सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಈ ಮಣ್ಣಿನಲ್ಲಿದೆ ನಮ್ಮ ಭಾಗ್ಯ..... ಉತ್ತರಪ್ರದೇಶದ ಕಾನ್ಪುರ‌.

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ಇಂದು ಲಕ್ಷ್ಮಿಗೆ ಸುಡುವ ಬಿಸಿಲೂ ಬೆಳದಿಂಗಳಿನಂತೆ ತಂಪನ್ನು ನೀಡುತ್ತಿತ್ತು. ಹಣೆಯ ಮೇಲಿದ್ದ ಬೆವರನ್ನು ಒರೆಸಿಕೊಳ್ಳುತ್ತ, ಬಿಸಿಲಿನಿಂದ ಕೆಂಪಾಗುತ್ತಿರುವ ತನ್ನ ಮಗಳು ಮೌನಿಯ ಮುಖವನ್ನು ಚುಂಬಿಸಿದಳು. ಬಹುಮಾನವಾಗಿ ಬಂದಿರುವ ಕಪ್ಪನ್ನು ತನ್ನ ಎರಡೂ ಕೈಗಳಲ್ಲಿ ಅವುಚಿಕೊಂಡು ಬಹಳ ಮುದ್ದಾಗಿ ಕಾಣುತ್ತಿದ್ದಳು ಮೌನಿ.

ಲಕ್ಷ್ಮಿಗೆ ಆ ದಿನಗಳನ್ನು ಮರೆಯುವುದಾದರೂ ಹೇಗೆ? ಇದೇ ಕೈಗಳು ಇಂದಿಗೆ ಮೂರು ವರ್ಷಗಳ ಹಿಂದೆ ಗಲ್ಲಿ ಗಲ್ಲಿಗಳಲ್ಲಿ, ಬೀದಿಗಳಲ್ಲಿ, ಮಂದಿರಗಳಲ್ಲಿ ಜನರೆದುರು ಒಂದೆರಡು ಕಾಸುಗಳಿಗೋಸ್ಕರ ಚಾಚುತ್ತಿದ್ದವು. ಒಂದು ವೇಳೆ ಸೇವಾಭಾರತಿಯವರು ಈ ಸೇವಾಬಸ್ತಿಗಳ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗದಿದ್ದರೆ, ಬಹುಶಃ ಜೀವಮಾನವಿಡೀ ಹೀಗೇ ಭಿಕ್ಷೆ ಬೇಡುತ್ತಲೇ ಇರುತ್ತಿದ್ದವೇನೋ. ಸೇವಾಭಾರತಿಯ ಕಾರ್ಯದಕ್ಷತೆಯಿಂದ ಸಹಜ ಸ್ಥಿತಿಗೆ ಬಂದವರು ಕೇವಲ ಮೌನಿ ಮಾತ್ರವಲ್ಲ, ತಂದೆಯಿಲ್ಲದ ಮೋಹಿತ್, ವಿಶಾಲ್, ಮುದ್ದಾದ ಆಶಾ, ಹೀಗೆ ಅನೇಕ ಹೆಸರುಗಳಿವೆ.

   



ಉತ್ತರ ಪ್ರದೇಶದಲ್ಲಿ ಕಾನ್ಪುರ ನಗರದ ಕಪಾಡಿಯಾವನ್ನು ಸಾಮಾನ್ಯವಾಗಿ ಎಲ್ಲರೂ ಭಿಕ್ಷೆ ಬೇಡುವವರ ಸೇವಾಬಸ್ತಿಗಳೆಂಬ ಹೆಸರಿನಲ್ಲೇ ಗುರುತಿಸುತ್ತಿದ್ದರು. ತಂದೆ ಇರಲಿ, ಮಗ ಇರಲಿ, ಇಡೀ ಪರಿವಾರದ ಕಸುಬೇ ಭಿಕ್ಷೆ ಬೇಡುವುದು ಆಗಿಬಿಟ್ಟಿತ್ತು. ಆದರೆ ಮೂರು ವರ್ಷಗಳ ಹಿಂದೆ ಕಾನ್ಪುರದಲ್ಲಿ ಸೇವಾಭಾರತಿ ಮಾತೃಮಂಡಲಿಯ ಮೂಲಕ ಆರಂಭವಾದ ಬಾಲಸಂಸ್ಕಾರ, ಹೊಲಿಗೆ ಮತ್ತು ಸಾಕ್ಷರತಾ ಕೇಂದ್ರಗಳು ಸೇವಾಬಸ್ತಿ ನಿವಾಸಿಗಳಿಗೆ ಶಿಕ್ಷಣ ಮತ್ತು ಆತ್ಮನಿರ್ಭರತೆಯ ಪಾಠವನ್ನು ಕಲಿಸಿದವು. ಇಂದು ಈ ಪರಿವಾರಗಳ 52 ಮಕ್ಕಳು ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾರೆ. ಅವರ ಈ ಶಿಕ್ಷಣದ ಪೂರ್ತಿ ಖರ್ಚನ್ನು ವಿವೇಕಾನಂದ ಸಮಿತಿಯು ಭರಿಸುತ್ತಿದೆ. ಈ ಮಕ್ಕಳೆಲ್ಲಾ ಭಿಕ್ಷೆ ಬೇಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾರೆ ಎಂದು ಸಮಿತಿಯ ಸಂಯೋಜಕರೂ ಸಂಘದ ಸ್ವಯಂಸೇವಕರೂ ಆದ ವಿಜಯ ದೀಕ್ಷಿತ್ ಜೀ ಹೇಳುತ್ತಾರೆ.




ಹಾಗೆ ನೋಡಿದರೆ, ಕಾನ್ಪುರದಲ್ಲಿ ಪನಕೀ ಎನ್ನುವ ಹೆಸರುಬಂದ ಕೂಡಲೇ ಸಂಕಟಮೋಚನ ಹನುಮಾನ ಮಂದಿರದ ದೃಶ್ಯ ಸ್ವತ: ಕಣ್ಣುಗಳ ಮುಂದೆ ಬಂದುಬಿಡುತ್ತದೆ. ಇದು ಪನಕೀ ಬಾಬಾನಗರ ಎಂದೇ ಕರೆಯಲ್ಪಡುತ್ತದೆ. ಇಲ್ಲಿ ಪನಕೀ ಧಾಮದ ಸ್ವಲ್ಪವೇ ದೂರದಲ್ಲಿ ಗಂಗಾಗಂಜ್ ನಲ್ಲಿ ಸುಮಾರು ನೂರು ಪರಿವಾರಗಳ ಒಂದು ವಸತಿ ಸಂಕೀರ್ಣವಿದೆ. ಅದೇ ಕಪಾಡಿಯಾ ಸೇವಾಬಸ್ತಿ. ಇದು ಬೇರೆ ಸೇವಾಬಸ್ತಿಗಳಿಗಿಂತ ಭಿನ್ನವಾಗಿದೆ. ಭಿಕ್ಷಾವೃತ್ತಿಯಲ್ಲಿ ನಿರತರಾಗಿದ್ದ ಇಲ್ಲಿನ ಜನ ಪರಸ್ಪರ ಜಗಳವಾಡುತ್ತಿದ್ದರು , ಬಯ್ಯುತ್ತಿದ್ದರು, ಗಲಾಟೆ ಎಬ್ಬಿಸುತ್ತಿದ್ದರು, ಜೂಜಾಡುತ್ತಿದ್ದರು, ಪಾನ್ ಮಸಾಲಾ ತಿನ್ನುತ್ತ ಸಮಯ ದೂಡುತ್ತಿದ್ದರು.


 ಸೇವಾಭಾರತಿಯ ಪರಿಶ್ರಮದಿಂದ ಇಲ್ಲಿ ಬಾಲಸಂಸ್ಕಾರ ಕೇಂದ್ರದ ಆರಂಭವಾಗಿರದಿದ್ದರೆ ಬಹುಶಃ ಇವರ ಮುಂದಿನ ಪೀಳಿಗೆಯೂ ಇದೇ ಹಾದಿಯಲ್ಲಿ ಸಾಗುತ್ತಿತ್ತೇನೋ ... ಸೇವಾಬಸ್ತಿಗಳ ಯಾವ ಸಹೋದರಿಯರ ಕುಟುಂಬಗಳಿಂದ ಮಕ್ಕಳನ್ನು ಕೇಂದ್ರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿತ್ತೋ, ಆ ಸಹೋದರಿಯರ ಬೇಡಿಕೆಯ ಮೇರೆಗೆ ಅಲ್ಲಿ ಎರಡೇ ತಿಂಗಳಲ್ಲಿ ಹೊಲಿಗೆ ಮತ್ತು ಸಾಕ್ಷರತಾ ಕೇಂದ್ರಗಳೂ ಆರಂಭಗೊಂಡವು. ವಸತಿಯಲ್ಲಿದ್ದ ಸೋದರಿ ವೇದಾ ಸಾಕ್ಷರತಾ ಕೇಂದ್ರಕ್ಕೋಸ್ಕರ ತನ್ನ ಮನೆಯಲ್ಲೇ ಜಾಗ ಕೊಟ್ಟಳು. ಹಾಗೇಯೇ ಸೋದರಿ ಸರಳಾ ಈ ಸಹೋದರಿಯರಿಗೆ ಅಕ್ಷರ ಕಲಿಸಲು ಸಂತೋಷದಿಂದ ತಯಾರಾದಳು. ಈ ಮೂರು ವರ್ಷಗಳಲ್ಲಿ ಇವರಂತೆ ಅನೇಕ ಸಹೋದರಿಯರು ಹಿಂದಿಯನ್ನು ಓದುವುದು, ಹಸ್ತಾಕ್ಷರ ಹಾಕುವುದು ಮತ್ತು ಸಾಮಾನ್ಯವಾದ ಕೂಡುವುದು ಕಳೆಯುವುದರೊಂದಿಗೆ ಗಣಿತವನ್ನೂ ಕಲಿತಿದ್ದಾರೆ.




ಈ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಪ್ರಾರಂಭದಲ್ಲಿ ಸೇವಾಬಸ್ತಿಯ ಜನರು ಮಾತೃಮಂಡಲಿಯ ಸೋದರಿಯರನ್ನು ಸಂಶಯದ ದೃಷ್ಟಿಯಿಂದ ನೋಡುತ್ತ ಮುಖ ಸಿಂಡರಿಸುತ್ತಿದ್ದರು. ಅವರೊಂದಿಗೆ ಮಾತನಾಡಲೂ ಇಷ್ಟ ಪಡುತ್ತಿರಲಿಲ್ಲ. ಆದರೆ ತುಶಮುಲ್ ಮಿಶ್ರಾ, ಶೈಲಜಾಜೀ, ಕ್ಷಮಾಜೀ ಮುಂತಾದ ಸಹೋದರಿಯರ ನಿರಂತರ ಪರಿಶ್ರಮದಿಂದ ಕೊನೆಗೂ 2016ರ ಅಕ್ಟೋಬರ್ 22ರಂದು ಮೊದಲ ಕೇಂದ್ರ ಆರಂಭವಾಯಿತು. ಅಲ್ಲಿ ಮತ್ತೆ ನಡೆದದ್ದೆಲ್ಲ ಈಗ ಇತಿಹಾಸ. ಸಂಸ್ಕಾರಯುತ ಶಿಕ್ಷಣ ಹೊಂದಿದ ಮಕ್ಕಳು ಮೊದಲಿಗೆ ಪಾನ್ ಮಸಾಲಾ ತಿನ್ನುವುದನ್ನು ಬಿಟ್ಟರು. ನಂತರ ನಿಧಾನವಾಗಿ ಭಿಕ್ಷೆ ಬೇಡುವುದನ್ನು ಬಿಟ್ಟುಬಿಟ್ಟರು. ಸದಾ ಮುದುರಿದ್ದ ಕೊಳಕು ಬಟ್ಟೆಗಳಲ್ಲಿ ಇರುತ್ತಿದ್ದ ಮಕ್ಕಳು ಮಿಂದು ಶುಚಿಯಾಗಿ, ಒಳ್ಳೆಯ ಬಟ್ಟೆಗಳನ್ನು ತೊಟ್ಟು ಕೇಂದ್ರಕ್ಕೆ ಬರತೊಡಗಿದರು. ಈ ಪರಿವರ್ತನೆಯಿಂದ ವಿಸ್ಮಿತರಾದ ಸೇವಾಬಸ್ತಿಯ ಮಹಿಳೆಯರು ಸೇವಾಭಾರತಿಯ ಸದಸ್ಯರಲ್ಲಿ ತಮಗೂ ಓದನ್ನು ಕಲಿಸಬೇಕೆಂದು ಆಗ್ರಹಿಸಿದರು. ಹೀಗೆ ಪ್ರಾರಂಭವಾದ ಪ್ರೌಢಶಿಕ್ಷಣ ಕೇಂದ್ರ ಮತ್ತು ಹೊಲಿಗೆ ಕೇಂದ್ರಗಳು ಕಪಾಡಿಯಾ ಸೇವಾಬಸ್ತಿಯ ಜನರ ಜೀವನವನ್ನೇ ಬದಲಾಯಿಸಿದವು. ಕೆಲವು ಪರಿವಾರಗಳು ಭಿಕ್ಷೆ ಬೇಡುವುದನ್ನು ನಿಲ್ಲಿಸಿ ದಿನಗೂಲಿ ಮಾಡುವುದನ್ನು ಪ್ರಾರಂಭಿಸಿದವು. ಹೊಲಿಗೆ ಕಲಿತ ಸೋನಿ, ಶಿವಾನಿ ಹಾಗೂ ಸಾಧನಾರಂತಹ ಅನೇಕ ಮಹಿಳೆಯರು ಮನೆ ಅಥವಾ ಅಂಗಡಿಯಲ್ಲಿ ಹೊಲಿಗೆ ಕೆಲಸ ಆರಂಭಿಸಿದ್ದಾರೆ.


 ಸೇವಾಬಸ್ತಿಯ ಮಕ್ಕಳು ಓದುವುದರ ಜೊತೆಜೊತೆಗೆ ಜಿಲೇಬಿ ಓಟ, ಎತ್ತರ ಜಿಗಿತ, ರಿಲೇ ಓಟ ಇತ್ಯಾದಿ ಸ್ಪರ್ಧೆಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ ಎಂದು ಸೇವಾಭಾರತಿ ಕಾನ್ಪುರ ನಗರದ ಮಾತೃಮಂಡಲದ ಅಧ್ಯಕ್ಷೆ ಕ್ಷಮಾ ಮಿಶ್ರಾ ಹೇಳುತ್ತಾರೆ. ಇತ್ತೀಚೆಗೆ ಸಂಪನ್ನಗೊಂಡ ಒಂದು ಕಾರ್ಯಕ್ರಮದಲ್ಲಿ ಇಲ್ಲಿನ ಮಕ್ಕಳು ಪ್ರಸ್ತುತಪಡಿಸಿದ ಸಂಪೂರ್ಣ ವಂದೇಮಾತರಂ ಕಾರ್ಯಕ್ರಮ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಅವರು ಹೇಳುವಂತೆ , ಪ್ರತಿ ವಾರ ನಡೆಯುತ್ತಿರುವ ಭಜನಾಮಂಡಲಿಯು ಮಹಿಳೆಯರನ್ನು ಒಂದು ಧರ್ಮಸೂತ್ರದಲ್ಲಿ ಬೆಸೆದಿದೆ ಮತ್ತು ದಿನನಿತ್ಯದ ಜಗಳದ ಬದಲು ಅವರೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುವ ಬಗ್ಗೆ ಚರ್ಚಿಸುತ್ತ ಇರುತ್ತಾರೆ.



ಸಂಪರ್ಕ - ಪ್ರೀತಿ ಜೀ

ಸಂಪರ್ಕ ಸಂಖ್ಯೆ - 9450347173
1045 Views
अगली कहानी