सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಮಹಿಳಾ ಉದ್ಯಮಶೀಲತೆಯ ಪ್ರತೀಕ---- ಉದ್ಯೋಗ ವರ್ಧಿನೀ

ದಕ್ಷಿಣ

parivartan-img

ಅಂದು ಬಿಸಿ ರೊಟ್ಟಿ ತಿನ್ನಬೇಕೆಂಬ ತನ್ನ ಬಸುರಿ ಬಯಕೆಯು ನೌಕರಿಯನ್ನೇ ನುಂಗಿಹಾಕಿತ್ತು. ಆ ದಿನವನ್ನು ಸುಲೋಚನಾ ಹೇಗೆ ತಾನೇ ಮರೆತಾಳು? ಒಂದೆಡೆ ಬಡತನ ಕಿತ್ತು ತಿನ್ನುತ್ತಿದ್ದರೆ, ಇನ್ನೊಂದೆಡೆ ಕೆಲಸಕ್ಕಾಗಿ ಅಲೆದಾಟ. ಇಂದು ಎಲ್ಲವೂ ಬದಲಾಗಿದೆ. ಸೋಲಾಪುರದ ಮುಖ್ಯ ಮಾರುಕಟ್ಟೆಯ ಪದ್ಮಾ ಟಾಕೀಸ್ ಎದುರಿನ ಗಣೇಶ್ ಮಾರ್ಕೆಟಿಂಗ್ ಒಡತಿ ಸುಲೋಚನಾ, ತನ್ನ ಹೋಲ್ ಸೇಲ್ ಏಜೆನ್ಸಿಯಿಂದ ಲಕ್ಷಾಂತರ ರೂಪಾಯಿಗಳ ವಾರ್ಷಿಕ ವಹಿವಾಟು ನಡೆಸುತ್ತಿದ್ದಾರೆ. ಸಣ್ಣಪುಟ್ಟ ಮನೆ ಖರ್ಚು ನಿಭಾಯಿಸಲು ಹಪ್ಪಳ ಮಾಡುವ ತರಬೇತಿ ಪಡೆದಿದ್ದ ಸಾಮಾನ್ಯ ಗೃಹಿಣಿ ಅಲ್ಪನಾ ಚಂದನಶಿವೆ, ಇಂದು ಉದಯೋನ್ಮುಖ ಉದ್ಯಮಿಯಾಗಿ 500ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ.ಒಂದೊಮ್ಮೆ ಬಿಡಿಗಾಸಿಗೂ ಪರದಾಡುತ್ತಿದ್ದ ವೈಷ್ಣವಿಯ ಅಂಗಡಿ ಇಂದು ಫ್ಯಾಶನ್ ಜಗತ್ತಿನ ನವನವೀನ ವಿನ್ಯಾಸಗಳಿಗಾಗಿ ಹೆಸರುವಾಸಿ.


ಮೂರು ಹೊತ್ತಿನ ಊಟಕ್ಕೂ ಹೋರಾಟ ಮಾಡುವ ಮಹಿಳೆಯರನ್ನು ಆತ್ಮನಿರ್ಭರರನ್ನಾಗಿಸಲೆಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಉದ್ಯೋಗವರ್ಧಿನೀ ಸಂಸ್ಥೆ 2004ರಿಂದ ಶ್ರಮಿಸುತ್ತಿದೆ. ರಾಷ್ಟ್ರೀಯ ಸೇವಾಭಾರತಿಯ ನ್ಯಾಷನಲ್ ಟ್ರಸ್ಟಿ ಚಂದ್ರಿಕಾ ಚೌಹಾಣರ ಅವಿರತ ಪ್ರಯತ್ನಗಳಿಂದ ಆರಂಭವಾದ ಈ ಸಂಸ್ಥೆಯು 600 ಸ್ವಸಹಾಯ ಸಂಘಗಳ ಮೂಲಕ ಈವರೆಗೆ 10,000ಕ್ಕೂ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಒದಗಿಸಿದೆ. ಒಂದೊಮ್ಮೆ ಸಂಘದ ಪ್ರಚಾರಕರಾಗಿದ್ದ ಶಂಭುಸಿಂಹ ಚೌಹಾಣರ ಧರ್ಮಪತ್ನಿ ಚಂದ್ರಿಕಾ ಚೌಹಾಣರು, ತಮ್ಮ ಬದುಕಿನ ಹೋರಾಟದಲ್ಲಿ ಕಲಿತ ಪಾಠವನ್ನು ಸಾವಿರಾರು ಜನರಿಗೆ ಧಾರೆಯೆರೆದರು. ಮಹಿಳಾ ಉದ್ಯೋಗ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಿರುವ ಉದ್ಯೋಗವರ್ಧಿನೀಯನ್ನು ಔದ್ಯಮಿಕ ತರಬೇತಿಯ ಸರ್ವಶ್ರೇಷ್ಠ ಸಂಸ್ಥೆ ಎಂದು ಹಲವಾರು ಬಾರಿ ಸನ್ಮಾನಿಸಲಾಗಿದೆ.

ಜೋಳದ ರೊಟ್ಟಿ ಮತ್ತು ಶೇಂಗಾ ಚಟ್ನಿ ಎಂದಾಕ್ಷಣ ಮರಾಠಿಗರ ಬಾಯಲ್ಲಿ ನೀರೂರುತ್ತದೆ. ಮಹಾರಾಷ್ಟ್ರದ ಜನಸಾಮಾನ್ಯರ ಈ ತಿನಿಸು ಉದ್ಯೋಗವರ್ಧಿನೀಯ ದೆಸೆಯಿಂದಾಗಿ ಇಂದು ಜನಪ್ರಿಯ ಬ್ರಾಂಡ್ ಆಗಿದೆ. ರಾಜ್ಯದ ಈ ಸಾಂಪ್ರದಾಯಿಕ ಆಹಾರ ತಯಾರಿಕೆಯಲ್ಲಿ ಚಂದ್ರಿಕಾಜೀಯವರು 800 ಬೇಕರಿಗಳನ್ನು ತೊಡಗಿಸಿದ್ದಾರೆ. ಮಾತ್ರವಲ್ಲ, ವೃದ್ಧಾಶ್ರಮ ಹಾಗೂ ಬಡರೋಗಿಗಳ ಕುಟುಂಬದ ಸದಸ್ಯರಿಗೆ ಕೇವಲ ಒಂದೂವರೆ ರೂಪಾಯಿ ಬೆಲೆಯಲ್ಲಿ ಪೌಷ್ಠಿಕ ಊಟ ಒದಗಿಸಿದ್ದಾರೆ. ಹೊಲಿಗೆ, ಕಸೂತಿ, ಖಾದ್ಯ ಸರಬರಾಜು, ಮಡಕೆ ಉತ್ಪಾದನೆ, ಅಕ್ಕಿ-ಬೇಳೆ ಹಸನು ಮಾಡುವುದು, ಮಸಾಲೆ ಪುಡಿ ತಯಾರಿ, ಹಳೇ ಬಟ್ಟೆಗಳಿಂದ ಚೀಲ ತಯಾರಿಕೆ, ಹಬ್ಬ ಹರಿದಿನಗಳಲ್ಲಿ ವಿಶೇಷ ಕುರುಕಲು ತಿನಿಸು ಮಾರಾಟ, ಇಂತಹ ಹಲವು ಬಗೆಯ ಉದ್ಯೋಗಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ತೊಡಗಿಸಿ ಆರ್ಥಿಕ ಪ್ರಗತಿಗೆ ಕಾರಣವಾಗಿರುವ ಉದ್ಯೋಗವರ್ಧಿನಿಯ ಕಾರ್ಯವ್ಯಾಪ್ತಿಯನ್ನು ನೀವೇ ಊಹಿಸಿ! ಇಷ್ಟೇ ಅಲ್ಲದೇ, ಗೃಹಿಣಿಯರಿಗೆ ಮನೆಯಿಂದಲೇ ಹಣ ಗಳಿಸುವ ವಿಧಾನ ಕಲಿಸಿ, ಆಯಾ ಉತ್ಪನ್ನಗಳ ಮಾರಾಟದ ಹೊಣೆಯನ್ನೂ ಸಂಸ್ಥೆ ಹೊತ್ತುಕೊಂಡಿದೆ.


ಇನ್ನು ಸುಲೋಚನಾ ಬಗ್ಗೆ ಹೇಳುವುದಾದರೆ, ಚಂದ್ರಿಕಾಜೀಯವರನ್ನು ಮೊದಲು ಭೇಟಿಯಾದಾಗ, ಆಕೆಯಿನ್ನೂ ನಾಲ್ಕಾರು ಮನೆಗಳಲ್ಲಿ ಕಸಮುಸುರೆ ಕೆಲಸ ಮಾಡುತ್ತಿದ್ದರು. ಸವಿತಾ ಸಮಾಜದ ಸುಲೋಚನಾರನ್ನು ಕ್ಷೌರದಂಗಡಿಗಳಿಗೆ ಬ್ಲೇಡ್ ಮಾರುವಂತೆ ಚಂದ್ರಿಕಾ ಪ್ರೇರೇಪಿಸಿದರು. ಸಂಸ್ಥೆಯ ಅವಿರತ ಮಾರ್ಗದರ್ಶನ ಹಾಗೂ ಸಹಕಾರಗಳಿಂದ ಕ್ರಮೇಣ ಸುಲೋಚನಾ, ಸಲೂನಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಮಾರುವ ಪುಟ್ಟ ಮಳಿಗೆಯ ಮಾಲಕಿಯಾದರು. ಅದೀಗ ಬೆಳೆದು ಸೋಲಾಪುರದ ಅತಿ ದೊಡ್ಡ ಹೋಲ್ ಸೇಲ್ ಏಜೆನ್ಸಿಯಾಗಿದೆ. ಸುಲೋಚನಾ ಈಗ ಉದ್ಯೋಗವರ್ಧಿನೀ ಸಂಸ್ಥೆಯ ಮಾರಾಟ ವಿಭಾಗದ ಮುಖ್ಯಸ್ಥೆಯಾಗಿದ್ದು, ಇದೀಗ ಸಲೂನಿನಲ್ಲಿ ಅಳವಡಿಸುವ ಕುರ್ಚಿಗಳನ್ನು ತಯಾರಿಸುವ ಫ್ಯಾಕ್ಟರಿಯನ್ನೂ ಆರಂಭಿಸಿದ್ದಾರೆ.


ಗಂಡನ ಓಪನ್ ಹಾರ್ಟ್ ಸರ್ಜರಿಯಿಂದ ಮನೆಯ ಆರ್ಥಿಕತೆ ಹದಗೆಡದಿದ್ದರೆ, ಅಹಮದಾಬಾದಿನಿಂದ ಸೋಲಾಪುರಕ್ಕೆ ಬಂದು ನೆಲೆಸಿದ್ದ ಸಾಮಾನ್ಯ ಗೃಹಿಣಿ ಚಂದ್ರಿಕಾ ಚೌಹಾಣ್ ಮನೆಯ ಹೊಸಿಲನ್ನೂ ದಾಟುತ್ತಿರಲಿಲ್ಲ. ಹಿಂದೆ ಹೊಲಿಗೆ-ಕಸೂತಿಯಲ್ಲಿ ಚಿನ್ನದ ಪದಕ ತಂದು ಕೊಟ್ಟಿದ್ದ ಪದವಿ, ಅಂದು ಉಪಯೋಗಕ್ಕೆ ಬಂತು. ಹೊಲಿಗೆ ಕಸೂತಿಗಳಿಂದಲೇ ಚಂದ್ರಿಕಾಜೀ ಆತ್ಮನಿರ್ಭರರಾದರು. ತಮ್ಮ ಈ ಕೌಶಲ್ಯ ಬಳಸಿ ಉಳಿದ ಮಹಿಳೆಯರನ್ನೂ ಸ್ವಾವಲಂಬಿಯಾಗುವಂತೆ ಚಂದ್ರಿಕಾಜೀ ಶ್ರಮಿಸಿದರು. ಇದಕ್ಕೆ ಪ್ರೇರಣೆ- ಅಂದಿನ ಪ್ರಾಂತ ಸಂಘಚಾಲಕರಾಗಿದ್ದ ಡಾ. ಕುಕಡೇ.

ಸೋಲಾಪುರದ ಘೋತ್ರೇಕರ್ ವಸತಿ ಪ್ರದೇಶದ ಗುಡಿಸಲೊಂದರಲ್ಲಿ ಶುರುವಾದ ಮೊದಲ ಹೊಲಿಗೆ ಕೇಂದ್ರವು ಬರಬರುತ್ತಾ ಮಹಿಳಾ ಉದ್ಯೋಗ ತರಬೇತಿಯ ನಿಟ್ಟಿನಲ್ಲಿ ಚರಿತ್ರೆ ಸೃಷ್ಟಿಸಿತು. ಇಂದು ತನ್ನದೇ \"ರೋಟೀ-ಘರ್\" ಮೂಲಕ ಪ್ರತಿದಿನ 5000 ರೊಟ್ಟಿ ತಯಾರಿಸುವ ಉದ್ಯೋಗವರ್ಧಿನಿಯು ಅವುಗಳನ್ನು ಅನ್ಯಾನ್ಯ ಶಾಲೆ ಮತ್ತು ಆಸ್ಪತ್ರೆಗಳಿಗೆ ತಲುಪಿಸುತ್ತಿದೆ. ಅಡುಗೆ ತಯಾರಿಸುವ ಹೆಣ್ಣುಮಕ್ಕಳಿಗೆ ತಮ್ಮ ಕಾಲ ಮೇಲೆ ನಿಲ್ಲಲು ಅವಕಾಶ ನೀಡಿದ ಈ ಯೋಜನೆಯು ದಿನಂಪ್ರತಿ ಸುಮಾರು 3,000 ಜನರಿಗೆ ಉಣಬಡಿಸುತ್ತಿದೆ. ತಿಂಗಳಿಗೆ 2 ಕ್ವಿಂಟಾಲ್ ಶೇಂಗಾ ಚಟ್ನಿಯನ್ನು ಮಾರಲಾಗುತ್ತಿದೆ. ಹಬ್ಬದ ವಿಶೇಷ ತಿನಿಸು ಹಾಗೂ ಕುರುಕಲು ತಿಂಡಿಗಳು ವಿದೇಶಗಳಿಗೂ ರವಾನೆಯಾಗುತ್ತವೆ. ಸಮಾಜದ ಕುರಿತಾದ ಕಾಳಜಿಯೇ ಉದ್ಯೋಗವರ್ಧಿನಿಯ ಜೀವಾಳ. ಇಲ್ಲಿ ಬರುವ ಸ್ತ್ರೀಯರಿಗೆ ನೀಡುವ ದುಡಿಮೆಯ ತರಬೇತಿಯೊಂದಿಗೆ ಭಾರತೀಯ ಸಂಸ್ಕೃತಿ, ದೇಶ ಮತ್ತು ಸಮಾಜದ ವಿಷಯದಲ್ಲಿ ತಮ್ಮ ಹೊಣೆಗಾರಿಕೆ ಮುಂತಾದ ತಿಳುವಳಿಕೆಯನ್ನೂ ನೀಡಲಾಗುತ್ತದೆ.


ಅಂಧ ಮಕ್ಕಳು ತಯಾರಿಸಿದ ಚೀಲಗಳನ್ನು ಸಂಸ್ಥೆಯು ಮಾರಾಟ ಮಾಡುತ್ತಿದೆ. ಸಂಸ್ಥೆಯ ಯಶಸ್ಸಿನಿಂದ ಪ್ರಭಾವಿತವಾಗಿ, ಸ್ವಸಹಾಯ ಸಂಘಗಳ ಮಹಿಳೆಯರ ಪ್ರಗತಿಗಾಗಿ ರೂಪಿಸಲಾದ ಸ್ವಸಹಾಯ ಗುಂಪುಗಳ \"ವೈಭವ ಶ್ರೀ\" ಸರ್ಕಾರೀ ಯೋಜನೆಯ ಅನುಷ್ಠಾನದ ಹೊಣೆಯನ್ನು ಉದ್ಯೋಗವರ್ಧಿನಿಗೇ ವಹಿಸಲಾಗಿದೆ ಎಂದು RSS ಪ್ರಚಾರಕರೂ, ಕೇಂದ್ರೀಯ ಸೇವಾ ಸಮಿತಿಯ ಸದಸ್ಯರೂ ಆದ ಶ್ರೀಯುತ ಉದಯ್ ಜೋಗಳೇಕರ್ ಹೆಮ್ಮೆಯಿಂದ ಹೇಳುತ್ತಾರೆ. ಸ್ವಸಹಾಯ ಸಂಘಗಳ ಮೂಲಕ ದೇಶದೆಲ್ಲೆಡೆ ಮಹಿಳೆಯರನ್ನು ಆತ್ಮನಿರ್ಭರರನ್ನಾಗಿಸಲು ಹಲವು ರಾಜ್ಯಗಳಲ್ಲಿಂದು ಚಂದ್ರಿಕಾಜೀ ದುಡಿಯುತ್ತಿದ್ದಾರೆ.



ಸಂಪರ್ಕ- ಚಂದ್ರಿಕಾ ಚೌಹಾಣ್

ಮೊಬೈಲ್- 9422069455

1159 Views
अगली कहानी