सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಾ ಶ್ರೀ ಯಾದವರಾವ್ ಜೀ ಜೋಷಿ

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ಸರಳತೆಯ ಸಾಕಾರಮೂರ್ತಿ, ಮರಾಠಿ ಮೂಲದ ಅಪ್ರತಿಮ ವಾಗ್ಮಿ ಯಾದವರಾವ್‍ಜೀ ಚಿಕ್ಕಂದಿನಲ್ಲಿ ಬಡತನದ ಬೇಗೆಯಲ್ಲಿ ಬೆಂದಿದ್ದರೂ, ಸ್ನಾತಕೋತ್ತರ ಪದವಿ ಪೂರೈಸಿದ ಬೆನ್ನಲ್ಲೇ ಧನ ಸಂಪಾದನೆಯ ದಾರಿ ಹಿಡಿಯಲಿಲ್ಲ. ರಾಷ್ಟ್ರಸೇವೆಯ ಕಂಕಣತೊಟ್ಟು, ಅವಿವಾಹಿತರಾಗಿಯೇ ಉಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾದರು. ಸ್ವತಃ ಪಂಡಿತ ಭೀಮಸೇನ್ ಜೋಷಿಯವರಿಂದಲೇ ಮೆಚ್ಚುಗೆ ಪಡೆದಿದ್ದ ಯಾದವರಾವ್ ಜೀ ತಮ್ಮ ಸಂಗೀತ ಪ್ರತಿಭೆಯನ್ನೂ ತಮ್ಮ ರಾಷ್ಟ್ರಸೇವಾಯಜ್ಞದಲ್ಲಿ ಆಹುತಿ ನೀಡಿ, ಆರ್.ಎಸ್.ಎಸ್.ನ ಪ್ರಚಾರಕರಾಗಿ ಕರ್ನಾಟಕಕ್ಕೆ ಆಗಮಿಸಿದರು. ಮುಂದಿನದು ಇತಿಹಾಸ.




ಯಾದವರಾವ್ ಜೀ ತಮ್ಮ ಅನುಯಾಯಿಗಳ ತಂಡ ಕಟ್ಟುವ ಕೆಲಸಕ್ಕೆ ಕೈ ಹಾಕಲೇ ಇಲ್ಲ. ಬದಲಿಗೆ, ಇವರ ಸಹಾಯಹಸ್ತದ ವ್ಯಾಪ್ತಿಗೆ ಬಂದವರನ್ನೆಲ್ಲ ತಾವಾಗಿಯೇ ಸಮಾಜಸೇವೆಯ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು. ಯಾದವರಾಯರ ಸ್ಫೂರ್ತಿಯಿಂದ ಹುಟ್ಟಿಕೊಂಡ ರಾಷ್ಟ್ರೋತ್ಥಾನ ಪರಿಷತ್ತು ಇಂದು, ಕೊಳೆಗೇರಿಯ ಮಕ್ಕಳಿಗೆ ಉಚಿತ ಶೈಕ್ಷಣಿಕ/ಔದ್ಯೋಗಿಕ ತರಬೇತಿ ಕೇಂದ್ರಗಳಿಂದ  ಹಿಡಿದು ಬೆಂಗಳೂರಿನ ಅತಿದೊಡ್ಡ ಬ್ಲಡ್ ಬ್ಯಾಂಕನ್ನು ನಡೆಸುತ್ತಿದೆ. ಬಾಲಗೋಕುಲ ಯೋಜನೆಯ ಮುಖಾಂತರ ಕೇರಳದ ಚಿಣ್ಣರನ್ನು ಭಾರತೀಯ ಸಂಸ್ಕೃತಿಗೆ ಬೆಸೆವ ಕಾರ್ಯಕ್ಕೂ ಯಾದವರಾಯರ ಪ್ರೇರಣಾಸ್ರೋತದ ಬೆಂಬಲವಿತ್ತು.




1914 ಸೆಪ್ಟೆಂಬರ್ 3ರ ಅನಂತಚತುರ್ದಶಿಯ ಪುಣ್ಯದಿನದಂದು ಮಹಾರಾಷ್ಟ್ರದ ನಾಗಪುರದ ವೈದಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಯಾದವರಾವ್ ಜೀಯವರ ಬಾಲ್ಯವು ಬಡತನ ಹಾಗೂ ಸಂಕಷ್ಟಗಳ ನಡುವೆಯೇ ಸಾಗುತ್ತಿತ್ತು. ಎಂ.ಎ ಹಾಗೂ ಎಲ್.ಎಲ್.ಬಿ ಪದವಿಗಳ ಪ್ರಾಪ್ತಿಯ ನಂತರ, ಕೈತುಂಬಾ ಸಂಪಾದಿಸಬಹುದಾಗಿದ್ದ ಅವಕಾಶಗಳನ್ನು ಧಿಕ್ಕರಿಸಿ, ಅವರು ಸಂಘದ ಪ್ರಚಾರಕರಾದರು. ಆ ಕಾಲದಲ್ಲಿಯೇ ಅಷ್ಟೊಂದು ಓದಿಕೊಂಡಿದ್ದ ಯಾದವರಾಯರನ್ನು ಖ್ಯಾತಿಯ ಮೋಹವು ಸೆಳೆಯಲಿಲ್ಲ. ಬಾಲಭಾಸ್ಕರನೆಂದೇ ಹೆಸರುವಾಸಿಯಾಗಿದ್ದ ಯಾದವರಾಯರ ಸಂಗೀತ ನೈಪುಣ್ಯವು, ಖ್ಯಾತ ಹಿಂದೂಸ್ತಾನೀ ಗಾಯಕರಾಗಿದ್ದ ಪಂಡಿತ ಭೀಮಸೇನ್ ಜೋಷಿಯವರಿಂದಲೇ ಶ್ಲಾಘಿಸಲ್ಪಟ್ಟಿತ್ತು.


ಸಂಘದ ಪ್ರಾರ್ಥನೆಯಾದ "ನಮಸ್ತೇ ಸದಾ ವತ್ಸಲೇ......." ಮೊದಲು ಹಾಡಲ್ಪಟ್ಟಿದ್ದು ಯಾದವರಾಯರಿಂದಲೇ. ಮಹಾತ್ಮಾ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಗೆ ಕುಮ್ಮಕ್ಕು ನೀಡಿದರೆಂಬ ವೃಥಾಪವಾದವನ್ನೂ ಇವರ ಮೇಲೆ ಸರ್ಕಾರ ಹೊರಿಸಿತ್ತು. ಸಂಘವನ್ನು ನಿಷೇಧಿಸಿದ ಸಂದರ್ಭಗಳಲ್ಲಿ (1948 ಹಾಗೂ 1975) ಯಾದವರಾಯರು ಸೆರೆವಾಸವನ್ನೂ ಅನುಭವಿಸಿದ್ದರು. ನಂತರ ಬಿಡುಗಡೆಯಾಗಿ ದ್ವಿಗುಣಿತ ಉತ್ಸಾಹದಿಂದ ಹೊರಬಂದ ಶ್ರೀ ಯಾದವರಾವ್ ಜೀ ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳಗಳಲ್ಲಿ ಸಂಘಕಾರ್ಯವನ್ನು ವಿಸ್ತರಿಸಿದ್ದು ಮಾತ್ರವಲ್ಲ, ಸೇವಾಕಾರ್ಯಗಳಿಗೆಂದೇ ಪ್ರತ್ಯೇಕ ವಿಭಾಗಗಳನ್ನೂ ಆರಂಭಿಸಿದ ದ್ರಷ್ಟಾರರು. ಅಂತಹ ನೂರಾರು ಸೇವಾಕಾರ್ಯಗಳ ಪ್ರಯೋಜನ ಪಡೆಯುತ್ತಿರುವ ಲಕ್ಷಾಂತರ ಜನಸಾಮಾನ್ಯರು ಇಂದಿಗೂ ಯಾದವರಾಯರನ್ನು ಕೃತಜ್ಞತಾಭಾವದಿಂದ ಸ್ಮರಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.

1641 Views
अगली कहानी