सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ತಾಯಿ ಯಶೋದೆಯ ಪುನರವತಾರ - ವಿಮಲಾ ಕುಮಾವತ್

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

26 ನೇ ಜನವರಿ 2003 ..........

62 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿರುವ ವಿಮಲಾ ಕುಮಾವತ್ ಈ ದಿನವನ್ನೇ ತಮ್ಮ ಜನ್ಮದಿನವೆಂದು ಹೇಳುತ್ತಾರೆ - ಅದು ಜನ್ಮದಿನವಲ್ಲ, ಪುನರ್ಜನ್ಮದಿನ .. ನಿಜವಾಗಿ ಹೇಳಬೇಕೆಂದರೆ, ಹಿಂದಿನ ಕಾಲದ ಅನೇಕರ ಹಾಗೆ, ವಿಮಲಾ ಅವರಿಗೂ ತಮ್ಮ ಜನ್ಮದಿನದ ನೆನಪಿರಲಿಲ್ಲ. ಹಾ.. ಆ ದಿನ ಸಂಘದ ವರಿಷ್ಠ ಪ್ರಚಾರಕರಾದ ಧನಪ್ರಕಾಶ ತ್ಯಾಗಿ ಅವರ ಪ್ರೇರಣೆಯಿಂದ ಅವರು ಜೈಪುರದಲ್ಲಿ ತಮ್ಮ ಮನೆಯ ಸಮೀಪದ ವಾಲ್ಮೀಕಿ ಸೇವಾಬಸ್ತಿ ಸಂಕೀರ್ಣದಿಂದ ಚಿಂದಿ ಆಯುವ 5 ಹುಡುಗರನ್ನು ಶಿಕ್ಷಣಕ್ಕೋಸ್ಕರ ತಮ್ಮ ಮನೆಗೆ ಕರೆತಂದ ದಿನ.. ವಿಮಲಾ ಅವರಿಗೆ ನೆನಪಿದೆ.

ಮೂವರು ಗಂಡುಮಕ್ಕಳು, ಸೊಸೆಯರು ಮತ್ತು ಮೊಮ್ಮಕ್ಕಳೊಂದಿಗೆ ತುಂಬಿದ ಪರಿವಾರದ ಒಡತಿ, 8ನೇ ಇಯತ್ತೆ ಪಾಸಾಗಿದ್ದ 48 ವರ್ಷದ ವಿಮಲಾ ಅವರು ಈ ಮಕ್ಕಳ ಜೀವನವನ್ನು ಸುಧಾರಿಸುವ ಪಣತೊಟ್ಟರು. ಚಿಂದಿ ಆಯ್ದು ದುಡ್ಡು ಗಳಿಸುತ್ತಿದ್ದ, ಅದರಲ್ಲಿನ ಸ್ವಲ್ಪ ಹಣವನ್ನು ನಶೆಗಾಗಿ ಮತ್ತು ಬಾಕಿಯ ಹಣವನ್ನು ಮನೆಯ ಖರ್ಚನ್ನು ನಿಭಾಯಿಸಲು ತಾಯಿತಂದೆಗೆ ಸಹಾಯ ಮಾಡುತ್ತಿದ್ದ ಈ ಮಕ್ಕಳಿಗೋಸ್ಕರ ವಿಮಲಾ ಜೀ ದೃಢ ನಿರ್ಧಾರ ಮಾಡಿದರು.ಬೀದಿ ಗುಡಿಸುವವರ ಈ ವಸತಿಗಳ ಸ್ಥಿತಿ ಶೋಚನೀಯವಾಗಿಯೇ ಇತ್ತು, ವಸತಿಯ ಆಸುಪಾಸಿನಲ್ಲಿ ಬಹಳಷ್ಟು ಗಲೀಜೂ ಇತ್ತು. ಚಿಕ್ಕ ಚಿಕ್ಕ ಗುಡಿಸಲುಗಳಲ್ಲಿ ಹಂದಿಗಳ ಮಧ್ಯೆ ಬಿದ್ದುಕೊಂಡಿದ್ದ ಮಕ್ಕಳು, ಅದರ ಮೇಲೆ ನಶೆಯಲ್ಲಿ ಮುಳುಗಿದ್ದ ತಾಯಿತಂದೆಯರು. ಇಂಥ ಪರಿಸ್ಥಿತಿಯಲ್ಲಿ ಈ ಮಕ್ಕಳ ಓದಿನ ಬಗ್ಗೆ ಚಿಂತೆ ಮಾಡುವವರಾದರೂ ಯಾರು? ಆಗ ವಿಮಲಾ ಅವರು ಅವರ ಜೀವನದಲ್ಲಿ ದೇವತೆಯಂತೆ ಬಂದರು ಮತ್ತು ಅವರ ಮೂಗಿನ ಸಿಂಬಳ ಒರೆಸಿ, ಉಗುರು ಕತ್ತರಿಸುವುದರಿಂದ ಹಿಡಿದು, ಅವರನ್ನು ಸಂಸ್ಕಾರಯುತ ಶಿಕ್ಷಿತರನ್ನಾಗಿ ಮಾಡುವ ಕಾಯಕವನ್ನು ಕೈಗೆತ್ತಿಕೊಂಡರು.




ಈ ಸಾಧಾರಣ ಗೃಹಿಣಿಯ ಅದ್ಭುತ ಸಂಕಲ್ಪ, ನಿಸ್ವಾರ್ಥ ಸೇವಾಮನೋಭಾವ ಮತ್ತು ಅವಿರತ ಪರಿಶ್ರಮಗಳು ಈ ಮಕ್ಕಳ ಜೀವನದ ಭಾಗ್ಯದ ದಿಕ್ಕನ್ನು ಬದಲಿಸಿದವು. ಸೇವಾಭಾರತಿಯ ಕಾರ್ಯಕರ್ತರ ಸಹಾಯದೊಂದಿಗೆ ಮೊದಲ 3 ವರ್ಷಗಳು ವಿಮಲಾರ ಮನೆಯಲ್ಲೇ ನಡೆಯುತ್ತಿದ್ದ ತರಗತಿಯು, ನಿಧಾನವಾಗಿ ಸೇವಾಭಾರತಿ ಬಾಲವಿದ್ಯಾಲಯವಾಗಿ ಮಾರ್ಪಾಡಾಯಿತು. ಇಂದು 400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಬನ್ನಿ, 12 ನೇ ತರಗತಿಯಲ್ಲಿ ಓದುತ್ತಿರುವ ಶಿವಾನಿಯನ್ನು ಈಗ ಭೇಟಿಯಾಗೋಣ. ಈ ಹುಡುಗಿಗೆ ಆ ದಿನವಿನ್ನೂ ನೆನಪಿದೆ, ಅವಳನ್ನು ಅವಳ ಚಿಕ್ಕ ಸೋದರಿಯೊಂದಿಗೆ ವಿಮಲಾ ಅವರು ವಿದ್ಯಾರ್ಥಿನಿಲಯಕ್ಕೆ ಕರೆತಂದದ್ದು.... ತಾಯಿ ತಂದೆಯರ ಸಾವಿನ ನಂತರ ಈ ಇಬ್ಬರು ಸಹೋದರಿಯರು ತಮ್ಮ ದೊಡ್ಡಮ್ಮ - ದೊಡ್ಡಪ್ಪನೊಂದಿಗೆ ಒಂದು ಸಣ್ಣ ಜೋಪಡಿಯಲ್ಲಿ ಅವರ 4 ಮಕ್ಕಳೊಂದಿಗೆ ಇದ್ದರು. ಅವಳಿಲ್ಲಿ ಬಂದಾಗ ತಂಗಿಯ ಗಾಯದ ಮೇಲೆ ಹುಳುಗಳು ಬಿದ್ದು, ಶಿವಾನಿ ಆ ಪರಿಸ್ಥಿತಿಯನ್ನು ಚೆನ್ನಾಗಿ ಎದುರಿಸಿದಳು, ಅವಳಿಗೆ ಇಲ್ಲಿಗೆ ಬರಲು ಮನಸ್ಸಿರಲಿಲ್ಲ. ಆದರೆ, ಹಿಂದಿನ ವರ್ಷ 10ನೇ ಇಯತ್ತೆಯಲ್ಲಿ 62% ಅಂಕ ತೆಗೆದ ಮೇಲೆ ಅವಳು ತನ್ನ ಅಜ್ಜಿಯನ್ನು (ವಿಮಲಾ ಅವರನ್ನು) ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಲ್ಲದೇ, ಅವರ ಮೇಲೆ ಒಂದು ಕವಿತೆಯನ್ನು ಬರೆದಿದ್ದಳು.

ಬಿ. ಕಾಂ. ತೃತೀಯ ವರ್ಷದಲ್ಲಿರುವ ಲೋಕೇಶ್ ಕೋಲಿ ಅವರ ಬಗ್ಗೆ ಈಗ ತಿಳಿಯೋಣ. ಲೋಕೇಶ್ ಓದುವುದರ ಜೊತೆಜೊತೆಗೆ ಇದೇ ಬಾಲವಿದ್ಯಾಲಯದಲ್ಲಿ ಶಿಕ್ಷಕರೂ ಆಗಿದ್ದಾರೆ. ಲೋಕೇಶ್ ಅತಿ ಸುಮಧುರವಾಗಿ ಕೊಳಲನ್ನೂ ನುಡಿಸಬಲ್ಲರು. ವಿಧವೆ ತಾಯಿ ಮತ್ತು ಮೂವರು ತಮ್ಮ ತಂಗಿಯರಲ್ಲಿ ಎಲ್ಲರಿಗಿಂತ ದೊಡ್ಡವನಾದ ಲೋಕೇಶನನ್ನು ಓದಿಗೋಸ್ಕರ ವಿಮಲಾ ಅವರು ಬಲವಂತವಾಗಿ ಕರೆತಂದಾಗ ಅವನಿಗಿನ್ನೂ 8 ವರ್ಷವಾಗಿತ್ತಷ್ಟೇ. ಹಾಗೇಯೇ ಬಿ. ಎ. ಪ್ರಥಮ ವರ್ಷದ ವಿದ್ಯಾರ್ಥಿನಿ ಲಕ್ಷ್ಮಿಗೆ 8ನೇ ತರಗತಿಯ ಪರೀಕ್ಷೆಯನ್ನು ಕೊಡಿಸುವ ಸಲುವಾಗಿ, ವಿಮಲಾ ಅವರು ತಮ್ಮ 52ನೇ ವಯಸ್ಸಿನಲ್ಲಿ ತಾವೇ ಖುದ್ದಾಗಿ 8ನೇ ಇಯತ್ತೆಯ ಪರೀಕ್ಷೆಯನ್ನು ಮತ್ತೊಮ್ಮೆ ಬರೆದರು. ಈ ರೀತಿಯ ಅನೇಕ ಕಥಾನಕಗಳು ಇಲ್ಲಿ ಹೇರಳವಾಗಿ ಸಿಗುತ್ತವೆ.




ಈ ಕೆಲಸ ನೋಡಿದಷ್ಟು ಸುಲಭವಲ್ಲ, ಅತ್ಯಂತ ಕಠಿಣ. ಮೊದಲಿಗೆ ಓದಲು ಕಳಿಸಲು ತಯಾರಿಲ್ಲದ ಈ ಮಕ್ಕಳ ತಾಯಿ ತಂದೆಯರನ್ನು ಓಲೈಸುವುದು ಕಷ್ಟದ ಕೆಲಸವಾಗಿತ್ತು. ಚಿಂದಿಯಿಂದ ಪ್ಲಾಸ್ಟಿಕ್ ಆಯ್ದು ಹದಿನೈದೋ ಇಪ್ಪತ್ತು ರೂಪಾಯಿಗಳನ್ನು ಗಳಿಸುತ್ತಿದ್ದುದೇ ಶಿಕ್ಷಣಕ್ಕಿಂತ ಹೆಚ್ಚು ಸಹಕಾರಿಯೆನಿಸುತ್ತಿತ್ತು. ಹಲವಾರು ಬಾರಿ ಅವರನ್ನು ಓಲೈಸಿದ ಮೇಲೆ, ಮಕ್ಕಳು ಒಂದು ನಾಲ್ಕು ಗಂಟೆಗಳ ಕಾಲ ಓದಿ, ಬಾಕಿ ಸಮಯದಲ್ಲಿ ಚಿಂದಿ ಆಯುತ್ತಾರೆ ಎಂಬ ಶರತ್ತಿನ ಮೇಲೆ ಒಪ್ಪುತ್ತಿದ್ದರು. 3 ವರ್ಷಗಳ ಕಾಲ ಮಕ್ಕಳು ವಿಮಲಾ ಅವರ ಮನೆಯಲ್ಲೇ ಓದಿದರು. ಆದರೆ ಯಾವಾಗ ಸಂಖ್ಯೆ 100ಕ್ಕೂ ಅಧಿಕವಾಯಿತೋ, ಆಗ ಸೇವಾಭಾರತಿಯ ಸಹಯೋಗದಿಂದ ಈ ವಿದ್ಯಾಲಯವು ಒಂದು ಟೆಂಟಿನ ಒಳಗೆ ಸ್ಥಳಾಂತರವಾಯಿತು.ವಿಮಲಾ ಅವರು ಓದಿನೊಂದಿಗೆ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳು, ಬಾಲರಾಮಾಯಣ, ಭಜನೆ, ಇತ್ಯಾದಿಗಳನ್ನು ಕಲಿಸುತ್ತಿದ್ದರು. ಈ ಮಕ್ಕಳು ಹಾರ್ಮೋನಿಯಂ, ಡೋಲಕ್, ಮಂಜೀರಾ ಇವುಗಳನ್ನೂ ಕಲಿತರು ಮತ್ತು ಬೇಸಿಗೆ ರಜೆಯಲ್ಲಿ ಹೊಲಿಗೆ ಕಸೂತಿಯಂಥ ಹವ್ಯಾಸಿ ವಿಷಯಗಳನ್ನೂ ಕಲಿತರು. ಜೈಪುರ ಹಿಂದೂ ಅಧ್ಯಾತ್ಮಿಕ ಮೇಳದಲ್ಲಿ, ವೇದಿಕೆಯಲ್ಲಿ ಈ ಮಕ್ಕಳು ತಮ್ಮ ಸುಮಧುರ ಕಂಠದಲ್ಲಿ ಬಾಲರಾಮಾಯಣದ ಶ್ಲೋಕಗಳನ್ನು ಹಾಡಿದಾಗ, ಧನಪ್ರಕಾಶ್ ಅವರಿಗೆ ಆನಂದದ ಬಾಷ್ಪ ತುಂಬಿಬಂದಿತು. ಮೇಳದಲ್ಲಿ ದೊರಕಿದ ತಮ್ಮ ಅನೇಕ ಪಾರಿತೋಷಕಗಳನ್ನು ಮಕ್ಕಳು ಹೆಮ್ಮೆಯಿಂದ ತೋರಿಸುತ್ತಾರೆ.

ಇಂದು ಶಾರದಾ ಎನ್ಕ್ಲೇವ್ ನ ಎರಡು ಮಹಡಿಯ ಕಟ್ಟಡದಲ್ಲಿ ನಡೆಯುತ್ತಿರುವ ಈ ವಿದ್ಯಾಲಯದಲ್ಲಿ ಓದುತ್ತಿರುವ 325 ಮಕ್ಕಳ ಪೂರ್ತಿ ಖರ್ಚನ್ನು ಸಮಾಜದ ಸಹಯೋಗದಿಂದ ನಡೆಸಲಾಗುತ್ತಿದೆ. 36 ಮಕ್ಕಳು ಇಲ್ಲೇ ಹಾಸ್ಟೆಲಿನಲ್ಲಿ ಇರುತ್ತಾರೆ. ತಮ್ಮ ಪರಿವಾರವನ್ನು ಬಿಟ್ಟು ವಿಮಲಾ ಅವರು ಈಗ ಈ ಮಕ್ಕಳ ಜೊತೆಯಲ್ಲಿಯೇ ಇರುತ್ತಾರೆ, ದೊಡ್ಡ ಹುಡುಗಿಯರ ಶಿಕ್ಷಣಕ್ಕೆ ಧಕ್ಕೆಯಾಗಬಾರದೆಂಬ ಕಾರಣದಿಂದ. ದೊಡ್ಡ ಮಕ್ಕಳಿಗೆ ಅವರ ಅಜ್ಜಿ, ಅಂದರೆ, ವಿಮಲಾ ಜೀ SSC, ಬ್ಯಾಂಕಿಂಗ್, ಈ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಾಗ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ. ವಿದ್ಯಾಲಯದ ಒಂದು ಶಾಖೆಯು ಈಗ ಸಾಂಗಾನೇರ್ ನಲ್ಲಿ ಬಕ್ಸಾವಾಲಾದಲ್ಲಿ ಟೆಂಟಿನ ಒಳಗೆ ನಡೆಯುತ್ತಿದೆ, ಇಲ್ಲಿಯೂ 125 ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ.

1260 Views
अगली कहानी