सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಪರರಿಗಾಗಿ ಬದುಕುವ ಬದುಕೇ ನಿಜವಾದ ಬದುಕು

ಶ್ರೀ ಗಿರಿಧರ್ ಉದ್ಯಾವರ | ಇಂದೋರ್ | ಮಧ್ಯಪ್ರದೇಶ

parivartan-img

ಹದಿನೇಳನೇ ವಯಸ್ಸು ಪ್ರಪಂಚವನ್ನು ತೊರೆಯುವ ವಯಸ್ಸೇನಲ್ಲ, ಆದರೆ ಹದಿನೇಳರ ಹರೆಯದಲ್ಲೇ, ಆ ಧೀರ ಬಾಲಕ ಯಮನಿಗೂ ಸವಾಲು ಹಾಕಿದ್ದ. 07-08-2005ರಂದು, ಮಾರುತಿನಗರದಿಂದ ಮನೋಜ್ ಚೌಹಾಣನ ಶವಯಾತ್ರೆ ಹೊರಟಾಗ ಇಂದೋರ್ ನಗರವೇ ಆ ಸ್ವಯಂಸೇವಕನಿಗಾಗಿ ಕಣ್ಣೀರು ಸುರಿಸಿತ್ತು. ಕೇವಲ ಬಿದಿರುಕೋಲು ಹಾಗೂ ತಗಡಿನ ಡಬ್ಬಗಳನ್ನು ಬಳಸಿ 18 ಕಂದಮ್ಮಗಳನ್ನು ಅಕ್ಷರಶಃ ಸಾವಿನ ದವಡೆಯಿಂದ ಮನೋಜ ಬಿಡಿಸಿಕೊಂಡು ಬಂದಿದ್ದ. ಈಗ, ಹಾಗೆ ಬದುಕುಳಿದಿದ್ದ ಪುಟ್ಟಮಕ್ಕಳ ಹೆತ್ತವರ ದುಃಖವೂ ಕಟ್ಟೆಯೊಡೆದಿತ್ತು. ಎರಡು ದಿನಗಳ ಕಾಲ ಮಾರುತಿನಗರದಲ್ಲಿ ಯಾರಿಗೂ ಊಟ ಸೇರಲಿಲ್ಲ.

ಬಣ್ಣಬಣ್ಣದ ಕನಸುಗಳಿಂದ ತನ್ನ ಸುಂದರ ಲೋಕವನ್ನು ಸಿಂಗರಿಸಬೇಕಿದ್ದ ಹದಿಹರೆಯದ ಮನೋಜ,

ಆ ಹದಿನೆಂಟು ಜೀವಗಳನ್ನು ಕಾಪಾಡಿ, ಯೌವನದ ಹೊಸ್ತಿಲಲ್ಲೇ ಚಿರನಿದ್ರೆಗೆ ಜಾರಿದ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಮರಣೋತ್ತರ ಶೌರ್ಯಪ್ರಶಸ್ತಿ ಪಡೆದ ಮನೋಜನ ಮನೋಜ್ಞ ಬಲಿದಾನವು, ಇಂದಿನ ಯುವಕರಿಗೆ ದೇಶಕ್ಕಾಗಿ ಬದುಕುವ ಪ್ರೇರಣೆ ನೀಡುತ್ತಿದೆ.


ಹದಿನೇಳು ವರ್ಷಗಳ ಹಿಂದಿನ ಕಥೆಯಿದು. 01-08-2005ರಂದು ಇಂದೋರಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ತಗ್ಗು ಪ್ರದೇಶಗಳಿಗೆ ಒಮ್ಮೆಲೇ ನೀರು ನುಗ್ಗಿತು. ಮಾರುತಿನಗರವು ಬಾಣಗಂಗಾ ಪ್ರದೇಶದ ಸಾವೇರ್ ರಸ್ತೆಬದಿಯ ತಗ್ಗು ಪ್ರದೇಶಗಳಲಲ್ಲಿರುವ ಒಂದು ಬಸತಿ. ಅಲ್ಲಿನ ಮನೆಗಳಿಗೆ ನೀರು ನುಗ್ಗಿದ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಹಾಸಿಗೆ, ಪಾತ್ರೆಪಗಡಗಳ ಕೈಬಿಟ್ಟ ಜನರು, ತಂತಮ್ಮ ಚಿಕ್ಕಮಕ್ಕಳನ್ನು ಉಳಿಸಿಕೊಳ್ಳಲು ಹೆಣಗತೊಡಗಿದರು. ಸರ್ಕಾರೀ ಆಡಳಿತಯಂತ್ರ ಸಹಾಯಕ್ಕೆ ಧಾವಿಸುವ ಮುನ್ನವೇ, ಅಲ್ಲಿನ ನಿತ್ಯಶಾಖೆಯ ಹೊಣೆ ಹೊತ್ತಿದ್ದ ಮನೋಜ ರಕ್ಷಣಾ ಕಾರ್ಯಕ್ಕೆ ಧುಮುಕಿದ್ದ. ಬಬನ್ ಪಾಂಡೆ,


ಸುರೇಶ್ ಬಾಥಾ ಮುಂತಾದವರೂ ಮನೋಜನೊಂದಿಗೆ ಕೈಜೋಡಿಸಿದರು. ಒಂದಿಷ್ಟು ಖಾಲಿ ಟಿನ್ನುಗಳು, ಬಿದಿರಿನ ದಂಡಗಳು ಹಾಗೂ ಟ್ಯೂಬುಗಳನ್ನು ಸಂಗ್ರಹಿಸಿದ ಈ ಯುವಕರ ಟೋಳಿ ಸಂತ್ರಸ್ತರ ಜೀವವುಳಿಸುವ ಕೆಲಸದಲ್ಲಿ ಮುಳುಗಿತು.

ಜಲಾವೃತಗೊಂಡ ಮನೆಗಳಿಂದ ಪುಟ್ಟ ಪುಟ್ಟ ಕಂದಮ್ಮಗಳನ್ನು ಹೊತ್ತುಕೊಂಡು ಸುರಕ್ಷಿತ ತಾಣಕ್ಕೆ ತಲುಪಿಸುತ್ತಿದ್ದ ಮನೋಜನ ಮನದಲ್ಲಿ ಆರ್ ಎಸ್ ಎಸ್ ನ ನಗರ ಸಂಪರ್ಕ ಪ್ರಮುಖರಾದ ಡಾ. ಆನಂದ್ ಪ್ರಕಾಶ್ ಮಿಶ್ರಾರ ಎಚ್ಚರಿಕೆ ಮಾರ್ದನಿಸುತ್ತಿತ್ತು. "ಮನೋಜಾ, ನಿನ್ನ ಹೃದಯದ ಕವಾಟಗಳ ಪರಿಸ್ಥಿತಿ ಹದಗೆಟ್ಟಿದೆ ಕಣೋ. ನೀರಿಗಿಳಿಯಲೇಬೇಡ ಮತ್ತು ಸುಸ್ತಾಗುವಷ್ಟು ಶ್ರಮ ಪಡಬೇಡ. ಹೃದಯದ ಮೇಲೆ ಒತ್ತಡ ಬಿದ್ದರೆ, ಪ್ರಾಣಕ್ಕೇ ಎರವಾಗಬಹುದು, ಮಗೂ" ಎಂದಿದ್ದರು ಡಾಕ್ಟರ್. ಪದೇ ಪದೇ ನೆನಪಾಗುತ್ತಿದ್ದ ಈ ಮಾತುಗಳನ್ನು ಮರೆಯಲೋ ಎಂಬಂತೆ, ಮನೋಜ ತಾನು ನಿತ್ಯಶಾಖೆಯಲ್ಲಿ ಹೇಳುತ್ತಿದ್ದ "ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಾ...." ಎಂಬ ಹಾಡನ್ನೇ ಗುನುಗುತ್ತಿದ್ದ.


ಹೀಗೆ, ಸಂತ್ರಸ್ತ ಕುಟುಂಬಗಳ ರಕ್ಷಣಾಕಾರ್ಯದಲ್ಲಿ, ಮುಂಜಾವಿನ 4 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಅವಿಶ್ರಾಂತವಾಗಿ ಮನೋಜ ದುಡಿದಿದ್ದ. ಆ ಭಯಂಕರ ಮೃತ್ಯುಕೂಪದಿಂದ ಎಲ್ಲರನ್ನೂ ಪಾರು ಮಾಡುವ ಹೊತ್ತಿಗೆ ಈ ರಾಷ್ಟ್ರಭಕ್ತ ನವತರುಣನ ಶ್ವಾಸಕೋಶಗಳಲ್ಲಿ ನೀರು ತುಂಬಲಾರಂಭಿಸಿತ್ತು. ಅದನ್ನೂ ನಿರ್ಲಕ್ಷಿಸುತ್ತ, ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳ ಪಟ್ಟಿ ಮಾಡಿದ ಮನೋಜ, ಅವುಗಳ ವಿಲೇವಾರಿ ಮಾಡುತ್ತ ಮರುದಿನವಿಡೀ ಓಡಾಡಿದ.

ಕೇಶವ ನಗರದ ಅಂದಿನ ನಗರ ಕಾರ್ಯವಾಹರಾದ ಅನೀಲ್ ಪಂಚವಾಲ ಜೀ ಹೇಳುವಂತೆ- "ಆ ವಿಪರೀತ ದಣಿವನ್ನು ಮನೋಜನ ಶರೀರ ತಾಳದಾಯಿತು. ಆಸ್ಪತ್ರೆಗೇ ದಾಖಲಿಸಬೇಕಾಯಿತು. ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ನ್ಯುಮೋನಿಯಾ ಉಲ್ಬಣಿಸಿ ಮನೋಜ

ಕೊನೆಯುಸಿರೆಳೆದ."

ದಿವ್ಯಾಂಗರಾಗಿದ್ದ ತಂದೆ ಉಮ್ರಾವ್ ಸಿಂಗ್ ಚೌಹಾಣ್, ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿದ್ದ ಸೋದರ ಸೋನು ಮತ್ತು ಬಿಕ್ಕಳಿಸಿ ಅಳುತ್ತಿದ್ದ ತಾಯಿಯನ್ನು ಮನೋಜ ಬಿಟ್ಟಗಲಿದಾಗ ಇಡೀ ಮಾರುತಿನಗರಕ್ಕೆ ಎರಡು ದಿನ ಸೂತಕ ಆವರಿಸಿತ್ತು. "ಆ ಹುಡುಗ ದೇವದೂತನಂತೆ ಬಂದು, ತನ್ನ ಪ್ರಾಣ ಪಣಕ್ಕಿಟ್ಟು, ಏಳು ವರ್ಷದ ನನ್ನ ಮೊಮ್ಮಗನನ್ನು ನೀರಿನ ಸುಳಿಯಿಂದ ಬಿಡಿಸಿ ತಂದ" ಎನ್ನುತ್ತ ಕಣ್ಣೀರಾಗುತ್ತಾರೆ, ಮಾರುತಿನಗರದ ನಿವಾಸಿ ಲಕ್ಷ್ಮೀದೇವಿ. ಅಂತ್ಯಕಾಲದಲ್ಲಿಯೂ ಸಂತ್ರಸ್ತರ ಹೆಸರು ಮತ್ತು ಅವರ ಅಗತ್ಯ ವಸ್ತುಗಳ ಪಟ್ಟಿ ಮನೋಜನ ಕಿಸೆಯಲ್ಲಿ ದೊರಕಿತ್ತು.

2007ರ ಗಣರಾಜ್ಯೋತ್ಸವದಂದು ಭಾರತೀಯ ಬಾಲಕಲ್ಯಾಣ ಪರಿಷತ್ತು ಮನೋಜ ಚೌಹಾಣನಿಗೆ ಅಪ್ರತಿಮ ಶೌರ್ಯಪ್ರಶಸ್ತಿ ನೀಡುವ ನಿರ್ಣಯ ಕೈಗೊಂಡಾಗ ಮನೋಜ ಕಾಲವಾಗಿ ಎರಡು ವರ್ಷಗಳೇ ಕಳೆದಿದ್ದವು. ಆ ಪ್ರಶಸ್ತಿಗಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದ ನಗರದ ಪ್ರಸಿದ್ಧ ಚಾರ್ಟರ್ಡ್ ಕೌಂಟೆಂಟ್ ರಾಧೇಶ್ಯಾಮ್ ಸೋಮಾನೀ ಮತ್ತು ಡಾ. ಶೈಲೇಂದ್ರ ಜೈನ್

ಮನೋಜನ ಬಗ್ಗೆ “ಗಣರಾಜ್ಯೋತ್ಸವದಂದು ಮನೋಜ ಅಂಬಾರಿಯ ಮೇಲೆ ಕೂರದಿದ್ದರೂ, ದೋರಿನ ಜನತೆಯ ಹೃದಯಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ." ಎಂದು ಹೇಳುತ್ತ ಗದ್ಗದಿತರಾಗುತ್ತಾರೆ. 

ಸಂಪರ್ಕ್ ಅಶೋಕ್ ಅಧಿಕಾರಿ

ಮೊ.ನಂ- 91 93008 98166

1418 Views
अगली कहानी