಲ್ಲಿ ಮೇಲುಗೈ ಕಂಡ ಸಮಾಜವೂ ಮನಸಾರೆ ಈ ಕಾರ್ಯದಲ್ಲಿ ಕೈಜೋಡಿಸಿತು. ಎಷ್ಟೋ ಕುಟುಂಬಗಳು ತಮ್ಮ ಮಕ್ಕಳ ಹುಟ್ಟುಹಬ್ಬ ಮತ್ತು ಹಿರಿಯರ ಪುಣ್ಯಾಚರಣೆಗಳನ್ನು ಈ ಶಾಲೆಯ ಮಕ್ಕಳ ಜೊತೆ ಆಚರಿಸಿಕೊಳ್ಳುವ ಪರಿಪಾಠ ಆರಂಭಿಸಿವೆ.


ಇಲ್ಲಿದ್ದು ಪಿಯುಸಿ ಪೂರೈಸಿದ ರಾಮರಸ್, ಸುನೀಲಸಿಂಹ ಹಾಗೂ ಅಮರಸಿಂಹರಿಗೆ ಪ್ಯಾರಾ ಮೆಡಿಕಲ್ ಸೀಟು ದೊರೆತಿದೆ ಮತ್ತು ಇಲ್ಲಿನ 12 ವಿದ್ಯಾರ್ಥಿಗಳು ಆದಾಯ ತೆರಿಗೆ ಇಲಾಖೆಯಲ್ಲೂ ಇನ್ನೂ ನಾಲ್ವರು ಅರಣ್ಯ ಇಲಾಖೆಯಲ್ಲಿಯೂ ಈಗಾಗಲೇ ನೌಕರಿ ಗಿಟ್ಟಿಸಿದ್ದಾರೆಂದು ಪ್ರಾಂಶುಪಾಲ ಸಂಜಯ್ ರಜಕ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಶಾಲೆಯಲ್ಲಿ ಆಯೋಜನೆ ಮಾಡಲಾಗುತ್ತಿದ್ದ ವಿಶೇಷ ತರಬೇತಿಯ ಲಾಭ ಈ ವಿದ್ಯಾರ್ಥಿಗಳಿಗೆ ದೊರೆತಿದೆ. ಕ್ರೀಡಾ ಕ್ಷೇತ್ರದಲ್ಲಿ ಇಂದರ್ ಸಿಂಹ ಹಾಗೂ ಸುನೀಲಕುಮಾರರು ಕ್ರಮವಾಗಿ ಬೇಸ್ ಬಾಲ್ ಮತ್ತು ಥ್ರೋಬಾಲ್ ರಾಷ್ಟ್ರೀಯ ತಂಡಗಳಿಗೆ ಆಯ್ಕೆಯಾಗಿದ್ದಾರೆ.

ಸಂಘದ ಸ್ವಯಂಸೇವಕರ ನಿಸ್ವಾರ್ಥ ಸೇವೆ, ಅರ್ಪಣಾ ಮನೋಭಾವ ಹಾಗೂ ಅಚಲ ನಿಲುವುಗಳಿಂದಾಗಿ ಈ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಲು ಸಮರ್ಥರಾಗಿದ್ದಾರೆ.



ಸಂಪರ್ಕ- ನಿರ್ಮಲದಾಸಜೀ ನಾರಂಗ್

ಸಂಖ್ಯೆ- 09425481714

1080 Views
अगली कहानी